ಬ್ಲೇಝರ್ ಈಗ ಫ್ಯಾಷನ್ ಲೋಕದಲ್ಲಿ ಮಹಿಳೆಯರ ಅಚ್ಚುಮೆಚ್ಚಿನ ದಿರಿಸು. ಬ್ಲೇಝರ್ ಮಾರುಕಟ್ಟೆಗೆ ಅಡಿಯಿಟ್ಟಾಗ ಅದು ಪುರುಷರು ಧರಿಸುವ ಉಡುಪಾಗಿತ್ತು. ಉದ್ಯಮಿಗಳು, ಕಂಪನಿಯ ಉನ್ನತ ಸ್ಥಾನದಲ್ಲಿರುವ ಉದ್ಯೋಗಿಗಳು, ಕ್ರಿಕೆಟ್ ಆಟಗಾರರು ಬಳಸುತ್ತಿದ್ದ ಸಾಂಪ್ರದಾಯಿಕ ಉಡುಪಾಗಿ ಬಳಕೆಯಾಗುತ್ತಿತ್ತು. ಕಾಲ ಬದಲಾದಂತೆ ಫ್ಯಾಷನ್ ಪ್ರಿಯರ ಕಣ್ಣಿಗೆ ಬಿದ್ದು, ತನ್ನ ವಿನ್ಯಾಸದಲ್ಲಿ ಬದಲಾವಣೆ ಕಂಡುಕೊಂಡಿದೆ. ಪುರುಷರಿಗೆ ಮಾತ್ರ ಸೀಮಿತವಾಗಿದ್ದ ಈ ಬ್ಲೇಝರ್ ಈಗ ಮಹಿಳೆಯರ, ಹುಡುಗಿಯರ ಹಾಗೂ ಮಕ್ಕಳ ಫಾರ್ಮಲ್ ಉಡುಪಾಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳ ಹಾಗೂ ಕ್ರೀಡಾಪಟುಗಳ ಸಮವಸ್ತ್ರವಾಗಿ ಮಾತ್ರವಲ್ಲ, ಆಫೀಸ್‌ಗೆ ಹೋಗುವವರು ತೊಡುವ ಕ್ಯಾಶುವಲ್ ಉಡುಪುಗಳಲ್ಲಿ ಒಂದಾಗಿದೆ.
ಫ್ಯಾಷನ್ ಲೋಕದಲ್ಲಿ ಹೊಸ ಬಗೆಯಲ್ಲಿ ಕಾಣಿಸಿಕೊಂಡಿರುವ ಬ್ಲೇಝರ್‌ಗಳು ವಿವಿಧ ಬಗೆಯ ಬಣ್ಣ, ವಿನ್ಯಾಸ, ಶೈಲಿಯನ್ನು ಪಡೆದುಕೊಂಡಿವೆ. ಪ್ಯಾಂಟ್, ಜಂಪ್‌ಸೂಟ್, ಅಷ್ಟೇ ಅಲ್ಲದೆ ಭಾರತೀಯ ಮಹಿಳೆಯರ ಸಾಂಪ್ರದಾಯಕ ಉಡುಪಾದ ಸೀರೆಯ ಮೇಲೆ ತೊಡುವ ಟ್ರೆಂಡ್ ಆರಂಭವಾಗಿದೆ. ರಾಜಕೀಯ ವ್ಯಕ್ತಿಗಳು, ಸಿನಿಮಾ ರಂಗದವರಿಂದ ಆರಂಭವಾದ ಟ್ರೆಂಡ್ ಈಗ ಬಹುತೇಕ ಹುಡುಗಿಯರು ಇಷ್ಟಪಟ್ಟು ಧರಿಸುವ ಉಡುಪಾಗಿದೆ.
ರಾಜ ಮನೆತನದ ಉಡುಪು
ಬ್ರಿಟಿಷ್ ರಾಜಮನೆತನದ ರಾಣಿ ಎಲಿಜಬೆತ್, ರಾಜಕುಮಾರಿ ಕ್ಯಾಥರಿನ್‌ರಿಂದ ಹಿಡಿದು ಈಗಿನ ಮೇಗನ್ ಮರ್ಕೆಲ್‌ವರೆಗೆ ಈ ಬ್ಲೇಝರ್ ಬಳಸುತ್ತಿದ್ದಾರೆ. ಹಾಲಿವುಡ್ ಸಿನಿಮಾ ನಟಿಯರು ಮಾತ್ರವಲ್ಲ, ಈಗಿನ ಬಾಲಿವುಡ್, ಸ್ಯಾಂಡಲ್‌ವುಡ್ ಸಿನಿಮಾ ನಟಿಯರು, ಗಾಯಕಿಯರು ಬ್ಲೇಝರ್‌ಗಳನ್ನು ತಮ್ಮ ಅಚ್ಚುಮೆಚ್ಚಿನ ಉಡುಪಾಗಿ ಧರಿಸಿ ಮೆರೆಯುತ್ತಿದ್ದಾರೆ.
