ADVERTISEMENT

ಅವಳಿಗೂ ಬೇಕು ‘ಮೀ ಟೈಮ್’...

ಅಸ್ಮಿತಾ
Published 6 ಅಕ್ಟೋಬರ್ 2023, 23:30 IST
Last Updated 6 ಅಕ್ಟೋಬರ್ 2023, 23:30 IST
   

‘ನನ್ನ ಜೀವನವಂತೂ ಬೆಳಗಿನ ಟೀ, ರಾತ್ರಿಯ ಹಾಲಿನ ನಡುವೆ ಸಿಲುಕಿಕೊಂಡಿದೆ. ಹಾಗೆಂದು ಮನಸಿನಲ್ಲಿ ಅಂದುಕೊಂಡ ಮರುಕ್ಷಣವೇ, ‘ಸುಖೀ... ನನ್ನ ಅಂಡರ್‌ವೇರ್ ಸಿಕ್ತಾ ಇಲ್ಲ’ ಅನ್ನುವ ಗಂಡನ ಕೂಗು ಅವಳನ್ನು ಎಚ್ಚರಿಸುತ್ತದೆ. ಶಾಲಾ ಗೆಳತಿಯರ ರೀ–ಯೂನಿಯನ್ ಮೆಸೇಜ್ ಬಂದದ್ದೇ ತಡ ಮತ್ತೆ ಅವಳೊಳಗೆ ಸಂಚಲನ ಸೃಷ್ಟಿ. ಅಂತೂ ಧೈರ್ಯ ಮಾಡಿ ಗಂಡನ ಬಳಿ, ರೀ–ಯೂನಿಯನ್‌ಗೆ ಹೋಗಲು ಅನುಮತಿ ಕೇಳಿದ್ದೇ ತಡ, ಗಂಡನಿಂದ ‘ಎಂಥಾ ತಾಯಿ ನೀನು. ಇನ್ನೆರಡು ತಿಂಗಳಲ್ಲಿ ಮಕ್ಕಳ ಬೋರ್ಡ್ ಪರೀಕ್ಷೆ ಇದೆ. ಅಂಥದ್ದರಲ್ಲಿ ಮಜಾ ಮಾಡೋಕೆ ಹೋಗ್ತೀನಿ ಅಂತೀಯಾಲ್ಲ. ಇಷ್ಟೊಂದು ಸ್ವಾರ್ಥಿ ನೀ ಯಾವಾಗ ಆದಿ’ ಎಂಬ ನುಡಿಗಳು ಅವಳತ್ತ ನುಗ್ಗಿ ಬರುತ್ತವೆ.

‘ನನ್ನ ಜೀವನದಿಂದ ಕೆಲ ಸಮಯವನ್ನಷ್ಟೇ ಬ್ರೇಕ್ ತೆಗೆದುಕೊಳ್ಳೋದು ತಪ್ಪಾ’ ಎನ್ನುವ ತನ್ನ ಪ್ರಶ್ನೆಗೆ ಅವಳೇ ಉತ್ತರವನ್ನೂ ಕಂಡುಕೊಳ್ಳುತ್ತಾಳೆ. ನಟಿ ಶಿಲ್ಪಾಶೆಟ್ಟಿ ಅಭಿನಯದ ‘ಸುಖೀ’ ಚಿತ್ರದ ಟ್ರೈಲರ್ ಬಹುತೇಕ ಮಹಿಳೆಯರ ಜೀವನದ ಪ್ರತಿಬಿಂಬದಂತಿದೆ. ಸಿನಿಮಾದಲ್ಲಿ ಶಿಲ್ಪಾಳಂತೆ ಮಹಿಳೆಯರು ತಮ್ಮ ನಿಜಜೀವನದಿಂದ ಗೃಹಕೃತ್ಯಗಳಿಂದ ಆಗಾಗ ಬ್ರೇಕ್ ತೆಗೆದುಕೊಳ್ಳಲು ಸಾಧ್ಯವೋ ಇಲ್ಲವೋ ಗೊತ್ತಿಲ್ಲ. ಆದರೆ, ಖಂಡಿತವಾಗಿ ಅವರಿಗಾಗಿಯೇ ‘ಮೀ ಟೈಮ್’ ಅಂತೂ ಬೇಕು.

