ADVERTISEMENT

ಸೀರೇಲಿ ಹುಡುಗಿಯ ನೋಡಲೆ ಬಾರದು...

ಕಾವ್ಯಾ ಕಡಮೆ
Published 4 ಆಗಸ್ಟ್ 2017, 19:30 IST
Last Updated 4 ಆಗಸ್ಟ್ 2017, 19:30 IST
ಪ್ರಜಾವಾಣಿ, ಸಂಗ್ರಹ ಚಿತ್ರ
ಪ್ರಜಾವಾಣಿ, ಸಂಗ್ರಹ ಚಿತ್ರ   

ಸೀರೆಯು ಮುಚ್ಚಲಾರದ ಅಳಿದುಳಿದ ಅಂಗಾಂಗಗಳಲ್ಲೇ? ಅಥವಾ ತನ್ನಂತೆಯೇ ರಕ್ತ-ಮಾಂಸ ತುಂಬಿದ ಇನ್ನೊಂದು ಜೀವವನ್ನು ಕೇವಲ ವಸ್ತುವಾಗಿ ಮಾತ್ರ ನೋಡಲು ಸಾಧ್ಯವಾಗುವ ಧಾಷ್ಟ್ಯದಲ್ಲೇ?

‘ಸೀರೇಲಿ ಹುಡುಗೀನ ನೋಡಲೆ ಬಾರದು ನಿಲ್ಲಲ್ಲ ಟೆಂಪ್ರೇಚರು...’ - ಕನ್ನಡ ಸಿನಿಮಾವೊಂದರ ಈ ಅಸಂಬದ್ಧ ಹಾಡನ್ನು ಮೊದಲ ಬಾರಿ ಕೇಳಿದಾಗ ‘ಟೆಂಪರೇಚರ್ ಏಕೆ ನಿಲ್ಲಲ್ಲ?’ ಎಂಬ ಪ್ರಶ್ನೆ ಸಹಜವಾಗಿ ಹುಟ್ಟಿತ್ತು. ಸೀರೆಯ ಬದಲಾಗಿ ಹುಡುಗಿಯೊಬ್ಬಳು ಜೀನ್ಸ್, ನೈಟಿ, ಚೂಡಿದಾರ್, ಶಾರ್ಟ್ಸ್ ಅಥವಾ ಬಿಕನಿ ತೊಟ್ಟಾಗ ಆ ಟೆಂಪರೇಚರ್ ಸೀರೆಯುಟ್ಟಿದ್ದನ್ನು ಕಂಡ ದಿನದ ಹಾಗೆಯೇ ಏರಬಹುದೇ ಎಂಬ ಸಂದಿಗ್ಧವೂ ಕಾಡಿತ್ತು.

‘ನೀನು ಸೀರೆ ಉಟ್ಟರೆ ಚೆನ್ನಾಗಿ ಕಾಣಿಸುತ್ತೀ’ ಅಂತ ಯಾರೇ ಮೆಚ್ಚುಗೆ ವ್ಯಕ್ತಪಡಿಸಿದರೂ ‘ಥ್ಯಾಂಕ್ಸ್’ ಎಂದಷ್ಟೇ ಹೇಳಿ ಒಳಗೊಳಗೇ ನಾಚಿ ಖುಷಿಪಡುವುದನ್ನು ನಾವು ಬೆಳೆದ ಈ ಸಾಮಾಜಿಕ ಪರಿಸರವೇ ನಮಗೆ ಕಲಿಸಿದೆ. ಅದಕ್ಕೆ ಬದಲಾಗಿ ‘ನಿನಗೆ ಸೀರೆ ಚೆನ್ನಾಗಿ ಒಪ್ಪುತ್ತದೆ’ ಎಂದು ಹೇಳಿದಾಗ – ‘ಏಕೆ? ನಿಮಗೇಕೆ ಹಾಗನ್ನಿಸಿತು?’ ಅಂತ ಹುಟ್ಟುವ ಹೊಸದನಿ ನಮ್ಮಲ್ಲಿ ವಿರಳವೇ.

