`ನೀನು ನನ್ನ ಆಧ್ಯಾತ್ಮಿಕ ಪತ್ನಿ ಆಗುವಿಯಾ? ಇಂಥದೊಂದು ಮಹದಾಸೆ ನನಗಿದೆ. ಆದರೆ ಒಂದು ವಿಚಾರವನ್ನು ಸ್ಪಷ್ಟವಾಗಿ ಹೇಳಿ ಬಿಡುತ್ತೇನೆ. ನಾನು ಆಶಿಸುವ ಈ ಸಂಬಂಧ ಎರಡು ಭಿನ್ನ ಲಿಂಗಗಳಿಗೆ ಸೇರಿದ ಇಬ್ಬರು ವ್ಯಕ್ತಿಗಳ ನಡುವಣ ಹೊಂದಾಣಿಕೆ ಮಾತ್ರ. ಇಲ್ಲಿ ಯಾವುದೇ ದೈಹಿಕ ಕಾಮನೆಗಳಿಲ್ಲ.
ಬದಲಿಗೆ ಎರಡು ಜ್ವಲಂತ ಆತ್ಮಗಳ ಸಮ್ಮಿಲನವಷ್ಟೇ. ಮತ್ತು ಇದು ಕಾಯಾ ವಾಚಾ ಮನಸಾ ಇಬ್ಬರು ಬ್ರಹ್ಮಚಾರಿಗಳ ಮಧ್ಯೆ ಮಾತ್ರ ಸಾಧ್ಯವಾಗುವಂಥದ್ದು. ನೀನು ಈ ವಿವರಣೆಗೆ ಹೊಂದಿಕೊಳ್ಳುವ ನನ್ನ ಆಧ್ಯಾತ್ಮಿಕ ಪತ್ನಿಯೇ? ನಮ್ಮಿಬ್ಬರ ನಡುವೆ ಅಂಥ ಪರಿಶುದ್ಧತೆ, ಸಂಯೋಗ, ಸಮ್ಮಿಲನ, ಆದರ್ಶ, ನಿಸ್ವಾರ್ಥ ಇದೆಯಾ?~
ಈ ಪತ್ರ ಬರೆದದ್ದು ರಾಷ್ಟ್ರಪಿತ ಗಾಂಧೀಜಿ. ಆದರೆ ಇದನ್ನವರು ಬರೆದದ್ದು ಮಡದಿ ಕಸ್ತೂರ ಬಾ ಅವರಿಗಲ್ಲ. ಸರಳಾದೇವಿ ಚೌಧುರಾಣಿ ಅವರಿಗೆ!
ಸರಳಾದೇವಿ ಅವರು ಪಂಜಾಬಿನ ರಾಷ್ಟ್ರೀಯ ಮುಖಂಡರಲ್ಲಿ ಒಬ್ಬರಾದ ಪಂಡಿತ್ ರಾಯ್ ಭೋಜ್‌ದತ್ ಚೌಧುರಿ ಅವರ ಪತ್ನಿ. 1919ರ ಸುಮಾರಿನಲ್ಲಿ ಗಾಂಧೀಜಿ ಈ ಮಹಿಳೆಯನ್ನು ಭೇಟಿ ಮಾಡಿದ್ದರು. ಅತ್ಯಂತ ಪ್ರತಿಭಾವಂತರಾಗಿದ್ದ ಸರಳಾದೇವಿ ಉತ್ತಮ ಗಾಯಕಿಯೂ ಆಗಿದ್ದರು. ಸ್ವದೇಶಿ ಆಂದೋಲನದ ಕ್ರಿಯಾಶೀಲ ಕಾರ್ಯಕರ್ತೆಯಾಗಿ ಅಪಾರ ಮೆಚ್ಚುಗೆಯನ್ನೂ ಪಡೆದಿದ್ದರು. ಈ ಕಾರಣಗಳಿಂದ ಗಾಂಧೀಜಿ ಈಕೆಯನ್ನು ತುಂಬ ಹಚ್ಚಿಕೊಂಡಿದ್ದರು. ಹಾಗಾಗಿಯೇ ಈ ಪತ್ರವನ್ನೂ ನಿರ್ಭೀತಿಯಿಂದ ಬರೆದರು.
