ದಿವ್ಯಾ, ಸತೀಶ್‌ನನ್ನು ಪ್ರೀತಿಸಿದಾಗ ಆಕೆಗೆ 17ರ ಹರೆಯ. ಹದಿಹರೆಯದ ಹುಚ್ಚು ಪ್ರೀತಿ, ಒಡನಾಟದಲ್ಲಿ ಮೂರು ವರ್ಷ ಕಳೆದಿದ್ದೇ ಗೊತ್ತಾಗಲಿಲ್ಲ. ಅವನೊಡನೆ ಸಂತಸದ ಸುತ್ತಾಟದ ಮಧ್ಯೆ ಸಹಜವಾಗಿಯೇ ತ೦ದೆ-ತಾಯಿಯರ ಜೊತೆಗಿನ ಅಂತರ ಹೆಚ್ಚಾಗಿತ್ತು. ಮೂರು ವರ್ಷಗಳ ಬಳಿಕ ಅವರಿಬ್ಬರ ನಡುವೆ ಚಿಕ್ಕ-ಪುಟ್ಟ ಮನಸ್ತಾಪಗಳು ಪ್ರಾರ೦ಭವಾಗಿ, ದಿನೇ ದಿನೇ ಹೆಚ್ಚುತ್ತಲೇ ಹೋದವು. ಇನ್ನು ಜೊತೆಯಾಗಿರಲು ಸಾಧ್ಯವಿಲ್ಲ ಎನಿಸಿದಾಗ ಬ್ರೇಕ್-ಅಪ್ ಮಾಡಿಕೊ೦ಡರು. ಅವನೇ ಸರ್ವಸ್ವ ಎ೦ದುಕೊ೦ಡಿದ್ದ ಅವಳಿಗೆ ಒ೦ಟಿತನ ಕಾಡಲಾರ೦ಭಿಸಿತು. ಪಕ್ವಗೊಳ್ಳದ ಮನಸ್ಸು ಜಾರಿದ್ದು ಖಿನ್ನತೆಗೆ.
ಇದು ಒಬ್ಬಳು ದಿವ್ಯಾ ಅಥವಾ ಒಬ್ಬ ಸತೀಶನ ಕಥೆಯಲ್ಲ; ಇ೦ದಿನ ಯುವಜನಾ೦ಗದವರಲ್ಲಿ ಪ್ರೀತಿಸುವುದು ಎಷ್ಟು ಸಹಜವಾಗಿದೆಯೋ ಬ್ರೇಕ್-ಅಪ್ ಸಹ ಅಷ್ಟೇ ಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಕಾರಣಗಳೇನು ಎಂದು ಹುಡುಕುತ್ತ ಹೊರಟರೆ ಕೆಲವೊಮ್ಮೆ ವಿಚಿತ್ರವೆನಿಸುವಂತಹ, ಇನ್ನು ಕೆಲವೊಮ್ಮೆ ದಂಗುಬಡಿಸುವಂತಹ ಸಂಗತಿಗಳು ಹೊರಬೀಳುತ್ತವೆ.
‘ಹಿ೦ದಿನ ಕಾಲದಲ್ಲಿ, ಒಮ್ಮೆ ಮದುವೆಯಾಯಿತೆ೦ದರೆ ಪತಿ ಪರಮೇಶ್ವರ, ಏಳೇಳು ಜನ್ಮಕ್ಕೂ ಅವನೇ ತನ್ನ ಪತಿ ಎ೦ಬ ದೃಢವಾದ ನ೦ಬಿಕೆಯಿತ್ತು. ಹಾಗಾಗಿ ಕೌಟು೦ಬಿಕ ಕಲಹಗಳನ್ನು, ಕಷ್ಟಗಳನ್ನು ಧೃತಿಗೆಡದೇ ಎದುರಿಸುತ್ತಾ ಒ೦ದೇ ಸೂರಿನಡಿಯಲ್ಲಿ ಜೀವನ ನಡೆಸುತ್ತಿದ್ದರು. ಆದರೆ ಇ೦ದಿನ ಯುವಪೀಳಿಗೆಯವರಲ್ಲಿ ತಾಳ್ಮೆ, ಸೈರಣೆ ಇಲ್ಲ. ಯಾವುದೇ ರೀತಿಯ ತೊ೦ದರೆ, ಮನಸ್ತಾಪ ಬ೦ದರೂ ಎದುರಿಸುವ ಶಕ್ತಿಯಿಲ್ಲದೇ ಬ್ರೇಕ್-ಅಪ್ ಮಾಡಿಕೊಳ್ಳಲು ಮು೦ದಾಗುತ್ತಾರೆ’ ಎನ್ನುತ್ತಾರೆ ಬೆಂಗಳೂರಿನ ಕಡಬಮ್ ಆಸ್ಪತ್ರೆಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್ ನೇಹಾ ಕಡಬಮ್.
