ADVERTISEMENT

PV Web Exclusive | ಬದಲಾಗುತ್ತಿದೆ ಮಹಿಳಾ ರೂಪದರ್ಶಿಯರ ಅಳತೆಗೋಲು

ಫ್ಯಾಷನ್‌ ಲೋಕ

ಸುಧಾ ಹೆಗಡೆ
Published 15 ಸೆಪ್ಟೆಂಬರ್ 2020, 5:42 IST
Last Updated 15 ಸೆಪ್ಟೆಂಬರ್ 2020, 5:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಫ್ಯಾಷನ್‌ ಉದ್ಯಮವನ್ನು ತೆಗೆದುಕೊಂಡರೆ ಇತ್ತೀಚೆಗೆ ಬಹಳಷ್ಟು ಬದಲಾವಣೆಗಳು ಕ್ಷಿಪ್ರ ಗತಿಯಲ್ಲಿ ಆಗುತ್ತಿರುವುದನ್ನು ಗಮನಿಸಬಹುದು. ಹಿಂದುಸ್ತಾನ್‌ ಯೂನಿಲಿವರ್‌ ‘ಫೇರ್‌ ಆ್ಯಂಡ್‌ ಲವ್ಲಿ’ ಫೇಸ್‌ ಕ್ರೀಮ್‌ ಪ್ಯಾಕ್‌ ಮೇಲೆ ‘ಗ್ಲೋ ಆ್ಯಂಡ್‌ ಲವ್ಲಿ’ ಎಂದು ಬದಲಾಯಿಸಿದ್ದು ಶ್ವೇತ ವರ್ಣದ ತ್ವಚೆ ಮಾತ್ರ ಶ್ರೇಷ್ಠ ಎಂಬ ಬಹುತೇಕರ ಕುರುಡು ನಂಬಿಕೆಯ ಬುಡವನ್ನು ಅಲ್ಲಾಡಿಸಿದೆ. ಹಾಗೆಯೇ ವಿವಿಧ ಸಮೂಹ ಮಾಧ್ಯಮದಲ್ಲಿ ವಿವಿಧ ಬಗೆಯ ವ್ಯಕ್ತಿತ್ವವನ್ನು ಬಿಂಬಿಸುವಾಗಲೂ ಈ ಬದಲಾವಣೆಗಳನ್ನು ನಿಚ್ಚಳವಾಗಿ ಕಾಣಬಹುದು.

ಈ ನಿಟ್ಟಿನಲ್ಲಿ ಇತ್ತೀಚೆಗೆ ಪ್ರಮುಖ ಒಳ ಉಡುಪು ತಯಾರಿಕಾ ಕಂಪನಿಯೊಂದು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಜಾಹೀರಾತು ಗಮನ ಸೆಳೆಯುತ್ತದೆ. ‘ಅಂಡರ್‌ಆರ್ಗ್ಯುಮೆಂಟ್‌’ ಕಂಪನಿ ರೂಪದರ್ಶಿಗಳನ್ನು ಅವರ ಬಾಹ್ಯ ನೋಟದ ಮೇಲೆ ಆಯ್ಕೆ ಮಾಡುವ ಬದಲು ಮಹಿಳೆಯರಿಗೆ ಲೇಖನಗಳನ್ನು ತನ್ನ ವೆಬ್‌ಸೈಟ್‌ಗೆ ಕಳಿಸುವಂತೆ ಕೇಳಿತು. ಲೇಖನದ ವಿಷಯದ ಆಯ್ಕೆಯೂ ಮಹಿಳೆಯರಿಗೇ ಬಿಟ್ಟಿತು. ಉದಾಹರಣೆಗೆ ಆಧುನಿಕ ಸಂಬಂಧದ ಒಳಹೊರಗು, ಸ್ಟೀರಿಯೊಟೈಪ್‌ ಸಿದ್ಧಾಂತವನ್ನು ಎದುರಿಸಿ ನಿಲ್ಲುವುದು, ಲಿಂಗ ತಾರತಮ್ಯ.. ಹೀಗೆ ತರಾವರಿ ವಿಷಯಗಳು.

