ಕ ಟಗೇರಿಯ ಬಡ ಕುಟುಂಬದ ಭಾರತಿ ಶ್ರೀಶೈಲ ತುಪ್ಪದ ಅವರು ಕೂಲಿ ಮಾಡಿ ಬದುಕು ಸವೆಸುತ್ತಿದ್ದರು. ಎರಡು ವರ್ಷಗಳ ಹಿಂದೆ ಸಿಕ್ಕ ಸಣ್ಣ ಆರ್ಥಿಕ ನೆರವಿನಿಂದ, ಕೂಲಿ ಬಿಟ್ಟು, ಚುರುಮುರಿ ವ್ಯಾಪಾರ ಆರಂಭಿಸಿದರು. ಅದರಲ್ಲಿಯೇ ತಕ್ಕಮಟ್ಟಿನ ಆದಾಯ ಗಳಿಸಿ ಪುತ್ರಿಯರ ಮದುವೆ ಮಾಡಿದ್ದಾರೆ. ಇನ್ನೊಬ್ಬ ಪುತ್ರಿಯನ್ನು ಬಿ.ಕಾಂ ಓದಿಸುತ್ತಿದ್ದಾರೆ !...
ಇದೇ ರೀತಿ ಕೂಲಿಮಾಡಿಕೊಂಡಿದ್ದ ಮೀನಾಕ್ಷಿ ಹೆರೂರ ಅವರದ್ದು ಮತ್ತೊಂದು ಕತೆ. ಊಟಕ್ಕೆ ತತ್ವಾರ ಇತ್ತು. ಇನ್ನು ದಿನದ ಕೂಲಿಯಲ್ಲಿ ಮಗಳಿಗೆ ಮದುವೆ ಮಾಡುವುದು ಹೇಗೆ ಎಂದು ಯೋಚಿಸುತ್ತಿದ್ದಾಗಲೇ ಸಕಾಲದಲ್ಲಿ ಸಿಕ್ಕ ಹಣಕಾಸಿನ ನೆರವು ಹೋಟೆಲ್ ಉದ್ಯಮವನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಹಂತ ಹಂತವಾಗಿ ವ್ಯಾಪಾರ ಸುಧಾರಿಸಿತು. ಮಗಳ ಮದುವೆಯೂ ಆಯಿತು. ಬ್ಯಾಂಕಿಗೆ ಪಿಗ್ಮಿ ಕಟ್ಟುವ ಹಂತಕ್ಕೆ ಜೀವನ ಬದಲಾಯಿತು.
ಇದು ಕೇವಲ ಭಾರತಿ, ಮೀನಾಕ್ಷಿ ಅವರ ಬದುಕು ಬದಲಾದ ಕತೆಯಲ್ಲ. ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡ ತಾಲ್ಲೂಕಿನ ಕಟಗೇರಿ–ಕೊಂಕಣಕೊಪ್ಪ ಗ್ರಾಮಗಳ 500ಕ್ಕೂ ಹೆಚ್ಚು ಮಹಿಳೆಯರು ಇಂಥದ್ದೇ ಆರ್ಥಿಕ ನೆರವಿನೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ದುಡಿಯಬೇಕೆಂಬ ಛಲವಿರುವ ಹೆಣ್ಣುಮಕ್ಕಳ ರಟ್ಟೆಗೆ ಶಕ್ತಿ ತುಂಬುತ್ತಿರುವುದು ಚಾಮುಂಡೇಶ್ವರಿ ಮಹಿಳಾ ಒಕ್ಕೂಟ.
ದೀನದಯಾಳ ಅಂತ್ಯೋದಯ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದಡಿ2019ರಲ್ಲಿ ಕಟಗೇರಿ ಮತ್ತು ಕೊಂಕಣಕೊಪ್ಪ ಗ್ರಾಮಗಳ 90ಕ್ಕೂ ಹೆಚ್ಚು ಸ್ವಸಹಾಯ ಸಂಘಗಳು ಸೇರಿಚಾಮುಂಡೇಶ್ವರಿ ಮಹಿಳಾ ಒಕ್ಕೂಟ ರಚಿಸಿವೆ. ಸುಮಾರು 900 ಮಹಿಳೆಯರು ಒಕ್ಕೂಟದ ಸದಸ್ಯರು. ಇದರಲ್ಲಿ 500 ಮಹಿಳೆಯರುಒಕ್ಕೂಟದಿಂದ ಸಾಲ ಪಡೆದು ಸ್ವ ಉದ್ಯೋಗ ಆರಂಭಿಸಿದ್ದಾರೆ. ಕೂಲಿ ಮಾಡುತ್ತಿದ್ದವರು ಕಿರು ಉದ್ದಿಮೆಯ ನೊಗವನ್ನು ಹೊತ್ತಿದ್ದಾರೆ.
