ADVERTISEMENT

PV Web Exclusive| ಫಿಟ್‌ನೆಸ್ ಕೋಚ್‌ನಿಂದ ಮಿಸಸ್‌ ಇಂಡಿಯಾ ಫೈನಲ್‌ವರೆಗೆ...

ಸತೀಶ್‌ ಬಿ
Published 1 ಡಿಸೆಂಬರ್ 2020, 4:23 IST
Last Updated 1 ಡಿಸೆಂಬರ್ 2020, 4:23 IST
ಮಿಸಸ್ ಇಂಡಿಯಾ ಸ್ಪರ್ಧೆಯ ಫೈನಲ್‌ಗೆ ಆಯ್ಕೆ ಆಗಿರುವ ವಿಭಾಅಪರ್ಣಾ ಜಾಧವ
ಮಿಸಸ್ ಇಂಡಿಯಾ ಸ್ಪರ್ಧೆಯ ಫೈನಲ್‌ಗೆ ಆಯ್ಕೆ ಆಗಿರುವ ವಿಭಾಅಪರ್ಣಾ ಜಾಧವ   
"ಪ್ಲ್ಯಾಂಕ್ ಅಭ್ಯಾಸದಲ್ಲಿ ತೊಡಗಿರುವ ವಿಭಾ"
"ವಿಭಾ ಅಪರ್ಣಾ ಜಾಧವ"

ಮದುವೆಯಾದ ನಂತರ ಬಹುತೇಕ ಮಹಿಳೆಯರು ತಾವಾಯಿತು ತಮ್ಮ ಕುಟುಂಬವಾಯಿತು ಎಂದು ಇದ್ದುಬಿಡುವುದೇ ಹೆಚ್ಚು. ಆದರೆ, ಕಲ್ಯಾಣ ಕರ್ನಾಟಕ ಭಾಗದ ಕಲಬುರ್ಗಿಯ ವಿಭಾ ಅಪರ್ಣಾ ಜಾಧವ ಅವರು ‘ಮಿಸಸ್ ಇಂಡಿಯಾ’ ಸ್ಪರ್ಧೆಯ ಫೈನಲ್ ಪ್ರವೇಶಿಸುವ ಮೂಲಕ ಹೊಸ ‘ಪರೀಕ್ಷೆ’ಗೆ ಸಜ್ಜಾಗುತ್ತಿದ್ದಾರೆ.

'ಹಾಟ್ ಮೊಂಡೆ' ಸಂಸ್ಥೆ ವತಿಯಿಂದ ಮಿಸಸ್ ಇಂಡಿಯಾ ವರ್ಲ್ಡ್ ವೈಡ್ ಬ್ಯೂಟಿ ಸ್ಪರ್ಧೆಯ ಫೈನಲ್ ಸುತ್ತು ಡಿಸೆಂಬರ್‌ ತಿಂಗಳಲ್ಲಿ ಸಿಂಗಪುರ, ಮಲೇಷ್ಯಾ ಮತ್ತು ಥಾಯ್ಲೆಂಡ್‌ನಲ್ಲಿ ನಡೆಯಲಿದೆ. ಇದರಲ್ಲಿ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಮಹದಾಸೆಯನ್ನು ವಿಭಾಅಪರ್ಣಾ ಹೊತ್ತಿದ್ದಾರೆ.

ವಿಭಾ ಅಪರ್ಣಾ ಜಾಧವ

ಸಾವಿರಕ್ಕೂ ಹೆಚ್ಚು ಸ್ಪರ್ಧಿಗಳಲ್ಲಿ 150 ಜನರನ್ನು ಫೈನಲ್ ಸುತ್ತಿಗೆ ಆಯ್ಕೆ ಮಾಡಲಾಗಿದೆ. ಡೆಹರಾಡೂನ್‌ನಲ್ಲಿ ಈಗಾಗಲೇ ಪೂರಕ ತರಬೇತಿಯೂ ನಡೆದಿದೆ.