ಇಲ್ಲಿ ಅನೇಕ ಪ್ರಶ್ನೆಗಳು ಏಳುತ್ತವೆ. ಆಧ್ಯಾತ್ಮಿಕವೋ, ಅಥವಾ ಲೌಕಿಕವೋ, ಪತ್ನೀ ಸಂಬಂಧವೇ ಅವರಿಗೆ ಯಾಕೆ ಬೇಕಾಗಿತ್ತು? ಸಮ್ಮಿಲನ ಅನ್ನುವ ಪದವನ್ನು ಪದೇ ಪದೇ ಯಾಕೆ ಬಳಸುತ್ತಾರೆ? ಒಂದು ರೀತಿಯಲ್ಲಿ ಈ ಪತ್ರ ತಮ್ಮ ಮಹದಾಸೆಯನ್ನು ಆಕೆಯ ಮೇಲೆ ಹೇರಿ ಬಿಡುವ ಪ್ರಯತ್ನವೇ ಅಲ್ಲವೇ? ಈ ನಿಟ್ಟಿನಲ್ಲಿ ಇಂಥ ಆಸೆಗಳನ್ನು ಆಗಾಗ ಪ್ರಕಟಿಸುವ ಕೆಲವು ಸಹಜ ಪುರುಷ ಸ್ವಭಾವಗಳನ್ನೇ ಬಾಪೂಜಿ ಕೂಡ ಪ್ರತಿನಿಧಿಸುತ್ತಾರೆಯೇ? ಆದರೆ ಈ ಎಲ್ಲ ಪ್ರಶ್ನೆಗಳನ್ನು ತಮ್ಮ ಎಂದಿನ ಎಲ್ಲ ನಿಸ್ಪೃಹತೆಯಿಂದ ಪ್ರಾಮಾಣಿಕವಾಗಿ ಉತ್ತರಿಸಲು ಪ್ರಿಯ ಬಾಪೂ ನಮ್ಮಡನೆ ಇಲ್ಲ.
ಆದ್ದರಿಂದ ಈ ಪ್ರಶ್ನೆಗಳೆಲ್ಲ ಹಾಗೆಯೇ ಕರಗಿ ಹೋಗುತ್ತವೆ.
ಒಂದು ಮಾತಂತೂ ಖಚಿತ. ಬಾಪೂಜಿಗೆ ಮಹಿಳೆಯರ ಬಗ್ಗೆ ಎಲ್ಲ ರೀತಿಯ ಸದ್ಭಾವನೆಗಳು ಇದ್ದವು. ಪ್ರೀತಿ, ವಿಶ್ವಾಸ, ಗೌರವ, ಕಾಳಜಿ, ಭರವಸೆ ಇವೆಲ್ಲವನ್ನು ಅವರು ಮಹಿಳೆಯರ ವಿಷಯದಲ್ಲಿ ಅಗಾಧವಾಗಿಯೇ ಪ್ರಕಟಿಸುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ರಾಷ್ಟ್ರೀಯ ಸ್ವಾತಂತ್ರ್ಯ ಸಾಧನೆಗೆ ಸ್ತ್ರೀ ಶಕ್ತಿಯನ್ನು ಬಳಸಿಕೊಳ್ಳುವಂತಹ ಮಹತ್ಕಾರ್ಯ ನಡೆದದ್ದು ಗಾಂಧೀಜಿಯವರಿಂದ ಮಾತ್ರ. ಹಾಗಾಗಿ ಗಾಂಧೀಜಿಯವರು ಸರಳಾದೇವಿಗೆ ಬರೆದ ಪತ್ರ ಮಹಿಳೆಯರನ್ನು ಕುರಿತಂತೆ ಅವರ ಅನೇಕ ಪ್ರೀತಿ ಪ್ರಕಾರಗಳಲ್ಲಿ ಒಂದು ಮಜಲು ಎಂದಷ್ಟೇ ನಾವು ಭಾವಿಸಬೇಕಾಗುತ್ತದೆ.
