ADVERTISEMENT

ಭಾವ-ಬಂಧದ ನೆನಪು; ಗೌರಿ ಬಾಗಿನದ ಒನಪು

ಪವಿತ್ರಾ ಭಟ್
Published 30 ಆಗಸ್ಟ್ 2024, 19:06 IST
Last Updated 30 ಆಗಸ್ಟ್ 2024, 19:06 IST
<div class="paragraphs"><p>ಎಐ ಚಿತ್ರ – ಕಣಕಾಲಮಠ</p></div>

ಎಐ ಚಿತ್ರ – ಕಣಕಾಲಮಠ

   

ಒಪ್ಪಟವಾಗಿ ಸಾರಿಸಿ ರಂಗೋಲಿಯಿಟ್ಟ ಅಂಗಳ, ದೇವರ ಮನೆಯಲ್ಲಿ ಜೋಡಿಸಿಟ್ಟ ಅರಿಶಿನ, ಕುಂಕುಮ, ಬಳೆ, ಅಕ್ಕಿ, ಮಂಗಲದ್ರವ್ಯಗಳು..
ಅತ್ತ ಅಡುಗೆ ಮನೆಯಿಂದ ಘಮ್‌ ಎನ್ನುವ ಸಿಹಿ ತಿಂಡಿಗಳ ಸುವಾಸನೆ... ಮನೆ-ಮನದಲ್ಲಿ ಸಡಗರ-ಸಂಭ್ರಮ...
ಹಬ್ಬ ಬಂತೆಂದರೆ ಗ್ರಾಮೀಣ ಭಾಗದ ಮನೆಗಳಲ್ಲಿ ಕಾಣುವ ಸಾಮಾನ್ಯ ನೋಟವಿದು. ಸಂಬಂಧ ಬೆಸೆಯುವ ಹಬ್ಬಗಳಿಗೆ ಹೆಣ್ಣುಮಕ್ಕಳೇ ಸಾಂಸ್ಕೃತಿಕ ರಾಯಭಾರಿಗಳು.
ಅದರಲ್ಲೂ ಗೌರಿ ಹಬ್ಬವಂತೂ ಕರುಳಬಳ್ಳಿ ಸಂಬಂಧದಂತೆ. ಅಮ್ಮನಿಗೆ ಬಾಗಿನ ಕೊಡುವುದೇ ಹೆಣ್ಣುಮಕ್ಕಳ ಸಂಭ್ರಮವನ್ನು ಇಮ್ಮಡಿಯಾಗಿಸುತ್ತದೆ.
ಮೊದಲೆಲ್ಲ ಅಮ್ಮ ಕಾಯಿಸಿಟ್ಟ ಹಂಡೆಯ ಬಿಸಿ ನೀರಿನಲ್ಲಿ ಗಂಟೆಗಟ್ಟಲೆ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಮನೆಯಲ್ಲೆಲ್ಲಾ ಓಡಾಡುತ್ತಿದ್ದವಳಿಗೆ ಮದುವೆಯಾದ ಮೇಲೆ ಅದೇನೋ‌ ಗುರುತರ ಜವಾಬ್ದಾರಿ.
ಮನೆಯಲ್ಲಿ ಎಲ್ಲಾ ಕೆಲಸ ಮುಗಿಸಿ, ಬಾಗಿನ ಕೊಡುವ ನೆಪದಲ್ಲಿ ಆಕೆಗೆ ಅಮ್ಮನನ್ನು ನೋಡುವ ತವಕ. ತವರೂರಿನತ್ತ ಲಗುಬಗೆಯ ಹೆಜ್ಜೆ.
ಬಾಳೆ ಎಲೆ ಅಥವಾ ಮರದ ಮೊರಗಳಲ್ಲಿ ಅರಿಶಿನ-ಕುಂಕುಮ, ಬಳೆ, ಅಕ್ಕಿ, ಬೆಲ್ಲ, ಕರಿಮಣಿ, ಕನ್ನಡಿ, ಪುಟ್ಟ ಬಾಚಣಿಗೆ, ಅಂಗಡಿಯನ್ನೆಲ್ಲ ಸುತ್ತಿ ಅಮ್ಮನಿಗಾಗಿ ಹುಡುಕಿ ತಂದ ಸೀರೆ... ಹೀಗೆ ಎಲ್ಲವನ್ನೂ ಒಪ್ಪವಾಗಿ ಜೋಡಿಸುವಾಗ, ಚಿಕ್ಕಂದಿನಲ್ಲಿ ಅಮ್ಮ ಅವಳ ಅಮ್ಮನಿಗಾಗಿ ಪ್ರೀತಿಯಿಂದ ತಯಾರಿಸುತ್ತಿದ್ದ ಗೌರಿ ಬಾಗಿನ ನೋಡಿ ಕಣ್ಣರಳಿಸಿ ನಿಂತದ್ದು ಇನ್ನೂ ಕಣ್ಣಿಗೆ ಕಟ್ಟಿದ ಹಾಗೆಯೇ ಇದೆ.

