ADVERTISEMENT

ರಾಮಾಯಣ, ಅದು ಸೀತೆಯ ಚರಿತೆ

ಇಂದು ವಾಲ್ಮೀಕಿ ಜಯಂತಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 14 ಅಕ್ಟೋಬರ್ 2016, 19:30 IST
Last Updated 14 ಅಕ್ಟೋಬರ್ 2016, 19:30 IST
ರಾಮಾಯಣ, ಅದು ಸೀತೆಯ ಚರಿತೆ
ರಾಮಾಯಣ, ಅದು ಸೀತೆಯ ಚರಿತೆ   

ಆದಿಕಾವ್ಯ ರಾಮಾಯಣ. ‘ರಾಮಾಯಣ’ ಎಂದರೆ ರಾಮನ ಚರಿತ್ರೆ ಎಂದರ್ಥ. ಅದಕ್ಕೆ ‘ರಾಮಾಯಣ’ ಎಂದಲ್ಲದೆ ಬೇರೆಯ ಹೆಸರುಗಳೂ ಇವೆ; ಅವುಗಳಲ್ಲಿ ‘ಸೀತೆಯ ಚರಿತ್ರೆ’ ಎನ್ನುವುದೂ ಒಂದು. ರಾಮಾಯಣವಾಗಲೀ ಅದರ ನಾಯಕನಾದ ರಾಮನಾಗಲೀ ಇಂದು ಲೋಕಪ್ರಸಿದ್ಧಿಯನ್ನು ಪಡೆದಿರುವುದರಲ್ಲಿ ಸೀತೆಯ ಪಾತ್ರ ದೊಡ್ಡದು.

ಭಾರತದ ಎರಡು ‘ಭಾಷೆ’ಗಳೇ ಆದ ರಾಮಾಯಣ ಮತ್ತು ಮಹಾಭಾರತದಲ್ಲಿ ಸ್ತ್ರೀಪಾತ್ರಗಳ ಪ್ರಭಾವ ದೊಡ್ಡದು; ಕಥೆಯ ಸೌಂದರ್ಯಕ್ಕಾಗಿ ಮಾತ್ರವೇ ಅಲ್ಲ, ಆ ಮಹಾಕಾವ್ಯಗಳು ಪ್ರತಿನಿಧಿಸುವ ಮೌಲ್ಯಗಳ ಸಾಕಾರರೂಪವಾಗಿ ಕೂಡ ಸ್ತ್ರೀಪಾತ್ರಗಳ ಮೆರವಣಿಗೆಯನ್ನೇ ನಾವಿಲ್ಲಿ ನೋಡಬಹುದಾಗಿದೆ. ಈ ಎರಡು ಮಹಾಕಾವ್ಯಗಳುದ್ದಕ್ಕೂ ಸ್ತ್ರೀಧ್ವನಿಯನ್ನು ಕೇಳುತ್ತಲೇ ಇರುತ್ತೇವೆ.

ರಾಮಾಯಣದ ಹುಟ್ಟಿಗೂ ಹೆಣ್ಣಿನ ದನಿಗೂ ನೇರ ನಂಟಿದೆ. ಗಂಡು–ಹೆಣ್ಣು ಜೋಡಿ ಹಕ್ಕಿಗಳು ಮಿಲನದ ಸಂತಸದಲ್ಲಿವೆ; ಬೇಡನೊಬ್ಬ ಗಂಡುಹಕ್ಕಿಯನ್ನು ಕೊಂದು ಈ ಸಾಂಗತ್ಯವನ್ನು ಅಗಲಿಸಿದ. ಜೊತೆಗಾರನನ್ನು ಕಳೆದುಕೊಂಡ ಹಕ್ಕಿ ಗೋಳಿಟ್ಟು ಕೂಗಲಾರಂಭಿಸಿತು. ಈ ದೃಶ್ಯವನ್ನು ನೋಡಿದ ವಾಲ್ಮೀಕಿಮಹರ್ಷಿಗಳಿಗೆ ರಾಮಾಯಣವನ್ನು ಬರೆಯಲು ಬೇಕಾದ ರಸಾವೇಷವೊಂದು ಒದಗಿತು. ಅವರ ಶೋಕವೇ ಶ್ಲೋಕವಾಗಿ ಪ್ರಕಟವಾಯಿತು; ಅನಂತರದಲ್ಲಿ ಆದಿಕಾವ್ಯವಾಗಿ ರೂಪ ಪಡೆಯಿತು.