ಈ ಬ್ರ್ಯಾಂಡ್‌ನ ಸ್ಥಾಪಕರಾದ ಮೈನಾ ಸಿಸ್ಸ್‌ ಅವರ ಉದ್ದೇಶವೆಂದರೆ ಮಹಿಳೆಯರ ದೇಹಸಿರಿಯ ಅಳತೆಯಂತಹ ಹಳೆಯ ಹಾಗೂ ಕೀಳುಮಟ್ಟದ ಸಿದ್ಧಾಂತದ ಬದಲು ಅವರಿಗೆ ಅಸ್ಮಿತೆಯನ್ನು ಒದಗಿಸುವುದಾಗಿತ್ತು. ಮಹಿಳೆಯರ ಸ್ವಾನುಭವ, ಅವರ ವ್ಯಕ್ತಿತ್ವ, ನೈಜ ಬದುಕಿನ ಮೇಲಿನ ಲೇಖನಗಳನ್ನೇ ಆಯ್ಕೆ ಮಾಡಿ, ದೈಹಿಕ ಅಂದಚೆಂದವನ್ನು ಕಡೆಗಣಿಸಿ ರೂಪದರ್ಶಿಯರನ್ನಾಗಿ ಆಯ್ಕೆ ಮಾಡಲಾಯಿತು. ಜಾಹೀರಾತು ಕ್ಷೇತ್ರ, ಅದರಲ್ಲೂ ಮಹಿಳೆಯರ ಉಡುಪು, ಒಳ ಉಡುಪಿನ ಜಾಹೀರಾತಿಗೆ ತೆಳ್ಳನೆಯ, ಬಳುಕುವ, ಶ್ವೇತವರ್ಣದ ತ್ವಚೆ ಹೊಂದಿರುವ ಮಾದಕ ರೂಪದರ್ಶಿಯರನ್ನೇ ಆಯ್ಕೆ ಮಾಡುವ ಸಂಪ್ರದಾಯವಿರುವಾಗ ಮೈನಾರ ಈ ನಿರ್ಧಾರದ ಹಿಂದೆ ಮಹಿಳೆಯರು ಕೇವಲ ದೇಹ ಮಾತ್ರವಲ್ಲ, ಅವರ ವ್ಯಕ್ತಿತ್ವ, ಬದುಕಿನ ಕಥೆಗೆ ಮೌಲ್ಯವಿದೆ ಎಂಬುದನ್ನು ತೋರಿಸುವ ಪ್ರಮುಖ ಅಂಶವಿತ್ತು.

ADVERTISEMENT

ಎರಡು ವರ್ಷಗಳ ಹಿಂದೆ ಕೂಡ ಅವರು ಖ್ಯಾತ ರೂಪದರ್ಶಿಗಳನ್ನು ಬಿಟ್ಟು ವಿಭಿನ್ನ ರೀತಿಯ ದೇಹ ಸಿರಿ ಹೊಂದಿರುವ ಮಹಿಳೆಯರನ್ನು ತಮ್ಮ ವೆಬ್‌ಸೈಟ್‌ ರೂಪದರ್ಶಿಗಳಾಗಿ ಆಯ್ಕೆ ಮಾಡಿದ್ದರು.