ADVERTISEMENT

ಕಳೆದ ಶತಮಾನದ ದ್ವಿತೀಯಾರ್ಧದಲ್ಲಿ ಮಧ್ಯಮವರ್ಗದ ಅಸ್ಮಿತೆಯನ್ನು ರೂಪಿಸಿದ ಜನಪ್ರಿಯ ಕಾದಂಬರಿಗಳು, ‘ಹಣೆಯ ತುಂಬ ಕುಂಕುಮವಿಟ್ಟು ಹೂ ಮುಡಿದು ಲಕ್ಷಣವಾಗಿ ಸೀರೆಯುಟ್ಟು ಬಂದಳು’ ಎಂದು ಅನೇಕ ಕಾದಂಬರಿಕಾರರ ಬಳಿ ಬರೆಸಿಕೊಂಡವು. ಈ ವಾಕ್ಯದಲ್ಲಿ ’ಲಕ್ಷಣವಾಗಿ’ ಎಂಬ ವಿಶೇಷಣ ನುಸುಳಿದ್ದು ಯಾವಾಗ? ಎಂದಿನಿಂದ? ಎಂಬ ಪ್ರಶ್ನೆಗೆ ಉತ್ತರವೂ ಸಿಗದೇ ಉಳಿಯುವುದು.

ಆಧುನಿಕತೆಯ ಸೋಗಿನಲ್ಲಿ ಜನಮಾನಸದ ಜೀವನಾಡಿಗಳಾಗಿರುವ ಮಹಿಳಾ ಆಂಕರ್‌ಗಳು ಟೀವಿಯಲ್ಲಿ ಹಬ್ಬದ ದಿನ ಮಾತ್ರ ಸೀರೆಯುಟ್ಟು, ಹೂ ಮುಡಿದು ಬರುವುದು ಏಕೆ? ನಮ್ಮ ಸಿನಿಮಾ ಹೀರೋಗಳು ಖಳನಾಯಕರ ಮುಂದೆ ಪ್ರತಿಜ್ಞೆ ಮಾಡುವಾಗ ನಾನೇನು ಸೀರೆ ಉಟ್ಟು ಬಳೆ ತೊಟ್ಟುಕೊಂಡಿಲ್ಲ ಎಂಬ ಜಂಬದ ಮಾತಿನ ಮೂಲ ಎಷ್ಟು ಆಳದಲ್ಲಿದೆ? ಶಾಲೆಯಲ್ಲಿ ವಿದ್ಯಾರ್ಥಿಗಳ ಅಭಿವೃದ್ಧಿ, ಸೌಖ್ಯಗಳ ಕುರಿತು ತಲೆಕೆಡಿಸಿಕೊಳ್ಳುವ ಸೋಗಿನಲ್ಲಿ ಮಹಿಳಾ ಉಪನ್ಯಾಸಕಿಯರ, ವಿದ್ಯಾರ್ಥಿನಿಯರ ಉಡುಪು ಮಾತ್ರ ಏಕೆ ಚರ್ಚೆಯಾಗಬೇಕು?

ಹೆಣ್ಣಿನ ಅಂಗಾಗಗಳನ್ನು ಸೀರೆಯಲ್ಲದೇ ಬೇರೆ ಯಾವ ಆಧುನಿಕ ಉಡುಗೆಗಳಲ್ಲಿ ಕಂಡ ತಕ್ಷಣವೇ ಗಂಡಿನ ಮನೋ ಸ್ಥಿಮಿತ ತಪ್ಪಿಹೋಗುತ್ತದೆ ಎಂಬ ಮಾತು ಪ್ರಪಂಚದ ಗಂಡಸರನ್ನೆಲ್ಲ ಅವಮಾನಿಸಿದಂತೆಯೇ ಅಲ್ಲವೇ? ‘ಹೆಣ್ಣು ಧರಿಸುವ ಉಡುಗೆಯ ಕುರಿತಾಗಿ ಮರ್ಯಾದೆ ಬೇಡವೇ?’ ಅಂತ ಕೇಳುವಾಗ ಆ ಪ್ರಶ್ನೆಯಲ್ಲಿ ಬರುವ ’ಮರ್ಯಾದೆ’ ಪದದ ವ್ಯಾಖ್ಯಾನ ಯಾವ ಕಾಲದ್ದು? ಹೆಣ್ಣಿನ ಕುರಿತಾದ ಈ ಉದಾಸೀನದ, ಅವಮಾನದ ಉಗಮ ಎಲ್ಲಿಂದ ಶುರುವಾದದ್ದು?