ರಾಮಾಯಣ ಹುಟ್ಟಿಗೆ ಭಿತ್ತಿಯನ್ನು ಒದಗಿಸಿದ ಹೆಣ್ಣುಹಕ್ಕಿಯ ಆರ್ತನಾದವೇ ಹೌದು. ಹೀಗಾಗಿ ಈ ಕಾವ್ಯದ ಉದ್ದಕ್ಕೂ ಹೆಣ್ಣಿನ ಶೋಕವು ಆಧಾರಶ್ರುತಿಯಾಗಿರುವುದು ಸಹಜವಾಗಿಯೇ ಇದೆ. ಸ್ವಾರಸ್ಯವೆಂದರೆ, ಹೆಣ್ಣಿನ ಸಂಕಟದ ದನಿ ಕಾವ್ಯದ ಮುಕ್ತಾಯದೊಂದಿಗೆ ಮುಗಿಯದೇ ಸಾವಿರಾರು ವರ್ಷಗಳಿಂದಲೂ ಹಲವು ಪ್ರಭೇದಗಳಲ್ಲಿ ಕೇಳುತ್ತಲೇ ಇದ್ದೇವೆ. ರಾಮಾಯಣದ ಹಿರಿಮೆ ಇರುವುದೇ ಈ ಜೀವಂತಿಕೆಯಲ್ಲಿ. ಹೆಣ್ಣುಹಕ್ಕಿಯ ಗೋಳಾಟ ಆದಿಕಾವ್ಯದಲ್ಲಿ ಸೀತೆಯ ಗೋಳಾಟವಷ್ಟೆ ಆಗಲಿಲ್ಲ; ನಮ್ಮೆಲ್ಲರ ಜೀವನದಲ್ಲಿ ಎದುರಾಗುವ ಎಲ್ಲ ಸಂಕಟಗಳಿಗೂ ಮಾತೃಕೆಯಂತಿದೆ ಅದು.

ರಾಮಾಯಣದಲ್ಲಿ ಸಾಕಷ್ಟು ಸ್ತ್ರೀಪಾತ್ರಗಳಿವೆ. ಅಹಲ್ಯೆ, ಸೀತೆ, ಕೈಕೇಯಿ, ಕೌಸಲ್ಯೆ, ಮಂಡೋದರಿ, ಶೂರ್ಪಣಖೆ, ಶಬರಿ, ತಾರಾ – ಹೀಗೆ ಹಲವು ಗುಣಸ್ವಭಾವಗಳ ಪಾತ್ರಗಳನ್ನು ನಾವಿಲ್ಲಿ ಕಾಣುತ್ತೇವೆ.

ರಾಮಾಯಣ ಮತ್ತು ಮಹಾಭಾರತಗಳು ನಮ್ಮ ಸಂಸ್ಖೃತಿಯ ಮೇಲೆ ನಿರಂತರವಾಗಿ ಪ್ರಭಾವವನ್ನು ಬೀರುತ್ತಿರುವುದಾದರೂ ಏಕೆ ಮತ್ತು ಹೇಗೆ – ಎನ್ನುವುದು ಅಧ್ಯಯನಾರ್ಹ ವಿವರವೇ ಹೌದು. ರಾಮ, ಕೃಷ್ಣ ಮತ್ತು ಶಿವ  – ಈ ಮೂವರು ಭಾರತೀಯ ಸಂಸ್ಕೃತಿಯ ಶಿಖರಗಳು ಎಂದ ಲೋಹಿಯಾ ಅವರ ಮಾತು ಇಲ್ಲಿ ಮನನೀಯ.

