‘ಈ ಆನ್‌ಲೈನ್ ಯುಗದಲ್ಲಿ ಯಾರನ್ನು ನಂಬಬೇಕು? ಎಂಬುದೇ ಗೊತ್ತಾಗುತ್ತಿಲ್ಲ. 40 ವರ್ಷವಾದರೂ ನನಗೆ ಮದುವೆ ಆಗಿಲ್ಲ. ಹುಡುಗರನ್ನು ಹುಡುಕಿ ಸಾಕಾಯಿತು. ಕಂಪನಿಯೊಂದರಲ್ಲಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದೆ. ವೈವಾಹಿಕ ಜಾಲತಾಣಗಳಲ್ಲಿ ಖಾತೆ ತೆರೆದು ಫೋಟೊ ಹಾಕಿದರೆ ನೆಚ್ಚಿನ ಹುಡುಗ ಸಿಗುತ್ತಾನೆಂದು ಕೆಲ ಸ್ನೇಹಿತೆಯರು ಸಲಹೆ ನೀಡಿದರು. ಅದರಂತೆ, ಒಂದು ವೆಬ್‌ಸೈಟಿನಲ್ಲಿ ಕೆಲ ಫೋಟೊಗಳನ್ನೂ ಅಪ್‌ಲೋಡ್ ಮಾಡಿದ್ದೆ. ಕೆಲ ದಿನಗಳ ನಂತರ ಗುಂಟೂರಿನ ನಿವಾಸಿ ಎನ್ನಲಾದ 44 ವರ್ಷದ ಅರವಿಂದ್ ಚೌಧರಿ ರಿಕ್ವೆಸ್ಟ್ ಕಳುಹಿಸಿದ್ದ. ಚಾಟಿಂಗ್‌ನಿಂದ ಶುರುವಾಗಿ, ಮೊಬೈಲ್ ನಂಬರ್ ವಿನಿಮಯಕ್ಕೆ ಬಂದು ನಿಂತು. ನಂತರ, ನಿರಂತರ ಕರೆಗಳು ಹಾಗೂ ವಾಟ್ಸ್‌ಆ್ಯಪ್ ವಿಡಿಯೊ ಕರೆ ಹೀಗೆ... ಎಲ್ಲವೂ ಶುರುವಾದವು.’
‘ನೀನು ನನಗೆ ತುಂಬಾ ಇಷ್ಟ. ನಿನ್ನನ್ನು ಮದುವೆಯಾಗಲು ಸಿದ್ಧನಿದ್ದೇನೆ. ಆದಷ್ಟ ಬೇಗ ಭೇಟಿಯಾಗುತ್ತೇನೆ’ ಎಂದಿದ್ದ. ಅದನ್ನು ನಂಬಿ 40 ವರ್ಷದಲ್ಲಾದರೂ ಮದುವೆಯಾಗುತ್ತಿದೆ ಎಂದು ಖುಷಿಪಟ್ಟಿದೆ. ದಿನ ಕಳೆದಂತೆ ಇಬ್ಬರ ನಡುವೆ ಸಲುಗೆ ಹೆಚ್ಚಾಯಿತು. ವಿಡಿಯೊ ಕರೆ ಮಾಡಿದ್ದ ಆತ, ತನ್ನ ಬಟ್ಟೆ ಬಿಚ್ಚಿ ನಗ್ನವಾಗುತ್ತಿದ್ದ. ನನಗೂ ಬಟ್ಟೆ ಬಿಚ್ಚುವಂತೆ ಹೇಳುತ್ತಿದ್ದ. ಆತನ ಮಾತಿಗೆ ಮರುಳಾಗಿ ಬಟ್ಟೆ ಬಿಚ್ಚಿ ಬೆತ್ತಲೆ ಆಗುತ್ತಿದ್ದೆ. ಇದೇ ಸಮಯದಲ್ಲಿಯೇ ಆತ, ನನಗೆ ಅರಿವಿಲ್ಲದಂತೆ ವಿಡಿಯೊ ಕರೆವನ್ನು ಚಿತ್ರೀಕರಿಸಿಕೊಂಡಿದ್ದ. ಜೊತೆಗೆ, ಮದುವೆಯಾಗುವುದಾಗಿ ಪದೇ ಪದೇ ಹೇಳಿ ನಂಬಿಸಿ ಅರೆನಗ್ನ ಫೋಟೊಗಳನ್ನೂ ಪಡೆದುಕೊಂಡಿದ್ದ.’