ಕೇಂದ್ರ ಮಂತ್ರಿ ರಾಮದಾಸ ಅಥ್ವಾಲೆ ಚತ್ತೀಸಗಡದ ಕಮ್ಮಟವೊಂದರಲ್ಲಿ ಮಾತನಾಡುತ್ತ, ‘ಮಂಗಳಮುಖಿಯರು ಸೀರೆ ಧರಿಸಬಾರದು’ ಎಂದು ಹೇಳಿ ತಕ್ಷಣ ಮಾತಿನ ಧಾಟಿ ಬದಲಿಸಿದ್ದು ಕಳೆದ ವಾರ ಸುದ್ದಿಯಾಗಿತ್ತು. ಹೀಗಿರುವಾಗ ಈ ’ಸೀರೆ ಪುರಾಣ’ ಕೇವಲ ಮಹಿಳೆಯರನ್ನಷ್ಟೇ ಸಂದಿಗ್ಧದಲ್ಲಿ ನೂಕುತ್ತದೆ ಎಂದೂ ಎನ್ನಲಾಗದು. ಇಂಥ ಘಟನೆಗಳನ್ನು ಪರಿಶೀಲಿಸಿದಾಗ ಸೀರೆಯೆಂಬುದು ಕೇವಲ ಒಂದು ಉಡುಪಾಗಿರದೇ ಅದಕ್ಕೊಂದು ಕಾಲ್ಪನಿಕ ಅರ್ಥಹೀನ ಘನತೆಯನ್ನು ನಮ್ಮ ಜನಪ್ರಿಯ ಕಾದಂಬರಿಗಳು, ಮಾಧ್ಯಮಗಳು ಕಾರಣವಿಲ್ಲದೇ ದಯಪಾಲಿಸಿವೆ ಅನ್ನಿಸುವುದು.

ಸೀರೆಯ ಪಾವಿತ್ರ್ಯದ ರಕ್ಷಣೆಯಲ್ಲಿ ಸಂಸ್ಕೃತಿ ರಕ್ಷಕ ವೀರರ ಪಾತ್ರವೂ ಸಾಕಷ್ಟಿದೆ. ಹೆಣ್ಣಿನ ಅಂಗಾಂಗಗಳನ್ನು ತುಸು ಮುಚ್ಚಿ, ತುಸು ತೆರೆದು, ತುಸು ಗಾಳಿಯ ಹಾರುವಿಕೆಗೆ ವಹಿಸಬಲ್ಲ ಆರು ಗಜದ ಸೀರೆಯಲ್ಲಿ ಅಡಗಿರುವ ಮಜ ಅವತರಿಸಿರುವುದು ಎಲ್ಲಿ? ಸೀರೆಯು ಮುಚ್ಚಲಾರದ ಅಳಿದುಳಿದ ಅಂಗಾಂಗಗಳಲ್ಲೇ? ಅಥವಾ ತನ್ನಂತೆಯೇ ರಕ್ತ-ಮಾಂಸ ತುಂಬಿದ ಇನ್ನೊಂದು ಜೀವವನ್ನು ಕೇವಲ ಒಂದು ವಸ್ತುವಾಗಿ ಮಾತ್ರ ನೋಡಲು ಸಾಧ್ಯವಾಗುವ ಧಾಷ್ಟ್ಯದಲ್ಲೇ?