ADVERTISEMENT

'ಫಿಟ್‌ನೆಸ್‌ ಬಗೆಗಿನ ನನ್ನ ವಿಡಿಯೊವನ್ನು ನೋಡಿದ್ದ ಸಂಸ್ಥೆಯವರು ಆಡಿಷನ್‌ಗೆ ಬರುವಂತೆ ಇ–ಮೇಲ್ ಕಳಿಸಿದ್ದರು. ನನ್ನಲ್ಲಿಯೂ ಪ್ರತಿಭೆ ಇದೆ. ಬಂದಿರುವ ಅವಕಾಶವನ್ನು ಏಕೆ ಬಿಡಬೇಕು ಎಂದು ಆಡಿಷನ್‌ನಲ್ಲಿ ಭಾಗವಹಿಸಿದೆ. ಹೈದರಾಬಾದ್‌ನಲ್ಲಿ ನಡೆದ ಸೌತ್ ಜೋನ್‌ನ ಆಡಿಷನ್‌ನಲ್ಲಿ ಆಯ್ಕೆಯಾದೆ. ಕ್ರೀಡಾ ಕ್ಷೇತ್ರ ಮತ್ತು ಫಿಟ್‌ನೆಸ್ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ್ದೇನೆ. ಹಲವು ಪ್ರಶಸ್ತಿಗಳೂ ಬಂದಿವೆ. ಆದರೆ, ಇದು ನನಗೆ ವಿಶಿಷ್ಟವಾದ ಸ್ಪರ್ಧೆ. ಇದರಲ್ಲಿಯೂ ಗೆಲುವು ಸಾಧಿಸಬೇಕು ಎಂಬುದು ನನ್ನ ಕನಸು ಎನ್ನುತ್ತಾರೆ' ವಿಭಾಅಪರ್ಣಾ .

'ಸ್ಪರ್ಧೆಯಲ್ಲಿ ಈ ಹಂತದವರೆಗೂ ಬಂದಿದ್ದೇನೆ. ಇನ್ನು ಮುಂದೆಯೂ ಕಠಿಣ ಸ್ಪರ್ಧೆ ಇದೆ. ಹೀಗಾಗಿ ಇನ್ನಷ್ಟು ಫಿಟ್‌ ಆಗಲು ಪ್ರಯತ್ನಿಸುತ್ತಿದ್ದೇನೆ. ತೂಕ ಇಳಿಸಿಕೊಳ್ಳುತ್ತಿದ್ದೇನೆ. ಸ್ಪರ್ಧೆಯಲ್ಲಿ ಒಂದು ನಿಮಿಷದ ಟ್ಯಾಲೆಂಟ್ ಸುತ್ತು ಇರುತ್ತದೆ. ಎಲ್ಲರೂ ಡಾನ್ಸ್ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಮಾಡುತ್ತಾರೆ. ಅದರಲ್ಲಿ ನಾನು 25 ಕೆ.ಜಿ ತೂಕ ಹೊತ್ತು ಪ್ಲ್ಯಾಂಕ್ ಮಾಡಬೇಕೆಂದಿದ್ದೇನೆ. ಅದಕ್ಕಾಗಿ ಅಭ್ಯಾಸವನ್ನೂ ಮಾಡುತ್ತಿದ್ದೇನೆ' ಎಂದರು.

ಕ್ರೀಡಾ ಕ್ಷೇತ್ರದಲ್ಲಿ ಸಾಧನೆ: ಎಂ.ಎ, ಎಂ.ಫಿಲ್‌, ಎಂಪಿ.ಇಡಿ ಪದವೀಧರೆಯಾಗಿರುವ ವಿಭಾ, ವಾಲಿಬಾಲ್‌ನಲ್ಲಿ ಬೆಂಗಳೂರಿನ ರಾಷ್ಟ್ರೀಯ ಕ್ರೀಡಾ ಸಂಸ್ಥೆ (ಎನ್‌ಐಎಸ್‌) ಯಲ್ಲಿ ತರಬೇತಿಯನ್ನೂ ಪಡೆದಿದ್ದಾರೆ.