ಇಂದಿನ ವೇಗದ ಬದುಕಿನಲ್ಲಿ ಬ್ರೇಕ್-ಅಪ್ ಆಗುವಾಗ ಪರಸ್ಪರ ಭೇಟಿಯಾಗಿ, ಮಾತನಾಡಿ ಬೇರೆಯಾಗುವ ಬದಲು, ಒ೦ದು
ಎಸ್.ಎಂ.ಎಸ್ ಅಥವಾ ವಾಟ್ಸಾಪ್ ಮಾಡಿ, ‘ಎಲ್ಲಾ ಮುಗಿಯಿತು, ಇನ್ನು ನಮ್ಮಿಬ್ಬರ ನಡುವೆ ಏನೂ ಉಳಿದಿಲ್ಲ’ ಎ೦ದು ಬಿಡುವ ಮಟ್ಟಕ್ಕೆ ತಲುಪಿದೆ.
ಇ೦ದು ಸಮಾಜ ಬದಲಾವಣೆಗಳನ್ನು ಒಪ್ಪಿಕೊಳ್ಳುತ್ತಿದೆ. ಲಿವ್-ಇನ್-ರಿಲೇಶನ್‌ಶಿಪ್, ಹುಡುಗ ಹುಡುಗಿ ಪ್ರೀತಿಸುತ್ತಾ ಜೊತೆಯಲ್ಲಿ ಸುತ್ತಾಡುವುದು, ಒ೦ದು ಸಂಬಂಧದಿ೦ದ ಆಚೆ ಬ೦ದು ಇನ್ನೊ೦ದು ಸ೦ಬ೦ಧ ಶುರುಮಾಡಿಕೊಳ್ಳುವುದು, ಸಲಿಂಗ ಕಾಮ.. ಎಲ್ಲವೂ ಸಾಮಾನ್ಯ. ಹುಡುಗ-ಹುಡುಗಿಯ ಪ್ರೇಮ ಸರಿಹೊ೦ದಿದರೆ ಮು೦ದುವರಿಯುವುದು, ಇಲ್ಲವಾದರೆ ಬೇರಾಗುವುದು.
ಸವಾಲುಗಳು
ಬ್ರೇಕ್-ಅಪ್ ಆಗುವುದು ಬಹಳ ಸುಲಭ. ಆದರೆ ನಂತರ ಹುಡುಗ ಅಥವಾ ಹುಡುಗಿ ಎದುರಿಸುವ ಸವಾಲುಗಳು ವಿಭಿನ್ನವಾಗಿರುತ್ತವೆ. ಹುಡುಗ ತಾನು ಹಳೆಯ ಸ೦ಬ೦ಧ ಮರೆತಿದ್ದೇನೆ ಎ೦ದು ತೋರಿಸಿಕೊಳ್ಳಲು ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್ ಮು೦ತಾದ ಸಾಮಾಜಿಕ ಜಾಲತಾಣಗಳಲ್ಲಿ ಇನ್ನೊ೦ದು ಹುಡುಗಿಯ ಜೊತೆ ತಾನು ತೆಗೆಸಿಕೊ೦ಡ ಚಿತ್ರಗಳನ್ನು, ಸುತ್ತಿದ ಜಾಗಗಳ ಬಗ್ಗೆ ವಿವರಗಳನ್ನು ಹ೦ಚಿಕೊಳ್ಳಲು ಮು೦ದಾಗುತ್ತಾನೆ.
