ಕಾರ್ಗಿಲ್ ವಿಜಯ ದಿನದ ಗೌರವಾರ್ಥ ಈಚೆಗಷ್ಟೇ ಭಾರತೀಯ ಸೇನೆಯು 25 ಮಹಿಳೆಯರ ‘ಆಲ್ ವುಮನ್ ಬೈಕ್ ರ‍್ಯಾಲಿ’ ಆಯೋಜಿಸಿತ್ತು. ಎರಡು ಸಾವಿರ ಕಿ.ಮೀ. ಮಾರ್ಗದ ಈ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಇಬ್ಬರು ಮಹಿಳಾ ಸೇನಾಧಿಕಾರಿಗಳ ಅನುಭವ ಕಥನ ಇಲ್ಲಿದೆ.
ಜುಲೈ 26. ಭಾರತೀಯ ಸೇನಾ ಇತಿಹಾಸದಲ್ಲಿ ಮರೆಯಲಾಗದ ದಿನ. ಅಂದು ಭಾರತ ಕಾರ್ಗಿಲ್ ಯುದ್ಧದಲ್ಲಿ ವಿಜಯ ಸಾಧಿಸಿದ ದಿನ. ಇಪ್ಪತ್ತೈದು ವರ್ಷಗಳ ಹಿಂದಿನ ಆ ದಿನ ಇಂದಿಗೂ ದೇಶಪ್ರೇಮಿಗಳ ಮನದಲ್ಲಿ ಹಸಿರಾಗಿದೆ. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರಿಗೆ ಗೌರವ ಸಲ್ಲಿಸಲು ಭಾರತೀಯ ಸೇನೆ ಈಚೆಗಷ್ಟೇ ಟಿವಿಎಸ್ ಮೋಟಾರ್ ಕಂಪನಿ ಜತೆಗೂಡಿ 25 ಮಹಿಳಾ ಬೈಕರ್‌ಗಳ ವಿಶಿಷ್ಟ ರ‍್ಯಾಲಿ ಆಯೋಜಿಸಿತ್ತು.
ಸುಮಾರು ಎರಡು ಸಾವಿರ ಕಿ.ಮೀ. ಮಾರ್ಗದ ಬೈಕ್ ರ‍್ಯಾಲಿಯಲ್ಲಿ ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಹಿಳೆಯರು ಸೇರಿದಂತೆ ವಿವಿಧ ಕ್ಷೇತ್ರಗಳ 25 ಮಹಿಳೆಯರು ಪಾಲ್ಗೊಂಡಿದ್ದು ವಿಶೇಷ. ಲೇಹ್‌ನಿಂದ ಆರಂಭವಾದ ರ‍್ಯಾಲಿ ಲಡಾಕ್‌ನ ವಿವಿಧ ಸ್ಥಳಗಳ ಮೂಲಕ ಕಾರ್ಗಿಲ್ ಹುತಾತ್ಮರ ಸ್ಮಾರಕಕ್ಕೆ ತಲುಪುವ ಗುರಿ ಹೊಂದಿತ್ತು. ಜುಲೈ 4ರಿಂದ ಲೇಹ್‌ನಲ್ಲಿ ಆರಂಭವಾದ ಈ ಬೈಕ್ ರ‍್ಯಾಲಿಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬೆಂಗಳೂರಿನ ಇಬ್ಬರು ಮಹಿಳೆಯರು ಭಾಗವಹಿಸಿದ್ದು ವಿಶೇಷ. ದುರ್ಗಮ ಹಾದಿಯಲ್ಲಿ ಬೈಕ್ ಸವಾರಿ ನಡೆಸಿದ್ದರ ಬಗ್ಗೆ ಬೆಂಗಳೂರಿನ ಪ್ರಿಯಾ ಮಿಶ್ರಾ ಹಾಗೂ ವೃಷ್ಟಿ ಎಂ.ಪಿ. ಅವರು ತಮ್ಮ ಅನುಭವ ಕಥನವನ್ನು ಹಂಚಿಕೊಂಡಿದ್ದಾರೆ.
