ಹೆಣ್ಣುಮಕ್ಕಳ ಆ ದಿನಗಳ ಕಾಳಜಿಗೆ ಹುಡುಗರೇ ಮುಂದಾದರೆ ಹೇಗೆ?
ಅಪ್ಪಟ ಅಮ್ಮನ ಸ್ಥಾನದಲ್ಲಿ ನಿಂತು ಹುಡುಗರಿಂದಲೇ ಕೆಲಸ ಮಾಡಿಸಿದ್ದಾರೆ ಈ ಮೇಡಂ. ಕಾವೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಕಲಿಸುವ ಪ್ರಮೀಳಾ ರಾವ್ ಅವರ ವೃತ್ತಿಯಾಚೆಗಿನ ಬದುಕೇ ಹೆಚ್ಚು ಗುರುತಿಸಿಕೊಂಡಿದೆ. ಕಾಲೊನಿಗಳ ಹೆಣ್ಣುಮಕ್ಕಳು ಋತುಸ್ರಾವದ ದಿನಗಳಲ್ಲಿ ಅನುಭವಿಸುವ ಸಂಕಟವನ್ನು ಹತ್ತಿರದಿಂದಲೇ ಗಮನಿಸಿದರು. ಅದಕ್ಕೊಂದು ಪರಿಹಾರ ಹುಡುಕಲು ಮುಂದಾದರು.
ಹಳೇ ಬಟ್ಟೆಗಳನ್ನೇ ಮಡಚಿ ಪ್ಯಾಡ್ ರೀತಿ ಬಳಸಲು ಕೊಟ್ಟಾಗ ಹೆಣ್ಣುಮಕ್ಕಳು ಹಿಂಜರಿದರು. ಒಂದಿಷ್ಟು ಜನ ಸೇರಿ ರಂಪ ಮಾಡಿದ್ದೂ ಆಯಿತು. ಆಗ ಹೊಳೆದದ್ದೇ ‘ಸ್ವಾಸ್ಥ್ಯ’.
ಹಳೇ ಬಟ್ಟೆಗಳೇ ಪ್ಯಾಡ್ ಆದ ಕಥೆ
ಬಡವರ ಕಾಲೊನಿಗಳಲ್ಲಿ ಸಾಮಾಜಿಕ ಆರ್ಥಿಕ ಸಮೀಕ್ಷೆಗೆ ಹೋದಾಗ ಕೆಲವು ಮಕ್ಕಳು ಬಟ್ಟೆಯಿಲ್ಲದೇ ಹೊರ ಬಂದದ್ದನ್ನು ಕಂಡರು. ಅಂಥವರಿಗಾಗಿ ಹಳೆ ಬಟ್ಟೆ ಬ್ಯಾಂಕ್ ಸ್ಥಾಪಿಸಿದರು. ಜನರು ಹಳೆ ಬಟ್ಟೆಗಳನ್ನು ಕೊಡಬಹುದು ಎಂದು ಪ್ರಕಟಿಸಿದರು. ಆಗ ಹಳೆ ಬಟ್ಟೆಗಳು ರಾಶಿ ಬಿದ್ದವು. ಆದರೆ ಬಹುತೇಕವು ಬಳಕೆಗೆ ಯೋಗ್ಯವಾಗಿರಲಿಲ್ಲ. ಅವುಗಳನ್ನು ಶುದ್ಧೀಕರಿಸಿ ಪ್ಯಾಡ್ ತಯಾರಿಸಲು ಮುಂದಾದರು. ವಿದ್ಯಾರ್ಥಿಗಳೇ ಬಟ್ಟೆ ತೊಳೆದರು. ಕತ್ತರಿಸಿ ಹೊಲಿದರು.