ರಾಮ–ರಾಮಾಯಣ – ನಮ್ಮ ಜೀವನಕ್ಕೆ ಹೇಗೆ ಒದಗಬಹುದು? ರಂಗಕರ್ಮಿ ಪ್ರಸನ್ನ ಅವರ ಮಾತುಗಳನ್ನು – ‘ಯಂತ್ರಗಳನ್ನು ಕಳಚೋಣ ಬನ್ನಿ’ ಕೃತಿಯಲ್ಲಿರುವುದು – ಇಲ್ಲಿ ಉಲ್ಲೇಖಿಸಬಹುದೆನಿಸುತ್ತದೆ:

‘ರಾಮ ಸಂಸಾರಸ್ಥ; ಅವಿಭಾಜ್ಯ ಕುಟುಂಬವೊಂದರ ಸದಸ್ಯ. ರೈತಾಪಿ ಕುಟುಂಬವೊಂಧರಲ್ಲಿ ಇಂದಿಗೂ ಇರುವ ಪರಿಸ್ಥಿತಿ ಇದು. ಬುದ್ಧನಂತೆ ಅವನು ಸಂಸಾರತ್ಯಾಗ ಮಾಡಲಿಲ್ಲ, ಮಹಾವೀರನಂತೆ ಸನ್ಯಾಸ ಸ್ವೀಕರಿಸಲಿಲ್ಲ... ಸಂಸಾರಸ್ಥರು ಅನುಭವಿಸುವ ಕಷ್ಟಕೋಟಲೆಗಳೆಲ್ಲವನ್ನೂ ರಾಮ ಅನುಭವಿಸಿದ;  ಕೌಟುಂಬಿಕ ಕಲಹ, ಆಸ್ತಿಯ ಕಿತ್ತಾಟ, ದುರ್ಬಲ ತಂದೆ, ಸಣ್ಣ ವಯಸ್ಸಿನ ಮಲತಾಯಿ, ಚಾಡಿಮಾತು, ಕುಹಕ, ಕುಚೋದ್ಯ – ಎಲ್ಲ ಅನುಭವಿಸುತ್ತಲೇ, ಎಲ್ಲವನ್ನೂ ಮೀರುತ್ತ ನಡೆದ.

ADVERTISEMENT

ರಾಮ ರೈತಾಪಿ ಜನಗಳ ಪ್ರೀತಿ ಗಳಿಸಿರುವುದು ಈ ಕಾರಣಕ್ಕಾಗಿ; ಅವರದ್ದೇ ಪರಿಸ್ಥಿತಿಯಲ್ಲಿ ಅವರು ಸಾಧಿಸಲಾಗದ ದೊಡ್ಡತನವನ್ನು ರಾಮ ಸಾಧಿಸುತ್ತಾನೆ. ಸಾರ್ವಜನಿಕರಂಗದಲ್ಲಿ ಸೋಲರಿಯದ ರಾಮ ಸೀತೆ ಲಕ್ಷ್ಮಣರು ವೈಯಕ್ತಿಕ ಬದುಕಿನಲ್ಲಿ ಅಪಾರವಾದ ನೋವಿಗೆ ಗುರಿಯಾಗುತ್ತಾರೆ. ರಾಮನ ಸಾಂಸಾರಿಕತೆಯು ಅವನ ದೈವಿಕತೆಯ ಬಹುಮುಖ್ಯ ಲಕ್ಷಣವಾಗಿದೆ. ರಾಮನ ಮೂರ್ತಿಯನ್ನು ನೀವು ಗಮನಿಸಿರಬಹುದು, ಅದು ಒಬ್ಬನ ಮೂರ್ತಿಯಲ್ಲ, ನಾಲ್ಕು ಜನರ ಗುಂಪು ಅದು. ರಾಮ, ಲಕ್ಷ್ಮಣ, ಸೀತೆ ಹಾಗೂ ಭಕ್ತ ಆಂಜನೇಯ ನಾಲ್ವರೂ ಸೇರಿದರೆ ಮಾತ್ರ ರಾಮನ ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ.’

