ಕಾರ್ಮೋಡದಷ್ಟು ಕಪ್ಪು ಕೂದಲು, ಕೂದಲ ಅಲೆ ಕಾರ್ಮೋಡ ನೆನಪಿಸಿತು. ನಾಗವೇಣಿಯಂಥ ಜಡೆ ಎಂದೆಲ್ಲ ಹೊಗಳುತ್ತಿದ್ದವರಿಗೆ, ಇದೀಗ ಸಂಜೆಯ ರಾಗರತಿಯೆಲ್ಲ ಕೂದಲ ಅಲೆಯಲ್ಲಿ ಕಾಣಿಸಬಹುದಾಗಿದೆ.
ಕಪ್ಪು ಕಾರ್ಮೋಡದಂಥ ಕೂದಲಲ್ಲಿ ದಟ್ಟವಾಗಿರುವ ಕಡಲುಹಸಿರು, ಕೆಮ್ಮುಗಿಲಿನ ಅಲೆಯೊಂದು ಹೊರಳಿದಂತೆ.. ಇನ್ನೇನು, ಬೀಟ್‌ರೂಟನ್ನೇ ಹೆಚ್ಚಿಟ್ಟು, ಬಣ್ಣ ಸುರಿದಿಟ್ಟಂತೆ ಇನ್ನೊಂದು ಬಣ್ಣ. ನೀಲ್ಕಡಲು, ನೀಲ ಗಗನ, ಕಾರ್ಮೋಡದ ಅಲೆಯಂತೆ ನಿಡಿದಾಗಿ ಇಳಿಬೀಳಬಹುದು.
ಇಂಥ ಬಣ್ಣದ ಸ್ಟ್ರೀಕ್ಸ್ ಈ ತಿಂಗಳ ಟ್ರೆಂಡ್ ಆಗಿ ಬದಲಾಗಿದೆ. ಕ್ರಿಸ್ಮಸ್ ಮತ್ತು ಹೊಸವರ್ಷದ ಹಿನ್ನೆಲೆಯಲ್ಲಿ ಕೇಶವಿನ್ಯಾಸ ಮತ್ತು ಕೇಶವರ್ಣದಲ್ಲಿಯೇ ಸಾಕಷ್ಟು ಬದಲಾವಣೆಗಳು ಕಂಡು ಬಂದಿವೆ. ಸದ್ಯದ ಟ್ರೆಂಡ್ ಏನಿದ್ದರೂ ಢಾಳಾಗಿ ಕಾಣುವ ಸ್ಟ್ರೀಕ್ಸ್‌ಗಳು. ಕೆಲವರು ನೆತ್ತಿಯಿಂದಲೇ ಈ ಬಣ್ಣದಲೆ ಕಾಣುವಂತೆ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಕೂದಲು ಕೊನೆಗೊಳ್ಳುವಾಗ ಆ ಬಣ್ಣದ ಅಲೆಯಂತೆ ಕಾಣುವಂತೆಯೂ ಮಾಡಿಕೊಳ್ಳುತ್ತಾರೆ.
ಹೈಲೈಟರ್ ಬಳಸಿಕೊಳ್ಳುವವರು ಹೊಂಬಣ್ಣವನ್ನು ಹೆಚ್ಚು ನೆಚ್ಚುತ್ತಿದ್ದರು. ಇದೀಗ ಕೆಂಬಣ್ಣ, ಕಡುಗುಲಾಬಿ, ನೀಲಿ, ಹಸಿರು ಎನಿಸುವ ವಿಶೇಷ ವರ್ಣಗಳೂ ಹೆಚ್ಚು ಜನಪ್ರಿಯವಾಗುತ್ತಿವೆ.
ಸ್ಟ್ರೀಕ್ಸ್ ಪ್ರಯತ್ನಿಸುವುದಾದರೆ ಕೇಶವಿನ್ಯಾಸದ ತಜ್ಞರಬಳಿಯೇ ಹೋಗಿ. ಒಳ್ಳೆಯ ಬ್ರ್ಯಾಂಡ್ ಇರುವ ಬಣ್ಣಗಳನ್ನೇ ಬಳಸಿ. ಯಾವುದೇ ಕಾರಣಕ್ಕೂ ನೇರವಾಗಿ ಬಣ್ಣ ಲೇಪನಕ್ಕೆ ಮುಂದಾಗಬೇಡಿ. ಒಮ್ಮೆ ಚೂರು ಲೇಪಿಸಿಕೊಂಡು ಪರಿಶೀಲಿಸಿ. ನಿಮ್ಮ ಚರ್ಮದ ಬಣ್ಣ, ಕೇಶ ವಿನ್ಯಾಸ ಕೇಶಶೈಲಿ ಹಾಗೂ ಅವುಗಳ ರಚನೆಯನ್ನು ನೋಡಿಯೇ ನಿರ್ಧರಿಸಿ.
ಹೊಂಬಣ್ಣ, ಕೆಂಬಣ್ಣ, ನೀಲವರ್ಣಗಳೇನೇ ಇರಲಿ, ಆರೋಗ್ಯವಂತ ಕೂದಲು ನಿಮ್ಮ ಆಯ್ಕೆಯಾಗಿರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.