ಉಟ್ಟರೆ ಇಳಕಲ್ ಸೀರೇನೆ ಉಡಬೇಕು, ತೊಟ್ಟರೆ ಗುಳೇದಗುಡ್ಡ ಖಣನೆ ತೊಡಬೇಕು ಎನ್ನುವ ಗಾದೆ ಪ್ರಚಲಿತದಲ್ಲಿದೆ. ಮೈಗುಣಕ್ಕೆ ಅನುಗುಣವಾಗಿ ಹಿತ ನೀಡುವ ಈ ಕುಬಸಗಳನ್ನು ತೊಡುವುದೇ ಒಂದು ಸಂಭ್ರಮ.
ಖಣಗಳ ವಿನ್ಯಾಸವು ಕೋಲುಗಳನ್ನು ಆಧರಿಸಿರುತ್ತದೆ. ನಾಲ್ಕು ಕೋಲಿನಲ್ಲಿ ತೆಂಗಿನಗರಿ, ಬಾರಕೋಲ. ಐದು ಕೋಲಿನಲ್ಲಿ ತೇರು, ರುದ್ರಾಕ್ಷೀ, ಆರು ಕೋಲಿನಲ್ಲಿ ಏಲಕ್ಕಿ, ಕರಿಮನಿ, ಬಳ್ಳಿ. ಏಳು ಕೋಲಿನಲ್ಲಿ ಕಳವಾರ, ಹೂ, ಸೂಜಿ ಮಲ್ಲಿಗೆ, ದೊಡ್ಡ ಹರಡಿ, ಎಂಟು ಕೋಲಿನಲ್ಲಿ ತೇರು, ಪಿಟ್ಟ ತೇರು, ಗೊಡ್ಡ ಯಾಲಕ್ಕಿ, ಬಳ್ಳಿ ಕವರ, ಸಿತಾರಿ ಇತ್ಯಾದಿ, ಒಂಭತ್ತು ಕೋಲಿನಲ್ಲಿ ತುಳಸಿಪಾನ, ನವಲಪರಿ, ಇತ್ಯಾದಿ. ಹತ್ತು ಕೋಲಿನಲ್ಲಿ ಕ್ಯಾದಗಿ, ತೇರು, ಕಳವರ. ಸೂಜಿ ಮಲ್ಲಿಗಿ, ರುಂಡಮಾಲಿ, ಸಿದ್ದೇಶ್ವರ ಮುಕುಟ ಇತ್ಯಾದಿ. ಹದಿನೈದು ಕೋಲಿನಲ್ಲಿ ಸುದರ್ಶನ ಚಕ್ರ, ಕಳಾವರ, ಸುರ್ಯನಾರಾಯಣ, ಬಳ್ಳಿ ಹದಿನೆಂಟು ಕೋಲಿನಲ್ಲಿ ನವಿಲು, ಆನೆ, ಬಾತುಕೋಳಿ, ಈಶ್ವರ, ಬಸವಣ್ಣ ಇತ್ಯಾದಿ.ಇಪ್ಪತೈದನೇ ಕೋಲಿನಲ್ಲಿ ಭಾವೈಕ್ಯ ಬಿಂಬಿಸುವ ಜೈ ಹಿಂದ್, ಭಾರತ ಮಾತಾ ಚಿತ್ತಾರಗಳನ್ನು ಖಣಗಳಲ್ಲಿ ಮೂಡಿಸಲಾಗುತ್ತದೆ.