ಹೀಗೆ ಶುರುವಾಯ್ತು...
ಚಾಮುಂಡೇಶ್ವರಿ ಮಹಿಳಾ ಒಕ್ಕೂಟಕ್ಕೆ ಬಾಗಲಕೋಟೆ ಜಿಲ್ಲಾ ಪಂಚಾಯತಿಯಿಂದ ಕೇಂದ್ರ ಸರ್ಕಾರದ ಸಮುದಾಯ ಬಂಡವಾಳ ನಿಧಿಯಡಿ ₹21 ಲಕ್ಷ ಹಾಗೂ ಕಿರು ಆಹಾರ ಉತ್ಪನ್ನ ತಯಾರಿಕೆ (ಪಿಎಂಎಫ್ ಎಂಇ)ಯೋಜನೆಯಡಿ ₹ 6 ಲಕ್ಷ ಅನುದಾನ ದೊರೆತಿದೆ.
ಎರಡು ವರ್ಷಗಳಿಂದ ಈವರೆಗೆ 500 ಮಹಿಳೆಯರಿಗೆ ₹ 1 ಕೋಟಿವರೆಗೆ ಸಾಲ ದೊರೆತಿದೆ. ಸಾಲ ಪಡೆದವರು ಕೃಷಿ, ಹೈನುಗಾರಿಕೆ,ಕೋಳಿ, ಕುರಿ ಸಾಕಾಣಿಕೆಯಂಥ ಉದ್ದಿಮೆ ಆರಂಭಿಸಿದ್ದಾರೆ. ಶ್ಯಾವಿಗೆ, ಹಪ್ಪಳ, ಚಟ್ನಿ, ರೊಟ್ಟಿ, ಚಕ್ಕುಲಿಯಂತಹ ಆಹಾರ ಉತ್ಪನ್ನಗಳ ತಯಾರಿಕೆ, ಟೇಲರಿಂಗ್, ಬಟ್ಟೆ, ಬ್ಯಾಗ್ ತಯಾರಿಕೆಯಂತಹ ಗುಡಿ ಕೈಗಾರಿಕೆಯಲ್ಲಿ ಕೆಲವರು ನಿರತರಾಗಿದ್ದಾರೆ. ಇನ್ನು ಕೆಲವರು ನೇಕಾರಿಕೆ, ಕುಂಬಾರಿಕೆ, ಹೋಟೆಲ್ ಉದ್ಯಮ, ಬ್ಯೂಟಿ ಪಾರ್ಲರ್, ಫೋಟೊ ಸ್ಟುಡಿಯೊ, ಝರಾಕ್ಸ್ ಅಂಗಡಿಯಿಟ್ಟು ಬದುಕಿಗೆ ‘ಅರ್ಥ’ಕಂಡುಕೊಂಡಿದ್ದಾರೆ.
‘ಸಾಲ ಪಡೆಯುವಾಗ ಅಳುಕಿತ್ತು. ಗೊತ್ತಿದಿದ್ದು ಹಪ್ಪಳ ಮಾಡುವ ಕೆಲಸ. ರಾಗಿ, ಗೋವಿನಜೋಳ, ಆಲೂಗೆಡ್ಡೆ ಹೀಗೆ ನಾನಾ ಬಗೆಯ ಹಪ್ಪಳ ಮಾಡುತ್ತಿದ್ದೇನೆ. ಸಕಾಲಕ್ಕೆ ಸಾಲ ಮರುಪಾವತಿಯಾಗುವಷ್ಟು ಆರ್ಡರ್ ಬರುತ್ತಿದೆ. ಒಕ್ಕೂಟ ಬದುಕಿಗೆ ಬೆಳಕಾಗಿದೆ’ ಎನ್ನುತ್ತಾರೆ ಒಕ್ಕೂಟದ ಸದಸ್ಯೆ ಲಕ್ಷ್ಮಿ ಹೊಕ್ರಾಣಿ.
‘ಮನೆಗೆಲಸ ಮಾಡಿಕೊಂಡಿದ್ದೆ. ಒಕ್ಕೂಟದಿಂದ₹ 25 ಸಾವಿರ ಸಾಲ ಸಿಕ್ಕಿತು. ರೊಟ್ಟಿ ವ್ಯಾಪಾರ ಆರಂಭಿಸಿದೆ. ಸೌರಶಕ್ತಿ ಬಳಸಿ ರೊಟ್ಟಿ ಮಾಡುವ ಮಶಿನ್ ಖರೀದಿಸಿದ್ದೇನೆ. ಈಗ ತಿಂಗಳಿಗೆ 30 ಸಾವಿರ ರೊಟ್ಟಿ ಮಾರ್ತೀನಿ. ₹15 ಸಾವಿರಕ್ಕೂ ಹೆಚ್ಚು ಆದಾಯವಿದೆ.ಈ ನೆರವು ಬದುಕಿನ ದಿಕ್ಕನ್ನೇ ಬದಲಿಸಿದೆ‘ ಎಂದು ಜಯಶ್ರೀ ತುಪ್ಪದ ಹರ್ಷ ವ್ಯಕ್ತಪಡಿಸುತ್ತಾರೆ.
