50 ವರ್ಷ ದಾಟಿದ ಮೇಲೆ ಮಹಿಳೆಯರಲ್ಲಿ ಮೂಳೆ ಹಾಗೂ ಸ್ನಾಯು ಸವೆತ ಸಾಮಾನ್ಯ. ವಯಸ್ಸಾದ ಮೇಲೆ ಇದಕ್ಕೆ ಔಷಧಿ, ಪೌಷ್ಟಿಕಾಂಶ ಎಂದು ಪರದಾಡುವುದಕ್ಕಿಂತ ಚಿಕ್ಕ ವಯಸ್ಸಿನಿಂದಲೇ ಕಾಳಜಿ ವಹಿಸುವುದು ಒಳಿತು.
ವೃತ್ತಿ ದಿನದ ಆರಂಭದಲ್ಲಿ ಮಹಡಿ ಮೆಟ್ಟಿಲುಗಳನ್ನು ಸಲೀಸಾಗಿ ಹತ್ತುತ್ತ ಮನೆಯ ಒಳಗೆ– ಹೊರಗೆಲ್ಲ ಚಟುವಟಿಕೆಯಿಂದ ಓಡಾಡಿಕೊಂಡಿದ್ದವರಿಗೆ 50 ವರ್ಷ ದಾಟುತ್ತಿರುವ ಹಾಗೆ ಮಹಡಿ ಹತ್ತುವುದೇ ಕಷ್ಟ ಎನ್ನುವ ಮನೋಭಾವ. ಆಫೀಸ್‌ನಿಂದ ಮನೆಗೆ ಬಂದು ಮನೆ ಕೆಲಸ ಮಾಡಿದರೂ ಮೈ-ಕೈ ನೋವು. ಕುಳಿತರೆ ಏಳೋದು ಕಷ್ಟ, ನಿಂತರೆ ಕೂರೋದು ಕಷ್ಟ ಎನ್ನುವ ಭಾವ. ನೋವಿನ ನೆಪದಿಂದ ವೈದ್ಯರನ್ನು ಭೇಟಿ ಮಾಡಿದರೆ ನೋವು ನಿವಾರಕ ಮಾತ್ರೆ ಬರೆದು ‘ವಾಕಿಂಗ್ ಮಾಡಿ, ವ್ಯಾಯಾಮ ಮಾಡಿ, ತೂಕ ಕರಗಿಸಿಕೊಳ್ಳಿ’ ಎಂಬ ಸಲಹೆ.
ಜೊತೆಗೆ ಸೇರುತ್ತಿರುವ ಬೊಜ್ಜು, ಏರು ರಕ್ತದೊತ್ತಡ, ಸಕ್ಕರೆ ಕಾಯಿಲೆ. ಇವೆಲ್ಲ ಉದ್ಯೋಗಸ್ಥ ಮಹಿಳೆಯರಷ್ಟೇ ಅಲ್ಲ, ಗೃಹಿಣಿಯರೂ ಸೇರಿದ ಹಾಗೆ 45– 50ರ ವರ್ಷಗಳ ಆಸುಪಾಸಿನಲ್ಲಿರುವ ಹಲವು ಮಹಿಳೆಯರ ಅಳಲು. ಅದರಲ್ಲೂ ಮುಟ್ಟು ನಿಂತ ಮೇಲೆ ಹೆಚ್ಚಿನ ಮಹಿಳೆಯರಿಗೆ ಸ್ನಾಯು, ಮೂಳೆಗಳ ಸಮಸ್ಯೆ ಹೆಚ್ಚುವುದಂತೂ ಹೌದು.