ಸೀರೆಯುಟ್ಟು ಹೆಮ್ಮೆ ಪಡುವುದು, ಡ್ರೆಸ್ಸು ಧರಿಸಿ ಕೀಳರಿಮೆ ಅನುಭವಿಸುವುದು ಎರಡೂ ನಮ್ಮನ್ನು ಬೆಳೆಸಿದ ಈ ಆವರಣವು ನಮಗೆ ಕಲಿಸಿದ ಕಟ್ಟುಕತೆಗಳೇ ಆಗಿವೆ. ಸೀರೆಯಷ್ಟೇ ಏಕೆ, ಯಾವ ವಸ್ತ್ರದ ತುಂಡಿಗೂ ಮಹತ್ವ ದೊರಕದಿರುವ ಸಮಯ ಮುಂದೊಮ್ಮೆ ಬಂದೇ ಬರುವುದು. ಅಷ್ಟೇ ಅಲ್ಲದೇ ಯಾರೂ ಯಾವ ಬಟ್ಟೆಯನ್ನೂ ಧರಿಸದ ಕಾಲವೂ ಮುಂದೆ ಬರಬಹುದು. ಆಗ ಅದೇ ನಮ್ಮ ನವಸಂಸ್ಕೃತಿಯಾಗಬಹುದು. ಹೀಗಿರುವಾಗ ಸಂಸ್ಕೃತಿಯ ರಕ್ಷಣೆಯು ಹೆಣ್ಣು ಧರಿಸುವ ಸೀರೆಯ ನಿರಿಗೆಗಳಲ್ಲಿ ಅಡಕವಾಗಿದೆ ಎಂಬ ಅರ್ಥ ಬರುವ ಮಾತು ಹಾಸ್ಯಾಸ್ಪದವಲ್ಲದೇ ಮತ್ತೇನು?

ನಾಗರಿಕತೆಯ ಸೂತ್ರ ತಿಳಿವ ಮೊದಮೊದಲು ಗುಂಪುಗುಂಪಾಗಿ ಓಡಾಡಿಕೊಂಡು ಗುಂಪು ಜಗಳಗಳಲ್ಲೇ ಒಡೆದುಹೋಗುತ್ತಿದ್ದ ಮನುಷ್ಯ, ಸಮಾಜವೆಂಬ ಸಂಸ್ಥೆಯನ್ನು ಕಟ್ಟಿಕೊಂಡಿದ್ದೇ ಒಬ್ಬರಿಗೊಬ್ಬರು ಪೊರೆಯಲು, ಸಾಂತ್ವನಗೊಳಿಸಲು, ಅಭಿವೃದ್ಧಿಯೆಡೆಗೆ ಸಾಗಲು. ಒಬ್ಬರಿಗೊಬ್ಬರು ಒಂಚೂರೂ ಸಂಬಂಧಪಡದ ಜನ ಒಟ್ಟಾಗಿ ಒಂದು ಸಮೂಹವಾಗಿ ಬಾಳಲು ಏನೇನೋ ಆಚರಣೆಗಳನ್ನು ಹುಟ್ಟಿಸಿಕೊಂಡೆವು, ಉಡುಗೆ-ತೊಡುಗೆಗಳಲ್ಲಿ ಏಕತೆಯನ್ನು ಪಾಲಿಸಿದೆವು. ಕ್ರಮೇಣ ಅರ್ಥವೇ ಇಲ್ಲದ ಆಚರಣೆಗಳಿಗೆ ‘ಸಂಸ್ಕೃತಿ’ಯ ಹೆಸರಿನಲ್ಲಿ ಕಟ್ಟುಬಿದ್ದೆವು. ಅಂಥ ರೂಢಿಗಳಲ್ಲಿ ಹೆಣ್ಣು ಸೀರೆಯನ್ನು ಮಾತ್ರ ಧರಿಸಬೇಕು ಎಂಬುದೂ ಒಂದು.