₹ 25 ಸಾವಿರ ಸಾಲ
ಒಕ್ಕೂಟ ವ್ಯಾಪ್ತಿಯಲ್ಲಿರುವ ಪ್ರತಿ ಸ್ವಸಹಾಯ ಗುಂಪಿನ ಮೂವರು ಮಹಿಳೆಯರಿಗೆ ಶೇ1ರ ಬಡ್ಡಿ ದರದಲ್ಲಿ ತಲಾ ₹25 ಸಾವಿರ ಸಾಲ, ಪರಿಶಿಷ್ಟ ಜಾತಿ, ಪಂಗಡದ ಐವರು ಸದಸ್ಯರಿಗೆ ₹1.25 ಲಕ್ಷ ಸಾಲ ನೀಡಲಾಗುತ್ತಿದೆ. ಕಿರು ಆಹಾರೋತ್ಪನ್ನ ತಯಾರಿಕೆಗಾಗಿ ತಲಾ ₹40 ಸಾವಿರ ಸಾಲ ನೀಡಲಾಗುತ್ತಿದೆ. ಪಡೆದ ಸಾಲವನ್ನು ಬಡ್ಡಿ ಸಮೇತ 18 ತಿಂಗಳಲ್ಲಿ ಮರುಪಾವತಿ ಮಾಡಬೇಕೆಂಬ ನಿಬಂಧನೆಯಿದೆ. ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಯಾಗುತ್ತಿರುವುದು ಈ ಒಕ್ಕೂಟದ ಅಗ್ಗಳಿಕೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಒಕ್ಕೂಟದ ಅಧ್ಯಕ್ಷೆ ಭಾಗೀರಥಿ ಮೇಟಿ.
ಮಾಸಿಕ ಸಂತೆಯ ನೆರವು
ಈ ಒಕ್ಕೂಟ ಸಾಲ ಕೊಡುವುದಷ್ಟೆ ಅಲ್ಲ, ಸದಸ್ಯರು ತಯಾರಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸವನ್ನು ಮಾಡಲಾಗುತ್ತಿದೆ. ಪ್ರತಿ ತಿಂಗಳು ಒಕ್ಕೂಟದಿಂದ ಸಂತೆ ನಡೆಯುತ್ತದೆ. ತರಕಾರಿ, ದವಸ, ಧಾನ್ಯ, ಕರಕುಶಲ ವಸ್ತುಗಳಂಥ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತದೆ.
‘ನಮಗ ಸ್ವಲ್ಪ ಹೊಲ ಐತ್ರಿ. ಅದರಾಗ ಬ್ಯಾರೆ ಬ್ಯಾರೆ ತರಕಾರಿ ಬೆಳೆದು ಸಂತೆ ನಡೆಯುವ ಊರುಗಳಿಗೆ ಹೋಗಿ ಮಾರಾಟ ಮಾಡ್ತೀವಿ. ಕೈತುಂಬ ರೊಕ್ಕ ಸಿಗತ್ತ. ಮಕ್ಕಳಿಗೆ ಸಾಲಿ ಕಲಿಸಾಕ ತೊಂದ್ರೆ ಇಲ್ಲ. ತರಕಾರಿಗಳನ್ನು ದಲ್ಲಾಳಿಗಳಿಗೆ ಕೊಡೋದಿಲ್ಲ. ನಾವೇ ಕುಂತ ಮಾರ್ತೀವಿ. ಲಾಭ ಚಲೋ ಸಿಗತ್ತದಾ. ಒಕ್ಕೂಟದ ಸಾಲ ನಮ್ಮ ಪಾಲಿಗೆ ಸಂಜೀವಿನಿ ಆಗೈತೆ’ ಎನ್ನುತ್ತಾರೆ ಸುಧಾ ಕಮತಗಿ ಹಾಗೂ ಬಾಳವ್ವ ಮೊಕಾಶಿ.