ರಾಮನಿಗೆ ‘ಆದರ್ಶಪುರುಷೋತ್ತಮ’ ಎಂಬ ಪದವಿ ದಕ್ಕುವುದರಲ್ಲಿ ಸೀತಾತ್ಯಾಗವೂ ಒಂದು ಎಂದು ತೀಕ್ಷ್ಣವಾಗಿ ಕೇಳಿಸಿದರೂ ಅದು ಸುಳ್ಳಲ್ಲ. ಬಾಹ್ಯವಾಗಿ ಅಗಲಿದ್ದರೂ ಅಂತರಂಗದಲ್ಲಿ ಸದಾ ಒಂದಾಗಿದ್ದುದರಿಂದಲೇ ಸೀತಾರಾಮರದ್ದು ಆದರ್ಶ ದಾಂಪತ್ಯ, ಆದರ್ಶ ಕುಟುಂಬ ಎನಿಸಿರುವುದು. ಎಷ್ಟೇ ಕಷ್ಟಗಳು ಎದುರಾದರೂ ಕುಟುಂಬ ಸಾಮರಸ್ಯವನ್ನು ಉಳಿಸಿಕೊಳ್ಳಬೇಕೆಂಬ ಸೀತಾರಾಮರ ದೃಢತೆ ಅಪೂರ್ವ. ಆದರೆ ಈ ಕುಟುಂಬ ಎನ್ನುವುದು ಕೇವಲ ಅವರಿಬ್ಬರ ವೈಯಕ್ತಿಕ ಸಂಸಾರವಷ್ಟೆ ಆಗದೆ, ಅದು ವಿಸ್ತಾರವಾಗಿ ಇಡಿಯ ರಾಜ್ಯಕ್ಕೆ ವಿಸ್ತಾರವನ್ನಾಗಿಸಿಕೊಂಡದ್ದೇ ಈ ದಾಂಪತ್ಯದ ವಿಶೇಷತೆ.

ಸೀತಾರಾಮರು ಅಗಲದೆ ರಾಜ್ಯವನ್ನು ಒಂದಾಗಿರಿಸುವುದು ಸಾಧ್ಯವಿಲ್ಲ ಎಂಬ ಕಟುವಾಸ್ತವನ್ನು ಅರಿತು ಅದರಂತೆ ಬೇರೆಯಾದ ಈ ಜೋಡಿಯ ವಿರಹ ಇಂದಿಗೂ ನಮಗೆ ಕೇಳಿಸುತ್ತಲೇ ಇದೆ; ನಮಗೂ ನಮ್ಮ ಕುಟುಂಬಕ್ಕೂ ಸಮಾಜಕ್ಕೂ ಇರುವ, ಇರಬೇಕಾದ ಸಂಬಂಧ ಏನು – ಎಂಬ ಪ್ರಶ್ನೆಯನ್ನು ಅದು ಒಡ್ಡುತ್ತಲೇ ಇದೆ. ಸೀತಾರಾಮರು ಎದುರಿಸಿದ ಬಿಕ್ಕಟ್ಟುಗಳನ್ನು ಕುರಿತು ಪ್ರಸನ್ನ ಅವರ ಮಾತುಗಳು ಮನನೀಯ:

