ಆ ಒಳರೋಗಿ ವೈದ್ಯರ ಬೆಳಗಿನ ಭೇಟಿಯ ಸಮಯದಲ್ಲಿ ಲವಲವಿಕೆಯಿಂದಲೇ ಇದ್ದರು. ಸಂಜೆ ವೈದ್ಯರು ಅವರಲ್ಲಿಗೆ ಹೋದಾಗ ವಿಪರೀತ ತಲೆ ನೋವು ಎಂಬುದು ಅವರ ದೂರು. ಎಲ್ಲ ರೀತಿಯ ತಪಾಸಣೆಗಳನ್ನೂ ಮಾಡಿಸಿದ್ದಾಯಿತು.
ಯಾವ ಪರೀಕ್ಷೆಯ ವರದಿಯೂ ಆಕೆಯ ತಲೆನೋವಿಗೆ ಪೂರಕವಾಗಿ ಇರಲಿಲ್ಲ. ನಂತರ ಬೆಳಗಿನಿಂದ ಆದದ್ದೇನು ಎಂಬುದನ್ನು ಕೂಲಂಕುಶವಾಗಿ ಗಮನಿಸಿದಾಗ ತಿಳಿದು ಬಂದದ್ದಿಷ್ಟು; ಅಂದು ಆಕೆಯನ್ನು ಭೇಟಿ ಮಾಡಲು ಬಂದ ಸಂಬಂಧಿಗಳು ತಾಸುಗಟ್ಟಲೇ ಅವರೊಂದಿಗೆ ಹರಟಿದ್ದರು.
ಅಪಘಾತದಲ್ಲಿ ಕಾಲುಗಳ ಮೂಳೆ ಮುರಿದು ಶಸ್ತ್ರಚಿಕಿತ್ಸೆಗೊಳಗಾದ ಒಳರೋಗಿಯದೂ ಇದೇ ಕತೆ. ಮುಂಜಾನೆ ಸಾಕಷ್ಟು ಉಲ್ಲಸಿತರಾಗಿದ್ದ ಅವರ ಮುಖ ಸಂಜೆಯ ವೇಳೆಗಾಗಲೇ ಬಾಡಿದಂತಾಗಿತ್ತು. ‘ಏಕ್ಹೀಗೆ’ ಎಂಬ ವೈದ್ಯರ ಪ್ರಶ್ನೆಗೆ ಆಕೆ ಉತ್ತರಿಸಿದ್ದೇನು ಗೊತ್ತೇ? ‘ಸಾರ್, ಬೆಳಿಗ್ಗೆಯಿಂದ ನೋಡಲು ಬಂದವರದೆಲ್ಲಾ ಅದೇ ಮಾತು; ಅಪಘಾತ ಹೇಗಾಯಿತು ? ನೀವು ಉಳಿದಿದ್ದೇ ಹೆಚ್ಚಂತೆ... ಗಾಡಿ ಯಾವುದು? ಛೇ ಹೀಗಾಗಬಾರದಿತ್ತು... ಇಂಥವು.
ಯಾವುದನ್ನು ಮರೆಯಬೇಕು ಅಂದ್ಕೊತೀನೋ ಅದನ್ನೇ ಬಂದವರೆಲ್ಲರೂ ನೆನಪಿಸುತ್ತಾರೆ ಸಾರ್... ಅದೇ ಉತ್ತರ ಹೇಳಿ ಹೇಳಿ ನನಗೂ ಸಾಕಾಗಿ ಹೋಗಿದೆ ಸಾರ್’. ಅಪಘಾತದಲ್ಲಿ ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದ ಇನ್ನೊಬ್ಬ ರೋಗಿಯ ಕೋಣೆಯಲ್ಲಿ ಸಮಸ್ಯೆ ಬೇರೆಯೇ. ಅಲ್ಲಿ ವೈದ್ಯರಿಗೆ ಶುಶ್ರೂಷಕಿಯ ಮೇಲೆ ಸಿಟ್ಟು ಬಂದಿತ್ತು.