ವಯಸ್ಸಾಗುತ್ತಿದ್ದ ಹಾಗೆ ಅದರಲ್ಲೂ ಮುಟ್ಟು ನಿಂತ ಮೇಲೆ ಮಹಿಳೆಯರ ಸ್ನಾಯು, ಮೂಳೆಗಳ ಆರೋಗ್ಯದ ಮೇಲೆ ಹಲವು ಪ್ರತಿಕೂಲ ಪರಿಣಾಮಗಳು ಉಂಟಾಗುತ್ತವೆ. ಮುಟ್ಟು ನಿಂತ ಮೇಲೆ ಮೂಳೆಸವೆತ ಅಥವಾ ಜೊಳ್ಳೆಲುಬು (ಆಸ್ಟಿಯೊಪೊರೋಸಿಸ್), ವಯಸ್ಸಿನ ಜೊತೆಗೆ ಹೆಚ್ಚುವ ಸಂಧಿವಾತ ಇವೆರಡರೊಂದಿಗೆ ಸ್ನಾಯುಸವೆತ ಅಥವಾ ಸಾರ್ಕೋಪೀನಿಯ ಕೂಡಾ ಆಗುತ್ತದೆ. ಸ್ನಾಯುಸವೆತ ಅಥವಾ ಸಾರ್ಕೊಪೀನಿಯ ಅಂದರೆ ವಯೋ ಸಹಜವಾಗಿ ಉಂಟಾಗುವ ಸ್ನಾಯುವಿನ ಮೊತ್ತ ಹಾಗೂ ಕ್ರಿಯಾಶೀಲತೆ ಕಡಿಮೆಯಾಗುವುದು ಎಂದರ್ಥ.
ಸ್ನಾಯು ಸವೆತ
50 ವರ್ಷಗಳ ನಂತರ ಪ್ರತಿವರ್ಷ ಶೇ 20ರಷ್ಟು ಸ್ನಾಯು ಸವೆತ ಉಂಟಾಗುತ್ತದೆ. ಪುರುಷರಲ್ಲಿ ಈ ಪ್ರಕ್ರಿಯೆ 60 ವರ್ಷಗಳ ನಂತರ ಆರಂಭವಾದರೆ ಮಹಿಳೆಯರಲ್ಲಿ 50ರ ದಶಕದಲ್ಲೇ ಆರಂಭವಾಗಿ ಮುಟ್ಟು ನಿಂತ ಮೇಲೆ ಮೊದಲ 5 ವರ್ಷದಲ್ಲಿ ಸ್ನಾಯುಗಳ ಮೊತ್ತ ಶೇಕಡಾ 25–30ರಷ್ಟು ಕಡಿಮೆಯಾಗಿ ಶೇ 30ರಷ್ಟು ಕೊಲಾಜಿನ್ ಕೂಡಾ ನಷ್ಟವಾಗುತ್ತದೆ. ಕಾಲು ಮತ್ತು ಹೊಟ್ಟೆಯ ಮಾಂಸಖಂಡಗಳು, ಅವುಗಳ ಟೋನ್, ಶಕ್ತಿ, ಮೊತ್ತ ಕಳೆದುಕೊಳ್ಳುತ್ತವೆ. ಸಾರ್ಕೊಪೀನಿಯಾದಲ್ಲಿ ವೇಗದ ಸ್ನಾಯುತಂತುಗಳು ಕ್ಷೀಣಿಸುತ್ತಾ ಬಂದು ಸ್ನಾಯು ಒಳಗಿನ ಕೊಬ್ಬಿನಾಂಶಗಳು ಹೆಚ್ಚುತ್ತಾ, ಜೊತೆಗೆ ಇನ್ಸುಲಿನ್ ನಿರೋಧವೂ ಹೆಚ್ಚುತ್ತದೆ. ಸ್ನಾಯು ಅಂಗಾಂಶದ ಉತ್ಪಾದನೆಗೆ ಅಗತ್ಯವಾದ ಧನಾತ್ಮಕ ಪ್ರೊಟೀನ್ ಅಂಶ ಕಡಿಮೆಯಾಗುವುದರಿಂದ ಸ್ನಾಯುಸವೆತ ಉಂಟಾಗುತ್ತದೆ. ಪರಿಣಾಮವಾಗಿ ಹೆಚ್ಚಿನ ಸಂದರ್ಭಗಳಲ್ಲಿ ಕುರ್ಚಿಯಿಂದ ಮೇಲೇಳುವಾಗ, ಮೆಟ್ಟಿಲು ಹತ್ತಿಳಿಯಲು, ಬ್ಯಾಲೆನ್ಸ್ ಮಾಡಲು, ಸಮತಲವಿಲ್ಲದ ನೆಲದಲ್ಲಿ ನಡೆಯಲು ಕಷ್ಟಪಡಬೇಕಾಗುತ್ತದೆ.
