ಮೊನ್ನೆ ಪಾರ್ಲಿಮೆಂಟಿನಲ್ಲಿ ಸಭಾಪತಿಗಳು ’ಜಯಾ ಅಮಿತಾಬ್ ಬಚ್ಚನ್ ಅವರೇ’ ಎಂದು ಸಂಭೋದಿಸಿದ ಕೂಡಲೆ ಸದಸ್ಯೆ ಜಯ ಬಾಧುರಿ ಅವರು ತಮ್ಮ ಎಂದಿನ ಖಡಕ್ ಶೈಲಿಯಲ್ಲಿ ’ಸಭಾಪತಿಗಳೇ ನನ್ನನ್ನು ಜಯಾ ಬಚ್ಚನ್ ಎಂದರೆ ಸಾಕು, ಹೀಗೆ ಗಂಡನ ಹೆಸರನ್ನು ಹಾಕಿಕೊಳ್ಳುವುದು ಇತ್ತೀಚಿನ ಫ್ಯಾಷನ್ ಆಗಿಬಿಟ್ಟಿದೆ’ ಎಂದರು. ಅಷ್ಟೇ ಅಲ್ಲ ಈ ಪುರುಷ ಪ್ರಧಾನ ಮನಃಸ್ಥಿತಿ ಇನ್ನೂ ಎಷ್ಟು ಬೆಳೆಯುತ್ತಿದೆ ಎಂದರೆ ಸರ್ವೋಚ್ಚ ನ್ಯಾಯಾಲಯವೇ ಯಾವ ಮಹಿಳೆಗೂ ತನ್ನ ಹೆಸರಿನ ಮುಂದೆ ಗಂಡನ ಅಥವಾ ತಂದೆಯ ಹೆಸರು ಸೇರಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ತೀರ್ಪು ಕೊಟ್ಟಿದ್ದರೂ ಸರ್ಕಾರಗಳು ಒತ್ತಾಯ ಮಾಡುತ್ತಿವೆ ದಾಖಲೆಗಳನ್ನು ಕೊಡಲು.
ಒಮ್ಮೆ ಮಗು ಹುಟ್ಟಿ 15 ತಿಂಗಳಾದ್ರೂ ಬರ್ತ್ ಸರ್ಟಿಫಿಕೇಟ್ ಮಾಡಿಸಿರಲಿಲ್ಲ ಯಾಕೆ ಎಂದಿದ್ದಕ್ಕೆ ಬಂದ ಉತ್ತರ “3 ತಿಂಗಳ ಹಿಂದೇನೆ ಕೊಟ್ಟಿದ್ದೀವಿ ಆದರವರು ತಂದೆ ಹೆಸರು ಕೊಡದೆ ಮಾಡಲ್ಲ ಅಂತಿದ್ದಾರೆ. ತಾಯಿ ಲೈಂಗಿಕ ದೌರ್ಜನ್ಯದಿಂದ ನೊಂದವಳು ಎನ್ನುವ ಆದೇಶ ತೋರಿಸಿದರೂ ಆಫೀಸಿನಲ್ಲಿ ತಂದೆ ಹೆಸರು ಬೇಕು ಅಂತಿದ್ದಾರೆ”. ಇನ್ನೊಂದು ಪ್ರಕರಣದಲ್ಲಿ 5 ಮಕ್ಕಳನ್ನು ಭಿಕ್ಷಾಟನೆಯಿಂದ ರಕ್ಷಿಸಲಾಗಿತ್ತು. ಮಕ್ಕಳನ್ನು ಹಿಂದಿರುಗಿಸಿ ಎಂದು ತಾಯಂದಿರೋಡಿ ಬಂದರು. ದಾಖಲೆಗಳನ್ನು ತರಲು ಹೇಳಲಾಗಿತ್ತು. ಅವರೆಲ್ಲರೂ ತಮ್ಮ ರಾಜ್ಯದ ಅಧಿಕಾರಿಗಳಿಂದ ಮಕ್ಕಳ ಜನ್ಮದಾಖಲೆ ತಂದರು. ದಾಖಲೆಗಳಲ್ಲಿ ಐದೂ ಮಕ್ಕಳ ಅಮ್ಮಂದಿರ ಹೆಸರು ಬೇರೆಬೇರೆ ಇತ್ತು ಆದರೆ ತಂದೆಯ ಹೆಸರು ಮಾತ್ರ ಒಬ್ಬನದ್ದೇ. ಗೋಲ್‍ಮಾಲ್ ಕಣ್ಣಿಗೆ ರಾಚುತ್ತಿತ್ತುತ್ತು. ಪರಿಶೀಲನೆಯಿಂದ ಸತ್ಯ ಹೊರಗೆ ಬಿತ್ತು. ಕೆಲವರಿಗೆ ಮಕ್ಕಳ ತಂದೆಯರ ಹೆಸರು ತಿಳಿದಿಲ್ಲ. ಮತ್ತೆ ಕೆಲವರಿಗೆ ಕಾರಣಾಂತರಗಳಿಂದ ಹೇಳಲಾಗುತ್ತಿಲ್ಲ. ಆದರೆ ಜನ್ಮದಾಖಲೆ, ಆಧಾರ್ ಕಾರ್ಡ್ ಇತರೆ ಯಾವುದಕ್ಕೂ ತಂದೆಯ ಹೆಸರು ಕೇಳುತ್ತಾರೆ. ಅದಕ್ಕೇ ಅವರೂರಿನ ಪುಢಾರಿಯೊಬ್ಬರು ತಮ್ಮ ಕಲ್ಪನೆಯಿಂದ ಒಂದೆರಡು ಹೆಸರು ಕೊಟ್ಟು ಅಧಿಕಾರಿಗೆ ಎಲ್ಲಾ ಮಕ್ಕಳಿಗೂ ಆ ಹೆಸರನ್ನೇ ತಂದೆಯ ಹೆಸರು ಎಂದು ಬಳಸಿ ದಾಖಲೆ ನೀಡಲು ಹೇಳಿಬಿಟ್ಟಿದ್ದರು.
ಗಂಗೂಬಾಯಿ ಕಾತ್ಯಾವಾಡಿ ಸಿನೆಮಾದಲ್ಲಿ ಆಕೆ ಲೈಂಗಿಕ ಕಾರ್ಯಕರ್ತೆ. ಮಗುವಿಗೆ ತಾಯಿ ಹೆಸರು ಬರೆಸಲು ನೀಡುವಾಗ , ತಂದೆಯ ಹೆಸರೇನು ಎನ್ನುವ ಪ್ರಶ್ನೆ ಬರುತ್ತೆ. “ತಾಯಿಯ ಹೆಸರು ಸಾಲುವುದಿಲ್ಲವೇ?” “ಆಗಲಿ ತಂದೆಯ ಹೆಸರು ದೇವಾನಂದ್ ಅಂತ ಬರೆದುಕೊಳ್ಳಿ” ಎನ್ನುತ್ತಾಳೆ.
ಎಷ್ಟೊಂದು ಅರ್ಥಪೂರ್ಣ ಈ ದೃಶ್ಯ: ಜಗತ್ತಿನಲ್ಲಿ ತಂದೆಯ ಅಸ್ತಿತ್ವ ತಾಯಿಯು ಹೇಳುವ ಹೆಸರಿಗಷ್ಟೇ ಸೀಮಿತ. ಅಮ್ಮ ಹೇಳಿದವನೇ ಅಪ್ಪ. ಬೆಳೆಯುತ್ತಿರುವ ಬದಲಾಗುತ್ತಿರುವ ಕಾಲದಲ್ಲಿ ಎಷ್ಟೊಂದು ಒಂಟಿ ಮಹಿಳೆಯರು ಬೇರೆಬೇರೆ ವಿಧಾನದಿಂದ ಅಮ್ಮ ಆಗುತ್ತಿದ್ದಾರೆ. ಅದಕ್ಕೆ ಸಮಾಜದ ಮನ್ನಣೆ ಸಿಗುತ್ತಿದೆ. ಕಾನೂನು ಒಪ್ಪುತ್ತಿದೆ. ಹೀಗಿರುವಾಗ ದಾಖಲೆಗಳಲ್ಲಿ ತಂದೆಯ ಅಥವಾ ಗಂಡನ ಹೆಸರು ಇರಬೇಕು ಎನ್ನುವುದೇ ಹಾಸ್ಯಾಸ್ಪದ.
