ADVERTISEMENT

ವಿದ್ಯೆಯಂತೆ ವಿಭಜನೆ

ಮನೋರಮೆಯರ ತಲ್ಲಣಗಳು ಭಾಗ- 2

ಡಾ.ಉಮಾ ಎನ್.
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST
ವಿದ್ಯೆಯಂತೆ   ವಿಭಜನೆ
ವಿದ್ಯೆಯಂತೆ ವಿಭಜನೆ   

ವರ್ತಮಾನದಲ್ಲಿ `ಗೃಹಿಣಿ' ಅಥವಾ `ದುಡಿಯುವ ಮಹಿಳೆ' ಎನ್ನುವ ಸ್ತ್ರೀಯ ವಿಭಜನೆ ಆತಂಕಕಾರಿ ಆಗಿರುವುದಂತೂ ನಿಜ. ಈ ರೀತಿಯ ವಿಭಜನೆಗೆ ಸಮಾಜದಲ್ಲಿ ಆಕೆಗಿರುವ ಸ್ಥಾನ, ಕುಟುಂಬದೊಂದಿಗೆ ಇರುವ ಸಂಬಂಧಗಳ ಜೊತೆಗೆ, ಆಕೆ ಗಳಿಸಿರುವ ವಿದ್ಯೆಯೂ ಪ್ರಮುಖ ಕಾರಣವಾಗುತ್ತದೆ ಎಂಬುದು ನನ್ನ ಅನಿಸಿಕೆ. ಇಂದಿನ ಸಮಾಜ ಸ್ತ್ರೀಯನ್ನು ಆಕೆಯು ಗಳಿಸಿರುವ ವಿದ್ಯೆಯನ್ನು ಮಾಪಕವಾಗಿ ಇಟ್ಟುಕೊಂಡು `ವರ್ಕಿಂಗ್ ಅಥವಾ ಕೆರಿಯರ್ ವುಮನ್', `ಹೋಮ್ ಮೇಕರ್ ಕಂ ಕೆರಿಯರ್ ವುಮನ್' ಹಾಗೂ `ಹೋಮ್ ಮೇಕರ್' ಎಂದು ಸೂಕ್ಷ್ಮವಾಗಿ ವಿಭಜನೆ ಮಾಡಿದೆ. ಈ ರೀತಿಯ ವಿಭಜನೆಗಳಡಿ ಯಾವ ಸ್ತ್ರೀಯು ಒಳಪಡುತ್ತಾಳೆ ಎಂದು ನೋಡೋಣ-

ಉದಾಹರಣೆಗೆ ಒಬ್ಬ ಸ್ತ್ರೀಯು ಎಂಜಿನಿಯರಿಂಗ್, ಡಾಕ್ಟರ್, ಹೋಟೆಲ್ ಮ್ಯೋನೆಜ್‌ಮೆಂಟ್, ವಾಣಿಜ್ಯ ಅಥವಾ ವಕೀಲ... ಮುಂತಾದ ಕ್ಷೇತ್ರಗಳಲ್ಲಿ ಪರಿಣತಳಾಗಿದ್ದಲ್ಲಿ, (ಪದವಿಗಳನ್ನು ಪಡೆದವಳಾಗಿದ್ದಲ್ಲಿ) ಆಕೆಗೆ ಮನೆಯಿಂದ ಆಚೆ ದುಡಿಯುವ ಅನಿವಾರ್ಯತೆ ಹೆಚ್ಚಾಗಿರುವುದು ಸಹಜ. ಆಕೆಗೆ ಸರ್ಕಾರಿ ಹಾಗೂ ಖಾಸಗಿ ಕಂಪೆನಿಗಳಲ್ಲಿ ನೌಕರಿ ದೊರೆಯುವ ಅವಕಾಶಗಳು ಹೇರಳವಾಗಿರುತ್ತವೆ. ಇಂತಹ ಸಂದರ್ಭಗಳಲ್ಲಿ ಮಹಿಳೆ `ಪೂರ್ಣ ಪ್ರಮಾಣದ ದುಡಿಯುವ ಮಹಿಳೆ' `ವರ್ಕಿಂಗ್ ಅಥವಾ ಕೆರಿಯರ್ ವುಮನ್' ಎಂಬ ವಿಭಜನೆಯ ಅಡಿಯಲ್ಲಿ ಸೇರುತ್ತಾಳೆ ಎನ್ನಬಹುದು.