ಮನುಷ್ಯನಿರುವುದಕ್ಕೆ ಆಚರಣೆಗಳೇ ಹೊರತು ಆಚರಣೆಗಳೇ ಮನುಷ್ಯನನ್ನು ಡಿಫೈನ್ ಮಾಡುತ್ತವೆ ಎಂಬುದು ಮೂರ್ಖತನವೇ ಸರಿ. ಉಡುಪು ಧರಿಸುವ ಹೆಣ್ಣಿಗೆ ಅಥವಾ ಗಂಡಿಗೆ ಯಾವ ವಸ್ತ್ರದಿಂದ ಕಂಫರ್ಟ್ ದೊರೆಯುತ್ತದೋ ಅದನ್ನು ಧರಿಸುವುದು ಅವರವರ ಆಯ್ಕೆ. ವೈಯಕ್ತಿಕ ಆಯ್ಕೆಯ ಬಗ್ಗೆ ಈ ಉದಾಸೀನವೇಕೆ? ಪ್ರಜಾಪ್ರಭುತ್ವ ಪಾಲಿಸುವ ದೇಶ ಎಂದು ಗೌರವದಿಂದ-ಹೆಮ್ಮೆಯಿಂದ ಸಮಾಜವನ್ನು ಕಟ್ಟಿಕೊಂಡಮೇಲೆ ವೈಯಕ್ತಿಕ ಆಯ್ಕೆಗೆ ಮನ್ನಣೆ ಕೊಡದಿದ್ದರೆ ಢೋಂಗಿತನ ಆಗಲಾರದೇ?

ಈ ಸೀರೆಯ ಕಟ್ಟು ಹೆಣ್ಣನ್ನಷ್ಟೇ ಅಲ್ಲದೇ ಗಂಡನ್ನೂ ಎಲ್ಲ ಕಾಲದಲ್ಲಿಯೂ ಬಾಧಿಸಿದೆ. ಇಷ್ಟದ ಹೆಣ್ಣು ಸೀರೆಯುಟ್ಟು ಬಂದರೆ ಮೆಚ್ಚಿಕೊಂಡು ಪ್ರಶಂಸಿಸಬೇಕು, ಎರಡೆರಡು ಬಾರಿ ತಿರುಗಿ ನೋಡಬೇಕು, ಆ ಬಗ್ಗೆ ರಾತ್ರಿಯೆಲ್ಲ ನಿದ್ದೆಗೆಟ್ಟು ಕನಸು ಕಾಣಬೇಕು ಎಂಬುದೆಲ್ಲ ಗಂಡಿನ ಮೇಲೆ ನಮ್ಮನ್ನೇ ಒಳಗೊಂಡ ನಮ್ಮ ಸಮಾಜ ಹೇರಿದ ಒತ್ತಡಗಳೇ. ಪೂರ್ವಗ್ರಹ ಪೀಡಿತ ಸಮೂಹದಿಂದ ಹೊರನಿಂತು ಏಕಾಂತದಲ್ಲಿ ಕಂಡಾಗ ಗಂಡಿಗೆ ತನ್ನ ಸಹಚರಳಾದ ಹೆಣ್ಣಿನ ಕುರಿತು ಅತಿ ಪ್ರಾಚೀನವಾದ ನೈಜ ಪ್ರೇಮ ಅನುಭವಕ್ಕೆ ಬರುವುದು. ಆಗ ಅವಳು ಧರಿಸುವ ಉಡುಪು ಗೌಣವಾಗುವುದು.

