ADVERTISEMENT

ಸುದ್ದಿ ಮಾಡಿದವರು

ಪೂರ್ಣಿಮಾ ಬಳಗುಳಿ
Published 28 ಡಿಸೆಂಬರ್ 2012, 19:59 IST
Last Updated 28 ಡಿಸೆಂಬರ್ 2012, 19:59 IST

2012ನೇ ವರ್ಷದ ಮಹಿಳಾ ಲೋಕದ ಮನೆಯ ತಲೆಬಾಗಿಲಲ್ಲಿ ನಿಂತು ಹಿತ್ತಲಿನ ಕಡೆ ಕಣ್ಣಾಡಿಸಿದಾಗ ಮಣ್ಣಲ್ಲಿ ಬಿದ್ದು ಮುಗಿಲಲ್ಲಿ ಎದ್ದವರು, ಬಣ್ಣದ ಲೋಕದಲ್ಲಿ ತಾರಾ ಹೊಳಪು ಹೊಮ್ಮಿಸಿದವರು, ಸಾವಿನ ಸೂತಕ, ಕಳೆದುಕೊಂಡವರ ನೋವು... ಹೀಗೆ ಸಿಹಿ- ಕಹಿ ಭಾವಗಳ ಮೆರವಣಿಗೆಯೇ ಎದುರಾಗುತ್ತದೆ. ಬನ್ನಿ, ಹೊಸ ವರ್ಷಕ್ಕೆ ಸ್ವಾಗತ ಕೋರುವುದರ ಜೊತೆಜೊತೆಗೇ ಹಳೆಯ ನೆನಪುಗಳಲ್ಲಿ ಒಂದಷ್ಟು ಮಿಂದೆದ್ದು ಬರೋಣ.  

ಗಮನ ಸೆಳೆದವರು

ಅಸ್ತಿತ್ವದ ಮೇಲೆ ನೆಲೆ

 ಕೇರಳದ ಸಂಪ್ರದಾಯಸ್ಥ ಹೆಣ್ಣು ಮಗಳು ಕಳೆದ ವರ್ಷದ ಕೊನೆಯಲ್ಲಿ `ಡರ್ಟಿ' ದೃಶ್ಯಗಳಲ್ಲಿ ಕಾಣಿಸಿಕೊಂಡಾಗ ಬಾಲಿವುಡ್ ಸಣ್ಣಗೆ ಕಂಪಿಸಿತು. `ಕಹಾನಿ' ಸಿನಿಮಾ ಕೂಡ ಬಿ-ಟೌನ್ ಹುಬ್ಬೇರಿಸುವಂತೆ ಮಾಡಿತು. ನಟಿ ವಿದ್ಯಾ ಬಾಲನ್ ಅವರು ತಮ್ಮ ಮೂಲವನ್ನು ಮರೆಸುವಷ್ಟು ಮುಂಬೈ ಅಭಿಮಾನಿ ವಲಯವನ್ನು ವಿಸ್ತರಿಸಿಕೊಂಡ ವರ್ಷವಿದು. ನಾಯಕ ಪ್ರಣೀತ ಬಾಲಿವುಡ್‌ನಲ್ಲಿ ಅಸ್ತಿತ್ವ ಸಾಬೀತು ಪಡಿಸುವುದೆಂದರೆ ಸಣ್ಣ ಮಾತೇನೂ ಅಲ್ಲ. 

