ADVERTISEMENT

ಭಾರತದ ವಾಕ್‌ ಚತುರೆ

ನೀಳಾ ಎಂ.ಎಚ್
Published 6 ಮಾರ್ಚ್ 2021, 19:30 IST
Last Updated 6 ಮಾರ್ಚ್ 2021, 19:30 IST
ಜಾಹ್ನವಿ ಪನ್ವಾರ್‌
ಜಾಹ್ನವಿ ಪನ್ವಾರ್‌   

ದೆಹಲಿಯ ಕೆಂಪುಕೋಟೆಯಲ್ಲಿ ಪುಟ್ಟ ಮಗಳ ಕೈಹಿಡಿದು ಸಾಗುತ್ತಿದ್ದ ಅಪ್ಪ, ಬದಿಯಲ್ಲಿ ಕಂಡ ವಿದೇಶಿ ಪ್ರವಾಸಿಗರನ್ನು ಕುತೂಹಲದಿಂದ ಮಾತಿಗೆಳೆಯುತ್ತಾನೆ. ಆ ‘ಹೊಸ ಮನುಷ್ಯ’ರನ್ನೇ ಎವೆಯಿಕ್ಕದೆ ದಿಟ್ಟಿಸುತ್ತಿದ್ದ ಮಗಳು, ಅವರು ಅತ್ತ ಹೋದಕೂಡಲೆ, ಆವರೆಗೂ ಅವರಾಡುತ್ತಿದ್ದ ಮಾತುಗಳನ್ನು ಡಿಟ್ಟೊ ಅವರದೇ ಶೈಲಿಯಲ್ಲಿ ಮರುನುಡಿಯುತ್ತಾಳೆ. ಇದನ್ನು ಕೇಳಿದ ಅಪ್ಪ ಬೆಕ್ಕಸಬೆರಗಾಗುತ್ತಾನೆ. ಮನೆಗೆ ಬಂದು, ಬೇಕೆಂದೇ ವಿದೇಶಿ ಭಾಷೆಯ ಆಡಿಯೊವೊಂದನ್ನು ಮಗಳಿಗೆ ಕೇಳಿಸುತ್ತಾನೆ. ಅದನ್ನೂ ಅವಳು ಅದೇ ಉಚ್ಚಾರಣಾ ಶೈಲಿಯಲ್ಲಿ ಯಥಾವತ್‌ ಒಪ್ಪಿಸುತ್ತಾಳೆ. ಅವನಿಗಾಗ ಮನದಟ್ಟಾಗುತ್ತದೆ. ಮಗಳ ಅಗಾಧ ಪ್ರತಿಭೆಗೆ ನೀರೆರೆಯುವ ದೃಢ ಸಂಕಲ್ಪ ಅಪ್ಪನ ಮನಸ್ಸಿನಲ್ಲಿ ಹರಳುಗಟ್ಟಿದರೆ, ಅದಕ್ಕೆ ತಕ್ಕಂತೆ, ಮಗಳಲ್ಲಿ ಸುಪ್ತವಾಗಿದ್ದ ಕಲಿಕೆಯ ಹಸಿವು ಭುಗಿಲೇಳುತ್ತದೆ.