ಗಂಡ, ಮಕ್ಕಳು, ಮನೆ, ಉದ್ಯೋಗಸ್ಥೆಯಾಗಿದ್ದರೆ ಕಚೇರಿ ಈ ನಾಲ್ಕರ ಚೌಕಟ್ಟಿನೊಳಗೆ ದುಡಿಯುವ ಮಹಿಳೆ ತನಗಾಗಿ ಅಂತ ಸಮಯ ಮಿಗಿಸಿಕೊಳ್ಳುವುದು ಅಪರೂಪವೇ. ನಿತ್ಯವೂ ಗಾಣದೆತ್ತಿನಂತೆ ದುಡಿಯುವ ಅವಳ ಹವ್ಯಾಸ, ಆಸೆ, ಅಭಿರುಚಿ, ಫ್ಯಾಷನ್–ಪ್ಯಾಷನ್ ಎಲ್ಲವೂ ನೇಪಥ್ಯದ ಪರದೆಯೊಳಗೆ ಅಡಗಿಬಿಡುತ್ತವೆ. ಹೀಗೆ ಅಡಗಿಕುಳಿತ ಅವಳೊಳಗಿನ ಅವಳನ್ನೇ ಪ್ರೀತಿಸಲು, ಸಮಾಧಾನಿಸಲು, ಸಾಂತ್ವನ ಹೇಳಿಕೊಳ್ಳಲೆಂದೇ ‘ಮೀ ಟೈಮ್ ಅಗತ್ಯ.

ADVERTISEMENT

ತಿಂಗಳ ತನ್ನ ದುಡಿಮೆಯಲ್ಲೋ ಅಥವಾ ಗಂಡನ ದುಡಿಮೆಯಲ್ಲೋ ಸಾಸಿವೆ ಡಬ್ಬಿಯೊಳಗೆ ಕಾಸು ಕೂಡಿಡುವಷ್ಟೇ ಮಹತ್ವ ಈ ಮೀ ಟೈಮ್‌ದ್ದು. ಬರೀ ತನಗಾಗಿ, ತನ್ನ ದೈಹಿಕ– ಮಾನಸಿಕ ಆರೋಗ್ಯ, ಮನಸ್ಸಂತೋಷಕ್ಕಾಗಿ, ಕೆಲವೊಮ್ಮ ಏಕಾಂತದ ಸಾಂಗತ್ಯಕ್ಕಾಗಿ ಮತ್ತೆ ಕೆಲವೊಮ್ಮೆ ತನ್ನಿಷ್ಟದ ಹೋಟೆಲ್ಲೋ, ಸಿನಿಮಾವೋ, ಪಾರ್ಕೋ, ಮಾಲ್ ಹೀಗೆ ಏನೇ ಆಗಿರಲಿ ಅಲ್ಲಿಗೆ ಹೋಗಿ ತುಸು ಸಮಯ ಕಳೆದು ರಿಲ್ಯಾಕ್ಸ್ ಆಗಲಿಕ್ಕಾದರೂ ಅವಳಿಗೆ ಅವಳದ್ದೇ ಆದ ಸಮಯ ಬೇಕು. ಅಲ್ಲಿ ನಿತ್ಯದ ಅಡುಗೆ ಜಂಜಾಟ, ಕಸಗುಡಿಸು, ನೆಲ ಒರೆಸು, ಪಾತ್ರೆ, ಬಟ್ಟೆ, ಹಿರಿಯರ– ಮಕ್ಕಳ ಆರೈಕೆ... ಹೀಗೆ ಎಲ್ಲಂದರಿಂದಲೂ ತುಸು ದೂರ ಸಾಗಿ ಅವಳು ತನಗಾಗಿ ಕಾಪಿಟ್ಟುಕೊಳ್ಳುವಂಥ  ‘ಮೀ ಟೈಮ್‌’ ಅವಳನಲ್ಲಿ  ನವ ಚೈತನ್ಯ ಮೂಡಿಸದೇ ಇರದು. 

ಗೃಹಿಣಿಯಾಗಿರಲಿ, ಉದ್ಯೋಗಸ್ಥೆಯಾಗಿರಲಿ ಅವಳಿಗಾಗಿ ‘ಮೀ ಟೈಮ್’ ಕಂಡುಕೊಳ್ಳುವುದು ಅವಳ ದೈಹಿಕ–ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು ಅನ್ನುತ್ತಾರೆ ಮನೋವೈದ್ಯರು.

ಮಗಳು, ಹೆಂಡತಿ, ತಾಯಿ, ಉದ್ಯೋಗಸ್ಥೆ... ಹೀಗೆ ಹಲವು ಪಾತ್ರಗಳನ್ನು ನಿಭಾಯಿಸುವ ಮಹಿಳೆ, ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಒತ್ತಡಕ್ಕೀಡಾಗುತ್ತಿದ್ದಾಳೆ. ‘ಮೀ ಟೈಮ್’  ಅವಳೊಳಗಿನ ಶಕ್ತಿಯ ಪುನರ್ ನವೀಕರಣಕ್ಕೆ ಪೂರಕವಾಗಬಲ್ಲದು ಎನ್ನುತ್ತಾರೆ ಮಹಿಳೆಯರ ಕುರಿತಂತೆ ಅಧ್ಯಯನ ನೆಡಸಿರುವ ವೇಲ್ಯಾಂಡ್‌ನ ಮನೋತಜ್ಞ ರಾಂಡಿ ಕಾಮೆನ್ ಗ್ರೆಡಿಂಗರ್.

