ನಮ್ಮ ಜವಾಬ್ದಾರಿ ನಮ್ಮದು ಎಂದುಕೊಳ್ಳುತ್ತಾ ಒಂದು ಮಗುವೂ ಬೇಡ ಎಂಬ ನಿರ್ಧಾರಕ್ಕೆ ಬಂದಿರುವ ದಂಪತಿಗಳ ಸಂಖ್ಯೆ ಜಾಸ್ತಿಯಾಗಿದೆ. ಭಾರತದಲ್ಲಿ ‘ಮಗುಮುಕ್ತ ಜೀವನಶೈಲಿ’ ನಿಧಾನವಾಗಿ ಮುಂಚೂಣಿಗೆ ಬರುತ್ತಿದೆ.
30 ರ ಹರೆಯದ ಮಧುರಾ ಮದುವೆಯಾಗಿ ಆರು ತಿಂಗಳು ಕಳೆದಿರಲಿಲ್ಲ. ಆಗಲೇ ನೆಂಟರಿಷ್ಟರು, ಸ್ನೇಹಿತರು ‘ಏನೂ ವಿಶೇಷ ಸುದ್ದಿ ಇಲ್ವಾ?’ ಎಂದು ಪದೇ ಪದೇ ಕೇಳುತ್ತಿದ್ದರು. ಅವರ ಮಾತಿಗೆ ನಗುತ್ತಲೇ ಪ್ರತಿಕ್ರಿಯಿಸುತ್ತಿದ್ದ ಮಧುರಾ ‘ನಮಗೆ ಮಗು ಬೇಡ ಅಂತ ತೀರ್ಮಾನಿಸಿದ್ದೀವಿ’ ಅಂತಲೇ ಸ್ಪಷ್ಟವಾಗಿ ಉತ್ತರಿಸಿದ್ದಳು. ‘ಅಯ್ಯೋ ಗಂಡ–ಹೆಂಡತಿಗೆ ಕೈತುಂಬಾ ಸಂಬಳ, ಮಗು ನೋಡಿಕೊಳ್ಳಲಿಕ್ಕೂ ಜನರ ಕೊರತೆಯಿಲ್ಲ. ನಿಮ್ಮಿಬ್ಬರಲ್ಲಿ ಯಾರಿಗಾದರೂ ಸಮಸ್ಯೆನಾ?’ ಅಂತ ಪ್ರಶ್ನಿಸುತ್ತಿದ್ದವರಿಗೂ ‘ಇಲ್ಲ ಹಾಗೇನಿಲ್ಲ ಮಗು ಬೇಡ ಅಂತ ನಿರ್ಧರಿಸಿದ್ದೇವೆ ಅಷ್ಟೇ’ ಎನ್ನುವ ಅವಳ ದೃಢಮಾತನ್ನು ಕೇಳಿದವರು ಮರುಪ್ರಶ್ನಿಸಲು ಹೋಗುತ್ತಿರಲಿಲ್ಲ.
ಮಧುರಾಳಂಥ ಅನೇಕ ಹೆಣ್ಣುಮಕ್ಕಳಿಗೆ ತಾಯ್ತನ ಅನ್ನುವುದು ಈಗ ಅನಿವಾರ್ಯವಲ್ಲ. ಬದಲಿಗೆ ಅವರ ಆಯ್ಕೆಯ ಹಕ್ಕಾಗಿ ಪರಿಣಮಿಸಿದೆ. ‘ದಿನಸಿಯಿಂದ ಹಿಡಿದು ಶಿಕ್ಷಣದವರೆಗೆ ದುಬಾರಿಯಾಗಿರುವ ಈ ದಿನಮಾನಗಳಲ್ಲಿ ಮಕ್ಕಳನ್ನು ಸಾಕುವುದು ಸುಲಭವಲ್ಲ. ಆರ್ಥಿಕ ಸದೃಢತೆ ಮಾತ್ರವಲ್ಲ, ದೈಹಿಕ–ಭಾವನಾತ್ಮಕ ಸದೃಢತೆ, ಗುಣಮಟ್ಟದ ಸಮಯ, ಆರೋಗ್ಯಕರ ಪರಿಸರ ಇವೆಲ್ಲವೂ ಮಕ್ಕಳ ಬೆಳವಣಿಗೆಗೆ ಅಗತ್ಯ’ ಎಂದು ಪ್ರತಿಪಾದಿಸುವ ಮಧುರಾ, ಕೋವಿಡ್–19 ಸಾಂಕ್ರಾಮಿಕ ರೋಗದ ಸಮಯದಲ್ಲಿ ತಂದೆ–ತಾಯಿ ಕಳೆದುಕೊಂಡು ಅನಾಥರಾದ ಮಕ್ಕಳ ಸ್ಥಿತಿ ನೋಡಿ, ‘ಮಗು ಬೇಡ’ ಎನ್ನುವ ನಿರ್ಧಾರಕ್ಕೆ ಮತ್ತಷ್ಟು ಬದ್ಧಳಾಗಿದ್ದಾಳೆ.