ವಿದೇಶಿ ಭಾಷೆಗಳ ವಿಡಿಯೊ ತುಣುಕುಗಳ ರಾಶಿಯನ್ನೇ ಅಪ್ಪ ತನ್ನ ಮಗಳ ಮುಂದಿರಿಸುತ್ತಾನೆ. ಬಿಬಿಸಿ, ಸಿಎನ್‌ಎನ್‌ ವಾರ್ತಾ ಸಂಚಿಕೆಗಳನ್ನು ಆಲಿಸುವುದು ನಿತ್ಯದ ರೂಢಿಯಾಗುತ್ತದೆ. ಅವುಗಳ ಬ್ರಿಟನ್‌ ಮತ್ತು ಅಮೆರಿಕನ್‌ ಶೈಲಿಯ ಭಿನ್ನ ಉಚ್ಚಾರಣೆ ಕರಗತವಾದಂತೆಲ್ಲಾ ಇಂಗ್ಲಿಷ್‌ ಭಾಷೆಯ ಬೇರೆ ಬೇರೆ ಶೈಲಿಗಳ ಬೆನ್ನುಹತ್ತುವ ಅವಳಿಗೆ, ಭಾಷೆಯ ಸೊಗಡಿನ ರುಚಿ ಹತ್ತುತ್ತದೆ. ಅದೇ ಜಾಡು ಹಿಡಿದು ಹೊರಟಾಗ ಭಾಷಾ ಲೋಕದ ಬೆರಗಿನ ಲೋಕವೇ ತೆರೆದುಕೊಳ್ಳುತ್ತದೆ. ಅನ್ಯಭಾಷೆಗಳನ್ನು ಹೇಗಾದರೂ ಒಲಿಸಿಕೊಳ್ಳಬೇಕೆಂಬ ಅವಳ ಬಯಕೆಗೆ ಯುಟ್ಯೂಬ್‌ ವಿಡಿಯೊಗಳು ಸಾಥ್‌ ನೀಡುತ್ತವೆ. ಸ್ವಪ್ರಯತ್ನದಿಂದಲೇ ಅವುಗಳ ಮೇಲೆ ಹಿಡಿತ ಸಾಧಿಸಿ, ಬಗೆಬಗೆಯ ಭಾಷೆಗಳ ಲಾಲಿತ್ಯದಿಂದ ಕೇಳುಗರನ್ನು ನಿಬ್ಬೆರಗಾಗಿಸುವ ಜಾಹ್ನವಿ ಪನ್ವಾರ್‌ ಇಂದು ‘ಭಾರತದ ಅದ್ಭುತ ಬಾಲಕಿ’!

ಇಂಗ್ಲಿಷ್‌ ಭಾಷೆ ನಮ್ಮ ಎಷ್ಟೋ ಗ್ರಾಮೀಣ ಪ್ರತಿಭೆಗಳಿಗೆ ಕಬ್ಬಿಣದ ಕಡಲೆ. ಇದೇ ಕಾರಣಕ್ಕೆ ಅವರು ಅವಕಾಶ ವಂಚಿತರಾಗುತ್ತಿರುವಾಗ, ಜಾಹ್ನವಿ ಒಂದಲ್ಲ, ಎರಡಲ್ಲ 9 ವಿಭಿನ್ನ ಶೈಲಿಗಳಲ್ಲಿ ಇಂಗ್ಲಿಷ್‌ ಭಾಷೆಯನ್ನು ಅರಳು ಹುರಿದಂತೆ ಪಟಪಟನೆ ಮಾತನಾಡುತ್ತಾಳೆ. ಅದರ ಜೊತೆಗೆ ಹಿಂದಿ, ಹರಿಯಾಣವಿ, ಜಪಾನಿ, ಫ್ರೆಂಚ್‌ ಭಾಷೆಗಳೂ ಆಕೆಗೆ ನಿರರ್ಗಳ. ಹಾಗೆಂದ ಮಾತ್ರಕ್ಕೆ ಅವಳು ಯಾವುದೋ ಮೆಟ್ರೊಪಾಲಿಟನ್‌ ಸಿಟಿಯ ‘ಕಾನ್ವೆಂಟ್‌ ಕಿಡ್‌’ ಅಲ್ಲ. ಅವಳೂ ಅಪ್ಪಟ ಹಳ್ಳಿಸೊಗಡಿನ ಹೆಣ್ಣುಮಗಳೇ.