ಕಾರಣವಿಷ್ಟೇ; ಅಂದು ಆಕೆ ರೋಗಿಗೆ ಒದ್ದೆ ಬಟ್ಟೆಯ ಸ್ನಾನ ಮಾಡಿಸಿಯೇ ಇರಲಿಲ್ಲ. ಕಾರಣ ಕೇಳಿದಾಗ ಆಕೆ ಹೇಳಿದ್ದೇನು ಗೊತ್ತೇ? ‘ಸಾರ್, ಬೆಳಗಿನಿಂದ ಒಬ್ಬರಲ್ಲ ಒಬ್ಬರು ಭೇಟಿ ಮಾಡಲು ಬರುತ್ತಲೇ ಇದ್ದಾರೆ. ನಾನು ಬೇಡವೆಂದರೂ, ನಾವು ದೂರದ ಊರಿನಿಂದ ಬಂದಿದ್ದೇವೆ, ನಾವು ರೋಗಿಗೆ ಬಹಳ ಆಪ್ತರು ಎಂದು ಒಂದಲ್ಲ ಒಂದು ಕಾರಣ ಹೇಳಿ ಸಂಜೆವರೆಗೂ ಇದೇ ನಡೆದು ತಡವಾಯಿತು ಸಾರ್...’
ತನ್ನ ಎಲ್ಲ ವೈಯಕ್ತಿಕ ಕೆಲಸಗಳಿಗೆ ಬೇರೊಬ್ಬರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇನ್ನೊಬ್ಬ ರೋಗಿಯದು. ಅಂದು ಒಬ್ಬರಾದ ನಂತರ ಮತ್ತೊಬ್ಬರು ಆಕೆಯನ್ನು ನೋಡಲು ಬಂದ ಕಾರಣ ಆಕೆಗೆ ಮೂತ್ರ ವಿಸರ್ಜನೆಗೂ ಸಹಾಯಕಿಯನ್ನು ಕರೆದು ಕೇಳಲಾಗದಂತಹ ಮುಜುಗರ ವಾತಾವರಣ ನಿರ್ಮಾಣವಾಗಿತ್ತು.
ಅಪಘಾತ/ ಶಸ್ತ್ರಚಿಕಿತ್ಸೆ/ ಹೆರಿಗೆ/ ಅಥವಾ ಮತ್ಯಾವುದೋ ಕಾಯಿಲೆಯ ಚಿಕಿತ್ಸೆಗೆಂದು ಒಳರೋಗಿಯಾಗಿ ಆಸ್ಪತ್ರೆಯಲ್ಲಿ ದಾಖಲಾದ ಪರಿಚಿತರನ್ನು ಭೇಟಿ ಮಾಡಲು ಹೊರಟಿದ್ದಿರೇನು? ನಿಲ್ಲಿ! ಹೋಗುವ ಮೊದಲು ಯೋಚಿಸಿ.
ನಿಮಗೆ ಆಕೆ/ಆತನ ಬಗ್ಗೆ ನಿಜವಾದ ಕಾಳಜಿಯಿದ್ದರೆ, ಆತ/ಆಕೆ ಬಹು ಬೇಗ ಗುಣಮುಖರಾಗಬೇಕೆಂಬ ಆಶಯವಿದ್ದರೆ ಭೇಟಿಯನ್ನು ಮುಂದೂಡಿ. ರೋಗಿಗೆ ನಿಮ್ಮ ‘ಗುಣಮುಖದ’ ಸಂದೇಶವನ್ನು ಆಕೆ/ಆತನ ಅತ್ಯಂತ ಆಪ್ತರ ಮೂಲಕವೋ ಅಥವಾ ಮೊಬೈಲ್ ಸಂದೇಶದ ಮೂಲಕವೋ ತಿಳಿಸಲು ಪ್ರಯತ್ನಿಸಿ. ಆಸ್ಪತ್ರೆಯಲ್ಲಿ ನಿಮ್ಮ ಮತ್ತು ರೋಗಿಯ ವೈಯಕ್ತಿಕ ಭೇಟಿ ಹಲವಾರು ಬಗೆಯ ಅನಾನುಕೂಲಗಳಿಗೆ ಕಾರಣವಾಗುವುದು ಸುಳ್ಳಲ್ಲ.
ಹೆರಿಗೆ / ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿ ಸಾಮಾನ್ಯವಾಗಿ ವಿಪರೀತ ನೋವು, ದೇಹಭಾರ ಮತ್ತಿತರ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರು ಏಕಾಂತವನ್ನು ಬಯಸುವುದು ಸಹಜ. ಆದರೆ ಹಲವಾರು ಪರಿಚಿತರು ಒಬ್ಬರಾದ ಮೇಲೊಬ್ಬರು ಅವರನ್ನು ಭೇಟಿ ಮಾಡಲು ಹೋದಾಗ ಅವರ ಏಕಾಂತಕ್ಕೆ ಧಕ್ಕೆ ಉಂಟಾಗಬಹುದು.