ಗಂಡ ಉದ್ಯೋಗಕ್ಕೆ, ಮಕ್ಕಳು ಶಾಲೆಗೆ ಹೋದ ಮೇಲೆ ಮನೆಯಲ್ಲಿ ಹೆಂಗಸರಿಗೇನು ಕೆಲಸ? ಆರಾಮವಾಗಿ ಟಿ.ವಿನೋ, ಮೊಬೈಲೋ ನೋಡಿಕೊಂಡು ಇರ್ತಾರೆ. ಆದರೆ, ಗೃಹಕೃತ್ಯಗಳದ್ದು ಎಷ್ಟು ಮುಗಿಸಿದರೂ ಮುಗಿಯದ ಕೆಲಸ ಎನ್ನುವುದನ್ನು ಹೀಗೆ ಹೇಳುವವರು ಮರೆತುಬಿಡುತ್ತಾರೆ. ಒಂದು ಕೆಲಸ ಮುಗಿಯುತ್ತಿದ್ದಂತೆಯೇ ಮತ್ತಷ್ಟು ಕೆಲಸಗಳು ಗೃಹಿಣಿಗೆ ಸಾಲಾಗಿ ಮೆರವಣಿಗೆಯಂತೆ ಕಾದಿರುತ್ತವೆ. ಅದರಲ್ಲೂ ಉದ್ಯೋಗಸ್ಥೆ ಮಹಿಳೆಯರದ್ದು ಡಬಲ್ ರೋಲ್. ಕಚೇರಿಯ ನಿತ್ಯವಿದ್ಯಮಾನಗಳಲ್ಲಿ ಅಪ್‌ಡೇಟ್ ಆಗುತ್ತಲೇ ಇತ್ತ ಮನೆವಾರ್ತೆಗಳನ್ನೂ ನಿಭಾಯಿಸಬೇಕು. ಎರಡೂ ಕೆಲಸಗಳಲ್ಲೂ ಗುಣಮಟ್ಟಕ್ಕೆ ರಾಜಿಯಾಗದ ಅವಳ ಮೇಲೆ ಒತ್ತಡದ ತೂಗುಕತ್ತಿ ತೂಗುತ್ತಲೇ ಇರುತ್ತದೆ. ಅವಳು ದಿನದಲ್ಲಿ 30 ನಿಮಿಷವೋ, ವಾರಾಂತ್ಯದಲ್ಲಿ ಒಂದು ದಿನವೋ, ತಿಂಗಳಲ್ಲಿ ಒಂದೆರಡು ದಿನವಾದರೂ ತನ್ನೆಡೆಗೆ ಗಮನ ಹರಿಸಿಕೊಳ್ಳಬೇಕಾಗಿರುವುದು ಅಗತ್ಯ. ನಿಮಗಾಗಿ ನೀವು ಕೊಟ್ಟುಕೊಳ್ಳುವ ‘ಮೀ ಟೈಮ್’ ನಿಮ್ಮ ಜೀವನಪ್ರೀತಿಯನ್ನು ಮತ್ತಷ್ಟು ಹೆಚ್ಚಿಸಬಲ್ಲದು. ಹಾಗಾದರೆ ಇನ್ನೇಕೆ ತಡ? ನಿಮಗಾಗಿ ಸಮಯ ಹೊಂದಿಸಿಕೊಳ್ಳಲು ರೆಡಿನಾ?

ಯಾಕೆ ಬೇಕು ನಿಮಗಾಗಿ ಈ ಸಮಯ?

ನಿಮ್ಮನ್ನು ನೀವು ದೈಹಿಕ–ಮಾನಸಿಕವಾಗಿ ಅವಲೋಕನ ಮಾಡಿಕೊಳ್ಳಲು ‘ಮಿ’ ಟೈಮ್ ಅತ್ಯಗತ್ಯ. ಇಷ್ಟು ದಿನ ದಣಿವರಿಯದೇ ದುಡಿದ ನಿಮ್ಮ ಮೈ–ಮನಕ್ಕೆ ತುಸು ವಿಶ್ರಾಂತಿ ದೊರೆತರೆ ದೇಹ ತನ್ನಿಂತಾನೆ ಚೈತನ್ಯಭರಿತವಾಗುತ್ತದೆ. ಕುಟುಂಬ ಸದಸ್ಯರು, ಮನೆಕೆಲಸ, ಕಚೇರಿಯ ಕೆಲಸದಲ್ಲಿ ಕಳೆದುಹೋಗಿರುವ ನಿಮ್ಮೊಳಗಿನ ನಿಮ್ಮನ್ನು ಕಂಡುಕೊಳ್ಳಲು ಇಂಥ ಸಮಯ ಸಹಕಾರಿಯಾಗಬಲ್ಲದು. ‘ಮಿ’ ಟೈಮ್ ಅನ್ನುವಂಥದ್ದು ನಿಮಗಾಗಿ ನೀವೇ ಕೊಟ್ಟುಕೊಳ್ಳುವ ಕ್ವಾಲಿಟಿ ಟೈಮ್. ‌