ಒಂದೆಡೆ ಚೀನಾದಲ್ಲಿ ಮೂರು ಮಕ್ಕಳನ್ನು ಹೊಂದುವ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ, ಭಾರತದಲ್ಲಿ ‘ಮಗುಮುಕ್ತ ಜೀವನಶೈಲಿ’ (ಚೈಲ್ಡ್ ಫ್ರೀ ಇಂಡಿಯಾ) ಆಂದೋಲನ ನಿಧಾನವಾಗಿ ಮುಂಚೂಣಿಗೆ ಬರುತ್ತಿದೆ. ‘ಮಗುಮುಕ್ತ ಜೀವನಶೈಲಿ’ ಜೀವವಿರೋಧಿ ನಿಲುವಲ್ಲವೇ ಎನ್ನುವ ಪ್ರಶ್ನೆಗೆ, ‘ಎಲ್ಲಿಯವರೆಗೆ ಸಮಾಜದಲ್ಲಿ ಲಿಂಗ ತಾರತಮ್ಯ, ಹವಾಮಾನ ವೈಪರೀತ್ಯ, ನಿರುದ್ಯೋಗ, ಬಡತನ, ದುಬಾರಿ ಆರೋಗ್ಯ ವ್ಯವಸ್ಥೆ, ಧಾರ್ಮಿಕ ಅಸಹಿಷ್ಣುತೆ, ಅಸಮರ್ಥ ಶಿಕ್ಷಣ ವ್ಯವಸ್ಥೆ, ಮಾನಸಿಕ ಯಾತನೆ ಕೊನೆಯಾಗುವುದಿಲ್ಲವೋ ಅಲ್ಲಿಯ ತನಕ ಮಕ್ಕಳು ಹೆರುವುದನ್ನು ನಿಲ್ಲಿಸಿ’ ಅನ್ನುವುದು ಈ ಆಂದೋಲನದ ಮುಖ್ಯ ಉದ್ದೇಶ ಎನ್ನುತ್ತಾರೆ ಸಂಘಟಕರು.
ಮಹತ್ವಾಕಾಂಕ್ಷೆಗೆ ತಿಲಾಂಜಲಿ ಕೊಡಬೇಕೇ?
‘ತಾಯಿಯೊಬ್ಬಳು ಮಗುವಿಗೆ ಹಾಲು ಕುಡಿಸುತ್ತಾ, ಸ್ನಾನ ಮಾಡಿಸುತ್ತಾ, ಬಟ್ಟೆ ಬದಲಿಸುತ್ತಾ, ಅವಳು ತಾನೊಬ್ಬ ವಿಜ್ಞಾನಿಯಾಗಬೇಕಿತ್ತಲ್ಲ, ಐಎಎಸ್ ಪರೀಕ್ಷೆಗೆ ಓದಬೇಕಿತ್ತಲ್ಲ’ ಎನ್ನುವುದನ್ನು ಬದಿಗಿರಿಸಬೇಕಾಗುತ್ತದೆ. ಆದರೆ, ಒಬ್ಬ ಗಂಡಸು, ತಾನೊಂದು ಕಾದಂಬರಿ ಬರೆಯಬೇಕೆಂದರೆ ಎಷ್ಟು ಸುಲಭವಾಗಿ ತನ್ನ ಪಿತೃತ್ವದ ಜವಾಬ್ದಾರಿಯನ್ನು ಬದಿಗಿರಿಸಿ, ತನ್ನಿಚ್ಛೆಯ ಕೆಲಸದಲ್ಲಿ ಮಗ್ನವಾಗಿಬಿಡಬಹುದು. ‘ಮಾತೃತ್ವ’ವನ್ನು ಬದಿಗಿರಿಸಿ ತನ್ನ ಮಹತ್ವಾಕಾಂಕ್ಷೆ ಇಲ್ಲವೇ ತನ್ನಿಷ್ಟದ ಕೆಲಸದಲ್ಲಿ ಮಗ್ನಳಾಗಲು ಅವಕಾಶ ಕೊಡುವಷ್ಟು ನಮ್ಮ ಪುರುಷಪ್ರಧಾನ ಸಮಾಜ ಇನ್ನೂ ಪರಿಪಕ್ವವಾಗಿಲ್ಲ. ಹಾಗಾಗಿ, ಎಲ್ಲಿಯತನಕ ಮನೆ ಮತ್ತು ಮಗುವಿನ ಲಾಲನೆ–ಪಾಲನೆಯಲ್ಲಿ ಹೆಣ್ಣಿನಷ್ಟೇ ಜವಾಬ್ದಾರಿಯನ್ನು ಗಂಡಸು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯತನಕ ಕೆಲ ಹೆಣ್ಣುಮಕ್ಕಳು ಮಗುವನ್ನು ಹೆರುವುದಿಲ್ಲ ಎಂದು ನಿರ್ಧರಿಸುವ ಮೂಲಕ ಸ್ತ್ರೀವಾದವನ್ನು ಒಂದು ಹೆಜ್ಜೆ ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ’ ಎನ್ನುತ್ತಾರೆ ಚೈಲ್ಡ್ ಫ್ರೀ ಇಂಡಿಯಾ ಸಹಸ್ಥಾಪಕರಲ್ಲೊಬ್ಬರಾದ ಪ್ರತಿಮಾ ನಾಯ್ಕ್.
**
ಸಾಕಲಾರದ ತಂದೆ, ಏಕೆ ಭೂಮಿಗೆ ತಂದೆ?
ಮೆಟ್ರೊಪಾಲಿಟಿನ್ ನಗರಗಳಲ್ಲಿ ದುಡಿಯುವ ದಂಪತಿಗಳಲ್ಲಿ ಬಹುತೇಕರು ದಿನವಿಡೀ ಕಚೇರಿಯಲ್ಲೇ ಇರುವುದರಿಂದ ಮಗುವಿನ ಜವಾಬ್ದಾರಿ ಯಾರದ್ದು ಎಂಬ ಪ್ರಶ್ನೆ ಎದುರಾಗುತ್ತದೆ. ‘ಇರುವ ಅಲ್ಪ ಜೀವನವನ್ನು ಸುಖವಾಗಿ ಅನುಭವಿಸಬೇಕು. ಮಗುವಿನ ಜಂಜಾಟ ನಮಗೆ ಬೇಡ. ಅಜ್ಜ–ಅಜ್ಜಿ ಇಲ್ಲವೇ ಬೇಬಿ ಸಿಟ್ಟಿಂಗ್‌ನ ಆರೈಕೆಯಲ್ಲಿ ಬೆಳೆಯುವ ಮಕ್ಕಳು ಮುಂದೊಂದು ದಿನ ನೋಡಿಕೊಳ್ಳಲಾಗದಿದ್ದರೆ ಏಕೆ ಜನ್ಮ ನೀಡಿದಿರಿ ಎಂದು ಪ್ರಶ್ನಿಸಬಹುದು. ಸ್ಪಧಾತ್ಮಕ ಜಗತ್ತಿನಲ್ಲಿ ಮಗುವೊಂದನ್ನು ಒತ್ತಡರಹಿತ, ನೋವಿಲ್ಲದೆ ಬೆಳೆಸುವುದು ಕಷ್ಟಕರ. ಹಾಗಾಗಿ ನಮಗೆ ಮಗು ಬೇಡವೇ ಬೇಡ ಎಂದು ನಿರ್ಧರಿಸಿದೆವು’ ಎನ್ನುತ್ತಾರೆ ಬೆಂಗಳೂರಿನ ಎಂಜಿನಿಯರ್ ದಂಪತಿ.
***
ಬೇರೆ ಮಕ್ಕಳು ನಮ್ಮ ಮಕ್ಕಳಲ್ವೇ?