ರೋಗಿಗೆ ತನ್ನ ವೈಯಕ್ತಿಕ ಕೆಲಸಗಳಿಗೆ ಇನ್ನೊಬ್ಬರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಏನಾದರೂ ಇರಬಹುದು ; ಪದೇ ಪದೇ ಭೇಟಿಗೆಂದು ಬರುವ ಈ ಭೇಟಿಕಾರರ ಮುಂದೆ ಆಕೆ/ ಆತನಿಗೆ ಮುಜುಗರವಾದೀತು.
ರೋಗಿಯ ಆರೈಕೆ ಮಾಡುವ ಶುಶ್ರೂಷಕರಿಗೂ ಇದರಿಂದ ಸಮಸ್ಯೆಯೇ. ರೋಗಿಗೆ ಔಷಧ- ಚುಚ್ಚುಮದ್ದು ಕೊಡುವ, ಗಾಯಗಳನ್ನು ಸ್ವಚ್ಛಗೊಳಿಸುವ ಮುಂತಾದ ತಮ್ಮ ಕೆಲಸಗಳನ್ನು ಅಚ್ಚುಕಟ್ಟಾಗಿ, ಸಮಯಕ್ಕೆ ಸರಿಯಾಗಿ ನಿರ್ವಹಿಸಲು ನಿಮ್ಮ ಭೇಟಿ ಅಡ್ಡಿಯೆನಿಸಬಹುದು.
ಮತ್ತೊಂದು ಮುಖ್ಯ ವಿಚಾರವೆಂದರೆ, ರೋಗಿಯ ಕೋಣೆಯಲ್ಲಿನ ಹೆಚ್ಚು ಜನರ ಓಡಾಟ ರೋಗಿಗೆ ಸೋಂಕನ್ನು ಹರಡಬಲ್ಲದು. ಇದು ಬಹಳ ಅಪಾಯಕಾರಿ.
ಏಕೆಂದರೆ ಈಗಾಗಲೇ ಆಂಟಿಬಯೋಟಿಕ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಪುನಃ ಸೋಂಕು ತಗುಲಿದರೆ ಅದರ ಚಿಕಿತ್ಸೆ ಕಷ್ಟ. ಶಸ್ತ್ರಚಿಕಿತ್ಸೆಯ ಗಾಯಗಳಿಗೂ ಸೋಂಕು ತಗುಲಿ ಅದು ವಾಸಿಯಾಗುವುದು ನಿಧಾನವಾಗಬಹುದು. ಇದರಿಂದ ರೋಗಿ ಗುಣಮುಖನಾಗುವುದು ವಿಳಂಬವಾಗಬಹುದು.
ಅಪಘಾತ ಅಥವಾ ತುರ್ತು ಶಸ್ತ್ರಚಿಕಿತ್ಸೆಗೊಳಗಾದ ವ್ಯಕ್ತಿಗೆ ಭೇಟಿಕಾರರ ಪುನಃ ಪುನಃ ಮರುಕಳಿಸುವ ಪ್ರಶ್ನೆಗಳಿಗೆ ಉತ್ತರಿಸಿ ಹಳೆಯ ಘಟನೆಯನ್ನೇ ಮತ್ತೆ ಮತ್ತೆ ಮೆಲುಕು ಹಾಕುವಂತಾಗಬಹುದು. ಹೀಗೆ ಋಣಾತ್ಮಕ ವಿಚಾರಗಳನ್ನೇ ಮತ್ತೆ ಮತ್ತೆ ನೆನಪಿಸಿಕೊಳ್ಳುವ ರೋಗಿಯು ಒಂದು ಬಗೆಯ ಖೇದಕ್ಕೊಳಗಾಗಬಹುದು! ಇದು ಕೂಡ ಆತ ಕಾಯಿಲೆಯಿಂದ ಚೇತರಿಸಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಿಸುತ್ತದೆ.