ಕರ್ನಾಟಕ ದೇವದಾಸಿ (ಸಮರ್ಪಣಾ ನಿಷೇಧ) ಕಾಯಿದೆ-1982 ಅನ್ನು ಪುನರ್ ವಿಮರ್ಶೆ ಮಾಡಿ ಸಮರ್ಪಕವಾಗಿ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸಲು ನಡೆದ ಸಭೆಯಲ್ಲಿ ನೊಂದ ಮಹಿಳೆಯರು ಮತ್ತು ಬಾಲಕಿಯರು ಹೇಳಿದ ಮುಖ್ಯಾಂಶವೆಂದರೆ “ಶಾಲೆ ಓದಲು, ಆಧಾರ್ ಕಾರ್ಡ್ ಮಾಡಿಸಲು ಮತ್ತಿನ್ಯಾವುದೇ ದಾಖಲೆ ಮಾಡಿಸಲು ತಂದೆಯ ಹೆಸರನ್ನು ಹೇಳಲು ಒತ್ತಾಯ ಮಾಡುತ್ತಾರೆ ಇಲ್ಲದ, ಗೊತ್ತಿಲ್ಲದ ತಂದೆಯ ವಿವರವನ್ನು ಎಲ್ಲಿಂದ ತರುವುದು?” ಅಮ್ಮಂದಿರು
ದೇವದಾಸಿ ಪದ್ಧತಿಯಿಂದ ನೊಂದವರು ಎಂದು ತಿಳಿದರೂ ಅವರ ಗಂಡಂದಿರ ಮೂಲ ಕೇಳುತ್ತಾರೆ. ಇದೆಂತಹ ಸಂಧಿಗ್ಧ ಮತ್ತು ವ್ಯವಸ್ಥೆಯ ಕ್ರೂರತನ. ಗಂಡ ತೀರಿಕೊಂಡಾಕೆಗೆ, ಒಂಟಿ ಹೆಂಗಸಿಗೆ ಬದುಕುವ, ಆಸ್ತಿ ಹೊಂದುವ, ದತ್ತು ತೆಗೆದುಕೊಳ್ಳುವ ಹಕ್ಕು ಹೀಗೆ ಏನೆಲ್ಲಾ ರೀತಿಯ ನ್ಯಾಯಪಾಲು ಕೊಡಿಸಲು ಅದೆಷ್ಟು ಹೋರಾಟಗಳು ಆಗಿವೆ. ಪಾಸ್ಪೋರ್ಟಿನಲ್ಲಿ ತಾಯಿಯ ಹೆಸರು ಕಡ್ಡಾಯ ತಂದೆಯ ಹೆಸರು ಆಯ್ಕೆ ಎನ್ನುವ ನಿರ್ಧಾರಗಳೂ ಜಾರಿಗೆ ಬಂದಿದೆ. PAN ಕಾರ್ಡಿನಲ್ಲಿಯೂ ತಂದೆಯ ಹೆಸರು ಕಡ್ಡಾಯ ಅಲ್ಲ ಎನ್ನುವ ನಿರ್ದೇಶನಗಳೂ ಹೊರಬಂದಿವೆ. ಆದರೆ ಮಕ್ಕಳ ದಾಖಲೆಗಳಿಗೆ ತಂದೆಯ ಹೆಸರು ಬೇಕೇಬೇಕು ಎನ್ನುವ ಒತ್ತಾಯ, ವಿವಾಹಿತ ಮಹಿಳೆ ಎಂದ ಕೂಡಲೇ ಆಕೆಯ ಗಂಡನ ಹೆಸರನ್ನು ಜೊತೆಯಲ್ಲಿ ಸೇರಿಸಿ ಕರೆಯುವುದು ಬುದ್ಧಿದಾರಿದ್ರ್ಯ ಮಾತ್ರ. ಇದೆಲ್ಲವನ್ನು ಗಮನಿಸಿಯೇ 2015 ಜುಲೈ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ “ವಯಸ್ಕ ಹೆಂಗಸರ Identificationಗಾಗಿ ತಂದೆ ಅಥವಾ ಗಂಡನ ಹೆಸರುಇರಬೇಕು ಎನ್ನುವ ನಿಯಮ ಎಲ್ಲೂ ಇಲ್ಲ. ಇದೊಂದು ಬಂದಿರುವ ಅಲಿಖಿತ ನಿಯಮವಾಗಿಬಿಟ್ಟಿದೆ. ಕೆಲವು ದಾಖಲೆಗಳು ಆಗಬೇಕಾದಾಗ ತಿಳುವಳಿಕೆ ಇಲ್ಲದೆ ಸಂಸ್ಥೆಗಳಲ್ಲಿ ತಂದೆಯ ಅಥವಾ ಗಂಡನ ಹೆಸರಿಗಾಗಿ ಒತ್ತಾಯ ಹೇರುತ್ತಾರೆ. ಆದರೆ ಆಯ್ಕೆಯ ಸಾತಂತ್ರ್ಯ ಕಾನೂನಿನಲ್ಲಿ
ಖಂಡಿತಾ ಇದೆ. ಇತ್ತೀಚೆಗೆ ಕೆಲವು ಶಾಲಾ ಕಾಲೇಜು ಹಾಗು ಸಂಸ್ಥೆಗಳ ಅರ್ಜಿಯಲ್ಲಿ ಪ್ರಮುಖವಾಗಿ ತಾಯಿಯ ಹೆಸರನ್ನೇ ಕೇಳಲಾಗುತ್ತಿದೆ ಎನ್ನುವುದನ್ನೂ ಗಮನಿಸಬೇಕು. ನಮ್ಮನ್ನು ನಾವು ಹೇಗೆ ಮಾಡಿಕೊಳ್ಳಬೇಕೆನ್ನುವುದು ಸಂವಿಧಾನ ನೀಡಿದ ಹಕ್ಕು ಮತ್ತು ಆಯ್ಕೆ“ ಎಂದು ಹೇಳಿ ಮುಂದುವರೆದು, “ಸರ್ಕಾರದ ಜನ್ಮದಾಖಲೆ ನೀಡುವ ಅಧಿಕಾರಿಗಳು ತಾಯಿಯು ಇಚ್ಚಿಸಿದಲ್ಲಿ ಆಕೆಯ ಹೆಸರನ್ನು ಮಾತ್ರ ನಮೂದಿಸಿ ಜನ್ಮದಾಖಲೆಯನ್ನು ನೀಡಬೇಕು. ತಂದೆಯ ಹೆಸರಿಗಾಗಿ ಒತ್ತಾಯ ಮಾಡಬಾರದು, ಸರ್ಕಾರಗಳು ಇಲಾಖೆಗಳಿಗೆ ಸುತ್ತೋಲೆ ನೀಡಬೇಕು” ಎಂದು ಆದೇಶಿಸಿದೆ.
ಭ್ರೂಣ ಹತ್ಯೆ, ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಬಾಲ್ಯವಿವಾಹ, ಅಪೌಷ್ಟಿಕತೆ ಇವುಗಳ ಉನ್ನತೀಕರಣದ ಬಗ್ಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಹಾಕಿ, ಬಜೆಟ್ ಮಂಡಿಸುತ್ತದೆ ಆದರೆ ಅವುಗಳ ಫಲಾನುಭವಿಗಳು ಮುಂದೆಬರಲು ಇರುವ ತಾಂತ್ರಿಕ ತೊಡಕುಗಳನ್ನು ಸರಿಮಾಡುವತ್ತ ಸರ್ಕಾರ ನಿಗಾ ವಹಿಸಬೇಕು. ಅಲ್ಲಿಯವರೆಗೂ ನಾವು ಕೇಳುತ್ತಿರಬೇಕು. ಕೇಳುತ್ತಲೇ ಪಡೆದುಕೊಳ್ಳಬೇಕು.