`ಫೆರಾರಿ ಕಿ ಸವಾರಿ' ಚಿತ್ರದಲ್ಲಿ ಉತ್ತರ ಭಾರತದ ಜನಪದ ಗೀತೆಯ ಲಯಕ್ಕೆ ಐಟಂ ಗೀತೆಯ ಮಾದಕತೆ ತುಂಬಿದವರು ಅವರು. ಹಾಗಾಗಿಯೇ ಹೆಸರಿನ ಪಕ್ಕ ಸೆಕ್ಸಿ, ಸಸ್ಪೆನ್ಸ್, ಗ್ಲಾಮರಸ್ ಇತ್ಯಾದಿ ಗುಣ ವಿಶೇಷಣಗಳು. ಅಂದಹಾಗೆ, ಈ ವರ್ಷ ವಿದ್ಯಾ ಯು.ಟಿ.ವಿ ಮೋಷನ್ ಪಿಕ್ಚರ್ಸ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ಧಾರ್ಥ್ ರಾಯ್ ಅವರನ್ನು ಮದುವೆಯಾದರು.

`ಸೈಫೀನಾ' ಮದುವೆ ಪ್ರಹಸನ

ADVERTISEMENT

  ಒಂದೂ ಮುಕ್ಕಾಲು ದಶಕದ ಹಿಂದಿನ ಮಾತು. ಅಕ್ಕನ ಶೂಟಿಂಗ್ ನೋಡಲು ಮುಂಬೈ ಕಡಲ ತೀರದಲ್ಲಿ ನಿಂತಿದ್ದರು ಕರೀನಾ ಕಪೂರ್. ಅಲ್ಲಿಂದಲೇ ಅವರನ್ನು ಬಣ್ಣದ ಬದುಕು ಸೆಳೆಯಿತು. ಸೈಫ್ ಅಲಿ ಖಾನ್ ಹಾಗೂ ಕರೀನಾ ಪ್ರೇಮ ಪರ್ವದ ಸುತ್ತ ದೊಡ್ಡ ಜಾಹೀರಾತು ಮಾರುಕಟ್ಟೆ ಹುಟ್ಟಿಕೊಂಡಿತು.

ರಿಜಿಸ್ಟರ್ ಮದುವೆಯಾದರೂ ಅದ್ದೂರಿ ಆರತಕ್ಷತೆ ಮಾಡಿಕೊಂಡ ಈ ಜೋಡಿಯು ಸಂಪ್ರದಾಯಗಳನ್ನು ಮುರಿಯುತ್ತಾ, ಮಾರುಕಟ್ಟೆ ಸೃಷ್ಟಿಸಿಕೊಳ್ಳುತ್ತಾ ಸಾಗಿದ ವರ್ಷವಿದು. ಕರೀನಾ ನಟಿಸಿದ `ಏಕ್ ಮೈ ಔರ್ ಏಕ್ ತೂ', `ಹೀರೋಯಿನ್', `ತಲಾಶ್' ಚಿತ್ರಗಳಿಗಿಂತಲೂ ವರ್ಷದುದ್ದಕ್ಕೂ `ಸೈಫೀನಾ' ಮದುವೆಯ ಪ್ರಹಸನವೇ ಹೆಚ್ಚು ಗಮನ ಸೆಳೆಯಿತು.

`ಪೂಜಾ'ರತಿ

  ಆರು ವರ್ಷದ ಹಿಂದೆ ಯೋಗರಾಜ ಭಟ್ಟರು ಮುಂಬೈನಿಂದ ಕನ್ನಡಕ್ಕೆ ಆಮದು ಮಾಡಿಕೊಂಡ ಪೂಜಾ ಗಾಂಧಿ `ಮುಂಗಾರು ಮಳೆ'ಯಲ್ಲಿ ಮಿಂದು ಕೃತಾರ್ಥರಾದರು. ಅಲ್ಲಿಂದ ಅವರು ಇಟ್ಟದ್ದೇ ಹಾದಿ. ಅಭಿನಯ ಒಲಿಯದಿದ್ದರೂ ಒಂದಾದ ಮೇಲೆ ಒಂದರಂತೆ ನಟನಾ ಅವಕಾಶ ಗಿಟ್ಟಿಸಿಕೊಂಡರು.