ಕನಸು ಈಡೇರಿಸಿದ ರ‍್ಯಾಲಿ: ಪ್ರಿಯಾ ಮಿಶ್ರಾ
ಜೀವನದಲ್ಲಿ ಒಮ್ಮೆಯಾದರೂ ಲಡಾಕ್‌ಗೆ ಬೈಕ್‌ನಲ್ಲಿ ಹೋಗಬೇಕೆನ್ನುವುದು ಬಹುತೇಕ ಬೈಕರ್‌ಗಳ ಕನಸು. ಆ ಕನಸನ್ನು ನನ್ನ ಪಾಲಿಗೆ ನನಸು ಮಾಡಿದ್ದು ಭಾರತೀಯ ಸೇನೆ. 25 ಮಹಿಳೆಯರಿದ್ದ ನಮ್ಮ ತಂಡದಲ್ಲಿ ಟ್ರ್ಯಾಕ್ ರೇಸರ್, ಬೈಕ್ ರೈಡರ್ಸ್, ಈಗಾಗಲೇ ಇಂಥ ಹಲವು ಬೈಕ್ ರ‍್ಯಾಲಿಗಳಲ್ಲಿ ಪಾಲ್ಗೊಂಡ ಅನುಭವಿಗಳೂ ಇದ್ದರು. ಇಂಥ ತಂಡದಲ್ಲಿ ನಾನೂ ಒಬ್ಬಳಾಗಿದ್ದು ಹೆಮ್ಮೆಯ ಸಂಗತಿ. ‘ನಾರಿಶಕ್ತಿ’ ಎನ್ನುವ ಘೋಷವಾಕ್ಯದಡಿ ಆಯೋಜನೆಯಾಗಿದ್ದ ಈ ರ‍್ಯಾಲಿ ನನ್ನ ಪಾಲಿಗೆ ಅನುಭವದ ಗಣಿಯನ್ನೇ ತೆರೆದಿಟ್ಟಿತು.
ಸೇನಾಧಿಕಾರಿಗಳು, ಉದ್ಯಮಿಗಳು, ಸರ್ವೀಸ್ ಆಫೀಸರ್‌ಗಳ ಪತ್ನಿಯರು, ಗೃಹಿಣಿಯರು ಹೀಗೆ ಸಮಾಜದ ವಿವಿಧ ಸ್ತರದ ಮಹಿಳೆಯರ ಒಡನಾಟ ದಕ್ಕಿತ್ತು. ನಮ್ಮೆಲ್ಲರ ಕನಸುಗಳು ಒಂರ್ಥದಲ್ಲಿ ನನಸಾಗಿ ಪರಿವರ್ತನೆಯಾಗಿದ್ದವು. ದೇಶಕ್ಕಾಗಿ ಹುತಾತ್ಮರಾದವರಿಗೆ ನಾರಿಶಕ್ತಿಯ ಮೂಲಕ ಗೌರವ ಸಲ್ಲಿಸುವ ಅಪೂರ್ವ ಅವಕಾಶ ನಮ್ಮದಾಗಿತ್ತು. 2 ಸಾವಿರ ಕಿ.ಮೀ ಹಾದಿ ಸಾಗುವುದು ಸುಲಭವಲ್ಲ. ಅದರಲ್ಲೂ 19 ಸಾವಿರ ಅಡಿಗಳಷ್ಟು ಎತ್ತರದಲ್ಲಿ ಬೈಕ್ ಸವಾರಿ ನಡೆಸಿದ್ದು ರೋಮಾಂಚನ ಮೂಡಿಸಿತ್ತು. ಭಾರತೀಯ ಸೇನೆಯ ಪ್ರೋತ್ಸಾಹ, ಮಾರ್ಗದರ್ಶನ ಬೆನ್ನಿಗೆ ಇದ್ದದ್ದು ನಮಗೆ ಮತ್ತಷ್ಟು ಹುರುಪು ಮೂಡಿಸಿತ್ತು.