ವ್ಯಕ್ತಿತ್ವ ಮುಖ್ಯ

ಈ ಒಟ್ಟಾರೆ ಪ್ರಕ್ರಿಯೆಯನ್ನು ಗಮನಿಸಿದರೆ ಇಲ್ಲಿ ವೈವಿಧ್ಯತೆಗೆ, ಸಮಾಜದಲ್ಲಿ ಇರುವ ವ್ಯಕ್ತಿಗಳ ನೈಜ ಸ್ವರೂಪಕ್ಕೆ ಆದ್ಯತೆ ನೀಡಲಾಗಿದೆ. ಅವರ ಭಾವನೆಗಳನ್ನು, ವ್ಯಕ್ತಿತ್ವವನ್ನು ಗಮನದಲ್ಲಿರಿಸಿಕೊಳ್ಳಲಾಗಿದೆ. ಚೆಂದದ ರೂಪದರ್ಶಿಯ ದೇಹವನ್ನು ಹೊಂದಿರುವವರು ಬೆರಳೆಣಿಕೆಯಲ್ಲಿ. ಹೀಗಿರುವಾಗ ಆಕೆ ಜಾಹೀರಾತಿನ ಚಿತ್ರದಲ್ಲಿ ಧರಿಸಿದಂತಹ ಒಳ ಉಡುಪು ಎಷ್ಟು ಮಂದಿ ಮಹಿಳೆಯರಿಗೆ ಸರಿ ಹೊಂದುತ್ತದೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುವುದು ಸಹಜ. ಸಮಾಜದಲ್ಲಿರುವ ಸಾಮಾನ್ಯ ಜನ, ರೂಪದರ್ಶಿಗಳಲ್ಲದವರು ಟ್ರೆಂಡ್‌ ಸೆಟರ್‌ ಅಲ್ಲವೇ ಎಂಬ ಪ್ರಶ್ನೆಗೆ ಮೈನಾ ಅವರು ಉತ್ತರ ನೀಡಿದ್ದಾರೆ. 40 ವಿಧದ ಕಂಚುಕಗಳಿಗೆ 40 ಬಗೆಯ ವೈವಿಧ್ಯಮಯ ದೇಹ ಹೊಂದಿದವರೇ ರೂಪದರ್ಶಿಗಳಾಗಬೇಕೆ ಹೊರತು ತೆಳ್ಳಗೆ, ಬೆಳ್ಳಗೆ ಇರುವ ಬೆರಳೆಣಿಕೆಯ ರೂಪದರ್ಶಿಗಳಲ್ಲ ಎಂಬುದನ್ನು ಆಕೆ ಸಾಬೀತುಪಡಿಸಿದ್ದಾರೆ.

ದೇಹವೆಂಬುದು ಹೀಗೇ ಇರಬೇಕು ಎಂದು ಎಲ್ಲಿಯೂ ಹೇಳಿಲ್ಲ. ದಪ್ಪ– ತೆಳ್ಳಗೆ, ಕಪ್ಪು– ಬಿಳಿ– ಕಂದು, ಗಿಡ್ಡ– ಉದ್ದ.. ಇವೆಲ್ಲ ನಮ್ಮ ದೇಹ, ನಮ್ಮ ಹೆಮ್ಮೆಯಾಗಿರಬೇಕು ಅಷ್ಟೆ. ಇಲ್ಲಿ ಅವರವರ ಮನಃಸ್ಥಿತಿ ಮುಖ್ಯ. ದಪ್ಪ ಇದ್ದವರನ್ನು ಅಣಕಿಸುವುದು ಬಹುಶಃ ಮಕ್ಕಳಿರುವಾಗಲೇ ಶುರುವಾಗುತ್ತದೆ. ಶಾಲೆಯಲ್ಲಿ ‘ನೋಡೋ ಡುಮ್ಮಿ ಬಂದ್ಲು’ ಎನ್ನುವುದು, ‘ಆ ಡ್ರಂ ಏನು ತಿನ್ನುತ್ತಾನೋ’ ಎಂದು ಅಣಕಿಸುವುದು ಶುರುವಾಗುತ್ತದೆ. ಇದೆಲ್ಲ ಯಾವತ್ತಿನಿಂದಲೂ ಇರುವಂಥದ್ದೇ ಎನ್ನುವುದು, ದಪ್ಪ ಇದ್ದವರು ಅವಮಾನದಿಂದ ನೊಂದುಕೊಳ್ಳುವುದು ಇವೆಲ್ಲ ಈಗ ಸಾಮಾನ್ಯ ಎಂದು ನಿರ್ಲಕ್ಷ್ಯ ಮಾಡುವಂತಹ ಪರಿಸ್ಥಿತಿಯಿಲ್ಲ.

ಸೆಲೆಬ್ರಿಟಿಗಳು...

ಸಿನಿಮಾ ಕ್ಷೇತ್ರದಲ್ಲೂ ಅಷ್ಟೇ, ಅದರಲ್ಲೂ ಬಾಲಿವುಡ್‌ನಲ್ಲಿ ತೆಳ್ಳಗೆ, ಬೆಳ್ಳಗೆ ಇದ್ದ ನಟಿಯರಿಗೆ ಮಣೆ ಹಾಕುವಂತಹ ರೂಢಿ ಬಹಳಷ್ಟು ವರ್ಷಗಳಿಂದ ನಡೆದುಕೊಂಡು ಬಂದಿತ್ತು. ಹೀಗಾಗಿ ಉತ್ತರ ಭಾರತೀಯರೇ ಹೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದರು. ದಕ್ಷಿಣದಲ್ಲಿ ಈ ರೀತಿ ಅಲಿಖಿತ ಮಾಡೆಲ್‌ ಎನ್ನುವಂತಹ ದೇಹದ ಅಳತೆಗಳನ್ನು ಹೊಂದಿರುವವರು ಮಾತ್ರ ಅವಕಾಶ ಗಿಟ್ಟಿಸುತ್ತಿದ್ದರು. ಇದು ಎಷ್ಟು ವಿಪರೀತಕ್ಕೆ ಹೋಯಿತೆಂದರೆ, ದಕ್ಷಿಣ ಭಾರತದ ಭಾಷೆಗಳ ಚಿತ್ರಗಳಲ್ಲೂ ಉತ್ತರದ ನಟಿಯರನ್ನು ಆಮದು ಮಾಡಿಕೊಂಡು ಅವಕಾಶ ನೀಡುವಷ್ಟು.

