ಇನ್ನೇನು ಯುಗಾದಿ ಬಂತು, ಆಮೇಲೆ ರಾಮನವಮಿ. ನೋಡು ನೋಡುತ್ತಿದಂತೆಯೇ ಬೇಸಿಗೆ ಕಳೆದು ಆಷಾಢ; ಅನಂತರದ ಹಬ್ಬಗಳ ಸರಣಿ ಮುಗಿಯುವುದೇ ಸಂಕ್ರಾಂತಿಗೆ. ಮತ್ತೆ ಶಿವರಾತ್ರಿ; ಹೋಳಿ ಮುಗಿಯುವಷ್ಟರಲ್ಲಿ ಯುಗಾದಿ ಬಂದೇ ಬಿಡುತ್ತದೆ! ಹೇಗೆ ಓಡುತ್ತಪ್ಪಾ ಕಾಲ! - ಇದು ಸಾಮಾನ್ಯವಾಗಿ ಮನೆಗಳಲ್ಲಿ ನಾವು ಕೇಳಲ್ಪಡುವ ಮಾತುಗಳು – ವಿಶೇಷವಾಗಿ ತಾಯಂದಿರ ಬಾಯಲ್ಲಿ. ಕಾಲಚಕ್ರದ ನಿರಂತರ ಚಲನೆಯ ನಿತ್ಯಸತ್ಯವು ನಮ್ಮ ಗಮನಕ್ಕೂ ಬಾರದಂತೆ ಜೀವನ್ಮುಖಿಗಳಾಗಿ ನಮ್ಮನ್ನು ತೊಡಗಿಸುವ ಸಾಂಸ್ಕೃತಿಕ ಶಕ್ತಿ ಎಂದರೆ ಹಬ್ಬಗಳ ಸಂಭ್ರಮ. ಯುಗಾದಿಯಾದರೋ ಹಬ್ಬಗಳ ಸರಣಿಯಲ್ಲಿ ಮೊದಲ ಹಬ್ಬ. ಕೆಲವು ಹಬ್ಬಗಳು ಪೌರಾಣಿಕವಾದ ದೃಷ್ಟಿಯಿಂದ ಅಥವಾ ಮತ್ತೇನೋ ಪರಂಪರಾಗತವಾದ ಸಂಗತಿಯಿಂದ ಪ್ರಾಮುಖ್ಯ ಪಡೆದರೆ, ಯುಗಾದಿ, ಇವುಗಳ ಜೊತೆಗೆ ನಮ್ಮದೇ ಪರಿಸರದ ಬದಲಾವಣೆಯ ದ್ಯೋತಕವಾಗಿ ಸಹ ಪ್ರಚುರವಾಗಿರುವುದು ವಿಶೇಷ. ಯುಗಾದಿ ಎಂಬ ಹೆಸರೇ ಹೊಸ ಪರ್ವದ ಆರಂಭವನ್ನು ಸೂಚಿಸುವಂಥದ್ದು. ಆಗಷ್ಟೇ ಆರಂಭವಾಗುವ ವಸಂತಮಾಸದ ಸ್ವಾಗತವನ್ನು ಕೋರುವಂತಹ ಹಬ್ಬ. ಪ್ರಕೃತಿಯೂ ಹೊಸ ಸೃಷ್ಟಿಗೆ ಅಣಿಯಾಗಿ ಎಲ್ಲೆಲ್ಲೂ ಹಸಿರು ಚಿಗುರು ನಳನಳಿಸುವ ಸಮಯ. ನಾವು ಬದುಕುವ ಭೌಗೋಳಿಕ ಪರಿಸರದ ದೃಷ್ಟಿಯಿಂದ ಗಮನಿಸುವುದಾದರೆ ನಿಜಾರ್ಥದಲ್ಲಿ ಹೊಸ ವರ್ಷ.
ವರುಷಕೊಂದು ಹೊಸತು ಜನ್ಮ,
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ !
ಒಂದೆ ಒಂದು ಜನ್ಮದಲ್ಲಿ
ಒಂದೇ ಬಾಲ್ಯ ಒಂದೇ ಹರೆಯ
ನಮಗದಷ್ಟೆ ಏತಕೆ?