ಮೂಳೆ ಸವೆತ
ಇನ್ನು ಆಸ್ಟಿಯೊಪೊರೋಸಿಸ್ (ಜೊಳ್ಳೆಲುಬು/ ಮೂಳೆ ಸವೆತ) ಯಾವುದೇ ಮುನ್ಸೂಚನೆ ಇಲ್ಲದೆ ಸಣ್ಣಪುಟ್ಟ ಬೀಳುವಿಕೆಗೆ ಮೂಳೆ ಮುರಿದಾಗಲೇ ಹೆಚ್ಚಿನ ಸಂದರ್ಭಗಳಲ್ಲಿ ಪತ್ತೆಯಾಗುತ್ತದೆ. ಈ ಜೊಳ್ಳೆಲುಬಿನ ಸಮಸ್ಯೆಯಲ್ಲಿ ಮೂಳೆಯ ಸಾಂದ್ರತೆ ಕಡಿಮೆಯಾಗಿ ಮೂಳೆಯ ಸೂಕ್ಷ್ಮರಚನೆ ಕುಂಠಿತವಾಗಿ ಮೂಳೆಯಲ್ಲಿ ರಂಧ್ರಗಳು ಹೆಚ್ಚಾಗುತ್ತವೆ. ಈಸ್ಟ್ರೋಜೆನ್ ಹಾರ್ಮೋನ್ ಕೊರತೆಯಿಂದ ಮೂಳೆ ನಷ್ಟವು ತ್ವರಿತಗೊಂಡು, ಹೊಸ ಮೂಳೆ ಬೆಳೆಸುವ ಜೀವಕೋಶಗಳ ಅಭಾವ ಹಾಗೂ ಕಾರ್ಯವೈಫಲ್ಯದಿಂದ ಮೂಳೆಸವೆತ ಹೆಚ್ಚಾಗುತ್ತದೆ.
ಕಾರಣಗಳು
ಬದಲಿಸಬಹುದಾದ ಅಂಶಗಳು: ಧೂಮಪಾನ, ಅತಿಯಾದ ಮದ್ಯಪಾನ, ತುಂಬಾ ಕಡಿಮೆ ಶರೀರ ತೂಕ, ಕಡಿಮೆ ದೈಹಿಕ ಚಟುವಟಿಕೆ, ಕಡಿಮೆ ಕ್ಯಾಲ್ಶಿಯಂ ಸೇವನೆ, ಪದೇ ಪದೇ ಬೀಳುವಿಕೆ, ಮಾನಸಿಕ ಹಾಗೂ ವೃತ್ತಿ ಸಂಬಂಧ ಒತ್ತಡಗಳು.
ಬದಲಿಸಲು ಸಾಧ್ಯವಾಗದ ಅಂಶಗಳು: ಸ್ತ್ರೀಲಿಂಗವೇ ಬದಲಿಸಲಾಗದ ಅಂಶ. ಮಹಿಳೆಯ ಜೀವಿತಾವಧಿಯ ಅಸ್ಥಿ ಮೊತ್ತ, ಪುರುಷರಿಗಿಂತ ಕಡಿಮೆ ವೃದ್ಧಾಪ್ಯ, ಅನುವಂಶೀಯತೆ, ಮುಟ್ಟು ನಿಲ್ಲುವಿಕೆ, ಬೇಗನೆ ಗರ್ಭಧರಿಸುವಿಕೆ, ಬೇಗನೆ ಗರ್ಭಕೋಶ ತೆಗೆಸುವಿಕೆ, ತಡವಾಗಿ ಮುಟ್ಟು ಆರಂಭವಾಗಿ ಬೇಗನೆ ನಿಲ್ಲುವುದು (ಅಕಾಲಿಕ ಋತುಬಂಧ) ಇವೆಲ್ಲವೂ ಸ್ನಾಯುಮೂಳೆ ಸವೆತ ಹೆಚ್ಚಿಸುವ ಅಂಶಗಳು.