ಏಕೆಂದರೆ, ರೋಗಿಯು ವೇಗವಾಗಿ ಚೇತರಿಸಿಕೊಳ್ಳುವಲ್ಲಿ ಆತನ ಮನಸ್ಥಿತಿಯೂ ಪಾತ್ರವಹಿಸುತ್ತದೆ. ಆತ ಖುಷಿಯಾಗಿದ್ದಷ್ಟೂ ಕಾಯಿಲೆ ಬೇಗನೆ ವಾಸಿಯಾಗುತ್ತವೆ. ಆತ ಬೇಗನೆ ಗುಣಮುಖನಾಗುತ್ತಾನೆ.
ಒಮ್ಮೊಮ್ಮೆ, ಭೇಟಿ ಮಾಡಲು ಬಂದ ಭೇಟಿಕಾರರೇ ರೋಗಿಯ ಕೋಣೆಯಲ್ಲಿ ಕುಳಿತು ತಾವೆಂದೋ ಆಸ್ಪತ್ರೆಯಲ್ಲಿ ದಾಖಲಾದ/ಶಸ್ತ್ರಚಿಕಿತ್ಸೆ/ಅಪಘಾತಕ್ಕೊಳಗಾದ ಘಟನೆಗಳನ್ನು ಮೆಲುಕು ಹಾಕುತ್ತ ತಾಸುಗಟ್ಟಲೆ ಕುಳಿತು ಬಿಡುತ್ತಾರೆ. ಇದು ರೋಗಿಗೆ ವಿಪರೀತ ಕಿರಿಕಿರಿ ಉಂಟುಮಾಡಬಹುದು.
ರೋಗಿಯನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋದ ನೀವೂ ಸೋಂಕಿಗೆ ಈಡಾಗಬಹುದು. ಏಕೆಂದರೆ, ಆಸ್ಪತ್ರೆಯ ವಾತಾವರಣವು ಕಾಯಿಲೆಗಳಿಗೆ ಕಾರಣವಾಗುವ ಸೂಕ್ಷ್ಮಾಣುಗಳ ಆಗರ. ಅದರಲ್ಲಿಯೂ ರೋಗ ನಿರೋಧಕ ವ್ಯವಸ್ಥೆಯು ಸಮರ್ಥವಾಗಿರದ ಮಕ್ಕಳನ್ನು ಅಥವಾ ವೃದ್ಧರನ್ನು ನಿಮ್ಮೊಂದಿಗೆ ಕರೆದೊಯ್ಯುವುದು ಅಪಾಯಕಾರಿ.
ಸಾಮಾನ್ಯವಾಗಿ ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡೇ ಯಾವುದೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಸಂಬಂಧಿಗಳು ರೋಗಿಯನ್ನು ಭೇಟಿ ಮಾಡುವುದನ್ನು ನಿಷೇಧಿಸಿರುತ್ತಾರೆ. ಅಥವಾ ಸ್ವಲ್ಪವೇ ಸಮಯವನ್ನು ರೋಗಿಯ ಭೇಟಿಗೆ ನಿಗದಿ ಪಡಿಸಿರುತ್ತಾರೆ. ರೋಗಿಯನ್ನು ತುರ್ತು ಘಟಕದಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಿದಾಗ ಈ ಭೇಟಿಕಾರರ ಹಾವಳಿ ಆರಂಭವಾಗುತ್ತದೆ.
ನಿಮ್ಮ ಭೇಟಿಯಿಂದ ರೋಗಿಗೆ ಉಂಟಾಗಬಹುದಾದ ಅನಾನುಕೂಲಗಳನ್ನು ಈಗ ತಿಳಿದಿರಲ್ಲ? ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದ ನಿಮ್ಮ ಪರಿಚಿತರನ್ನು ಭೇಟಿ ಮಾಡಲು ಹೋಗುವ ಮುನ್ನ ಯೋಚಿಸಿ.
ನಿಮ್ಮ ಭೇಟಿಯಿಂದ ರೋಗಿಗೆ ಪ್ರಯೋಜನವೇನಾದರೂ ಇದೆಯೆನಿಸಿದರೆ ಹೋಗಿ. ಇಲ್ಲದಿದ್ದಲ್ಲಿ ರೋಗಿಯ ಆಪ್ತರಿಗೆ ಕರೆ ಮಾಡಿ. ರೋಗಿಯ ಬಗೆಗಿನ ನಿಮ್ಮ ಕಾಳಜಿಯನ್ನು ತಿಳಿಸಿ ಅಥವಾ ರೋಗಿಯ ಮೊಬೈಲ್‌ಗೆ ಶುಭ ಕೋರುವ ಸಂದೇಶವನ್ನು ಕಳುಹಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.