ADVERTISEMENT

ಹರಿಯಾಣದ ಮಾಲ್ಪುರ ಎಂಬ ಹಳ್ಳಿಯವಳಾದ ಜಾಹ್ನವಿಯ ಅಪ್ಪ– ಅಮ್ಮನಿಗೆ ಇಂಗ್ಲಿಷ್‌ ಬಾರದು. ಅಪ್ಪ ಶಿಕ್ಷಕರಾಗಿದ್ದರೂ ಹಿಂದಿ ಮತ್ತು ಹರಿಯಾಣವಿಯಲ್ಲಷ್ಟೇ ಅವರಿಗೆ ಪರಿಣತಿ. ಗೃಹಿಣಿ ಅಮ್ಮನಿಗೂ ಇಂಗ್ಲಿಷ್‌ ಬರುವುದು ಅಷ್ಟಕ್ಕಷ್ಟೆ. ಅಷ್ಟೇ ಏಕೆ, ಆಕೆ ಓದಿದ ಶಾಲೆಯಲ್ಲೂ ಇಂಗ್ಲಿಷ್‌ ವಾತಾವರಣ ಇರಲಿಲ್ಲ. ಆದರೂ ಒಂದು ವರ್ಷದವಳಿದ್ದಾಗಲೇ ಸುಮಾರು 500 ಇಂಗ್ಲಿಷ್‌ ಪದಗಳನ್ನು ಆಕೆ ಸರಾಗವಾಗಿ ಉಚ್ಚರಿಸುತ್ತಿದ್ದಳು. ಗೊಂಬೆಯಾಟಕ್ಕಿಂತ ಪ್ರಾಣಿ– ಪಕ್ಷಿಗಳ ಚಿತ್ರ ನೋಡುವುದು, ಪಜಲ್‌ ಬಿಡಿಸುವುದೇ ಜಾಹ್ನವಿಗೆ ಅಚ್ಚುಮೆಚ್ಚು. ಅವಳ ಅಗಾಧ ಸಾಮರ್ಥ್ಯ, ಅಪರಿಮಿತ ನೆನಪಿನ ಶಕ್ತಿಗೆ ಮನ್ನಣೆ ನೀಡುವ ಶಾಲಾ ಆಡಳಿತ ಮಂಡಳಿ, ಮೂರನೇ ವಯಸ್ಸಿಗೇ ಆಕೆಗೆ ಯುಕೆಜಿಗೆ ಪ್ರವೇಶ ನೀಡುತ್ತದೆ. ಒಂದೇ ಬಾರಿಗೆ ಎರಡೆರಡು ತರಗತಿಗಳ ಪರೀಕ್ಷೆ ಬರೆಯಲು ವಿಶೇಷ ಅನುಮತಿ ದೊರೆಯುತ್ತದೆ. ಅದರಂತೆ 7ನೇ ವಯಸ್ಸಿಗೇ 8ನೇ ತರಗತಿ ಪ್ರವೇಶಿಸುವ ಜಾಹ್ನವಿ, ತನ್ನ ವಯಸ್ಸಿನ ಮಕ್ಕಳು 8ನೇ ತರಗತಿ ಓದುತ್ತಿರುವ ಹೊತ್ತಿಗಾಗಲೇ ದೆಹಲಿ ವಿಶ್ವವಿದ್ಯಾಲಯದ ಸತ್ಯವತಿ ಕಾಲೇಜಿನಲ್ಲಿ ಕಲಾ ವಿಭಾಗದ ಪದವಿ ತರಗತಿಯ ವಿದ್ಯಾರ್ಥಿನಿಯಾಗುತ್ತಾಳೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಐಐಟಿ– ಜೆಇಇ ಪ್ರವೇಶ ಪರೀಕ್ಷೆಗೆ ಸಜ್ಜುಗೊಳಿಸುವ ಆನಂದ್‌ ಕುಮಾರ್‌ ಅವರ ‘ಸೂಪರ್‌ 30’ ತರಬೇತಿಗೆ, ಅರ್ಹತಾ ಪರೀಕ್ಷೆಯನ್ನೇ ಬರೆಯದೆ ಆಯ್ಕೆಯಾಗಲು ಭಾಷಾ ಪ್ರೌಢಿಮೆಯೊಂದೇ ಆಕೆಗೆ ಸಾಕಾಗುತ್ತದೆ.