-ಮಹಿಳೆ ಮತ್ತು ಮಕ್ಕಳ ಹಕ್ಕುಗಳ ವಕೀಲರು
ಮದುವೆ ಎನ್ನುವುದು ಎರಡು ಮನಸ್ಸುಗಳ ನಡುವಿನ ಬಂಧ. ಮದುವೆಯಾದ ತಕ್ಷಣ ಹೆಣ್ಣುಮಕ್ಕಳು ತಮ್ಮ ಮೂಲ ಹೆಸರನ್ನು ಬದಲಿಸಿಕೊಳ್ಳಲೇಬೇಕು ಎನ್ನುವುದು ಕಡ್ಡಾಯವಲ್ಲ ಎನ್ನುವುದು ನನ್ನ ಭಾವನೆ. ಅಲ್ಲದೆ ಇಂದಿನ ಕಾಲದಲ್ಲಿ ಹೆಣ್ಣುಮಕ್ಕಳು ಉದ್ಯೋಗ, ಓದು ಎಂದು ಹಲವೆಡೆ ತೊಡಗಿಸಿಕೊಂಡಿರುತ್ತಾರೆ. ಹೀಗಿದ್ದಾಗ ಹೆಸರು ಬದಲಾವಣೆ ಮಾಡಬೇಕೆಂದರೆ ಕಾನೂನಿನ ಮೂಲಕವೇ ಆಗಬೇಕು. ಅದಕ್ಕೆ ಅಫಿಡವಿಟ್, ಪತ್ರಿಕೆಗಳಲ್ಲಿ ಪ್ರಕಟಣೆ ಹೀಗೆ ಹಲವು ಕಾಯಿದೆಗಳಿವೆ. ಅಲ್ಲದೆ ಪತಿಯ ಹೆಸರನ್ನು ಹೆಂಡತಿಯ ಹೆಸರಿನೊಂದಿಗೆ ಸೇರಿಸದೆ ಹೇಳಿದಾಕ್ಷಣ ಸಂಬಂಧಗಳಲ್ಲಿ ಯಾವ ಬದಲಾವಣೆಯಾಗುವುದಿಲ್ಲ. ಗಂಡನ ಮೇಲಿನ ಗೌರವವೂ ಕಡಿಮೆಯಾಗದು. ಹೆಸರು ಪ್ರತಿಯೊಬ್ಬರ ಸ್ವಾತಂತ್ರ್ಯ. ಅದು ಅವರ ಗುರುತು ಕೂಡ.-ವಿಜಯಾ ಹೆಗಡೆ (ವಾಸ್ತುಶಿಲ್ಪ ಸಂಶೋಧನಾ ವಿದ್ಯಾರ್ಥಿನಿ, ಗೃಹಿಣಿ)
ಗಂಡನ ಹೆಸರು ತನ್ನ ಹೆಸರಿನೊಂದಿಗೆ ಪತ್ನಿ ಸೇರಿಸಿಕೊಳ್ಳುವುದು ಇಂದು ಅನಿವಾರ್ಯವಲ್ಲ. ಇಬ್ಬರೂ ತಮ್ಮದೇ ಬೇರೆ ಬೇರೆ ಹೆಸರಿನಿಂದ ಸಮಾಜದಲ್ಲಿ ಗುರುತಿಸಿಕೊಂಡರೆ ತಪ್ಪೇನೂ ಇಲ್ಲ. ಒಳಿತಿದ್ದರೆ ಒಳಿತು, ಕೆಡುಕಿದ್ದರೆ ಕೆಡುಕು, ಯಾರು ಏನು ಮಾಡಿದ್ದಾರೋ ಅದನ್ನೇ ಪಡೆಯುತ್ತಾರೆ. ಗಂಡನ ಹೆಸರಿನಿಂದಲೇ ಹೆಂಡತಿ ಬಿಂಬಿತವಾಗಬೇಕಿಲ್ಲ. ಅವಳಿಗೂ ಅವಳದೇ ಸ್ವಂತ ಹೆಸರು ಮಾಡುವುದು ಮತ್ತು ಅದರಿಂದಲೇ ನಾಲ್ಕು ಜನರಲ್ಲಿ ಗುರುತಿಸಿಕೊಳ್ಳುವುದು ಆಕೆಯ ಸ್ವಾತಂತ್ರ್ಯ ಮಾತ್ರವಲ್ಲ, ಹಕ್ಕು ಕೂಡ.-ಸುಮಾ. ಕಂಚೀಪಾಲ್ (ಬರಹಗಾರ್ತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.