ವಿನ್ಯಾಸದಲ್ಲಿ ಬದಲಾವಣೆ
ಪುರುಷರ ಬಳಕೆಗೆ ಮಾತ್ರ ಬರುವಂತೆ ವಿನ್ಯಾಸವಿದ್ದ ಬ್ಲೇಝರ್‌ಗಳನ್ನು ಈಗ ಮಹಿಳೆಯರಿಗೆ ಹೊಂದುವ ರೀತಿಯಲ್ಲಿ ಬದಲಾವಣೆ ಮಾಡಲಾಗಿದೆ. ಜೇಬುಗಳನ್ನು ಹೆಣ್ಣುಮಕ್ಕಳ ಅಂದಕ್ಕೆ, ಬಳಕೆಗೆ ಬರುವಂತೆ ಬದಲಾಯಿಸಿದ್ದು ಹೆಚ್ಚು ಬಳಕೆಯಾಗುವಂತಹ ಬ್ಲೇಝರ್‌ಗಳು ಇಂದು ಮಾರುಕಟ್ಟೆಯಲ್ಲಿ ಸ್ಥಾನ ಪಡೆದುಕೊಂಡಿವೆ. ಈಗಿನ ಬ್ಲೇಝರ್‌ಗಳಲ್ಲಿ ದೊಡ್ಡ ಜೇಬುಗಳಿದ್ದು ಮೊಬೈಲ್, ಪರ್ಸ್, ಪೆನ್, ಕರವಸ್ತ್ರ, ಸಣ್ಣ ಪುಟ್ಟ ಮೇಕಪ್ ವಸ್ತುಗಳನ್ನು ಇಟ್ಟುಕೊಳ್ಳಬಹುದಾಗಿದೆ. ಮೊದಲಿನಿಂದಲೂ ಬಹಳ ಸ್ಟೈಲಿಶ್ ಮಾತ್ರವಲ್ಲದೆ ಬಹಳ ಉಪಯುಕ್ತ ಹಾಗೂ ಆರಾಮದಾಯಕವಾಗಿವೆ ಈ ಬ್ಲೇಝರ್‌ಗಳು.
ಬಗೆಬಗೆಯ ಬ್ಲೇಝರ್
ಮೊಣಕಾಲಿನವರೆಗಿನ ಉದ್ದದ ಬ್ಲೇಝರ್‌ಗಳು, ಕಾಲರ್ ರಹಿತ, ಕಾಲರ್ ಸಹಿತ ಬ್ಲೇಝರ್‌ಗಳು, ಬ್ಯುಸಿನೆಸ್ ಮಹಿಳೆಯರು ಹಾಕುವ ಬ್ಲೇಝರ್‌ಗಳು, ಮೊಣಕೈವರೆಗಿನ ಬ್ಲೇಝರ್‌ಗಳು, ಮಳೆಗಾಲದಲ್ಲಿ ಧರಿಸುವ ಬ್ಲೇಝರ್‌ಗಳು, ಟೀ ಶರ್ಟ್‌ನ ವಿನ್ಯಾಸದ ಬ್ಲೇಝರ್‌ಗಳು, ದೊಡ್ಡ ಗಾತ್ರದ ಕಾಲರ್, ಗಮನ ಸೆಳೆಯುವ ದೊಡ್ಡ ಬಟನ್‌ಗಳು, ಸಡಿಲ ಭುಜ, ದೊಡ್ಡದಾದ ಮತ್ತು ಎದ್ದು ಕಾಣುವ ಜೇಬುಗಳು, ವಿವಿಧ ಬಣ್ಣದ, ವಿನ್ಯಾಸದ ಬಾರ್ಡರ್‌ಗಳು, ತೋಳುಗಳಲ್ಲಿರುವ ಬಟನ್‌ಗಳು, ಸೊಂಟದವರೆಗೆ ಇರುವ ಬ್ಲೇಝರ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯ.
ಹತ್ತಿ ಬಟ್ಟೆಯ ಬ್ಲೇಝರ್‌ಗಳು, ವೆಲ್ವೆಟ್, ಡೆನಿಮ್, ಸಿಂಥೆಟಿಕ್ ಬಟ್ಟೆಯಿಂದ ಬ್ಲೇಝರ್‌ಗಳನ್ನು ತಯಾರಿಸಲಾಗುತ್ತದೆ. ಇವುಗಳ ಮೇಲೆ ಮೆಟಾಲಿಕ್ ಪ್ರಿಂಟ್, ಸಾಲಿಡ್ ಕಲರ್, ಹೂವಿನ ವಿನ್ಯಾಸ, ತಿಳಿಬಣ್ಣ, ಸಣ್ಣ ಕುಸುರಿ, ದೊಡ್ಡದಾಗಿ ಕಾಣುವ ಹೂವಿನ ಅಲಂಕಾರ ಹೀಗೆ ಅನೇಕ ಬಗೆಯಲ್ಲಿ ವಿನ್ಯಾಸ ಮಾಡಲಾಗಿರುತ್ತದೆ.