ಗಂಡಸೊಬ್ಬ ಯಾವುದೋ ಒಂದು ದಿನ ಇಷ್ಟಪಟ್ಟು ಸೀರೆ ಧರಿಸಿ ಬಂದರೆ ಮುಸಿಮುಸಿ ನಗುವಷ್ಟೇ ಅನರ್ಥದ ಸಂಗತಿ - ಹೆಣ್ಣಿಗೆ ಸೀರೆಯನ್ನೇ ಧರಿಸು ಎಂದು ಒತ್ತಾಯಿಸುವುದು. ತಮಗೆ ಇಷ್ಟವಾದ, ಕಂಫರ್ಟ್ ಅನ್ನಿಸುವ, ಆತ್ಮವಿಶ್ವಾಸ ಬಲಪಡಿಸುವ ಬಟ್ಟೆಯನ್ನು ಧರಿಸುವ ಸ್ವಾತಂತ್ರ್ಯ ಗಂಡು-ಹೆಣ್ಣುಗಳಿಬ್ಬರಿಗೂ ಸಮಾನವಾಗಿ ಇರಬೇಕು. ಇಷ್ಟಪಟ್ಟರೆ ಗಂಡಸರೂ ಸೀರೆ ಧರಿಸುವಂತಾಗಬೇಕು.

ಪಂಚೆ, ಜೀನ್ಸ್, ಶಾರ್ಟ್ಸ್, ಚೂಡಿದಾರ ಮುಂತಾದ ಆಯ್ಕೆಯಂತೆಯೇ ಸೀರೆಯೂ ಒಂದು ಆಯ್ಕೆ ಅಷ್ಟೇ ಎಂಬ ಸತ್ಯ ನಮಗೆ ತಿಳಿದಿರಬೇಕು. ಸೀರೆಯನ್ನು ಹೆಣ್ತನಕ್ಕೆ ಕಟ್ಟುಹಾಕಿ, ಸಂಸ್ಕೃತಿ ರಕ್ಷಣೆಯನ್ನು, ’ಮರ್ಯಾದೆ’ಯಿಂದ ಇರುವ ಜವಾಬ್ದಾರಿಯನ್ನು ಹೆಣ್ಣಿನ ಮೇಲೆ ಮಾತ್ರ ಹೊರಿಸುವುದರಿಂದ ಸಹಬಾಳ್ವೆ, ಸಾಹಚರ್ಯದ ಸವಿ ಗಂಡು-ಹೆಣ್ಣುಗಳಿಬ್ಬರಿಗೂ ದಕ್ಕಲು ಸಾಧ್ಯವಿಲ್ಲ. ಹೀಗಿದ್ದಾಗ ಅವರನ್ನು ಒಳಗೊಂಡ ಸಮಾಜಕ್ಕಾದರೂ ನೆಮ್ಮದಿ ಅನುಭವಕ್ಕೆ ಸಿಗಲು ಸಾಧ್ಯವೇ?

ಸೀರೆಯುಡಬೇಕೋ, ಡ್ರೆಸ್ಸು ಧರಿಸಬೇಕೋ ಎಂಬ ಆಯ್ಕೆ ಹೆಣ್ಣಿಗೇ ಉಳಿಯಲಿ. ಸೀರೆಯು ಎಲ್ಲ ಉಡುಪುಗಳಂತೆಯೇ ಒಂದು ಉಡುಪು ಎಂಬ ಸತ್ಯ ನಮಗೆಲ್ಲ ಮನವರಿಕೆಯಾಗಲಿ. ಸೀರೆಗೆ ಅಂಟಿದ ’ಸಂಸ್ಕೃತಿ ರಕ್ಷಕ’ ಕಳಂಕ ಕಳೆಯಲಿ. ಹುಡುಗಿಯೊಬ್ಬಳು ಸೀರೆಯುಟ್ಟಿದ್ದಾಳೆ ಎಂಬ ಒಂದೇ ಕಾರಣಕ್ಕೆ ಯಾರ ಟೆಂಪರೇಚರೂ ಅಕಾರಣವಾಗಿ ಏರದೇ ಇರಲಿ. ಪರಸ್ಪರ ಸಮ್ಮತಿಯಿದ್ದಾಗ ಯಾವ ಉಡುಪು ಇರಲಿ ಇಲ್ಲದಿರಲಿ, ಸಹಜ ಪ್ರೇಮ ಫಲಿಸಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.