ಎಂಬ ಬೇಂದ್ರೆಯವರ ಈರ್ಷೆ-ನೋವು-ಮೆಚ್ಚುಗೆ ಮಿಶ್ರಿತ ಭಾವ ಅರ್ಥವಾಗುವಂಥದ್ದೇ. ಕವಿಯ ಈ ಕಾಣ್ಕೆ ಒಂದು ರೀತಿಯ ಜೀವನದರ್ಶನವೂ ಹೌದಷ್ಟೇ. ಮನುಷ್ಯನಿಗಿರುವ ವಿಶೇಷವಾದ ಶಕ್ತಿ ಮತ್ತು ಸಮಸ್ಯೆ ಹಿಂದಿನದ್ದರ ನೆನಪು. ಅದು ಈ ಹೊಸತನ್ನು ಹಳೆಯದರ ಭಾರದ ಹೊರತಾಗಿ ಆಸ್ವಾದಿಸುವ ಅವಕಾಶವನ್ನು ಕೆಲವೊಮ್ಮೆ ಕುಂಠಿತಗೊಳಿಸಬಹುದಷ್ಟೇ. ‘ನಿದ್ದೆಗೊಮ್ಮೆ ನಿತ್ಯ ಮರಣ, ಎದ್ದ ಸಲ ನವೀನ ಜನನ, ನಮಗೆ ಏಕೆ ಬಾರದೋ!’ ಎಂದು ವರಕವಿ ಉದ್ಗರಿಸುವುದೂ ಇದೇ ಕಾರಣಕ್ಕೇನೋ? ಯುಗಾದಿಹಬ್ಬಕ್ಕೆ ಹೊಂದಿಕೊಂಡಿರುವಂತಹ ಎಲ್ಲ ಆಚರಣೆಗಳೂ ಸಂಭ್ರಮಗಳೂ ಹೊಸತನ್ನು ಸ್ವಾಗತಿಸುವ ಜೊತೆಗೆ ಮನುಷ್ಯನ ಜೀವನದೃಷ್ಟಿಯನ್ನೂ ಹಿಗ್ಗಿಸುವುದರ ಕಡೆಗೂ ನಿರ್ದಿಷ್ಟವಾಗಿದೆ ಎನ್ನಬಹುದು.
ದೇಶದ ಹಲವೆಡೆ ಆಚರಿಸಲ್ಪಡುವ ಹಬ್ಬವಾದರೂ ಮುಖ್ಯವಾಗಿ ದಕ್ಷಿಣದ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಈ ಹಬ್ಬದ ಗಮ್ಮತ್ತು ಜೋರು. ಮನೆಮನೆಗಳಲ್ಲಿ ಎಣ್ಣೆಸ್ನಾನದ ಸಂಭ್ರಮದೊಂದಿಗೆ ಮೊದಲಾಗುವ ದಿನ, ಪಂಚಾಗಶ್ರವಣದೊಂದಿಗೆ ಕೊನೆಯಾಗುವುದುಂಟು. ಕರ್ನಾಟಕದಲ್ಲಿ ಹೆಚ್ಚಿನ ಮಂದಿ ಬೇವಿನ ಎಸಳು, ಎಲೆ ಮತ್ತು ಬೆಲ್ಲ – ಇವುಗಳ ಮಿಶ್ರಣವನ್ನು ಸೇವಿಸುವುದು ಸಂಪ್ರದಾಯ. ತೆಲುಗರಲ್ಲಿ ‘ಉಗಾದಿ ಪಚಡಿ’ ಎಂಬ ವಿಶೇಷ ಮಿಶ್ರಣವು ಆಚರಣೆಯ ಅವಿಭಾಜ್ಯ ಅಂಗ. ಬೇವು, ಬೆಲ್ಲ, ಮೆಣಸು, ಉಪ್ಪು, ಹುಣಸೆರಸ ಮತ್ತು ಸ್ವಲ್ಪ ಮಾವಿನಕಾಯಿ ಇಷ್ಟನ್ನೂ ಬೆರಸಿ ಮಾಡುವ ಖಾದ್ಯ.