ಹೆಣ್ಣು ಶಕ್ತಿಶಾಲಿ!
`ಹೆಣ್ಣು ಕೂಡಾ ಗಂಡಸಿನಷ್ಟೇ ಶಕ್ತಿ ಶಾಲಿ!~ ಎಂದು ಪ್ರಾಮಾಣಿಕವಾಗಿ ನಂಬಿದ್ದರು ಬಾಪೂಜಿ. ಈ ನಿಲುವನ್ನೇ ಜೀವನದುದ್ದಕ್ಕೂ ಮೆರೆದರು. ಮಹಿಳೆಯಲ್ಲಿ ಆತ್ಮವಿಶ್ವಾಸವನ್ನೂ ಛಲವನ್ನೂ ತುಂಬಿದರು. ಬಾಪೂಜಿಯ ಪ್ರಕಾರ ಮಹಿಳೆ ಅಂದರೆ ಪ್ರೀತಿ, ಸಯಮ ಮತ್ತು ಸಹಿಷ್ಣುತೆ . `ಇಂಥದೊಂದು ಪ್ರಬಲ ಅಸ್ತ್ರವನ್ನು ರಾಷ್ಟ್ರದ ವಿಮೋಚನಾ ಚಳವಳಿಗೆ ತಯಾರು ಮಾಡುವುದು ನನ್ನ ಪ್ರಥಮ ಕರ್ತವ್ಯ~ ಎಂದ ಬಾಪೂಜಿ ಆ ಕರ್ತವ್ಯವನ್ನು ಸಾಧಿಸಿ ತೋರಿಸಿದರು.
`ನನ್ನ ಸೋದರಿಯರೇ, ನೀವು ಸ್ವತಂತ್ರರಾಗಬೇಕಾದರೆ ಮೊದಲು ನಿರ್ಭೀತರಾಗಿರಿ. ನಿಮ್ಮ ದೈಹಿಕ ದೌರ್ಬಲ್ಯಕ್ಕಿಂತಲೂ, ಸಮಾಜ ನಿಮ್ಮ ಮೇಲೆ ವಿಧಿಸಿ ಬಿಡುವ ಸಾಂಸ್ಕೃತಿಕ ಅಸಹಾಯಕತೆ, ಮಾನಸಿಕ ಭಯ - ಇವೇ ಸಂಕೋಲೆಗಳಾಗಿ ನಿಮ್ಮನ್ನು ಕಾಡುತ್ತವೆ. ಮೊದಲು ಇವುಗಳಿಂದ ಹೊರ ಬನ್ನಿ. ವಿಶಾಲ ಜಗತ್ತು ನಿಮಗಾಗಿ ಕಾದಿದೆ~ ಎಂದೊಮ್ಮೆ ಅವರು ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದರು.
ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಗಾಂಧೀಜಿಯವರ ಕೊಡುಗೆ ಗಮನಾರ್ಹ. ಮಹಿಳೆಯರ ಸಹಜ ಸದ್ಗುಣಗಳನ್ನು ಆದರ್ಶೀಕರಿಸಿ ನೋಡುವ ಹೃದಯವಂತಿಕೆ ಅವರಲ್ಲಿತ್ತು. ಇದರಿಂದ ತಾವು ಎದುರಿಸಬಹುದಾದ ಪರಿಣಾಮಗಳ ಅರಿವು ಕೂಡ ಅವರಿಗಿತ್ತು. ಅದರಿಂದ ಅವರು ಧೃತಿಗೆಡಲೂ ಇಲ್ಲ.