ಪ್ಯಾಡ್ ತಯಾರಿಕೆ ಕಲಿಸಲು ಪ್ರಮೀಳಾ ಮೇಡಂ ದೆಹಲಿಯ ಗೂಂಜ್ ತರಬೇತಿ ಸಂಸ್ಥೆಗೆ 21 ಹುಡುಗರನ್ನು ಕರೆದುಕೊಂಡು ಹೋದರು. ಅವರಿಗೋ ಈ ಕೆಲಸಕ್ಕೆ ಮೊದಲ ಬಾರಿ ಹುಡುಗರೇ ಬಂದದ್ದು ಕಂಡು ಆಶ್ಚರ್ಯವೆನಿಸಿತ್ತು. ಅಲ್ಲಿ ಕಲಿತು ಮಂಗಳೂರಿಗೆ ಬಂದ ಈ ಹುಡುಗರು ಮಾರುಕಟ್ಟೆಯಲ್ಲಿ ಸಿಗುವ ಪ್ಯಾಡ್‌ಗೆ ಸೆಡ್ಡು ಹೊಡೆಯುವ ರೀತಿ ವಿನ್ಯಾಸಗೊಳಿಸಿದರು.
ಬದಲಾಯಿತು ಮಾನಸಿಕ ‘ಸ್ವಾಸ್ಥ್ಯ’
ಇದೇ ತಂಡದ ಹುಡುಗ ಕಾರ್ತಿಕ್ ರಾವ್ ಪ್ಯಾಡ್‌ಗೆ ಸ್ವಾಸ್ಥ್ಯ ಎಂಬ ಹೆಸರು ಕೊಟ್ಟ. ‘ಕಂಫರ್ಟ್ ಈಸ್ ಹ್ಯಾಪಿನೆಸ್’ ಅದರ ಟ್ಯಾಗ್‌ಲೈನ್ ಆಯಿತು. ಕಾರ್ತಿಕ್ ಓರಗೆಯವರಾದ ಶೋನಿತ್ ಮತ್ತು ಸಿದ್ಧಾರ್ಥ್ ಸುಂದರವಾದ ಲೋಗೊ ರೂಪಿಸಿದರು. ಹಳೆಯ ಬಟ್ಟೆಗಳನ್ನೇ ಮಡಚಿ, ತಿಳಿನೀಲಿ ಬಣ್ಣದ ಮೇಲುಹೊದಿಕೆ ಹೊಲಿದು ಕೊಟ್ಟರು. ಮೊದಲು ಈ ಹುಡುಗರ ಅಕ್ಕ ತಂಗಿಯರೇ ಧರಿಸಿ ಪ್ರತಿಕ್ರಿಯೆ ನೀಡಿದರು.
ಇವರು ಪ್ಯಾಡ್ ವಿತರಿಸುವ ಕಾಲೊನಿಯ ಹೆಣ್ಣುಮಕ್ಕಳಿಗೆ ಒಳ ಉಡುಪುಗಳ ಸಮಸ್ಯೆ ಇತ್ತು.ಅದಕ್ಕೂ ಈ ಹುಡುಗರೇ ಕೊಯಮತ್ತೂರಿನಿಂದ ದೊಡ್ಡ ಪ್ರಮಾಣದಲ್ಲಿ ಪ್ಯಾಂಟಿ ಖರೀದಿಸಿ ತಂದರು. ಅದಕ್ಕೆ ಬೇಕಾದ ಲೂಪ್ (ದಾರದಂಥ ವ್ಯವಸ್ಥೆ) ಅಳವಡಿಸಿ ಹೊಲಿದರು. ‘ಒಳಉಡುಪುಗಳ ಸಮೇತ ಪ್ಯಾಡ್ ಕೊಟ್ಟಾಗ ಎಲ್ಲ ಹೆಣ್ಣುಮಕ್ಕಳು ಅವುಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿದರು’ ಎಂದರು ಪ್ರಮೀಳಾ.