ಒಟ್ಟು ಬೇವು-ಬೆಲ್ಲವಂತೂ ಎರಡೂ ಕಡೆ ಇರುವಂಥದ್ದೇ. ನನ್ನ ತಾಯಿ ಬೇವು–ಬೆಲ್ಲವನ್ನು ಸಮವಾಗಿ ಮಿಶ್ರಣ ಮಾಡಿ ಕೊಡುತ್ತಿದ್ದರು. ಬೇವು ಸ್ವಲ್ಪವೇ ಇದ್ದು, ಬೆಲ್ಲ ಒಂದು ಖಂಡುಗ ತಿಂದರು, ಬೇವಿನ ಕಹಿಯೇ ಗೆಲ್ಲುವುದೆಂಬುದು ಅನುಭವವೇದ್ಯವಾದ ವಿಷಯವಾಗಿರುವಾಗ, ಈ ಸಮವಾದ ಮಿಶ್ರಣದ ತರ್ಕ ಅರ್ಥವಾಗುತ್ತಿರಲಿಲ್ಲ. ಮಿಸುಕಾಡದೆಯೇ ತಿನ್ನಬೇಕಾಗುತ್ತಿತ್ತು. ಅಜ್ಜಿ ‘ಪಾಪ, ಸ್ವಲ್ಪ ಬೆಲ್ಲ ಹೆಚ್ಚೇ ಇರಲಿ ಬಿಡೇ’ ಎಂದು ಶಿಫಾರಸು ಮಾಡಿದರೆ ಅಮ್ಮನ ಮನಸ್ಸೇನೂ ಕರಗುತ್ತಿರಲಿಲ್ಲ. ಜೊತೆಗೆ ಶ್ಲೋಕ ಬೇರೆ ಹೇಳಬೇಕು. ‘ಶತಾಯು ವಜ್ರದೇಹಾಯ, ಸರ್ವಸಂಪತ್ಕರಾಯ ಚ, ಸರ್ವಾರಿಷ್ಟ ವಿನಾಶಾಯ ನಿಂಬಕಂ ದಳ ಭಕ್ಷಣಂ’ ಅಂತ. ಹತ್ತಿರದಲ್ಲೇ ಇದ್ದ ದೊಡ್ಡಪ್ಪ ಕೀಟಲೆ ಮಾಡುತ್ತಾ ‘ಅರೆ, ಶ್ಲೋಕದಲ್ಲಿ ಬೆಲ್ಲದ ಬಗ್ಗೆ ಇಲ್ಲ, ಉಗಿ ಉಗಿ ತಿನ್ಬೇಡ’ ಅಂತ ಮತ್ತಷ್ಟು ತುಪ್ಪ ಸುರಿಯುತ್ತಿದ್ದರು. ‘ಹೊಸವರ್ಷ ಬರೀ ಬೆಲ್ಲವೇ ತಿಂದರೆ ಆಗೋಲ್ವೇ ?’ ಎಂದರೆ, ಬರೀ ಸಿಹಿಯೇ ತಿಂದರೆ ಸಿಹಿ ಬೆಲೆ ಆದ್ರೂ ಎಲ್ಲಿ ತಿಳಿಯುತ್ತೆ ಎಂಬ ಸಿದ್ಧ ಉತ್ತರ ಪ್ರತಿಧ್ವನಿಸುತ್ತಿತ್ತು. ಪಾತ್ರಗಳು ಬೇರೆ ಇದ್ದರೂ, ಎಲ್ಲ ಮನೆಗಳಲ್ಲಿ ಇಂತಹ ಪ್ರಸಂಗಗಳು ನಡೆಯುವಂತದ್ದು ಸರ್ವೇ ಸಾಮಾನ್ಯ.
ಯುಗಾದಿಯ ಜೊತೆಗೆ ಸಂವಾದಿಯಾಗಿ ಬರುವ ಮತ್ತೊಂದು ವಿಷಯ ಒಬ್ಬಟ್ಟು/ಹೋಳಿಗೆ. ಹೋಳಿಗೆಯಿಲ್ಲದ ಯುಗಾದಿಯ ಅಡುಗೆ ಇಲ್ಲ. ಯುಗಾದಿಹಬ್ಬದ ಅಡುಗೆಯನ್ನು ಒಂದು ಸಂಗೀತ ಕಚೇರಿಗೆ ಹೋಲಿಸಿದರೆ, ಹೋಳಿಗೆ ಅದರಲ್ಲಿನ ‘ರಾಗ-ತಾನ-ಪಲ್ಲವಿ’ ಎನ್ನಬಹುದು; ಅದರ ಪ್ರಾಮುಖ್ಯ ಅಂಥದ್ದು. ಹೋಳಿಗೆಯ ಪೂರ್ಣವು ಇಡೀ ‘ಮೆನು’ವನ್ನು ಸಂಪೂರ್ಣವಾಗಿ ಆವರಿಸಿರುತ್ತದೆ. ಶಾಸ್ತ್ರಕ್ಕೆ ಎಲೆ ಕೊನೆಗೆ ಬಡಿಸುವ ಪಾಯಸ ಸಹ, ಹೋಳಿಗೆಯ ಹೂರಣವನ್ನು ಹಾಲಿಗೆ ಬೆರೆಸಿ ತಯಾರಿಸಿದ ದಿಢೀರ್ ಪಾಯಸವಾಗಿರುತ್ತದೆ. ತಿಳಿಸಾರು ಸಹ ‘ಒಬ್ಬಟ್ಟಿನದ್ದೇ’ ಉತ್ಪನ್ನ. ಕೈ–ಬಾಯಿ ಕುದುರುವುದಕ್ಕೆ ಇನ್ನಿತರ ಖಾದ್ಯಗಳಷ್ಟೇ. ಮುಖ್ಯ ಭಾಗ ಹೋಳಿಗೆಯ ರಾಗ-ತಾನ-ಪಲ್ಲವಿಯೇ.