ಮುಟ್ಟುನಿಂತ ಮೇಲೆ ಹೆಣ್ತನದ ಹಾರ್ಮೋನ್ ಕಡಿಮೆಯಾಗುವುದರಿಂದ ಅಸ್ಥಿಪಂಜರ ಹಾಗೂ ಸಂಯೋಜಕ ಅಂಗಾಂಶದ ಮೇಲಾಗುವ ಧನಾತ್ಮಕ ಪರಿಣಾಮ ಕಡಿಮೆಯಾಗುವುದರಿಂದ ಮೂಳೆ, ಸ್ನಾಯು, ಅಸ್ಥಿರಜ್ಜು(ಲಿಗಮೆಂಟ್ಸ್) ಸ್ನಾಯುರಜ್ಜು(ಟೆಂಡಾನ್), ಕಾರ್ಟಿಲೇಜ್(ಮೆಲ್ಲೆಲುಬು), ಸೈನಾಮಿಯಲ್ ಪದರ ಎಲ್ಲದರ ಕಾರ್ಯಕ್ಷಮತೆ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ 50 ವರ್ಷದ ನಂತರ ಶೇ 50ಕ್ಕೂ ಹೆಚ್ಚಿನ ಮಹಿಳೆಯರೂ ಸಂಧಿವಾತದಿಂದ ಬಳುತ್ತಾರೆ. ಅನುವಂಶೀಯ ಕಾರಣಗಳು ಸೇರಿ ಕಡಿಮೆಯಾಗುವ ದೈಹಿಕ ಶ್ರಮ, ತಪ್ಪು ಭಂಗಿಯಲ್ಲಿ ನಿಲ್ಲುವುದು ಮತ್ತು ಬಾಗುವುದು ಎಲ್ಲವೂ ಸಂಧಿವಾತದ ಸಂಭವ ಹೆಚ್ಚಿಸುತ್ತವೆ.
ಕೀಲು ಊತ, ನೋವು, ಕೀಲಿನಲ್ಲಿ ಕರಕರ ಶಬ್ದ, ನೆಲಕ್ಕೆ ಕೂರಲು, ಏಳಲು ಕಷ್ಟವಾಗುವುದು ಇವೆಲ್ಲಾ ಸಂಧಿವಾತದ ಲಕ್ಷಣಗಳು. ಇದರ ಜೊತೆಗೆ ಕೆಳಬೆನ್ನು ನೋವು ಸೇರಿಕೊಂಡರೆ ಜೀವನವೇ ಬೇಸರವೆನಿಸಿ, ಖಿನ್ನತೆಯು ಹೆಚ್ಚಾಗುತ್ತದೆ.
ಚಲನಶೀಲತೆಯು ಕಡಿಮೆಯಾಗಿ ಆಹಾರ, ಪೋಷಕಾಂಶದ ಬಗ್ಗೆ ಮಾಹಿತಿ ಇಲ್ಲದಿದ್ದರೆ ಸ್ನಾಯು ಸವೆತ ಇನ್ನಷ್ಟು ಹೆಚ್ಚುತ್ತದೆ. ಇದೊಂದು ವಿಷವರ್ತುಲವಾಗಿ ಇದರಿಂದ ಬಿಡಿಸಿಕೊಳ್ಳಲಾಗದೆ ಮಹಿಳೆಯರ ಜೀವನದ ಗುಣಮಟ್ಟವೇ ಕುಸಿಯುತ್ತಾ ಹೋಗುತ್ತದೆ. ಈಗಂತೂ ಮಹಿಳೆಯರ ಜೀವಿತಾವಧಿಯೂ ಹೆಚ್ಚುತ್ತಿದ್ದು ಇಳಿವಯಸ್ಸಿನಲ್ಲಿ ಮೂರನೆಯ ಒಂದು ಭಾಗ ಈ ರೀತಿ ಕಳೆಯಬೇಕಾದ ಅನಿವಾರ್ಯತೆ ಬರಬಹುದು.