‘ರಾಮಸೀತೆಯರು ಎದುರಿಸಿದ ವೈವಾಹಿಕ ಸಂಬಂಧದ ಜಟಿಲತೆಯು ಇವತ್ತಿಗೂ ಜಟಿಲವಾಗಿಯೇ ಉಳಿದಿದೆ. ಒಂದೇ ಹೆಣ್ಣಿನ ಸಂಗದ ವ್ರತವನ್ನು ಕೈಗೊಂಡ ಮೊದಲ ಗಂಡಸು ರಾಮ. ಮೊದಲಿಗನ ಎಲ್ಲ ಅವಾಂತರಗಳನ್ನೂ ಅವನು ಎದುರಿಸುತ್ತಾನೆ. ಮತ್ತೆ ಮತ್ತೆ ಎಡುವುತ್ತಾನೆ. ರಾಮ ಪ್ರತಿಬಾರಿ ಎಡವಿದಾಗಲೂ ಏಟು ತಿನ್ನುವವಳು ಸೀತೆ. ಸೀತೆಯು ಅದೆಷ್ಟೇ ಏಟು ತಿಂದರೂ, ರಾಮನಿಂದ ಅದೆಷ್ಟೇ ನೋವುಂಡರೂ, ರಾಮನ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗುವುದಿಲ್ಲ. ಮಾನವಚರಿತ್ರೆಯಲ್ಲೇ ಏಕಪತ್ನಿತ್ವದ ಹಿರಿಮೆಯನ್ನು ಕಂಡ ಮೊದಲ ಹೆಣ್ಣು ತಾನೆಂಬ ಅರಿವಿರಬೇಕು, ಪ್ರಾಯಶಃ ಸೀತೆಗೆ. ರಾಮ ನೀಡುವ ಈ ಹಿರಿಮೆ ಸಣ್ಣ ಹಿರಿಮೆಯಲ್ಲ; ಸ್ತ್ರೀವಾದಿಗಳು ಈ ಸಂಗತಿಯನ್ನು ಮರೆಯುತ್ತಾರೆ.’

ರಾಮಾಯಣ ಇಂದಿಗೂ ಹಲವು ಸ್ತರಗಳ ಅರ್ಥಗಳನ್ನು ನಮ್ಮ ಮುಂದೆ ಬಿಚ್ಚಿಡುತ್ತಲೇ ಇದೆ. ರಾಮ ಹಾಗೆ ಮಾಡಿದ್ದು ಸರಿಯೇ, ಹೀಗೆ ಮಾಡಿದ್ದು ಸರಿಯೇ – ಎಂಬ ಪ್ರಶ್ನೆಗಳಾಗಲೀ, ಸೀತೆ ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು – ಎಂಬ ಉದ್ವೇಗಗಳಾಗಲೀ ನಮ್ಮಲ್ಲಿ ಉಂಟಾಗುತ್ತಿದೆ ಎಂದಾದರೆ ಅದು ರಾಮಾಯಣದ ಶಕ್ತಿಯೇ ಹೌದು. ಇದರಲ್ಲಿ ರಾಮನ ಪಾತ್ರದ ಶಕ್ತಿ ಎಷ್ಟಿದೆಯೋ , ಅಷ್ಟೇ ಶಕ್ತಿ ಸೀತೆಯ ಪಾತ್ರದಲ್ಲೂ ಇದೆ ಎನ್ನುವುದನ್ನು ಮರೆಯುವಂತಿಲ್ಲ. ಕುಟುಂಬ ಎಂಬ ವ್ಯವಸ್ಥೆಯ ಬಗ್ಗೆ ಇಂದು ಭಿನ್ನ ರೀತಿಯ ವ್ಯಾಖ್ಯಾನಗಳು ಸಮಾಜದಲ್ಲಿ ಮೂಡತೊಡಗಿವೆ.

ಇಂಥ ಸಂದರ್ಭದಲ್ಲಿ ರಾಮಾಯಣದ ಸ್ತ್ರೀಪಾತ್ರಗಳ ಅನುಸಂಧಾನ ಮುಖ್ಯವಾಗುತ್ತದೆ. ಬದುಕಿನ ಸಾರ್ಥಕತೆ ಎಲ್ಲಿದೆ? ವ್ಯಕ್ತಿಜೀವನಕ್ಕೂ ಸಮಾಜಜೀವನಕ್ಕೂ ಸಂಬಂಧವೇನು? ಸುಖ ಎಂದರೆ ಏನು? ಹೆಣ್ಣು ಮತ್ತು ಗಂಡು – ಇವರಿಬ್ಬರ ಸಂಬಂಧಗಳ ನೆಲೆ–ಬೆಲೆಗಳು ಏನು? – ಇಂಥ ಜಿಜ್ಞಾಸೆಗಳಿಗೆ ಆ ಪಾತ್ರಗಳು ನಮ್ಮ ಭಾವವನ್ನೂ ಬುದ್ಧಿಯನ್ನೂ ಹರಿತಗೊಳಿಸಿ ದಾರಿಯನ್ನೂ ಗುರಿಯನ್ನೂ ಸೂಚಿಸಿ, ಬದುಕಿಗೆ ಬೇಕಾದ ವಿವೇಕದ ಬೆಳಕನ್ನು ಒದಗಿಸಬಹುದೆನಿಸುತ್ತದೆ. 