ಚಳಿಯ ವಾತಾವರಣದಲ್ಲಿ 12 ದಿನಗಳ ಕಾಲ ಬೈಕ್ ಸವಾರಿ ಮಾಡುವುದು ಎಂಥವರಿಗೂ ಕಠಿಣವೇ. ನಿತ್ಯವೂ ನಮ್ಮ ವೈದ್ಯಕೀಯ ತಪಾಸಣೆ ನಡೆಯುತ್ತಿತ್ತು. ಅದರ ಆಧಾರದಲ್ಲೇ ನಮ್ಮ ರ‍್ಯಾಲಿ ಸಾಗುತ್ತಿತ್ತು. ಕಚ್ಚಾ ರಸ್ತೆಗಳು, ನದಿಯ ಮೂಲಕ ಹಾದುಹೋಗುವಾಗ ನಮ್ಮ ವಾಹನ ಚಾಲನೆಯ ಕೌಶಲ ನೆರವಿಗೆ ಬರುತ್ತಿತ್ತು. ದಣಿವಾದಾಗ ಎನರ್ಜಿ ಬಾರ್, ಎಳನೀರು, ಚಾಕೊಲೇಟ್ ನಮ್ಮ ಪಾಲಿಗೆ ಸಂಜೀವಿನಿಯಾಗಿದ್ದವು.
ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ರ‍್ಯಾಲಿ ಮುಕ್ತಾಯಗೊಳ್ಳುವ ಮುನ್ನ ಖರ್ದುಂಗ್ ಲಾ ಮತ್ತು ಉಮ್ಲಿಂಗ್ ಲಾ ಪಾಸ್‍ಗಳನ್ನು ದಾಟಬೇಕಿತ್ತು. ಇದು ತುಂಬಾ ಚಳಿಯಿರುವ ಪ್ರದೇಶ. ನಮ್ಮಲ್ಲಿನ ಕೆಲವರಿಗೆ ತಲೆನೋವು ಕಾಣಿಸಿಕೊಂಡರೆ, ಮತ್ತೆ ಕೆಲವರಲ್ಲಿ ಸುಸ್ತು ಕಾಣಿಸಿಕೊಂಡಿತ್ತು. ಆದರೆ, ಭಾರತೀಯ ಸೇನೆ ಮತ್ತು ಟಿವಿಎಸ್ ಮೋಟಾರ್ ಕಂಪನಿ ನೀಡಿದ ಮಾರ್ಗದರ್ಶನ ನೆರವಿಗೆ ಬಂತು. ಅಂಥದ್ದೇ ಮತ್ತೊಂದು ರೋಚಕ ಹಾದಿ ದೊಡ್ಡದೊಂದು ನದಿಯ ಮೂಲಕ ಹಾದು ಹೋಗುವಾಗ ಎದುರಾಗಿತ್ತು. ಅದನ್ನು ಸಾಹಸಮಯವಾಗಿ ಎದುರಿಸಿದೆವು. ಇಲ್ಲೆಲ್ಲ ಸೇನೆಯ ಸಮಯ ಪ್ರಜ್ಞೆ, ಶಿಸ್ತುಪಾಲನೆ ನಮ್ಮನ್ನು ಕಾಪಾಡಿದವು. ಕಷ್ಟದ ಹಾದಿಯಲ್ಲಿ, ಕಠಿಣ ಸನ್ನಿವೇಶಗಳಲ್ಲಿ ಸೇನೆ ನಮ್ಮನ್ನು ಹುರಿದುಂಬಿಸುತ್ತಿದ್ದ ರೀತಿ ಮರೆಯಲಾಗದ್ದು. ಹುತಾತ್ಮರ ಸ್ಮಾರಕಗಳನ್ನು ಹಾದು ಹೋಗುವಾಗ ಅವರ ಬಲಿದಾನ ನೆನಪಾಗಿ ಕಣ್ಣಂಚಿನಲ್ಲಿ ನೀರಾಡುತ್ತಿತ್ತು. ಯುದ್ಧದ ಕೊನೆ ಕ್ಷಣದಲ್ಲಿ ಅವರು ಎದುರಿಸಿದ ಸವಾಲು, ಸಾಯುವ ಮುನ್ನ ಅವರ ಮನದಲ್ಲಿ ನೆನಪಾಗಿರಬಹುದಾದ ಕುಟುಂಬ ಇವೆಲ್ಲವೂ ಮನದೊಳಗೆ ಸುಳಿದು ಕಣ್ಣೀರು ಜಿನುಗುತ್ತಿತ್ತು. ಹುತಾತ್ಮರಿಗೆ ಗೌರವ ಸಲ್ಲಿಸಲು ಮಹಿಳೆಯರಿಗೆ ಅವಕಾಶ ಕೊಟ್ಟ ಸೇನೆ ಆಯೋಜಿಸಿದ್ದ ಈ ರ‍್ಯಾಲಿ ಅವಿಸ್ಮರಣೀಯ.