ಈ ವರ್ಷ ಅವರು ಸುದ್ದಿಯಲ್ಲಿದ್ದದ್ದು ಮೂರು ಕಾರಣಗಳಿಂದ. ಒಂದು- ಜೆಡಿಎಸ್ ಪಕ್ಷ ಸೇರಿ ಅಲ್ಲಿಂದ ಕೆಜೆಪಿಗೆ ಹಾರಿದ್ದು. ಎರಡು- `ದಂಡುಪಾಳ್ಯ' ಚಿತ್ರದಲ್ಲಿ ಬೆತ್ತಲೆ ಬೆನ್ನು ತೋರಿಸಿದ್ದು. ಮೂರು-ಆನಂದ ಗೌಡ ಎಂಬ ಉದ್ಯಮಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ಆಮೇಲೆ ಅದನ್ನು ಮುರಿದುಕೊಂಡದ್ದು. ಇಷ್ಟಾದ ನಂತರವೂ ಅವರ ಸಿನಿಮಾ ನಟನೆ ಮುಂದುವರಿದಿದೆ.

ಬಂಗಾಳದ ಹೆಣ್ಣು ಹುಲಿ...

  `ನಾನು ಯಾರಿಗೂ ಹೆದರುವುದಿಲ್ಲ, ಹೆಣ್ಣು ಹುಲಿಯಂತೆ ಬದುಕುತ್ತೇನೆ' ಎಂದು ಆರ್ಭಟಿಸುತ್ತಲೇ `ದೀದಿ' (ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ) ಯುಪಿಎ ಸಖ್ಯ ತೊರೆದು ಸುದ್ದಿ ಮಾಡಿದರು.

ಬಹುಬ್ರಾಂಡ್ ಚಿಲ್ಲರೆ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡುವ ಕೇಂದ್ರದ ನಿರ್ಧಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿದರು. ಮನವೊಲಿಕೆಗೂ ಬಗ್ಗದೆ ಕೊನೆಗೆ ಮೈತ್ರಿ ಮುರಿದುಕೊಂಡರು. ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಪ್ರಧಾನಿ ಮನಮೋಹನ್ ಸಿಂಗ್ ಅವರ ಮೃದು ಮಾತಿನ ಶೈಲಿಯನ್ನು ಅನುಕರಿಸಿ ಲೇವಡಿ ಮಾಡಿದ್ದೂ ಇದೇ ದೀದಿ.

ಸಾಧಕಿಯರು...

ಹಲವು ಗರಿಗಳು

   `ನನ್ನ ವೃತ್ತಿ ಬದುಕಿನಲ್ಲೇ ಇಷ್ಟು ಯಶಸ್ಸು ಕೊಟ್ಟ ವರ್ಷ ಇನ್ನೊಂದಿಲ್ಲ' ಎಂದು ಸೈನಾ ನೆಹ್ವಾಲ್ 2012ರ ಬಗ್ಗೆ ಹೆಮ್ಮೆಪಡುತ್ತಾರೆ. ಅವರು ಬ್ಯಾಡ್ಮಿಂಟನ್‌ನಲ್ಲಿ ಭಾರತದ ಪತಾಕೆಯನ್ನು ಉತ್ತುಂಗಕ್ಕೆ ಹಾರಿಸಿದ ವರ್ಷವಿದು.

ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದದ್ದಷ್ಟೇ ಅಲ್ಲ, ಇಂಡೊನೇಷ್ಯಾ ಹಾಗೂ ಡೆನ್ಮಾರ್ಕ್ ಓಪನ್ ಸೂಪರ್ ಸೀರೀಸ್‌ನ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆದರು. ಸ್ವಿಸ್ ಹಾಗೂ ಥಾಯ್ಲೆಂಡ್ ಓಪನ್ ಗ್ರ್ಯಾನ್ ಪ್ರಿಯಲ್ಲಿ ವಿಜಯದ ನಗೆ ಬೀರಿದ್ದು ಬೋನಸ್ಸು. ಅಷ್ಟೇ ಅಲ್ಲ, `ಪ್ಲೇಯಿಂಗ್ ಟು ವಿನ್- ಮೈ ಲೈಫ್ ಆನ್ ಅಂಡ್ ಆಫ್ ಕೋರ್ಟ್' ಎಂಬ ಕೃತಿಯನ್ನೂ ಅವರು ಈ ವರ್ಷ ಪ್ರಕಟಿಸಿದರು.