ಹೀಗೆ ತಯಾರಿಸಿದ ಪ್ರತಿ ಪ್ಯಾಡ್‌ಗೆ ₹12 ವೆಚ್ಚವಾಗುತ್ತದೆ. ‘ಸದ್ಯ ನಮ್ಮದೇ ಆದ ಕಲ್ಪ ಸಂಸ್ಥೆಯ ಮೂಲಕ ಉಚಿತವಾಗಿಯೇ ಕೊಡುತ್ತಿದ್ದೇವೆ. ಪ್ರತಿ ತಿಂಗಳು15 ಸಾವಿರದಷ್ಟು ಪ್ಯಾಡ್‌ಗಳಿಗೆ ಬೇಡಿಕೆಯಿದೆ.ಆದರೆ, ಬಿಡುವಿನ ವೇಳೆ, ರಜಾ ದಿನಗಳಲ್ಲಿ ಮಾತ್ರ ಇದನ್ನು ಮಾಡುತ್ತಿದ್ದೇವೆ. ಸುಮಾರು 5,500ರಷ್ಟು ಪ್ಯಾಡ್ ಉತ್ಪಾದನೆ ಮಾಡುತ್ತಿದ್ದೇವೆ. ಹುಡುಗಿಯರು ಫಿನಿಷಿಂಗ್, ಪ್ಯಾಕೇಜ್ ಮಾಡುವ ಕೆಲಸ ಮಾಡುತ್ತಾರೆ’ ಎಂದು ಪ್ರಮೀಳಾ ಅವರು ಮಾಹಿತಿ ನೀಡಿದರು.
ಪ್ಯಾಡ್ ಬಳಕೆ ಕುರಿತು ಮಂಗಳೂರು, ಬೆಂಗಳೂರು, ಕೋಲಾರದಲ್ಲಿ ಬೀದಿ ನಾಟಕ ಪ್ರದರ್ಶಿಸಿದ್ದಾರೆ. ಮುಂದೆ ವುಡ್ ಪಲ್ಪ್ ಮತ್ತು ಬಾಳೆ ನಾರು ಬಳಸಿ ಪ್ಯಾಡ್ ತಯಾರಿಸುವ ಕಲ್ಪನೆಯೂ ಇದೆ. ಸಭೆ ಸಮಾರಂಭಗಳಲ್ಲಿ ಹೆಚ್ಚುವರಿಯಾಗಿ ಉಳಿಯುವ ಆಹಾರವನ್ನು ಅನಾಥಾಶ್ರಮ, ಹಾಸ್ಟೆಲ್‌ಗಳಿಗೂ ವಿತರಿಸುವ ಕಾರ್ಯ ಮಾಡುತ್ತಿದೆ ಕಲ್ಪ ಸಂಸ್ಥೆ. ಪ್ರಮೀಳಾ ಅವರ ಈ ಸೇವೆಗೆ ಪತಿ ಹರ್ಷ ಹಾಗೂ ಕುಟುಂಬದವರ ಸಂಪೂರ್ಣ ಬೆಂಬಲವೂ ಇದೆ.
ತಮ್ಮ ಅಕ್ಕ ತಂಗಿಯರು ಅನುಭವಿಸುವ ಪಾಡು, ನಾಳೆ ಬರುವ ಪತ್ನಿ, ಮಗಳು ಅವರೆಲ್ಲರನ್ನೂ ಹುಡುಗರು ಅರ್ಥ ಮಾಡಿಕೊಳ್ಳಬೇಕು. ಬದುಕಿನ ಇಂಥ ಸೂಕ್ಷ್ಮ ವಿಚಾರಗಳನ್ನು ತರಗತಿಯಿಂದಾಚೆ ಕಲಿಸುವ ಪ್ರಯತ್ನ ಮಾಡಿದೆ. ಯಾರೂ ಅಷ್ಟಾಗಿ ಗಮನಹರಿಸದ ಕ್ಷೇತ್ರದತ್ತಲೇ ಆಸಕ್ತಿ ವಹಿಸಿ ಕೆಲಸ ಮಾಡಿದೆ.
ಪ್ರಮೀಳಾ ರಾವ್, ಮುಖ್ಯಸ್ಥೆ ಕಲ್ಪ ಟ್ರಸ್ಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.