ಅದೇ ರೀತಿ ಅಂದವಾದ ಉಡುಗೆ- ತೊಡುಗೆಗಳನ್ನು ಹೊಲಿಯುವ, ಸೀರೆಗಳಿಗೆ ಎಂಬ್ರಾಯಿಡರಿ ಮಾಡಿಕೊಡುವ/ ಫಾಲ್ಸ್ ಹಾಕಿಕೊಡುವ, ಮನೆ ಬಾಗಿಲಿಗೆ ತಿಂಗಳಾಗುತ್ತಿದ್ದಂತೆಯೇ ಹಪ್ಪಳ- ಸಂಡಿಗೆ, ಸಿಹಿ- ಖಾರದ ತಿಂಡಿಗಳನ್ನು ತಂದುಕೊಡುವ ಸ್ತ್ರೀಯರು ಗೃಹಿಣಿಯರಾಗುವ ಜೊತೆ- ಜೊತೆಗೇ `ದುಡಿಯುವ ಮಹಿಳೆ'ಯರೂ ಆಗಿದ್ದಾರಲ್ಲವೇ? ಇವರುಗಳಿಗೆ `ಈ ನಾಲ್ಕು ಕಾಸನ್ನು ಸಂಪಾದಿಸುವ' ಮಾರ್ಗವು ಮನೆಯಿಂದ ಹೊರಗೆ ದುಡಿಯುವಂತೆ ಮಾಡಿದರೂ ಒಮ್ಮೆ `ಹವ್ಯಾಸ'ಕ್ಕೆ ಎಂದು ಕಲಿತದ್ದು ಮುಂದೆ ಸಂಪಾದನೆಗೆ ದಾರಿಯಾಗುತ್ತದೆ ಅಷ್ಟೆ. ಮೇಲಿನ ಉದಾಹರಣೆಗಳ ಜೊತೆಗೆ ದುಡಿಯುವ ಮಹಿಳೆಯರ ಮಕ್ಕಳನ್ನು/ ವಯಸ್ಸಾದ ಅವರ ಪೋಷಕರನ್ನು ನೋಡಿಕೊಳ್ಳುವ ಬೇಬಿ ಸಿಟ್ಟರ್/ ದಾದಿಯರು ಹಾಗೂ ಅಡುಗೆ ಮಾಡಿಕೊಳ್ಳಲು ಸಮಯವಿಲ್ಲದಾಗ/ ಮನಸ್ಸಿಲ್ಲದಾಗ ಸಹಾಯ ಮಾಡುವ ಅಡುಗೆ ಸಹಾಯಕರು ಸಹ `ಅರೆಕಾಲಿಕ ದುಡಿಯುವ ಮಹಿಳೆ' ಅಥವಾ `ಹೋಮ್ ಮೇಕರ್ ಕಂ ಕೆರಿಯರ್ ವುಮನ್'ಗಳಲ್ಲವೇ?

ಇನ್ನು ಕೆಲವು ಮಹಿಳೆಯರಿಗೆ ಅವರು ಗಳಿಸಿರುವ ವಿದ್ಯೆ ತಮ್ಮ ಮನೆಗಳಿಂದ ಆಚೆ ಹೋಗಿ ದುಡಿಯಲು ಅವಕಾಶ/ ಅವಶ್ಯಕತೆಯನ್ನು ನೀಡದೇ ಇರಬಹುದು. ಉದಾಹರಣೆಗೆ ಸಂಗೀತ, ನೃತ್ಯ ಮುಂತಾದ ಕಲಾ ಮಾಧ್ಯಮಗಳಲ್ಲಿ ಪರಿಣತಿ ಪಡೆದವರು. ಇಂತಹ ಸ್ತ್ರೀಯರು ಗೃಹಕೃತ್ಯಗಳನ್ನು ಗೌಣ ಮಾಡದೆ ತಮ್ಮ ಮನೆಯ ವರಾಂಡದಲ್ಲೋ, ವಿಶಾಲವಾದ ಹಾಲ್ ಅಥವಾ ಗರಾಜ್‌ನಲ್ಲೋ ಮಕ್ಕಳಿಗೆ ಪಾಠ ಹೇಳಿಕೊಟ್ಟು ನಾಲ್ಕು ಕಾಸು ಸಂಪಾದಿಸುವುದನ್ನು ನೋಡಿದ್ದೇವಲ್ಲವೇ. ಸ್ವಇಚ್ಛೆಯಿಂದ, ಸಂತೋಷದಿಂದ ಹಾಗೂ ಸಾಮರ್ಥ್ಯದಿಂದ ಗೃಹಕೃತ್ಯ, ದುಡಿಮೆ ಎರಡನ್ನೂ ನಿಭಾಯಿಸಬಲ್ಲವಳಾದರೂ ಆಕೆಯ ದುಡಿಮೆಯ ಪರಿಧಿ ಕೇವಲ ಮನೆಯೇ ಆದ್ದರಿಂದ ಆಕೆಯು `ಗೃಹಿಣಿ' ಅಥವಾ `ಹೋಮ್ ಮೇಕರ್' ಎನ್ನಿಸಿಕೊಳ್ಳುತ್ತಾಳೆ.

ಒಬ್ಬ ಮಹಿಳೆಯನ್ನು `ಗೃಹಿಣಿ' ಅಥವಾ `ವೃತ್ತಿಪರಳು' ಎಂದು ವಿಭಜನೆ ಮಾಡುವಲ್ಲಿ ಸಾಮಾಜಿಕ ವ್ಯವಸ್ಥೆ ಮತ್ತು ಕುಟುಂಬದಷ್ಟೇ ಆಕೆಯ ವಿದ್ಯೆಯೂ ಕಾರಣವಾಗುವುದರಲ್ಲಿ ಸಂದೇಹವಿಲ್ಲ. ಸಮಾಜ ಹಾಗೂ ಅಲ್ಲಿರುವ ಇತರ ಸದಸ್ಯರು ಯಾವ ರೀತಿಯಿಂದ ಆಕೆಯನ್ನು ವಿಭಜಿಸಿದರೂ ತನ್ನ ತಾಳ್ಮೆ, ಸಾಮರ್ಥ್ಯ ಹಾಗೂ ಪರಿಪೂರ್ಣ ವ್ಯಕ್ತಿತ್ವದಿಂದ ಆಕೆಯು ಯಾರೂ ವಿಭಜಿಸಲಾರದ `ಮನೋರಮೆ' ಆಗಬಲ್ಲಳು ಎಂಬುದಂತೂ ನಿಜ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.