ಗಗನವೇ ಮನೆ

   `ಅಲ್ಲಿದೆ ನಮ್ಮನೆ, ಇಲ್ಲಿರುವುದು ಸುಮ್ಮನೆ...'.  ಭಾರತೀಯ ಮೂಲದ ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ ಅವರಿಗೆ ಈ ಮಾತು ಹೆಚ್ಚು ಅನ್ವಯವಾಗಬಹುದೇನೋ. ಇವರಿಗೆ ಭೂಮಿಗಿಂತ ಗಗನವೇ ಹೆಚ್ಚು ಇಷ್ಟವಂತೆ. `ಗಗನಯಾತ್ರಿ ಆಗದಿದ್ದರೆ ಪಶುವೈದ್ಯೆ ಆಗುತ್ತಿದ್ದೆ' ಎಂದು ಹೇಳುತ್ತಲೇ ಸುನೀತಾ ಈ ವರ್ಷ ಮಹತ್ವದ ಸಾಧನೆ ಮಾಡಿದ್ದಾರೆ.

ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ದಿನ ಕಳೆದ ಎರಡನೇ ಮಹಿಳೆ ಇವರು ಎನ್ನುವುದು ವಿಶೇಷ. ಅಂದ ಹಾಗೆ ಸುನೀತಾ ಈವರೆಗೆ ಬಾಹ್ಯಾಕಾಶದಲ್ಲಿ ಕಳೆದ ದಿನಗಳು 322. ಈ ಬಾರಿಯ 125 ದಿನಗಳ ಯಾನ ಸುನೀತಾಗೆ ಮರೆಯಲಾಗದ ಅನುಭವಗಳನ್ನು ಕಟ್ಟಿಕೊಟ್ಟಿದೆಯಂತೆ. 

ಮೇರು ಸಾಧನೆ
ಪತ್ರಿಕೆಯಲ್ಲಿ ಮಗಳ ಫೋಟೋ ನೋಡಿ ಅಪ್ಪ ಬೆರಗಾಗಿದ್ದ. ಆಗಲೇ ಆತನಿಗೆ ಮಗಳ ಸಾಧನೆ ಏನು ಎನ್ನುವುದು ಗೊತ್ತಾಗಿದ್ದು. ಇದೆಲ್ಲ ನಡೆದದ್ದು 2000ರಲ್ಲಿ. ಈಶಾನ್ಯ ರಾಜ್ಯದ ಪ್ರತಿಭೆ ಮೇರಿ ಕೋಮ್ ಅವರ ಬದುಕಿನಲ್ಲಿ ಇಂಥ ಅಚ್ಚರಿಗಳಿಗೆ ಲೆಕ್ಕವಿಲ್ಲ.

ಈ ವರ್ಷ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ ಬಾಕ್ಸಿಂಗ್‌ನಲ್ಲಿ ಕಂಚಿನ ಪದಕ ಗೆದ್ದ ಖುಷಿ. ಮೇರಿ ಎರಡು ಕಾರಣಗಳಿಂದ ಗಮನ ಸೆಳೆಯುತ್ತಾರೆ. ಒಂದು- ಸೌಲಭ್ಯ ವಂಚಿತ ಮಣಿಪುರ ರಾಜ್ಯದಲ್ಲಿದ್ದುಕೊಂಡೂ ಇಂಥದ್ದೊಂದು ಸಾಧನೆ ಮಾಡಿರುವುದು. ಇನ್ನೊಂದು- ಅವಳಿ ಮಕ್ಕಳ ತಾಯಿ ಎಂದು ಗುರುತಿಸಿಕೊಂಡಿರುವುದು.