ಆದರೆ ಕಾಲ ಉರುಳಿದೆ. ಹುಟ್ಟಿ, ಬೆಳೆದ ಮನೆಗೆ ಅತಿಥಿಯಾಗಿ ಹೋಗಿ, ಅಮ್ಮನ ಮಡಿಲಿಗೆ ಸ್ವತಃ ಗೌರಿ ಬಾಗಿನ ಕೊಡಬೇಕೆಂದು ನೆನೆದು ಮೈಯಲ್ಲಿ ಸಣ್ಣ ಮಿಂಚು ಹರಿದಿತ್ತು. ಕಣ್ಣಾಲಿಗಳಲ್ಲಿ ನೀರು ಜಿನುಗಿತ್ತು. ಅದೊಂದು ಭಾವನೆಗಳ ಸಂಗಮ.

ADVERTISEMENT

‘ಪರ್ವತರಾಜನ ಮಗಳು ಪಾರ್ವತಿಯ ಇನ್ನೊಂದು ಹೆಸರು ಗೌರಿ. ಶಿವನನ್ನು ವಿವಾಹವಾದ ಗೌರಿ ವರ್ಷಕ್ಕೊಮ್ಮೆ ಅಂದರೆ ಭಾದ್ರಪದ ಮಾಸದ ಶುಕ್ಲ ಪಕ್ಷ ತದಿಗೆಯ ದಿನದಂದು ಪುತ್ರ ಗಣೇಶನೊಂದಿಗೆ ಕೈಲಾಸದಿಂದ ಭೂಮಿಗೆ ಬಂದು ಮುತ್ತೈದೆಯರಿಂದ ಬಾಗಿನ ಸ್ವೀಕರಿಸಿ ಹರಸುತ್ತಾಳೆ. ಈ ದಿನವನ್ನು ಗೌರಿ ತದಿಗೆ ಎಂದೂ ಕರೆಯುತ್ತಾರೆ. ಗೌರಿಯಂತೆಯೇ ಹೆಣ್ಣುಮಕ್ಕಳು ವ್ರತ ಮಾಡಿ ತವರಿಗೆ ತೆರಳಿ ತಾಯಿಗೆ ಅಥವಾ ನಾದಿನಿ, ಅಕ್ಕ-ತಂಗಿಯರಿಗೆ ಬಾಗಿನ ನೀಡಿ ಆಶೀರ್ವಾದ ಪಡೆದರೆ ಸುಮಂಗಲಿಗಳಾಗುತ್ತಾರೆ ಎನ್ನುವ ನಂಬಿಕೆಯಿದೆ’ ಎಂದು ಚಿಕ್ಕಂದಿನಲ್ಲಿ ಅಜ್ಜಿ ಗೌರಿ ಬಾಗಿನಕ್ಕಿರುವ ಪುರಾಣದ ನಂಟಿನ ಬಗ್ಗೆ, ಗೌರಿ ದೇವಿಯ ಕುರಿತಾದ ಕಥೆ ಹೇಳಿದ್ದು ಇನ್ನೂ ನೆನಪಿದೆ. 

ನಂಬಿಕೆ, ಸಂಪ್ರದಾಯಗಳ ಹೊರತಾಗಿ ಈ ಬಾಗಿನ ಪದ್ಧತಿ ಹೆಣ್ಣು ಮತ್ತು ಆಕೆಯ ತವರಿನ ನಡುವಿನ ಪ್ರೀತಿಯ ಸಂಬಂಧಕ್ಕೆ ಕನ್ನಡಿಯಿದ್ದಂತೆ. ಇದು ಭಾವದ ಬಂಧ‌.

ಗಂಡನ ಮನೆಯಲ್ಲಿ ಕುಟುಂಬದ ಏಳಿಗೆಗಾಗಿ, ಸಮೃದ್ಧಿಗಾಗಿ ತನ್ನದೇ ಪ್ರಪಂಚದಲ್ಲಿ ಬದುಕುತ್ತಿದ್ದ ಆಕೆಗೆ ತವರಿಗೆ ತೆರಳಿ ಬಾಲ್ಯದ ದಿನಗಳನ್ನು ನೆನೆದು, ಅಮ್ಮನ ಮಡಿಲಿಗೆ ಪ್ರೀತಿಯ ಬಾಗಿನ ನೀಡುವುದು ಆಕೆಗೊಂದು ಸಮರ್ಪಣಾ ಭಾವ ಮೂಡಿಸುವುದು ಸುಳ್ಳಲ್ಲ.
ವರ್ಷಗಳು ಉರುಳಿದರೂ, ಮುದುಕಿಯಾದರೂ ಹುಟ್ಟಿ ಬೆಳೆದ ಮನೆ, ಅಮ್ಮನ ಮಡಿಲಿನ ನೆನಪು ಮಾತ್ರ ಸದಾ ಹಚ್ಚಹಸಿರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.