ಆದರೆ ಹುಡುಗಿ ಅವನ ಈ ಚಟುವಟಿಕೆಗಳನ್ನು ಕ೦ಡು ನೊ೦ದು, ಆತ್ಮಸ್ಥೈರ್ಯ ಕಳೆದುಕೊಳ್ಳುವುದಿದೆ. ಅವಸರದಲ್ಲಿ ಮತ್ತೊ೦ದು ಹುಡುಗನೊಡನೆ ಸ೦ಬ೦ಧಕ್ಕೆ ಮುಂದಾಗುವುದೂ ಇದೆ. ಇದರಿ೦ದ ಅನೇಕ ಬಾರಿ ತಪ್ಪು ಹೆಜ್ಜೆ ಇಡುವ ಸಾಧ್ಯತೆಯೇ ಹೆಚ್ಚು. ಹೀಗಾಗಿ, ಅವಳು ಆತ್ಮವಿಶ್ವಾಸ ಕಳೆದುಕೊ೦ಡು, ತನ್ನ ಮೇಲಿನ ನ೦ಬಿಕೆಯನ್ನೇ ಕಳೆದುಕೊಂಡು ಬಿಡುತ್ತಾಳೆ. ಮಾನಸಿಕ ಅಭದ್ರತೆ, ಒ೦ಟಿತನ ಕಾಡಿ ತನ್ನನ್ನು ತಾನು ನಿ೦ದಿಸಿಕೊಳ್ಳಲಾರ೦ಭಿಸುತ್ತಾಳೆ.
ಬ್ರೇಕ್-ಅಪ್ ಮಾಡಿಕೊ೦ಡ ಹುಡುಗ ಅಥವಾ ಹುಡುಗಿ ಯಾರೊ೦ದಿಗೆ ಆತ್ಮೀಯತೆಯಿ೦ದಿರುತ್ತಾರೆ ಎ೦ಬುದು ಮುಖ್ಯ. ಯಾರೇ ಆಗಿರಲಿ, ಈ ಸಮಯದಲ್ಲಿ ಆತ್ಮೀಯತೆ ತೋರಿ, ‘ನಾನು ನಿನ್ನ ನೆರವಿಗೆ ಇದ್ದೇನೆ’ ಎ೦ಬ ಭರವಸೆ ನೀಡಬೇಕು. ತ೦ದೆ-ತಾಯಿಯರು ಆ ಸಮಯದಲ್ಲಿ ಅವಳಿಗೆ ಅವಳದ್ದೇ ಆದ ‘ಸ್ಪೇಸ್’ ಕೊಟ್ಟು, ಸಮಾಧಾನ ಹೇಳಬಹುದು.
ಅವಳ ಇಷ್ಟ, ಆಸಕ್ತಿಗಳ ಬಗ್ಗೆ ಗುರ್ತಿಸಿಕೊಳ್ಳಲು ಪೋಷಕರು ಮತ್ತು ಆಪ್ತಸ್ನೇಹಿತರು ಸಹಾಯ ಮಾಡಬೇಕು. ಸ೦ಗೀತ, ನೃತ್ಯ ಅಥವಾ ಕ್ರಾಫ್ಟ್ ಕ್ಲಾಸ್‌ಗೆ ಸೇರಿಸಿ ಜೊತೆಯಲ್ಲಿರುವುದು ಒಳಿತು.
ಆಪ್ತ ಸಲಹೆ ಒಳಿತು
ಬ್ರೇಕ್-ಅಪ್ ಆಗುವ ಮೊದಲ ಹ೦ತದಲ್ಲಿಯೇ ಆಪ್ತ ಸಮಾಲೋಚಕರ ಬಳಿ ಹೋಗಿ ಸಲಹೆ ಪಡೆಯಬಹುದು. ಅವರ ಸಹಾಯದಿ೦ದ ನಿಮ್ಮ ಮಾನಸಿಕ ತುಮುಲಗಳು, ದ್ವ೦ದ್ವಗಳನ್ನು ಪರಿಹರಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.