ಅಪಾಯ ತಡೆಗಟ್ಟಲು ಏನು ಮಾಡಬಹುದು?
*ಚಿಕ್ಕವಯಸ್ಸಿನಿಂದಲೇ ಉತ್ತಮ ದೈಹಿಕ ಚಟುವಟಿಕೆ, ಪ್ರೊಟೀನ್ ಮತ್ತು ಕ್ಯಾಲ್ಶಿಯಂ ಇರುವ ಆಹಾರ ಸೇವನೆ ಮಾಡಿ.
*ನಿತ್ಯ ಕನಿಷ್ಠ 20 ನಿಮಿಷ ಸೂರ್ಯನ ಬೆಳಕಿಗೆ ಮೈಯೊಡ್ಡಿ.
*ಮೂಳೆ ಸಾಂದ್ರತೆಯನ್ನು ಮಧ್ಯ ವಯಸ್ಸಿನಲ್ಲೇ ಹೆಚ್ಚಿಸಿಕೊಳ್ಳುವುದು ಮುಖ್ಯ. ಹೆಚ್ಚಿನವರು ವಯಸ್ಸಾದ ಮೇಲೆ ಕ್ಯಾಲ್ಶಿಯಂ ಮಾತ್ರೆ ಬರೆದುಕೊಡಿ ಎಂದು ವೈದ್ಯರಲ್ಲಿ ಕೇಳುತ್ತಾರೆ. ಆದರೆ ಇದು ಹೆಚ್ಚು ಸಹಾಯವಾಗುವುದಿಲ್ಲ.
*ಆರಂಭದಿಂದಲೇ ಸಮ ತೂಕ ಹೊಂದಲು, ಅದನ್ನೇ ಮುಂದುವರಿಸಿಕೊಂಡು ಹೋಗಲು ಸದಾ ಜಾಗರೂಕರಾಗಿರಬೇಕು.
*ವಯಸ್ಸಾದ ಮೇಲೆ ಅನಾವಶ್ಯಕ ಆಯಾಸದ ಕೆಲಸ ಬೇಡ, ಆಲಸ್ಯವೂ ಬೇಡ.
*ಶರೀರದ ಭಾರ ಕಾಲುಗಳ ಮೇಲೆ ಸಮನಾಗಿ ಬೀಳುವ ಹಾಗೆ ನಿಲ್ಲುವುದನ್ನು ರೂಢಿ ಮಾಡಿಕೊಳ್ಳಬೇಕು.
*ದಿನನಿತ್ಯದ ಚಟುವಟಿಕೆಯಲ್ಲಿ ಬೆನ್ನುಹುರಿಯನ್ನು ನೇರವಾಗಿಡಲು ಸದಾ ಪ್ರಯತ್ನಿಸಿ.
*ನಿಯಮಿತ ವ್ಯಾಯಮ ಅದರಲ್ಲೂ ಯೋಗ, ಏರೋಬಿಕ್ಸ್ ಮತ್ತು ಪ್ರತಿರೋಧಕ ವ್ಯಾಯಾಮಗಳು, ವಾಕಿಂಗ್, ಈಜು, ಡಾನ್ಸ್ ಇತ್ಯಾದಿ.
(ಲೇಖಕಿ ಸ್ತ್ರೀರೋಗ ತಜ್ಞರು, ಭದ್ರಾವತಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.