ವಾಲಿಬಾಲ್ ಕ್ರೀಡೆಯಲ್ಲಿ ರಾಜ್ಯ ಸಬ್ ಜೂನಿಯರ್, ಸೀನಿಯರ್‌, ಸೌತ್ ಜೋನ್, ಗುಲಬರ್ಗಾ ವಿ.ವಿ., ರಾಜ್ಯ, ರಾಷ್ಟಮಟ್ಟದ ತಂಡವನ್ನು ಪ್ರತಿನಿಧಿಸಿದ್ದಾರೆ. ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯಮಟ್ಟದ ಹಲವು ಟೂರ್ನಿಗಳಲ್ಲಿಯೂ ಆಡಿದ್ದಾರೆ. ಅಲ್ಲದೆ, ಹೈದರಾಬಾದ್‌ ಮಹಿಳಾ ವಾಲಿಬಾಲ್ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.

ಪ್ಲ್ಯಾಂಕ್ ಅಭ್ಯಾಸದಲ್ಲಿ ತೊಡಗಿರುವ ವಿಭಾ

ಫಿಟ್‌ನೆಸ್ ಕ್ಷೇತ್ರದಲ್ಲಿ ಪ್ರಶಸ್ತಿ: ವಿಭಾ ಅವರು ಕಲಬುರ್ಗಿಯಲ್ಲಿ ಹತ್ತು ವರ್ಷಗಳಿಂದ ‘ಫಿಟ್ ಅಂಡ್ ಫೈನ್’ ಎಂಬ ಫಿಟ್‌ನೆಸ್ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾರೆ. ಈವರೆಗೆ ಇವರ ಬಳಿ 15 ಸಾವಿರಕ್ಕೂ ಹೆಚ್ಚು ಯುವತಿಯರು, ಮಹಿಳೆಯರು ತರಬೇತಿ ಪಡೆದಿದ್ದಾರೆ.

ಫಿಟ್‌ನೆಸ್‌ ತರಬೇತಿಗಾಗಿ ಇವರು ಸಾಕಷ್ಟು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ದಿ ಬೆಸ್ಟ್ ಫಿಟ್‌ನೆಸ್ ಟ್ರೇನರ್ ಆಪ್ ದಿ ಇಯರ್ (ಕರ್ನಾಟಕ), ಇಂಡಿಯಾ ಲೀಡರ್‌ಶಿಫ್ ಅವಾರ್ಡ್, ರೈಸಿಂಗ್ ಲೀಡರ್ ಆಫ್ ದಿ ಇಯರ್ –ಫಿಟ್‌ನೆಸ್ ಟ್ರೇನರ್ ಪ್ರಶಸ್ತಿಗಳು ಬಂದಿವೆ.

***

ಫಿಟ್‌ನೆಸ್ ತರಬೇತಿ ನನ್ನ ವೃತ್ತಿ ಮತ್ತು ಪ್ರವೃತ್ತಿ ಎರಡೂ ಆಗಿದೆ. ಉತ್ತಮ ಆರೋಗ್ಯ ಹೊಂದಬೇಕಾದರೆ ವರ್ಕೌಟ್ ಮಾಡಲೇಬೇಕು. ಒಂದಿಷ್ಟು ಸಮಯವನ್ನು ಇದಕ್ಕಾಗಿ ಮೀಸಲಿಡಬೇಕು. ಈ ಬಗ್ಗೆ ಯುವತಿಯರು, ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶ ಹೊಂದಿದ್ದೇನೆ.

–ವಿಭಾ ಅಪರ್ಣಾ ಜಾಧವ, ಫಿಟ್‌ನೆಸ್ ಕೋಚ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.