ಯುಗಾದಿಯ ಆಚರಣೆಯ ಮುಖ್ಯಭಾಗ ಭಾಗ ಪಂಚಾಂಗ ಶ್ರಾವಣ. ‘ಏನ್ ಸ್ವಾಮೀ? ಈ ವರ್ಸ ಎಸ್ಟ್ ಕೊಡ ಮಳೆ? ಭೂಮಿಗೆಷ್ಟು, ಸಮುದ್ರಕ್ಕೆಷ್ಟು? ನಮ್ಮ್ ಎಸ್ರುಗೆ ಆದಾಯ- ಕಂದಾಯ ಎಂಗೈತೆ ರವಸ್ಟು ಯೋಳಿ; ಮಳೆ ಯೋಗ ಎಂಗೈತೆ? ಯಾವ್ ದಾನ್ಯ ಆದಾಯ ಕೊಡತೈತೆ?’ - ಇವು ಪಂಚಾಂಗ ಶ್ರವಣದ ಸಂದರ್ಭದಲ್ಲಿ ಹಳ್ಳಿಗಳ ಕಡೆ ಸಾಮಾನ್ಯವಾಗಿ ಕೇಳಿಬರುವ ಸಹಜವಾದ ಪ್ರಶ್ನೆಗಳು. ಇಂದಿನ ದಿನಗಳಲ್ಲಿ ಟಿವಿ ವಾಹಿನಿಗಳ ಮೂಲಕವಷ್ಟೇ ಹೆಚ್ಚು ಪರಿಚಯವಾದರೂ, ಹಳ್ಳಿಗಳಲ್ಲಿ ಯುಗಾದಿ ಆಚರಣೆಯ ಅವಿಭಾಜ್ಯ ಅಂಗವಿದು. ಇಂದಿಗೂ ಶ್ರದ್ಧಾಳುಗಳು, ವರ್ಷದ ಪಂಚಾಂಗ ಮೊದಲೇ ದೊರೆತಿದ್ದರೂ, ಹಬ್ಬದ ದಿನದಂದು ಪೂಜೆ ಮಾಡಿ ನಂತರವಷ್ಟೇ ವರ್ಷದ ಆಗುಹೋಗುಗಳನ್ನು ತಿಳಿಯುವ ಕುತೂಹಲ ತೋರುತ್ತಾರೆ.
ಹೀಗೆ ಪ್ರಕೃತಿಯ ಮರುಹುಟ್ಟು ಮತ್ತು ಅದರೊಂದಿಗೆ ಬೆಸೆದುಕೊಂಡ ನಮ್ಮ ಸಾಂಸ್ಕೃತಿಕ ಮನಸ್ಸಿನ ದ್ಯೋತಕ- ಯುಗಾದಿ. ಹಬ್ಬದ ಆಚರಣೆಗಳೂ ಇದಕ್ಕೆ ಪೂರಕವಾಗಿಯೇ ಇವೆ. ಪ್ರತೀ ಕಾಲಾವರ್ತದಲ್ಲಿ ಹೊಸ ಹುಟ್ಟು ಪಡೆಯುವ ಪ್ರಕೃತಿಯ ಶಾಶ್ವತ ಸತ್ಯದ ಜೊತೆಗೆ, ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತ ಹೊಸತರ ಕಡೆಗೆ ಜೀವನೋತ್ಸಾಹದಿಂದ ಮುನ್ನುಗುವ ಸಂದೇಶವನ್ನು ಹೊತ್ತುತರುವ ಹಬ್ಬ ಯುಗಾದಿ. ಸುಖದುಃಖೇ ಸಮೀಕೃತ್ವಾ ಲಾಭಾಲಾಭೌ ಜಯಾಜಯೌ – ಎಂಬ ಗೀತಾಚಾರ್ಯನ ಮಾತೂ ಇಲ್ಲಿ ಮನನೀಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.