‘ನನ್ನ ಎಲ್ಲ ವೈಯಕ್ತಿಕ, ಕುಟುಂಬದ ಮಾಹಿತಿ ಹಾಗೂ ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಆತನೊಂದಿಗೆ ಹಂಚಿಕೊಂಡಿದ್ದೆ. ಕೆಲ ದಿನಗಳ ನಂತರ, ನನ್ನ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಜಿ– ಮೇಲ್ ಖಾತೆಗಳನ್ನು ಆತ ಹ್ಯಾಕ್ ಮಾಡಿದ್ದ. ಈ ಸಂಗತಿ ಗೊತ್ತಾಗಿ ಆತನನ್ನು ಪ್ರಶ್ನಿಸಿದ್ದೆ. ಅವಾಗಲೇ ಆತನ ಅಸಲಿ ಮುಖ ಗೊತ್ತಾಗಿತ್ತು. ನನ್ನ ಬೆತ್ತಲೆ ವಿಡಿಯೊ ಹಾಗೂ ಫೋಟೊ ಇಟ್ಟುಕೊಂಡಿದ್ದ ಆತ, ಅವನ್ನು ಹಂಚುವುದಾಗಿ ಬೆದರಿಸಲಾರಂಭಿಸಿದ್ದ’
ಹೀಗೆ, ಬ್ಲ್ಯಾಕ್‌ಮೇಲ್ ಮಾಡಿ ನನ್ನಿಂದ ಹಂತ ಹಂತವಾಗಿ ₹ 1.50 ಲಕ್ಷ ನಗದು ಪಡೆದುಕೊಂಡಿದ್ದ. ಹಣ ನೀಡಿದ ನಂತರವೂ ಕಿರುಕುಳ ಮುಂದುವರಿದಿತ್ತು. ಮತ್ತಷ್ಟು ಹಣಕ್ಕೆ ಬೇಡಿಕೆ ಇರಿಸಿದ್ದ. ಆದರೆ, ಹಣವಿಲ್ಲವೆಂದು ಹೇಳಿದ್ದೆ. ಅವಾಗಲೇ ಆತ, ನನ್ನ ತಾಯಿ ಹಾಗೂ ಕೆಲ ಸ್ನೇಹಿತರ ವಾಟ್ಸ್‌ಆ್ಯಪ್ ನಂಬರ್‌ಗೆ ಬೆತ್ತಲೆ ವಿಡಿಯೊ–ಫೋಟೊ ಕಳುಹಿಸಿದ್ದೆ. ಮಗಳು ಉತ್ತಮ ಗುಣವುಳ್ಳವರು ಎಂದುಕೊಂಡಿದ್ದ ತಾಯಿ, ನನ್ನ ಮೇಲೆಯೇ ಅನುಮಾನಪಡುವಂತಾಯಿತು. ಮದುವೆಗೆ ಹುಡುಗನನ್ನು ಹುಡುಕಿಕೊಳ್ಳಲು ಹೋಗಿ, ಸಂಕಷ್ಟಕ್ಕೆ ಸಿಲುಕಿದೆ. ವಿಡಿಯೊ–ಫೋಟೊ ನೋಡಿದ ನಂತರ, ಸ್ನೇಹಿತರೆಲ್ಲರೂ ಹೀಯಾಳಿಸುತ್ತಿದ್ದಾರೆ. ಹಣದ ಆಸೆಗಾಗಿ ನನ್ನನ್ನು ಬೆತ್ತಲೆ ಮಾಡಿದ. ಈ ಘಟನೆಯಿಂದ ಸಾಕಷ್ಟು ನೊಂದಿದ್ದೇನೆ. ಆರೋಪಿ ಪುನಃ ಪುನಃ ಹಣ ಕೇಳಿದ್ದರಿಂದ ಠಾಣೆಗೆ ದೂರು ನೀಡಿದ್ದೇನೆ.’
‘ವಯಸ್ಸಾಗುತ್ತಿದ್ದರೂ ಮದುವೆಯಾಗುತ್ತಿಲ್ಲವೆಂಬ ಚಿಂತೆಯಲ್ಲಿರುವ ಬಹುತೇಕ ಯುವತಿಯರು, ಆನ್‌ಲೈನ್ ಮೊರೆ ಹೋಗುತ್ತಿದ್ದಾರೆ. ವೈವಾಹಿಕ ಜಾಲತಾಣಗಳಲ್ಲಿ ಖಾತೆ ತೆರೆದು, ಅಪರಿಚಿತ ವ್ಯಕ್ತಿಗಳ ಜೊತೆ ಒಡನಾಟ ಬೆಳೆಸಿಕೊಂಡು ಹಣ ಹಾಗೂ ಮರ್ಯಾದೆ ಎರಡನ್ನೂ ಕಳೆದುಕೊಳ್ಳುತ್ತಿದ್ದಾರೆ. ಆನ್‌ಲೈನ್‌ನಲ್ಲಿ ವರನನ್ನು ಹುಡುಕುವುದು ತಪ್ಪಲ್ಲ. ಆದರೆ, ಆದಷ್ಟು ಎಚ್ಚರಿಕೆ ವಹಿಸಬೇಕು. ಅಪರಿಚಿತ ವರನಿಗೆ ಯಾವುದೇ ಗುಟ್ಟು ಬಿಟ್ಟುಕೊಡಬಾರದು. ಆದಷ್ಟು ಪೋಷಕರನ್ನು ಮೊದಲು ಪರಿಚಯ ಮಾಡಿಸಿ, ನಂತರ ಮುಂದುವರಿಯುವುದು ಸೂಕ್ತ’
–ನೊಂದ ಯುವತಿ
ಸೈಬರ್ ಅಪರಾಧದ ಬಗ್ಗೆ ದೂರು ನೀಡಿ: 112 ಅಥವಾ 193 | ಜಾಲತಾಣ: https://cybercrime.gov.in/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.