ನಿತ್ಯವೂ ರಾಮಾಯಣ
ವಾಲ್ಮೀಕಿ ಮಹರ್ಷಿಗಳಿಂದ ರಚಿತವಾದ ಮಹಾಕಾವ್ಯವೇ ರಾಮಾಯಣ. ಇದು ಆದಿಕಾವ್ಯ, ಎಂದರೆ ಮೊದಲ ಕಾವ್ಯ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಸಂಸ್ಕೃತಭಾಷೆಯಲ್ಲಿ ರಚಿತವಾಗಿರುವ ಈ ಮಹಾಕಾವ್ಯದಲ್ಲಿ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿವೆ. ಇವು ಏಳು ಕಾಂಡಗಳಲ್ಲಿ ಹರಡಿಕೊಂಡಿದೆ. ಬಾಲಕಾಂಡ, ಅಯೋಧ್ಯಾಕಾಂಡ, ಅರಣ್ಯಕಾಂಡ, ಕಿಷ್ಕಿಂಧಾಕಾಂಡ, ಸುಂದರಕಾಂಡ, ಯುದ್ಧಕಾಂಡ ಮತ್ತು ಉತ್ತರಕಾಂಡ – ಇವೇ ಆ ಕಾಂಡಗಳು. ಸಾವಿರಾರು ವರ್ಷಗಳಿಂದಲೂ ರಾಮಾಯಣದ ಪ್ರಭಾವ ಭಾರತೀಯ ಜನಮಾನಸದ ಮೇಲೆ ಹಲವು ರೀತಿಗಳಿಂದ ಆಗುತ್ತಲೇ ಇದೆ.

ರಾಮಾಯಣವನ್ನು ಆಧರಿಸಿ ಹಲವು ನಾಟಕಗಳು, ಕಾವ್ಯಗಳು ರಚನೆಯಾಗಿವೆ. ರಾಮಾಯಣದ ನಾಯಕನಾದ ಶ್ರೀರಾಮ ಮತ್ತು ನಾಯಕಿ ಸೀತೆ ಭಾರತೀಯ ಸಂಸ್ಕೃತಿಯ ಪ್ರತಿನಿಧಿಗಳು ಎಂದು ಕೀರ್ತಿತರಾಗಿದ್ದಾರೆ. ತಂದೆಯ ಮಾತನ್ನು ಉಳಿಸಲು ರಾಜ್ಯಸಿಂಹಾಸನವನ್ನು ತ್ಯಜಿಸಿ ಕಾಡಿಗೆ ಹೋದವನು ರಾಮ. ಅವನನ್ನು ಹಿಂಬಾಲಿಸಿ ಸೀತೆಯೂ ಕಾಡಿಗೆ ಹೋದವಳು. ಆದರೆ ಅನಂತರದಲ್ಲಿ, ಸೀತೆಯನ್ನೂ ರಾಮ ತ್ಯಜಿಸಿ ರಾಜನಾಗಿ ಉಳಿಯುತ್ತಾನೆ. ರಾಮಾಯಣ ಇಂದಿಗೂ ಹಲವು ನೆಲೆಗಳಲ್ಲಿ ಚರ್ಚೆಗೆ ವಸ್ತುವಾಗಿದೆ. ರಾಮ, ಸೀತೆ, ಭರತ, ಲಕ್ಷ್ಮಣ, ಹನುಮಂತ, ವಿಭೀಷಣ – ಹೀಗೆ ರಾಮಾಯಣ ಪ್ರತಿ ಪಾತ್ರವೂ ನಮ್ಮ ಜೀವನದುದ್ದಕ್ಕೂ ಹಲವು ಸಂದರ್ಭಗಳಲ್ಲಿ ಎದುರಾಗುತ್ತಲೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.