ಖಣದಲ್ಲಿ ಸಣ್ಣ ದಡಿ, ದೊಡ್ಡ ದಡಿಯೆಂದು ಎರಡು ಬಗೆ. ಸಣ್ಣ ದಡಿಯಲ್ಲಿ ವಡ್ಡಗಲದ ಗಾತ್ರ ದೊಡ್ಡದಾಗಿರುತ್ತದೆ. ದೊಡ್ಡ ದಡಿ(ಅಂಚು)ಯ ಭಾಗ ಅಗಲವಾಗಿರುತ್ತದೆ. ಖಣ ತಯಾರಿಕೆಯಲ್ಲಿ ಪುರುಷನು ಮಗ್ಗದಲ್ಲಿ ಕುಳಿತು ನೇಯುತ್ತಿದ್ದರೆ, ಅದಕ್ಕೆ ಪೂರಕವಾಗಿ ಉಂಕಿ ಹೂಡುವುದು,ಹಣಗಿ ಕೆಚ್ಚುವುದು, ಬಣ್ಣ ಎದ್ದುವುದು, ನೂಲು ತೆಗೆಯುವುದು, ಎಳೆ ಜೋಡಿಸುವುದು.ಕಂಡಿಕೆ ಸುತ್ತುವುದು ಬಹು ಮುಖ್ಯ ಹಂತ ಇದನ್ನು ಕುಟುಂಬದ ಮಹಿಳೆಯರು ಮಾಡುತ್ತಾರೆ.
ಖಣದ ಸ್ವರೂಪದಲ್ಲಿ ಬದಲಾವಣೆ: ಆಧುನಿಕತೆಗೆ ತಕ್ಕಂತೆ ಖಣಗಳ ಸ್ವರೂಪವನ್ನು ನೇಕಾರರು ಬದಲಾಯಿಸಿಕೊಳ್ಳುತ್ತಿದ್ದಾರೆ. ರೇಷ್ಮೆ ಖಣ ನೇಯುತ್ತಾರೆ. ಅದರಲ್ಲಿಯೇ ಸೀರೆ, ಸನ್ಮಾನದ ಶಾಲು, ಚೂಡಿದಾರ ಮುಂತಾದ ರೀತಿಯಲ್ಲಿ ಬದಲಾಯಿಸಿ ನೇಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಗುಳೇದಗುಡ್ಡ ಪಟ್ಟಣದ ಎಂಜಿನಿಯರ್ ರಮೇಶ ಅಯೋದಿ ಖಣದಲ್ಲಿ ಡೈರಿ, ವ್ಯಾನಿಟಿ ಬ್ಯಾಗ್, ಕರವಸ್ತ್ರ, ಮೊಬೈಲ್ ಪೌಚ್ ಮುಂತಾದವುಗಳನ್ನು ತಯಾರಿಸುತ್ತಿದ್ದಾರೆ.
ವ್ಯಾಪಾರ: ಮಹಾರಾಷ್ಟದ ನಾಸಿಕ, ಪುಣೆ, ಸೊಲಾಪುರ, ಕೊಲ್ಹಾಪೂರ, ಫಂಡರಾಪೂರ, ನಿಪ್ಪಾಣಿ, ಮುಂಬಯಿ ಮುಂತಾದ ನಗರ ಹಾಗೂ ಕೋಲ್ಕತ್ತ, ಹೈದರಾಬಾದ್, ಗುಜರಾತ್ ಮತ್ತು ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಖಣಗಳಿಗೆ ಬೇಡಿಕೆ ಇದೆ. ಎಲ್ಲ ಪ್ರದೇಶಗಳಿಗೂ ಕೈ ಮಗ್ಗದಿಂದ ತಯಾರಾದ ರೇಷ್ಮೆ ಖಣಗಳನ್ನು ತಯಾರಿಸಿ ಸರಬರಾಜು ಮಾಡಲಾಗುತ್ತಿದೆ.
ಜಿಐ ಟ್ಯಾಗ್ 210: ಗುಳೇದಗುಡ್ಡದ ಖಣಕ್ಕೆ ಭಾರತ ಸರ್ಕಾರದಿಂದ ಜಿಐ ಟ್ಯಾಗ್ 210 ಸಂಕೇತವನ್ನು ನೀಡಲಾಗಿದೆ. ಮಾರುಕಟ್ಟೆಗೆ ಉತ್ತೇಜನ ದೊರೆತಂತೆ ಆಗಿದೆ. ಗುಳೇದಗುಡ್ಡ ಖಣದ ಚಿತ್ರ ಇರುವ ಲಕೋಟೆಯನ್ನು ಭಾರತೀಯ ಅಂಚೆ ಇಲಾಖೆ ಹೊರ ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.