ADVERTISEMENT

ಮನನಾಟಿದ ಕಗ್ಗದ ಸಾಲುಗಳು

ಲತಾ ಹೆಗಡೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

‘ಜಟ್ಟಿ ಕಾಳಗದಿ ಗೆಲ್ಲದೊಡೆ
ಗರಡಿಯ ಪಟ್ಟು ಸಾಮುಗಳೆಲ್ಲ
ವಿಫಲವೆನ್ನುವೆಯೇ೦...
ಮುಟ್ಟಿನೋಡವನ ಮೈಕಟ್ಟು ಕಬ್ಬಿಣದ ಗಟ್ಟಿ ...
ಗಟ್ಟಿತನ ಗರಡಿಫಲ ಮಂಕುತಿಮ್ಮ’

ಡಿವಿಜಿ ಅವರ ಮಂಕುತಿಮ್ಮನ ಕಗ್ಗದ ಈ ಸಾಲುಗಳನ್ನು ಚಿಕ್ಕಂದಿನಿಂದಲೂ ಅಪ್ಪನ ಬಾಯಲ್ಲಿ ಕೇಳುತ್ತಲೇ ಬೆಳೆದವಳು ನಾನು. ಆದರೆ ಆಗ ಆ ಪ್ರಸಿದ್ಧ ಸಾಲುಗಳ ಒಳ ಅರ್ಥವನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಲೇ ಇಲ್ಲ, ಬೇಕೂ ಇರಲಿಲ್ಲ . ಬಾಲಿಶ ಬುದ್ಧಿ ಮತ್ತು ವಯದ ಕಾರಣವೇನೋ ಈ ಕಿವಿಯಿಂದ ಕೇಳಿ ಆ ಕಿವಿಯಿಂದ ಬಿಟ್ಟುಬಿಡುತ್ತಿದ್ದೆ. ಮುಂದೆ ಅಂದುಕೊಂಡದ್ದೊಂದೂ ಆಗದೇ ಹೋದಾಗ ಜೀವನವೇ ಅಷ್ಟು... ಬಂದಂತೆ ಕಳೆಯಬೇಕು ಎಂಬ ತತ್ವ ಪಾಲಕಿಯಾದೆನಾದರೂ ಅತೃಪ್ತಿ, ನಿರಾಶೆ ಮನದಾಳದಲ್ಲಿ ಬೇರುಬಿಟ್ಟಿತ್ತು. ಗೃಹಿಣಿಯಾಗಿ ಸಂಸಾರ ನಡೆಸಲು ಸ್ನಾತಕೋತ್ತರ ಪದವಿಯ ಅವಶ್ಯಕತೆಯೇನಿತ್ತು? ಬರೀ ಹತ್ತನೇ ತರಗತಿಯ ತನಕ ಕಲಿತರೆ ಸಾಕಿತ್ತು... ಈ ದ್ವಂದ್ವ ಕೊರಗಿನಲ್ಲೇ ವರ್ಷಗಳುರುಳಿದ್ದವು.

ಒಮ್ಮೆ ಊರಿಗೆ ಹೋದಾಗ ಅಪ್ಪ ಆಂಗ್ಲ ಮಾಧ್ಯಮದ ನನ್ನ ಮಕ್ಕಳನ್ನು ಕೂರಿಸಿಕೊಂಡು ಏನನ್ನೋ ವಿವರಿಸುವಾಗ ಅವರ ನೆಚ್ಚಿನ ಆ ಪ್ರಸಿದ್ಧ ಸಾಲುಗಳನ್ನು ಉಲ್ಲೇಖಿಸಿ ಅರ್ಥ ಹೇಳತೊಡಗಿದ್ದರು. ಅದೇಕೋ ಅಂದು ಆ ಸಾಲುಗಳು ನನ್ನ ಮನ ಮುಟ್ಟಿದ್ದವು. ಮುಂದೆ ಮಂಕುತಿಮ್ಮನ ಕಗ್ಗವನ್ನು ಓದಿ ಪ್ರಭಾವಿತಳಾಗಿ ಬರಹದಲ್ಲಿ ತೊಡಗಿ ಕಲಿತ ವಿದ್ಯೆಯ ಸದುಪಯೋಗಪಡಿಸಿಕೊಂಡೆ. ನನ್ನ ಮನದಾಳದ ಮಾತುಗಳನ್ನು, ಅನಿಸಿಕೆಗಳನ್ನು ಬರಹದ ಪ್ರಾಕಾರಗಳ ಮೂಲಕ ಹೊರಹಾಕತೊಡಗಿದೆ. ಅವು ಪ್ರಕಟಗೊಂಡಾಗ ಸಂತಸವಾಗುತ್ತಿತ್ತು.
ಆದರೆ ಪ್ರಕಟಗೊಳ್ಳದೇ ಸಂಪಾದಕರ ಕಸದ ಬುಟ್ಟಿಯನ್ನಲಂಕರಿಸಿದಾಗ ಮನ ಪ್ರಪಾತಕ್ಕಿಳಿದುಬಿಡುತ್ತಿತ್ತು. ಆಗೆಲ್ಲ ಕಗ್ಗದ ಈ ಸಾಲುಗಳನ್ನು ನೆನಪಿಸಿಕೊಂಡು ಚೇತರಿಸಿಕೊಳ್ಳುತ್ತಾ ತರ್ಕಿಸುತ್ತಿದ್ದೆ... ಹೌದಲ್ಲವೇ!? ಪ್ರಕಟಗೊಳ್ಳದಿದ್ದರೇನಾಯಿತು ಅಥವಾ ಪರೀಕ್ಷೆಯಲ್ಲಿ ಸ್ಪರ್ಧೆಯಲ್ಲಿ ಗೆಲ್ಲದಿದ್ದರೇನಾಯಿತು... ತಾಲೀಮು ಪಡೆದದ್ದಾಗಲೀ; ಅಭ್ಯಸಿಸಿದ್ದು , ಶ್ರಮಪಟ್ಟು ಬರೆದದ್ದು ವ್ಯರ್ಥವಾಗಲಿಲ್ಲ. ವಿಚಾರಧಾರೆಯನ್ನು ಬೆಳೆಸಿ ಉತ್ತಮ ಲೇಖನದ ಹುಟ್ಟಿಗೆ ಕಾರಣವಾಯಿತಲ್ಲವೇ?

ನನ್ನ ಮನನಾಟಿದ ಆ ಸಾಲುಗಳನ್ನು ಅಪ್ಪನ ರಾಗದಲ್ಲೇ ಆಗಾಗ ಹೇಳುತ್ತಾ ಬೆಳೆದ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವುದರ ಜೊತೆಗೆ ಜೀವನದ ಏಳುಬೀಳುಗಳಿಂದ ಕ್ಲೇಶಕ್ಕೊಳಗಾಗುವ ಮನವೆಂಬ ಮರ್ಕಟವನ್ನೂ ಶಾಂತಗೊಳಿಸಿ ಹುರಿದು೦ಬಿಸುತ್ತಿರುತ್ತೇನೆ.

*ಶರಣು ವಿಶ್ವಾತ್ಮ ಮಂಕುತಿಮ್ಮನಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.