ಅಡೆತಡೆ ಮೀರಿ ಮುನ್ನುಗ್ಗಿ: ವೃಷ್ಟಿ ಎಂ.ಪಿ.
ಬೈಕ್ ರ‍್ಯಾಲಿ ಮಹಿಳೆಯರಿಗಲ್ಲ ಎಂಬ ಮನೋಭಾವ ಹಲವರದ್ದು. ಆದರೆ, ಸೂಕ್ತ ತರಬೇತಿ ನೀಡಿದರೆ ನಾವೂ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಳ್ಳಬಹುದು ಎಂಬ ಆತ್ಮವಿಶ್ವಾಸ ಮೂಡಿಸಿದ್ದು ಭಾರತೀಯ ಸೇನೆ. ಪ್ರತಿಕೂಲ ಸನ್ನಿವೇಶದಲ್ಲೂ ಅಡೆತಡೆ ಮೀರಿ, ಮುನ್ನುಗ್ಗಿ ಗಮ್ಯ ಸ್ಥಾನ ತಲುಪುವುದು ಹೇಗೆ ಎನ್ನುವುದನ್ನು ಸೇನೆ ಕಲಿಸಿತು. ಅನುಭವಿ ಬೈಕ್ ರೈಡರ್‌ಗಳಿದ್ದ ನಮ್ಮ ತಂಡದಲ್ಲಿ ಪ್ರತಿ ಮಹಿಳೆಗೂ ಬೈಕ್ ತಂತ್ರಜ್ಞಾನದ ಅರಿವಿತ್ತು. ದೂರದ ಪ್ರಯಾಣಕ್ಕೆ ಬೇಕಾದ ಸಿದ್ಧತೆಯ ಜತೆಗೆ ಮಾರ್ಗಮಧ್ಯೆ ಎದುರಾಗಬಹುದಾದ ಸವಾಲುಗಳನ್ನು ಎದುರಿಸುವುದು ಸುಲಭವಾಗಿರಲಿಲ್ಲ. ಆದರೆ, ಸವಾಲು ಮೆಟ್ಟಿ ಮುನ್ನುಗ್ಗುವುದು ಕಠಿಣವಲ್ಲ ಎಂಬುದನ್ನೂ ರ‍್ಯಾಲಿ ಮನವರಿಕೆ ಮಾಡಿಕೊಟ್ಟಿತು.
ಹೆಣ್ಣುಮಕ್ಕಳಲ್ಲೂ ಸಾಮರ್ಥ್ಯವಿದೆ. ಆದರೆ ಅವರಿಗೆ ತರಬೇತಿ ಬೇಕಷ್ಟೇ. ದೈಹಿಕ ಫಿಟ್‌ನೆಸ್ ಜತೆಗೆ ಮಾನಸಿಕ ಫಿಟ್‌ನೆಸ್ ಕೂಡಾ ಅಗತ್ಯ. ಈ ರ‍್ಯಾಲಿ ವಿವಿಧ ಕ್ಷೇತ್ರದ ಮಹಿಳೆಯರಿಗೆ ಅದ್ಭುತವಾದ ಅವಕಾಶ ಒದಗಿಸಿದೆ. ಮುಂದಿನ ದಿನಗಳಲ್ಲೂ ಮಹಿಳೆಯರಿಗೆ ಸೇನೆಯಲ್ಲಿ ಹೆಚ್ಚಿನ ಅವಕಾಶ ಸಿಗುತ್ತದೆ ಎಂಬ ನಂಬಿಕೆ ನನ್ನದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.