‘ಮಗುವಿಗೆ ಜನ್ಮ ನೀಡುವ ವಿಚಾರದಲ್ಲಿ ನನಗೆ ಹಲವು ಚಳವಳಿಗಾರರು ಆದರ್ಶ. ಎಷ್ಟೇ ವಿಶಾಲಹೃದಯಿ ಆಗಿದ್ದರೂ ಮಗು ಜನಿಸಿದ ಬಳಿಕ ನಾವು ಸಂಕುಚಿತ ಮನೋಭಾವ ಬೆಳೆಸಿಕೊಳ್ಳುತ್ತೇವೆ. ಮಗುವಿನ ಶಿಕ್ಷಣ, ಬಳಿಕ ಉದ್ಯೋಗ, ಗುಣಮಟ್ಟದ ಬದುಕು ನೀಡುವ ಒತ್ತಡದಲ್ಲಿ ಸಾಮಾಜಿಕ ಜವಾಬ್ದಾರಿಗಳನ್ನು ನಮಗೆ ನಾವೇ ಕಡಿಮೆಗೊಳಿಸಿಕೊಂಡು ಬಿಡುತ್ತೇವೆ. ಹಾಗಾಗಿ ಮಗು ಬೇಡ ಎಂದು ನಾವು ನಿರ್ಧರಿಸಿದೆವು. ಹಾಗಾದರೆ, ಮಕ್ಕಳಿರೋ ಇತರ ಚಳವಳಿಗಾರರು ಬದ್ಧತೆ ಹೊಂದಿಲ್ವೆ ಎನ್ನುವ ಪ್ರಶ್ನೆ ಹುಟ್ಟುತ್ತದೆ. ಖಂಡಿತಾ ಬದ್ಧತೆ ಹೊಂದಿದ್ದಾರೆ. ಅದು ಪ್ರಶ್ನಾತೀತ. ನಾನು ಮಕ್ಕಳ ಹಕ್ಕುಗಳ ವಿಚಾರದಲ್ಲಿ ಕೆಲ ಸಮಯ ಕೆಲಸ ಮಾಡಿದ್ದರಿಂದ ನನಗೆ ಮಕ್ಕಳ ಸಮಸ್ಯೆಗಳು ತಿಳಿದಿವೆ. ಸಮಾಜದಲ್ಲಿನ ಶೋಷಿತ, ಸಂತ್ರಸ್ತ ಮಕ್ಕಳೆಲ್ಲರೂ ನಮ್ಮ ಮಕ್ಕಳೇ ಆಗಿದ್ದಾರೆ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಕಾವ್ಯಾ ಅಚ್ಯುತ್.
ಕಾರಣಗಳು ಹತ್ತು–ಹಲವು
ಹಲವು ಜನರು ಹಲವು ಕಾರಣಗಳಿಂದ ಒಂದು ಮಗುವನ್ನೂ ಪಡೆಯುವುದು ಬೇಡ ಎಂದು ನಿರ್ಧರಿಸಿ ಮಗುಮುಕ್ತ ಜೀವನಶೈಲಿಯ ಮೊರೆ ಹೋಗುತ್ತಿದ್ದಾರೆ. ಮನುಷ್ಯ ಪರಿಸರವನ್ನು ಹಾನಿಗೀಡು ಮಾಡುತ್ತಿದ್ದು, ವ್ಯಕ್ತಿಯೊಬ್ಬ ತನ್ನ ವಂಶವನ್ನು ಬೆಳೆಸುತ್ತಾ ಹೋದಂತೆ ಭೂಮಿ ಮೇಲಿನ ಮಾಲಿನ್ಯವೂ ಹೆಚ್ಚುತ್ತಾ ಹೋಗುತ್ತದೆ. ಮಗು ಮಾಡಿಕೊಳ್ಳದೇ ಇದ್ದಲ್ಲಿ ನಿಮ್ಮ ನಂತರ ನಿಮ್ಮ ವಂಶದಲ್ಲಿ ಮಾಲಿನ್ಯದ ಹೆಜ್ಜೆ ಗುರುತು ಶೂನ್ಯವಾಗಿರುತ್ತದೆ ಎನ್ನುವುದು ಒಂದು ವಾದ. ಮನುಷ್ಯನಷ್ಟು ದುಷ್ಟಪ್ರಾಣಿ ಭೂಮಿ ಮೇಲೆ ಮತ್ತೊಬ್ಬನಿಲ್ಲ. ಹಾಗಾಗಿ, ಭೂಮಿಯನ್ನು ಗಿಡಮರ, ಪ್ರಾಣಿಪಕ್ಷಿಗಳಿಗೆ ಬಿಟ್ಟು ಹೋದರೆ ಒಳ್ಳೆಯದು ಎಂದು ನಂಬುವ ವಾದವನ್ನು ‘ವಾಲೆಂಟರಿ ಹ್ಯೂಮನ್ ಎಕ್ಸ್‌ಟಿಂಕ್ಷನ್’ ಚಳವಳಿ ಎನ್ನಲಾಗುತ್ತದೆ. ತಂದೆ–ತಾಯಿಗಳಾಗಿ ಮಗುವಿಗೆ ನೋವು ಕೊಡುವುದು ಸರಿಯಲ್ಲ. ಮಗುವಿಗೆ ಜನ್ಮ ನೀಡಿದರೆ ತಾನೇ ನೋವು ಉಂಟಾಗುವುದು. ಹಾಗಾಗಿ, ಮಗುವಿಗೆ ಜನ್ಮ ನೀಡುವುದನ್ನೇ ಬಿಡೋಣ ಎನ್ನುವ ಸಿದ್ಧಾಂತವನ್ನು ‘ಆ್ಯಂಟಿ ನೇಟಲಿಸಂ’ ಪ್ರತಿಪಾದಿಸುತ್ತದೆ.
