ದಿರಿಸಿಗೆ, ದೇಹಕ್ಕೆ ಎರಡಕ್ಕೂ ಹೊಂದುವ ಹಾಗೆ ಆಭರಣಗಳನ್ನು ಧರಿಸುವುದು ಟ್ರೆಂಡ್. ಸೆಳೆಯುವ ಆಭರಣಗಳಲ್ಲಿ ಮೂಗುತಿಯೂ ಒಂದು. ಮಹಿಳೆಯರಷ್ಟೆ ಅಲ್ಲ ಯುವಕರೂ ಮೂಗುತಿಯತ್ತ ಒಲವು ಬೆಳೆಸಿಕೊಳ್ಳುತ್ತಿರುವುದು ಹೊಸ ಫ್ಯಾಷನ್.
ಮೂಗುತಿ ತೊಡುವುದು ಸಂಪ್ರದಾಯಬದ್ಧ ಎನ್ನುವುದೆಲ್ಲ ಹಳತಾಯಿತು. ಆಧುನಿಕ ತೊಡುಗೆಗಳಿಗೂ ಸರಿ ಹೊಂದುವ ಮೂಗುತಿಗಳಿವೆ. ಮದುವೆಯಂಥ ಸಮಾರಂಭಕ್ಕೆ ಸೀರೆ ಉಟ್ಟಾಗ ಬಂಗಾರ ಅಥವಾ ಹವಳದ ಮೂಗುತಿ. ಜೀನ್ಸ್ ಪ್ಯಾಂಟ್– ಟಾಪ್ ಧರಿಸಿದಾಗ ಪುಟ್ಟ ಸ್ಟಡ್ ಅಥವಾ ಆಕ್ಸಿಡೈಸ್ಡ್ ಮೂಗುತಿ. ಹೀಗೆ ಎಲ್ಲಾ ದಿರಿಸಿಗೂ ಮೆರುಗು ನೀಡುತ್ತವೆ ಮೂಗುತಿಗಳು.
ಹೊಸದಾಗಿ ಮೂಗು ಚುಚ್ಚಿಸಿಕೊಳ್ಳುವರಿಗೆ ಸ್ಟಡ್‌ಗಳು ಸೂಕ್ತ. ನಿತ್ಯ ಬಳಕೆಗೆ ಆರಾಮ ಭಾವ ನೀಡುವ ಇವು ಸುಂದರವಾಗಿ ಕಾಣುತ್ತವೆ. ಇವುಗಳಲ್ಲಿ ಬಂಗಾರ, ಹರಳು, ವಜ್ರ ಹೀಗೆ ತರಹೇವಾರಿ ಸ್ಟಡ್‌ಗಳು ಮಾರುಕಟ್ಟೆಯಲ್ಲಿವೆ. ಇನ್ನು ಹೂಪ್ಸ್ ಎಂದು ಕರೆಯಲಾಗುವ ವೃತ್ತಾಕಾರದ ಮೂಗುತಿಗಳು ಸಣ್ಣದರಿಂದ ಶುರುವಾಗಿ ಮೂಗನ್ನೇ ಮುಚ್ಚುವಷ್ಟು ದೊಡ್ಡ ಗಾತ್ರದಲ್ಲೂ ಸಿಗುತ್ತಿವೆ. ಇನ್ನು ಕೇವಲ ಮೂಗಿನ ಇಕ್ಕೆಲಗಳಲ್ಲಷ್ಟೇ ಅಲ್ಲದೇ ಮೂಗಿನ ಮಧ್ಯಭಾಗಕ್ಕೆ ‘ಸೆಪ್ಟಮ್’ ಎಂಬ ಮೂಗುತಿ ಧರಿಸೋದು ಈಗಿನ ಟ್ರೆಂಡ್. ಚಪ್ಪಲಿಗಳಿಂದ ಹಿಡಿದು ಧರಿಸುವ ತೊಡುಗೆಯ ಬಣ್ಣಗಳವರೆಗೂ ಎಲ್ಲದರಲ್ಲೂ ‘ಏಸ್ತೆಟಿಕ್ಸ್’ ಹುಡುಕುವ ಹದಿಹರೆಯದವರು ಆಯ್ಕೆ ಮಾಡಿಕೊಂಡಿರುವ ಹೊಸ ದಾರಿ ಈ ಆಕ್ಸಿಡೈಸ್ಡ್ ಮೂಗುತಿಗಳು. ಜೆನ್–ಝಿ ಸ್ಟೈಲ್ ಐಕಾನ್‌ಗಳೆಂದೇ ಗುರುತಿಸಿಕೊಳ್ಳುವ ಎಮ್ಮಾ ಚೆಂಬರ್‌ಲೈನ್ ಹಾಗೂ ವಿಲ್ಲೋವ್ ಸ್ಮಿಥ್ ಅಂತಹ ಮಾಡೆಲ್‌ಗಳೂ ಮೂಗುತಿ ಹಾಕಲು ಶುರು ಮಾಡಿದಾಗಿನಿಂದ ಮಾರುಕಟ್ಟೆಯಲ್ಲಿ ಮೂಗುತಿಗಳಿಗೆ ಭರ್ಜರಿ ಬೇಡಿಕೆ ಬರುತ್ತಿದೆ.
‘ಅನುಸರಣೆಯ ಜಗತ್ತಿನಲ್ಲಿ ಅನನ್ಯ’ವಾಗಿರೋದಕ್ಕೆ ಇಚ್ಛಿಸುವವರಿಗೆ ಮೂಗುತಿಯೊಂದು ಆಯ್ಕೆ. ಬಾಲಿವುಡ್‌ನಲ್ಲಿ ಹೊಸ ಹೊಸ ಫ್ಯಾಷನ್‌ಗಳಿಂದ ಸದಾ ಸುದ್ದಿಯಲ್ಲಿರುವ ರಣವೀರ್ ಸಿಂಗ್ ಕೂಡ ಫೋಟೊಶೂಟ್ ಒಂದರಲ್ಲಿ ಮೂಗುತಿಯನ್ನು ಧರಿಸಿ, ಸೌಂದರ್ಯ ವ್ಯಾಖ್ಯಾನದ ಎಲ್ಲೆ ಮುರಿದಿರುವಾಗ, ಇನ್ನೇಕೆ ತಡ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.