ಕರಾಳ ನೆನಪು
ಕೆಲವು ಮಹಿಳೆಯರು ಈ ವರ್ಷ ಕರಾಳ ನೆನಪುಗಳನ್ನೂ ನಮಗೆ ಬಿಟ್ಟು ಹೋಗಿದ್ದಾರೆ.


ಸವಿತಾ ಸಾವು

  ಐರ್ಲೆಂಡ್‌ನಲ್ಲಿ ಭಾರತೀಯ ದಂತ ವೈದ್ಯೆ ಸವಿತಾ ಹಾಲಪ್ಪನವರ ದುರಂತ ಸಾವು ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತು. ಧಾರ್ಮಿಕ ಕಟ್ಟುಪಾಡಿನ ಹಿನ್ನೆಲೆಯಲ್ಲಿ ಗರ್ಭಪಾತಕ್ಕೆ ಅವಕಾಶ ಸಿಗದ ಕಾರಣ ಕನ್ನಡತಿ ಸವಿತಾ ದಾರುಣ ಅಂತ್ಯ ಕಂಡರು.

ಐರ್ಲೆಂಡ್ ವೈದ್ಯರ ಕ್ರಮಕ್ಕೆ ಇಡೀ ವಿಶ್ವ ಸಮುದಾಯ ಛೀಮಾರಿ ಹಾಕಿತು. ಒತ್ತಡಕ್ಕೆ ಮಣಿದ ಐರ್ಲೆಂಡ್ ಸರ್ಕಾರ ಅನಿವಾರ್ಯ ಸಂದರ್ಭದಲ್ಲಿ ಗರ್ಭಪಾತಕ್ಕೆ ಅವಕಾಶ ಮಾಡಿಕೊಡುವ ಕಾನೂನು ರಚಿಸಲು ಮುಂದಾಗಿರುವುದು ಕತ್ತಲೆಯಲ್ಲಿ ಮಿಣುಕು ದೀಪ ಮೂಡಿದಂತೆ ಆಗಿದೆ.

ಜೆಸಿಂತಾ ಅಂತ್ಯ

  ಲಂಡನ್‌ನಲ್ಲಿ ನರ್ಸ್ ಆಗಿದ್ದ ಮಂಗಳೂರು ಮೂಲದ ಜೆಸಿಂತಾ ಅವರ ಆತ್ಮಹತ್ಯೆ ಈ ವರ್ಷದ ಕರಾಳ ನೆನಪುಗಳಲ್ಲಿ ಒಂದು. ಆಸ್ಟ್ರೇಲಿಯಾ ಡಿ.ಜೆ.ಗಳ `ಕೀಟಲೆ' ಕರೆಗೆ ಮೋಸ ಹೋಗಿ ಬ್ರಿಟನ್ ಯುವರಾಣಿ ಕೇಟ್ ಮಿಡ್ಲ್‌ಟನ್ ಅವರ ಆರೋಗ್ಯ ಸ್ಥಿತಿಯ ಮಾಹಿತಿ ಬಹಿರಂಗ ಮಾಡಿದ್ದು ಜೆಸಿಂತಾ ಜೀವಕ್ಕೆ ಮುಳುವಾಯಿತು.

ಸಾಮೂಹಿಕ ಅತ್ಯಾಚಾರ
ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶದಲ್ಲಿ ದಿಗ್ಭ್ರಮೆ ಮೂಡಿಸಿದೆ. ಮಹಿಳೆಯರ ರಕ್ಷಣೆಗೆ ಕ್ರಮ ತೆಗೆದುಕೊಳ್ಳಲು ಸರ್ಕಾರ ಸೋತಿದೆ ಎಂಬ ಆಕ್ರೋಶದ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ವರ್ಷಾಂತ್ಯದಲ್ಲಿ ನಡೆದ ಈ ಘಟನೆಯನ್ನು ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.