`ಮಹಿಳೆಯರಿಗೆ ಸಮಾನ ಆಸ್ತಿ ಹಕ್ಕು ನೀಡಿದರೆ, ಅದು ಅನೈತಿಕತೆಗೆ ದಾರಿ ಮಾಡಿ ಕೊಡುವುದಿಲ್ಲವೇ~ ಎಂದು ವಿರೋಧಿಯೊಬ್ಬ ಒಮ್ಮೆ ಕೇಳಿದನಂತೆ. ಗಾಂಧೀಜಿ ನೀಡಿದ ಉತ್ತರ ಖಡಾಖಂಡಿತವಾಗಿತ್ತು. `ಅದೇಕೆ ಹಾಗೆ ಕೇಳುತ್ತೀರಿ? ಗಂಡಸರಿಗಿರುವ ಸ್ವಾತಂತ್ರ್ಯ ಹಾಗೂ ಆಸ್ತಿಹಕ್ಕಿನಿಂದ ಅವನಲ್ಲೂ ಅನೈತಿಕತೆ ವ್ಯಾಪಕವಾಗಿಯೇ ಇಲ್ಲವೇನು? ಪುರುಷನಂತೆ ಮಹಿಳೆಗೂ ಎಲ್ಲ ಹಕ್ಕುಗಳೂ ದೊರೆಯಲಿ. ಅದರಿಂದ ಆಕೆ ಸ್ವೇಚ್ಛಾಪ್ರವೃತ್ತಿಯವಳೇನೂ ಆಗಲಾರಳು~.
ರಾಷ್ಟ್ರಪಿತನ ಸ್ತ್ರೀ ಪರ ಒಲವು
ಲಿಂಗ ಸಮಾನತೆಯ ಬಗ್ಗೆ ಬಾಪೂಜಿಗೆ ಯಾವಾಗಲೂ ಗೌರವ. ತಮ್ಮೆಲ್ಲ ಮಾತಿನಲ್ಲಿ ಇದನ್ನೇ ಅವರು ಎತ್ತಿಹಿಡಿಯುತ್ತಿದ್ದರು. ಸ್ತ್ರೀ - ಪುರುಷರ ನಡುವಿನ ಶ್ರಮವಿಭಜನೆಯಲ್ಲಿ ಸಾಮರಸ್ಯ ಮೂಡಿಸುವ ಕಡೆಗಂತೂ ಅವರಿಗೆ ವಿಶೇಷ ಒಲವು. `ಸ್ತ್ರೀಯರನ್ನು ಕಡೆಗಣಿಸುವುದು ನಮ್ಮಲ್ಲಿ ಒಂದು ಪದ್ಧತಿಯೇ ಆಗಿಬಿಟ್ಟಿದೆ. ಇದು ಸರಿಯಲ್ಲ.
ಪುರುಷನಷ್ಟೇ ಪ್ರತಿಭೆ ಮಹಿಳೆಗೂ ಇದೆ. ಆಕೆಗೆ ಹೆಚ್ಚಿನ ಪ್ರಾಶಸ್ತ್ಯವೇ ಸಲ್ಲಬೇಕು~ ಅನ್ನುವುದು ಅವರ ಅಪೇಕ್ಷೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ `ಇದರಿಂದ ಪುರುಷರು ಪದಚ್ಯುತರಾದರೂ ಚಿಂತೆಯಿಲ್ಲ~ ಅನ್ನುವಂಥ ದಿಟ್ಟತನವನ್ನೂ ಪ್ರಕಟಿಸಿದರು!