ಬಣ್ಣಗಳ ವೈವಿಧ್ಯ
ಕಪ್ಪು, ಬಿಳಿ, ನೀಲಿ, ಕಂದು ಬಣ್ಣ, ಕೆಂಪು ಬಣ್ಣ, ಚಾಕೊಲೇಟ್, ಕಿತ್ತಳೆ, ಗುಲಾಬಿ ಬಣ್ಣ, ಹಸಿರು, ಹಳದಿ ಬಣ್ಣದ ಬ್ಲೇಝರ್‌ಗಳು ಸಿಗುತ್ತವೆ. ನಮಗೆ ಬೇಕಾದ ಬಣ್ಣ, ಶೈಲಿ, ವಿನ್ಯಾಸವನ್ನು ಬ್ಲೇಝರ್‌ನಲ್ಲಿ ಮೂಡಿಸಲು ಕಸ್ಟಮೈಸ್ಡ್ ಆಯ್ಕೆಗಳೂ ಇವೆ.
ಧರಿಸುವ ಬಗೆ
ರೇಷ್ಮೆ, ಲಿನನ್, ಜೂಟ್, ಖಾದಿ ಮೊದಲಾದ ಬಗೆಯ ಬಟ್ಟೆಗಳಲ್ಲಿ ತಯಾರಾದ ಕ್ಲಾಸಿಕ್ ಬ್ಲೇಝರ್ ನಿಮ್ಮ ಮೊದಲ ಆಯ್ಕೆಯಾಗಿರಲಿ. ನಂತರ ಬೇಕಿದ್ದರೆ ಅಸಿಮೆಟ್ರಿಕ್ ಕಟ್, ಪೋಲೊ ನೆಕ್ ಇರುವಂತಹ ಬ್ಲೇಝರ್‌ಗಳನ್ನು ಪ್ರಯೋಗ ಮಾಡಬಹುದು. ದೊಡ್ಡ ದೊಡ್ಡ ಪ್ರಿಂಟ್ ಇರುವ ಉಡುಪಿನ ಮೇಲೆ ಸ್ಟೇಡ್ ಬ್ಲೇಜರ್ ಅಥವಾ ಸಡಿಲ ಪ್ಯಾಂಟ್ ಮೇಲೆ ಕ್ಲಾಸಿಕ್ ಬ್ಲೇಝರ್ ಧರಿಸಿ. ಈಗಂತೂ ಶಾರ್ಟ್ಸ್, ಕ್ಯಾಮಿ ಅಥವಾ ಪೋಲೊ ಟೀ ಶರ್ಟ್ ಮೇಲೂ ಧರಿಸಿ ಆರಾಮವಾಗಿ ಓಡಾಡುತ್ತಾರೆ. ಹಳೆಯ ರೀತಿಯ ಡಬಲ್ ಬ್ರೆಸ್ಟೆಡ್ ಅಥವಾ ‘ಬಾಯ್‌ಫ್ರೆಂಡ್’ ಬ್ಲೇಝರ್ ಈ ಹವಾಮಾನಕ್ಕೆ ಹೇಳಿ ಮಾಡಿಸಿದಂತಹ ಉಡುಪು. ಉದ್ದನೆಯ ಕುರ್ತಾ ಮೇಲೆ ಅಗಲ ಬೆಲ್ಟ್ ಇರುವ ರೇಷ್ಮೆ ಬ್ಲೇಝರ್, ಹೂವಿನ ವಿನ್ಯಾಸವಿರುವ ಸೀರೆಯ ಮೇಲೆ ಡೆನಿಮ್ ಬ್ಲೇಝರ್ ಧರಿಸಿ. ಬ್ಲೇಝರ್ ಆಯ್ಕೆ ಮಾಡುವಾಗ ಮಾಮೂಲು ಸೈಝ್‌ಗಿಂತ ಒಂದು ಸೈಝ್ ಜಾಸ್ತಿ ಇರುವ ಸಡಿಲವಾದದ್ದನ್ನು ನೋಡಿ. ಏಕೆಂದರೆ ಇದು ಬೇರೆ ಉಡುಪುಗಳ ಮೇಲೆ ಧರಿಸುವಂತಹದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.