ಈಗ 17 ವರ್ಷದವಳಾಗಿರುವ ಜಾಹ್ನವಿಯ ಸ್ಫೂರ್ತಿದಾಯಕ ಭಾಷಣಗಳು ದೇಶದಾದ್ಯಂತ ಹಲವಾರು ಶಿಕ್ಷಣ ಸಂಸ್ಥೆಗಳಲ್ಲಿ, ಐಎಎಸ್‌ ತರಬೇತಿ ಅಕಾಡೆಮಿಗಳಲ್ಲಿ ಚಿರಪರಿಚಿತ. ತನ್ನದೇ ಯುಟ್ಯೂಬ್‌ ಚಾನೆಲ್‌ನಲ್ಲಿ ತನ್ನ ಅಸ್ಖಲಿತ ಇಂಗ್ಲಿಷ್‌ ಹಾಗೂ ವಿದೇಶಿ ಭಾಷೆಗಳ ಮೇಲಿನ ಹಿಡಿತದ ರಹಸ್ಯವನ್ನು ಆಕೆ ತೆರೆದಿಟ್ಟಿದ್ದಾಳೆ. ಟಿ.ವಿ ಮುಂದೆ ಕುಳಿತು ವಾರ್ತಾ ವಾಚಕರ ಉಚ್ಚಾರಣಾ ಶೈಲಿಯನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ಅದೇ ಬಿಬಿಸಿ ಚಾನೆಲ್‌ ಆಕೆಯ ಸಂದರ್ಶನವನ್ನು ಪ್ರಸಾರ ಮಾಡಿದೆ. ಐಎಎಸ್‌ ಆಕಾಂಕ್ಷಿಗಳಿಗೆ ತನ್ನ ಭಾಷಣಗಳ ಮೂಲಕ ಪ್ರೇರಣೆ ನೀಡುವ ಜಾಹ್ನವಿಗೆ ಮುಂದೊಂದು ದಿನ ತಾನೂ ಆ ಪರೀಕ್ಷೆ ಪಾಸು ಮಾಡುವ, ಬಿಬಿಸಿ ವಾರ್ತಾ ವಾಚಕಿಯಾಗುವ ಮಹತ್ವಾಕಾಂಕ್ಷೆ ಇದೆ.

‘ನನ್ನ ಪತ್ನಿ ಗರ್ಭಿಣಿಯಾಗಿದ್ದಾಗ, ಸಾಮಾನ್ಯವಾಗಿ ಎಲ್ಲರೂ ಬಯಸುವಂತೆ ನಮ್ಮ ಮನೆಯಲ್ಲೂ ಗಂಡು ಮಗುವಾಗಲಿ ಎಂಬ ಅಪೇಕ್ಷೆ ಇತ್ತು. ಆದರೆ ಮಗಳು ಹುಟ್ಟಿದಾಗ ನಾನು ಅಷ್ಟೇ ಸಂಭ್ರಮದಿಂದ ಬರಮಾಡಿಕೊಂಡೆ. ಅವಳು ಮೊದಲಿನಿಂದಲೂ ನನ್ನ ಹೆಮ್ಮೆಯ ಪುತ್ರಿಯಾಗಿಯೇ ಬೆಳೆದಳು’ ಎನ್ನುತ್ತಾರೆ ಜಾಹ್ನವಿಯ ತಂದೆ ಬ್ರಿಜ್‌ಮೋಹನ್‌ ಪನ್ವಾರ್‌.

‘ನಮಗೆ ಎಷ್ಟೇ ಸಮಯದ ಅಭಾವ ಇದ್ದರೂ ಮಕ್ಕಳಿಗೆ ನಾವು ಒಂದಷ್ಟು ಸಮಯವನ್ನು ಕೊಡಲೇಬೇಕು. ಅವರು ಓದುವುದರಲ್ಲಿ ಮುಂದೆ ಇರಲಿ ಅಥವಾ ಇಲ್ಲದಿರಲಿ ಅವರಲ್ಲಿ ನಂಬಿಕೆ ಇಟ್ಟು ಅವರ ಕನಸುಗಳ ಸಾಕಾರಕ್ಕೆ ಪ್ರೋತ್ಸಾಹಿಸುವುದು ಅತ್ಯಂತ ಮುಖ್ಯ. ಅದರಲ್ಲೂ ಹೆಣ್ಣುಮಕ್ಕಳು ಯಾವುದರಲ್ಲೂ ಗಂಡುಮಕ್ಕಳಿಗಿಂತ ಕಡಿಮೆಯಿಲ್ಲ’ ಎನ್ನುವ ಅವರ ಮಾತು, ದಿನನಿತ್ಯದ ಜಂಜಡಗಳಲ್ಲಿ ಕಳೆದುಹೋಗುತ್ತಿರುವವರಿಗೆ, ಹೆಣ್ಣುಮಕ್ಕಳನ್ನು ತಾತ್ಸಾರದಿಂದ ಕಾಣುವವರಿಗೆ ಚಾಟಿ ಏಟಿನಂತೆ ಭಾಸವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.