ಮನಸಿನಲ್ಲಿ ಉತ್ಸಾಹವಿದ್ದರೂ ದೇಹ ದಣಿದಿದ್ದರೆ ನೀವು ಮಾಡಬೇಕಾದ ಕೆಲಸಗಳು ಬಾಕಿ ಉಳಿಯುತ್ತವೆ. ಜತೆಗೆ ಒತ್ತಡವೂ ಸೇರಿಕೊಂಡು ನಿಮ್ಮ ಉತ್ಸಾಹಕ್ಕೆ ತಣ್ಣೀರೆರಚಹುದು. ಹಾಗಾಗಿ, ಮೈ–ಮನಸು  ಎರಡೂ ಪರಸ್ಪರ ಬೆರೆಯಲು ‘ಮಿ’ ಟೈಮ್ ಸಹಕಾರಿಯಾಗಬಲ್ಲದು. ಮನೆ/ಕಚೇರಿಗಳಲ್ಲಿ ನಿಮ್ಮ ಉತ್ಪಾದಕತೆಯ ಗುಣಮಟ್ಟ ಹೆಚ್ಚಳಕ್ಕೂ ಇದು ಅಗತ್ಯ. 

‘ಮಿ’ ಟೈಮ್‌ನಲ್ಲಿ ಏನೇನು ಮಾಡಬಹುದು?

ಒಬ್ಬರ ‘ಮಿ’ ಟೈಮ್ ಮತ್ತೊಬ್ಬರಿಗಿಂತ ಭಿನ್ನವಾಗಿರಬಹುದು. ಇಷ್ಟವಾದ ಪುಸ್ತಕ ಓದುವುದು, ಸಂಗೀತ ಕೇಳು ಇಲ್ಲವೇ ಹಾಡುವುದು, ಸಿನಿಮಾ ನೋಡುವುದು, ವಾಕಿಂಗ್ ಹೋಗುವುದು, ದೀರ್ಘ ಸ್ನಾನ, ಬ್ಯೂಟಿಪಾರ್ಲರ್‌ಗೆ ಹೋಗು ವುದು, ಮನೆಯಲ್ಲೇ ಫೇಸ್ ಪ್ಯಾಕ್ ಹಾಕಿಕೊಳ್ಳುವುದು, ಇಷ್ಟದ ನೇಲ್ ಪಾಲಿಷ್ ಹಚ್ಚಿಕೊಳ್ಳುವುದು, ಸ್ನೇಹಿತ ರೊಂದಿಗೆ ಸಮಯ ಕಳೆಯುವುದು, ಪೇಂಟಿಂಗ್ ಮಾಡು ವುದು, ನಿಮ್ಮ ಪುಟ್ಟ ಉದ್ಯಾನದಲ್ಲಿ ನಿರಾಳವಾಗಿ ಕುಳಿತು ಒಂದು ಕಪ್ ಚಹಾನೋ, ಕಾಫಿಯನ್ನೋ ಕುಡಿಯವುದು, ಇದ್ಯಾವುದು ಅಲ್ಲದಿದ್ದರೂ ಒಳ್ಳೆಯ ನಿದ್ದೆ ಮಾಡುವುದು ಕೂಡಾ ದೇಹ–ಮನಸಿನ ಉತ್ಸಾಹ ಹೆಚ್ಚಿಸಬಹುದು.

ಕೆಲವರು ಯೋಗ, ಧ್ಯಾನ ಇಲ್ಲವೇ ದೈವದ ಮೊರೆ ಹೋಗಬಹುದು. ಧ್ಯಾನಸ್ಥ ಸ್ಥಿತಿಯು ನಿಮ್ಮ ಮೈ–ಮನಸಿನ ಅವಲೋಕನಕ್ಕೆ ರಹದಾರಿಯಾಗಬಲ್ಲದು. ಇಷ್ಟು ವರ್ಷಗಳಲ್ಲಿ ಮಾಡಿದ್ದೇನು? ಮುಂದೆ ಏನೇನು ಮಾಡಬಹುದು ಎನ್ನುವುದನ್ನು ಕಂಡುಕೊಳ್ಳಲು ‘ಮಿ ಟೈಮ್’ ಅನುವು ಮಾಡಿಕೊಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.