ಇವೆಲ್ಲದರ ನಡುವೆ ನಮ್ಮ ಜವಾಬ್ದಾರಿ ನಮ್ಮದು, ಆರೋಗ್ಯ ವಿಮೆಯ ಸೌಕರ್ಯ, ಹಣ, ಸಮಯ ಉಳಿತಾಯ, ಯೌವ್ವನ ಕಾಪಾಡಿಕೊಳ್ಳುವುದು, ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಗಾಗಿಯೂ ಮಗುವನ್ನು ಮಾಡಿಕೊಳ್ಳದಿರಲು ಹಲವು ದಂಪತಿಗಳು ಪ್ರಜ್ಞಾಪೂರ್ವಕವಾಗಿ ನಿರ್ಧರಿಸುತ್ತಾರೆ ಎನ್ನುತ್ತದೆ ‘ಚೈಲ್ಡ್ ಫ್ರೀ ಇಂಡಿಯಾ’ ಅಭಿಯಾನ.
ಎಗ್ ಫ್ರೀಜಿಂಗ್ ಎಂಬ ವರದಾನ
‘ಕೋವಿಡ್ 2ನೇ ಅಲೆಯಲ್ಲಿ ತುಂಬಾ ಮಕ್ಕಳು ಅನಾಥರಾಗಿದ್ದಾರೆ. ಈ ಆತಂಕದಿಂದ ಕೆಲವರು ಮಗು ಮಾಡಿಕೊಳ್ಳುವುದೇ ಬೇಡ ಅಂತಲೂ ನಿರ್ಧರಿಸಿರಬಹುದು. ಆದರೆ, ಕಾಲ ಬದಲಾದಂತೆ ಕೆಲವೊಮ್ಮೆ ಮಗು ಬೇಡ ಅನ್ನುವ ಮನಸ್ಥಿತಿಯೂ ಬದಲಾಗಬಹುದು. ಅಷ್ಟೊತ್ತಿಗೆ ಹೆಣ್ಣು–ಗಂಡು ಇಬ್ಬರಿಗೂ ಫಲವತ್ತತೆಯ ಸಮಸ್ಯೆ ಕಾಡಬಹುದು. ಅದಕ್ಕೆ ಎಗ್ ಫ್ರೀಜಿಂಗ್ ಪರಿಹಾರವಾಗಬಲ್ಲದು’ ಎನ್ನುತ್ತಾರೆ ಸ್ತ್ರೀರೋಗ ತಜ್ಞೆ ಡಾ.ವಿದ್ಯಾಭಟ್. ‘ಮಗುವಾದರೆ ಮಾತ್ರ ಗರ್ಭಕೋಶ ಆರೋಗ್ಯವಾಗಿರುತ್ತದೆ ಎಂಬುದು ಹಲವರ ನಂಬಿಕೆ. ಆದರೆ, ಅದು ನಿಜವಲ್ಲ. ಮಗು ಆದವರಲ್ಲೂ, ಆಗದವರಲ್ಲೂ ಫೈಬ್ರಾಯ್ಡ್, ಎಂಡೋಮೆಟ್ರಿಯಾಸಿಸ್, ಅಡಿನೊಮಯೋಸಿಸ್ ಸಮಸ್ಯೆಗಳು ಕಾಣಿಸಿಕೊಳ್ಳಬಹುದು’ ಎನ್ನುತ್ತಾರೆ ಅವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.