ಮಹಿಳೆ ಹಾಗೂ ಅವಳ ಸ್ಥಾನಮಾನಗಳನ್ನು ಕುರಿತಂತೆ ಬಾಪೂಜಿಯ ವಿಚಾರಧಾರೆ ಮನನೀಯವಾಗಿವೆ. ಅವರ ಪ್ರಕಾರ ಮಹಿಳೆ ಸುಧಾರಣೆಗೆ ಒಳಗಾಗ ಬೇಕಾದ ವಸ್ತು ಅಲ್ಲ. ಪುರುಷರ ಉದಾರ ಕಾಳಜಿಯನ್ನು ಬಯಸುವ ಅಸಹಾಯ ಜೀವಿಯೂ ಅಲ್ಲ.
ಬದಲಿಗೆ ಆಕೆ ಒಂದು ಧೀಮಂತ ಚೇತನ. ಕ್ರಿಯಾಶೀಲಳೂ ಆತ್ಮಪ್ರಜ್ಞೆಯುಳ್ಳವಳೂ ಆದ ಒಬ್ಬ ಸಶಕ್ತ ವ್ಯಕ್ತಿ. ಅಲ್ಲದೆ ಸಾಮಾಜಿಕ ನವ ನಿರ್ಮಾಣದ ಕೆಲಸವನ್ನು ನಿಸ್ವಾರ್ಥ ದೃಷ್ಟಿಯಿಂದ ನೆರವೇರಿಸುವ ಶಕ್ತಿ ಮಹಿಳೆಯರಲ್ಲೇ ಅಪಾರವಾಗಿದೆ ಎಂದವರು ದೃಢವಾಗಿ ನಂಬಿದ್ದರು.
ಮಹಿಳೆಯರೇ ಮಾದರಿ
ವೈಯಕ್ತಿಕ ಸಂಬಂಧಗಳಲ್ಲಿ ಹೆಂಗಸರ ಗುಣಗಳು ಎಂದು ಗಂಡಸರು ತಿರಸ್ಕರಿಸುವ ಕೆಲವು ಗುಣಗಳಿಗೆ ಗಾಂಧೀಜಿ ಉದ್ದೇಶ ಪೂರ್ವಕವಾಗಿ ಮಹತ್ವವನ್ನೇ ನೀಡಿದರು! ತಮ್ಮ ಮನೆಯ ಮಹಿಳೆಯರೇ ತಮಗೆ ಮಾದರಿ ಎಂಬುದನ್ನು ಸಹ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದರು. ತಮ್ಮ ಬದುಕಿನ ಕಡೆಯ ದಿನಗಳಲ್ಲಂತೂ ಬಾಪೂಜಿ ತಾಯ್ತನದ ಪಾತ್ರವನ್ನು ಇಚ್ಛಾಪೂರ್ವಕವಾಗಿ ಸ್ವೀಕರಿಸಿದ ಹಾಗಿತ್ತು. ಗಾಂಧೀಜಿಯವರ ಸೋದರ ಸೊಸೆ ಮನುಗಾಂಧೀ `ಬಾಪೂ; ನನ್ನ ತಾಯಿ~ ಎಂದೇ ಕೃತಿಯೊಂದನ್ನು ರಚಿಸಿದ್ದಾರೆ.
`ಬಾಪೂಜಿ ರಾಷ್ಟ್ರಪಿತನಾದರೂ `ನಿನಗೆ ಮಾತ್ರ ನಾನು ತಾಯಿ~ ಎಂದೇ ಆಗಾಗ ಹೇಳುತ್ತಿದ್ದರು~ ಎಂದು ಮನುಗಾಂಧಿ ಮನತುಂಬಿ ಹೇಳಿಕೊಂಡಿದ್ದಾರೆ.
ಮಹಿಳೆಯ ಶಕ್ತಿ - ಸಾಮರ್ಥ್ಯಗಳಲ್ಲಿ ಬಾಪೂಜಿಗೆ ಅತಿಶಯ ಭರವಸೆ.