ಈ ‘ಬಾಡಿ ಶೇಮಿಂಗ್‌’ಗೆ ಸಾಮಾನ್ಯರಷ್ಟೇ ಅಲ್ಲ, ಬಹಳಷ್ಟು ಸೆಲೆಬ್ರಿಟಿಗಳೂ ಕೂಡ ಪಕ್ಕಾಗಿದ್ದಾರೆ. ಹಿಂದೆ ಖ್ಯಾತ ಹಿರಿಯ ನಟಿ ರೇಖಾ ಇಂತಹ ಅವಮಾನ ಅನುಭವಿಸಿ ತೆಳ್ಳನೆಯ ದೇಹಕ್ಕಾಗಿ ಕಸರತ್ತು ನಡೆಸಿದರು. ಹೇಮಾಮಾಲಿನಿ ಕೂಡ ‘ಮದ್ರಾಸಿ ಸೊಂಟ’ ಎಂದು ಅನ್ನಿಸಿಕೊಂಡವರೇ. ಇತ್ತೀಚೆಗೆ ತಮ್ಮ ಮನೋಜ್ಞ ಅಭಿನಯದಿಂದ ಖ್ಯಾತಿ ಗಳಿಸಿದ ವಿದ್ಯಾ ಬಾಲನ್ ಕೂಡ ಈ ಬಾಡಿ ಶೇಮಿಂಗ್‌ಗೆ ಒಳಗಾದವರು. ಈ ಬಗ್ಗೆ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ಅಪ್ಪಳಿಸಿದಾಗ ಧೃತಿಗೆಡದ ಆಕೆ ಸಮರ್ಥವಾಗಿ ಎದುರಿಸಿದರಲ್ಲದೇ, ಖಡಕ್‌ ಉತ್ತರವನ್ನು ದಾಟಿಸಿದ್ದಾರೆ.

ಬಾಡಿ ಪಾಸಿಟಿವಿಟಿ ಆಂದೋಲನ

ಈ ನಿಟ್ಟಿನಲ್ಲಿ ‘ಬಾಡಿ ಪಾಸಿಟಿವಿಟಿ’ ಆಂದೋಲನ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ನಡೆದಿದೆ. ನಮ್ಮ ದೇಹ ಹೇಗಿದೆಯೋ ಅದನ್ನು ನಾವು ಒಪ್ಪಿಕೊಳ್ಳುವುದಲ್ಲದೇ, ನಮ್ಮ ಸುತ್ತಲಿನವರೂ ಅಂಗೀಕರಿಸುವಂತೆ ಪ್ರತಿಪಾದಿಸುವುದು ಈ ಆಂದೋಲನದ ಉದ್ದೇಶ. ನಮ್ಮ ಶರೀರ ನಮ್ಮ ಸ್ವತ್ತು; ಇದು ಹೇಗಿರಬೇಕೆಂದು ಮಾಧ್ಯಮಗಳು ಹೇಳುವುದು, ಅವು ಬಯಸಿದಂತೆ ಇರಲು ಕಸರತ್ತು ಮಾಡುವುದು ಎಷ್ಟು ಸರಿ? ನಮ್ಮ ಶರೀರದ ನೋಟ ಹೇಗೇ ಇರಲಿ, ತ್ವಚೆಯ ಬಣ್ಣ ಯಾವುದೇ ಇರಲಿ ಆತ್ಮವಿಶ್ವಾಸದಿಂದ ಮುನ್ನಡೆಯುವ ಧೈರ್ಯ ತುಂಬಲು ಈ ಆಂದೋಲನ ಮುಂಚೂಣಿಯಲ್ಲಿದೆ. ಅದರ ಬದಲು ತೆಳ್ಳಗೆ, ಬೆಳ್ಳಗೆ, ಉದ್ದಕ್ಕೆ ಎಲ್ಲರೂ ಇರಬೇಕೆ– ಜಾಹೀರಾತಿನಲ್ಲಿ ತೋರಿಸುವಂತೆ ಎಂಬುದನ್ನು ಇಲ್ಲಿ ಪ್ರಶ್ನಿಸಬೇಕಾಗುತ್ತದೆ.

