ADVERTISEMENT

ವ್ಯತಿರಿಕ್ತ

ಮಿನಿಕಥೆ

ಡಾ.ಎನ್.ಅನಂತ ರಾಮನ್
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ಬಲೂನ್ ಮಾರುತ್ತಿದ್ದ  ಮುದುಕಿ ತನ್ನ ಮಕ್ಕಳು ಮರಿಗಳತ್ತ ಕೈತೋರುತ್ತಾ ಜೋರು ಧ್ವನಿಯಲ್ಲಿ ಕೂಗಾಡುತ್ತಿದ್ದಳು. ಅವಳ ಹಿಂದಿ ಮಿಶ್ರಿತ ಯಾವುದೋ ಭಾಷೆಯಲ್ಲಿ ಕೂಗಾಡುತ್ತಿದ್ದರಿಂದ ದಾರಿಹೋಕನಾದ ನನಗೆ ಅರ್ಥವಾಗಲಿಲ್ಲ. ನಾನೇನು ಕಮ್ಮಿ ಎಂಬಂತೆ ಬಲೂನ್‌ ಮುದುಕಿಯ ಜಾಗದ ಅತಿ ಹತ್ತಿರದಲ್ಲಿದ್ದ ಪಾನಿ ಪೂರಿ ಗಾಡಿಯವನು ತಮಿಳಿನಲ್ಲಿ ಕೂಗಾಡುತ್ತಿದ್ದ. ಅವರಿಬ್ಬರನ್ನೂ ಸುತ್ತಮುತ್ತಲಿದ್ದ ಬೀದಿ ವ್ಯಾಪಾರಿಗಳು ಸಮಾಧಾನ ಮಾಡುತ್ತಿದ್ದರು.

ಎಲ್ಲೆಲ್ಲಿಂದಲೋ ಬಂದು ಎರಡು ಮೂರು ದಿನ ಈ ‘ಪರಿಷೆ’ಯಲ್ಲಿ ವ್ಯಾಪಾರ ಮಾಡಿಕೊಂಡು ನಂತರ ತಂತಮ್ಮ ಊರುಗಳಿಗೆ ತೆರಳುತ್ತಿದ್ದ ಈ ಬೀದಿ ವ್ಯಾಪಾರಿಗಳು ಏಕೆ ಕೂಗಾಡುತ್ತಿದ್ದರು ಎಂಬುದರ ಬಗ್ಗೆ ವಿಚಾರಿಸಿದೆ.

ಸ್ವಲ್ಪ ಹೊತ್ತಿನ ಮುಂಚೆ ಬಲೂನ್‌, ಪಾನಿ ಪೂರಿ ವ್ಯಾಪಾರಿಗಳು ಇದ್ದ ಫುಟ್‌ಪಾತಿನ ಹಿಂಭಾಗದಲ್ಲಿದ್ದ ದೊಡ್ಡ ಬಂಗಲೆಯ ಮಾಲೀಕರು, ಈ ಬಡ ವ್ಯಾಪಾರಿಗಳು ತಮ್ಮ  ಮನೆಗೆ ಅಡ್ಡವಾಗಿ ನಿಂತಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಪೊಲೀಸ್‌ ಅಧಿಕಾರಿಗಳು ಈ ಸ್ಥಳಕ್ಕೆ ಬಂದು ಬಲೂನ್‌ ಮುದುಕಿಯ ಕುಟುಂಬದವರನ್ನೂ, ಪಾನಿ ಪೂರಿ ವ್ಯಾಪಾರಿಯನ್ನೂ ಥಳಿಸಿ ಜೊತೆಗೆ ಅವಾಚ್ಯ ಪದಗಳಿಂದ ಬೈದು ಹೋಗಿದ್ದಾರೆ. ಶ್ರೀಮಂತಿಕೆಯ ದರ್ಪವನ್ನು ಬಡವರಾದ ನಮ್ಮ ಮೇಲೆ ತೋರಿದ್ದಾರೆ ಎಂದು ಅವರು ಕೂಗಾಡುತ್ತಿದ್ದರು.  ಉಳಿದವರು ಸಂತೈಸುತ್ತಿದ್ದರು.

ಈ ಘಟನೆಯನ್ನು ನೋಡಿದ ನಾನು ಸ್ವಲ್ಪ ದೂರ ಹೋದಾಗ ಮತ್ತೊಂದು ವಿಚಿತ್ರವನ್ನು ಕಂಡೆ. ಪರಿಷೆಯ ಬೀದಿ ವ್ಯಾಪಾರಿಗಳ ಗುಂಪು, ವಿಶೇಷವಾಗಿ ಅವರ ಚಿಕ್ಕ ಮಕ್ಕಳು ಒಬ್ಬ ವ್ಯಕ್ತಿಯನ್ನು ಸುತ್ತುವರಿದಿದ್ದರು. ನಾನು ಕುತೂಹಲದಿಂದ ಆ ಗುಂಪಿನ ಒಳಹೊಕ್ಕಾಗ ನನಗೆ ಕಂಡಿದ್ದು ಆತ ತನ್ನ ಬ್ಯಾಗಿನೊಳಗಿಂದ ಹಳೆಯ ಬಟ್ಟೆಗಳನ್ನು ಹಂಚುತ್ತಿದ್ದ. ಬೀದಿ ವ್ಯಾಪಾರಿಗಳಲ್ಲಿ ಅಪರೂಪಕ್ಕೆ ಒಬ್ಬ ಕನ್ನಡದಲ್ಲಿ ಮಾತನಾಡುತ್ತಿದ್ದವನೊಬ್ಬ ಹೀಗೆ ಹೇಳಿದ. ‘ಸಾರ್‌, ಇವರು ಪ್ರತಿ ವರ್ಷವೂ ಪರಿಷೆಯಲ್ಲಿ ಬಂದು ಬಟ್ಟೆಗಳನ್ನು ಹಂಚುತ್ತಾರೆ. ರಾತ್ರಿ ಚಳಿಯಲ್ಲಿ ಮಲಗಿದ್ದ ಮಕ್ಕಳ ಮೇಲೆ ತಮ್ಮ ಬೆಡ್‌ಶೀಟ್‌  ಹೊದಿಸುತ್ತಾರೆ. ಜೊತೆಗೆ ಪರಿಷೆಯ ಮೂರು ದಿನವೂ ನಮಗೆ ಕುಡಿಯುವ ನೀರನ್ನು ಕೊಡುತ್ತಾರೆ’ ಎಂದ. ಇದೇ ಫುಟ್‌ಪಾತ್‌ ವ್ಯಾಪಾರಿಗಳ ಮೇಲೆ ಪೊಲೀಸ್‌ ದೂರು ಸಲ್ಲಿಸಿದ ಶ್ರೀಮಂತನನ್ನು ನೆನಪು ಮಾಡಿಕೊಂಡಾಗ ‘ಮಾನವೀಯತೆ; ಸಹಬಾಳ್ವೆ’ ಎಂಬ ಪದಗಳ ಅರ್ಥವು ನೆನಪಾಯಿತು!!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.