`ಮಹಾಸಂಗ್ರಾಮದ ವಿರುದ್ಧ ನಡೆಯುವ ಹೋರಾಟದಲ್ಲಿ ವಿಶ್ವದ ಮಹಿಳೆಯರೇ ನೇತೃತ್ವ ವಹಿಸಬೇಕು. ಅದು ಅವರ ವಿಶೇಷ ಹಕ್ಕು ಮತ್ತು ಉದ್ಯೋಗ ಕೂಡ~ ಎಂದು ಅಭಿಮಾನದಿಂದ ನುಡಿಯುತ್ತಿದ್ದ ಬಾಪೂ `ಸಮಾಜದಲ್ಲಿ ಮಹಿಳೆಯರ ಪಾತ್ರ ಕುರಿತಾದ ಜ್ವಲಂತ ಸಮಸ್ಯೆಗಳಿಗೆ ನನ್ನ ಕೊಡುಗೆ ಮಹತ್ವ ಪೂರ್ಣದ್ದಾಗಿರುತ್ತದೆ.
ನನ್ನ ದೃಷ್ಟಿಯಲ್ಲಿ ಮಹಿಳೆ ಪ್ರಶ್ನಾತೀತ ನಾಯಕಿ. ಮಾನವನ ವಿಕಾಸದಲ್ಲಿ ತನ್ನ ಸ್ಥಾನವನ್ನು ಗುರುತಿಸಿಕೊಂಡಿರುವ ಆಕೆ ಈ ವಿಕಸನಕ್ಕೆ ಮತ್ತಷ್ಟು ನೆರವಾಗುವಳೆಂಬ ನಂಬಿಕೆ ನನಗಿದೆ~ ಅನ್ನುವ ನಂಬಿಕೆಯನ್ನೂ ಪ್ರಕಟಿಸಿದ್ದರು.
ಮಹಿಳೆಯರಿಗೆ ನಮ್ಮ ರಾಷ್ಟ್ರಪಿತ ಕೊಟ್ಟು ಹೋಗಿರುವುದು ನಿಜವಾಗಿಯೂ ದೊಡ್ಡ ಕೊಡುಗೆಯೇ. ಯಾಕೆಂದರೆ ಮಹಿಳಾ ಹೋರಾಟಕ್ಕೆ ಅವರು ನೈತಿಕತೆಯ ಮುದ್ರೆಯನ್ನೇ ಒತ್ತಿ ಬಿಟ್ಟರು. ಇಂದಿಗೂ ಯಾರೇ ಆಗಲಿ, ಮಹಿಳೆಯ ಮೂಲಭೂತ ಹಕ್ಕುಗಳನ್ನು ವಿರೋಧಿಸಲು ಸಾಧ್ಯವೇ ಇಲ್ಲ ಅಂಥದೊಂದು ಸಾಮಾಜಿಕ ರಾಜಕೀಯ ಸನ್ನಿವೇಶವನ್ನು - ಮಹಿಳೆಗೆ ಅನುಕೂಲಕರ ವಾಗುವಂಥಾ ರೀತಿಯಲ್ಲಿ - ಗಾಂಧೀಜಿ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ಇಂದಿನ ಎಚ್ಚೆತ್ತ ಮಹಿಳೆ ಬಾಪೂಜಿಗೆ ಕೃತಜ್ಞತೆ ಸಲ್ಲಿಸಬಹುದಾದ ದಾರಿ ಒಂದೇ: ಅದೆಂದರೆ ಅವರೇ ಕರೆಕೊಟ್ಟಿರುವ ಹಾಗೆ ಶಕ್ತಿ, ಆತ್ಮಸ್ಥೈರ್ಯ, ಸತ್ಯನಿಷ್ಠುರತೆ, ಸಂಕಲ್ಪ ಮತ್ತು ಸಂಯಮಗಳ ಒಂದು ಸಮನ್ವಯವನ್ನು ಸಾಧಿಸುವುದು; ಮತ್ತು ದುಡಿಯುವ ನಿಷ್ಠೆಯನ್ನು ರೂಢಿಸಿಕೊಳ್ಳುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.