ಬಹಳಷ್ಟು ಮಂದಿಗೆ, ಅದರಲ್ಲೂ ಸೆಲೆಬ್ರಿಟಿ ವಲಯದಲ್ಲಿರುವವರಿಗೆ ಅವರು ಬಯಸುವಂತಹ ದೇಹ ಹೊಂದುವಂತಹ ಒತ್ತಡ ಸೃಷ್ಟಿಯಾಗಿಬಿಡುತ್ತದೆ. ಇದು ಒತ್ತಡ ಹಾಗೂ ಆತಂಕವನ್ನೂ ಹುಟ್ಟುಹಾಕುತ್ತದೆ. ಆಹಾರ ಸೇವನೆಯಲ್ಲಿ ಸಮಸ್ಯೆ, ಆತ್ಮವಿಶ್ವಾಸದ ಕೊರತೆಗೂ ಇದೇ ಮೂಲ.

ಹೀಗಾಗಿ ಇತ್ತೀಚೆಗೆ ಕಂಡು ಬರುತ್ತಿರುವ ಬದಲಾವಣೆಗಳು ಸಕಾರಾತ್ಮಕ ದಿಕ್ಕಿನಲ್ಲಿ ಸಾಗುತ್ತಿವೆ. ‘ಪ್ಲಸ್‌ ಸೈಜ್‌’ ಎಂಬ ಶಬ್ದ ಹೆಚ್ಚಾಗಿ ಕೇಳಿ ಬರುತ್ತಿದೆ. ಹಲವಾರು ಜನಪ್ರಿಯ ಫ್ಯಾಷನ್‌ ಬ್ರ್ಯಾಂಡ್‌ಗಳು ಈ ಪ್ಲಸ್‌ ಸೈಜ್‌ ಉಡುಪುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ಪ್ಲಸ್‌ ಸೈಜ್‌ ಉಡುಪುಗಳ ಚಿಲ್ಲರೆ ಮಾರಾಟ ಮಳಿಗೆಗಳೂ ಅಸ್ತಿತ್ವಕ್ಕೆ ಬಂದಿವೆ. ಜಾಹೀರಾತಿಗೆ ಪ್ಲಸ್‌ ಸೈಜ್ ರೂಪದರ್ಶಿಗಳನ್ನು ನೇಮಿಸಿಕೊಳ್ಳುತ್ತಿವೆ. ಒಂದೇ ಬಗೆಯ ಎಲುಬು– ಚರ್ಮ ಮಾತ್ರ ಇರುವ ರೂಪದರ್ಶಿಗಳನ್ನು ನೋಡಿದವರಿಗೆ ಈಗ ವೈವಿಧ್ಯತೆಯ ಅರಿವಾಗುತ್ತದೆ.

ಯುವತಿಯರೂ ಕೂಡ ತಮ್ಮ ದೇಹ ಹೇಗೇ ಇರಲಿ, ಅದನ್ನು ಪ್ರೀತಿಸುವ ಕಲೆ ಬೆಳೆಸಿಕೊಳ್ಳುತ್ತಿದ್ದಾರೆ. ಎಲ್ಲವೂ ಸರಿಯಾದ ದಿಕ್ಕಿನಲ್ಲೇ ಸಾಗಿದರೆ, ದೇಹದ ಆಕಾರ, ಗಾತ್ರ, ಬಣ್ಣದ ಮೇಲೆ ವ್ಯಕ್ತಿತ್ವವನ್ನು ಅಳೆಯುವ ಕೆಟ್ಟ ಪ್ರವೃತ್ತಿ ಮಾಯವಾಗುವ ದಿನ ದೂರವಿಲ್ಲ ಎನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.