ಇವರ ಜೊತೆಗೆ, ಬ್ಯಾಗ್, ಮಾಸ್ಕ್ ಹೊಲಿಯುವ ಭಾರತಿ ಉಮೇಶ ತುಪ್ಪದ, ಕ್ಯಾಮೆರಾ ಹಿಡಿದು ಪೋಟೊ ತೆಗೆಯುವ ಶೈಲಾ ಲಿಂಗನಾಯಕರ, ಗರಿಗರಿ ಶಾವಿಗೆ ತಯಾರಿಸುವ ಕಾಳಮ್ಮ ಬಡಿಗೇರ, ಯಲ್ಲಮ್ಮ ಗಾಣಿಗೇರ, ರುಚಿ, ರುಚಿ ಹಳ್ಳಿ ಊಟ ತಯಾರಿಸಿ ಸೈ ಎನಿಸಿಕೊಂಡಿರುವ ಈರಬಸವ್ವ ಮಠಪತಿ, ನಾಲ್ಕಾರು ಎಮ್ಮೆಗಳನ್ನು ಖರೀದಿಸಿ ಹೈನುಗಾರಿಕೆಯಲ್ಲಿ ತೊಡಗಿರುವ ಸುಮಿತ್ರಾ ಮೊಕಾಶಿ, ಅನಸೂಯಾ ದಂಡನ್ನವರ, ಸುಜಾತಾ ಕಾಮನ್ನವರ, ರೇಣುಕಾ ಡೋಣಿ, ಬೇಕರಿ ಆರಂಭಿಸಿರುವ ಕೊಂಕಣಕೊಪ್ಪ ಗ್ರಾಮದ ಲಕ್ಷ್ಮವ್ವ ರೊಳ್ಳಿ ಇವರೆಲ್ಲರೂ ಒಕ್ಕೂಟದ ನೆರವು ಪಡೆದವರು.
ಬೇರೆ ರಾಜ್ಯಕ್ಕೂ ವಿಸ್ತರಣೆ
ಒಕ್ಕೂಟದ ಮಹಿಳೆಯರು ತಯಾರಿಸಿದ ವಿವಿಧ ಬಗೆಯ ಬ್ಯಾಗ್, ಪರ್ಸ್ ಮತ್ತಿತರರ ಕಸೂತಿ ಬಟ್ಟೆಗಳು ದೆಹಲಿ, ಕೋಲ್ಕತ್ತಾ, ಭುವನೇಶ್ವರ ಹೀಗೆ ಬೇರೆ ಬೇರೆ ರಾಜ್ಯಗಳಿಗೂ ಮಾರಾಟವಾಗುತ್ತಿವೆ. ಒಕ್ಕೂಟ ಕೇವಲ ವ್ಯವಹಾರ, ವ್ಯಾಪಾರ, ಉದ್ಯಮಕ್ಕಷ್ಟೇ ಸೀಮಿತವಾಗದೇ ಗ್ರಾಮದಲ್ಲಿನ ಸಮಾಜಮುಖಿ ಕಾರ್ಯಗಳಲ್ಲೂ ತೊಡಗಿಸಿಕೊಳ್ಳುತ್ತಿದೆ.ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಚಾಮುಂಡೇಶ್ವರಿ ಒಕ್ಕೂಟವನ್ನು ಶೀಲಾ ಮೇಟಿ ಅವರ ನೇತೃತ್ವದ 15 ಸದಸ್ಯರ ತಂಡ ಸುಗಮವಾಗಿ ಮುನ್ನಡೆಸುತ್ತಿದೆ.
ಪ್ರಶಸ್ತಿ – ಪುರಸ್ಕಾರ
ಒಕ್ಕೂಟದ ಕಾರ್ಯವೈಖರಿಯನ್ನು ಮೆಚ್ಚಿದ ಜಿಲ್ಲಾ ಪಂಚಾಯ್ತಿ, ಕಳೆದ ಸಾಲಿನಲ್ಲಿ ₹ 1 ಲಕ್ಷ ಮೊತ್ತದ ಬಹುಮಾನ ನೀಡಿದೆ. ಮಷಿನ್ ಬಳಸಿ ಪ್ರತಿ ತಿಂಗಳು ಸಾವಿರಾರು ರೊಟ್ಟಿ ತಯಾರಿಸಿ ಮಾರಾಟ ಮಾಡುವ ಒಕ್ಕೂಟದ ಸದಸ್ಯೆ ಜಯಶ್ರೀ ತುಪ್ಪದ ಅವರಿಗೆ ರಾಜ್ಯಮಟ್ಟದ ಪುರಸ್ಕಾರದ ಗೌರವವೂ ದೊರೆತಿದೆ.
---
ಸಾಲ ಪಡೆದವರೆಲ್ಲರೂ ಆರ್ಥಿಕವಾಗಿ ಸಬಲರಾಗಿದ್ದಾರೆ. ನಿಜವಾಗಿಯೂ ನಮ್ಮ ಒಕ್ಕೂಟ ಬಡವರ ಬದುಕಿಗೆ ಸಂಜೀವಿನಿ.
- ಭಾಗೀರಥಿ ಮೇಟಿ, ಅಧ್ಯಕ್ಷೆ, ಚಾಮುಂಡೇಶ್ವರಿ ಮಹಿಳಾ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.