'ಅಮೆಜಾನ್ ವತಿಯಿಂದ ಭರ್ಜರಿ 10 ಲಕ್ಷ ರೂಪಾಯಿ ಗಿಫ್ಟ್ ವೋಚರ್ ನಿಮಗಾಗಿ. ನಿಮ್ಮ ಮೊಬೈಲ್ ನಂಬರ್ ಲಕ್ಕಿ ನಂಬರ್ ಬಂದಿದೆ. ಈ ಲಿಂಕ್ ಕ್ಲಿಕ್ ಮಾಡಿ ವೋಚರ್ ಪಡೆಯಿರಿ' ಎಂಬ ಸಂದೇಶ ಬಂದಿತ್ತು. ಅಮೆಜಾನ್‌ನಿಂದ ಹಲವು ವಸ್ತುಗಳನ್ನು ತರಿಸಿದ್ದೆ. ಅಮೆಜಾನ್ ಸಂದೇಶ ನಿಜ ಇರಬಹುದು ಎಂದು ಲಿಂಕ್ ಕ್ಲಿಕ್ ಮಾಡಿದೆ.
ಲಿಂಕ್ ತೆರೆದಾಗ, ಹೆಸರು, ವಿಳಾಸ, ಮೊಬೈಲ್ ನಂಬರ್, ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ಸಂಖ್ಯೆ ಕೇಳಿತ್ತು. ಎಲ್ಲವನ್ನೂ ಭರ್ತಿ ಮಾಡಿದೆ. ಕೆಲವೇ ನಿಮಿಷಗಳಲ್ಲಿ ಕರೆಯೊಂದು ಬಂದಿತ್ತು. ಅಮೆಜಾನ್ ಕಂಪನಿ ಪ್ರತಿನಿಧಿ ಹಿಂದಿಯಲ್ಲಿ ಮಾತನಾಡಿ, 'ಅಭಿನಂದನೆಗಳು. ನಿಮ್ಮ ಮೊಬೈಲ್ ನಂಬರ್ ಲಕ್ಕಿ ಡ್ರಾನಲ್ಲಿ ಆಯ್ಕೆಯಾಗಿದೆ. ಹೀಗಾಗಿ, 10 ಲಕ್ಷ ಮೌಲ್ಯದ ವಸ್ತುಗಳನ್ನು ಉಚಿತವಾಗಿ ಖರೀದಿಸಬಹುದು. ಸದ್ಯದಲ್ಲೇ ಗಿಫ್ಟ್ ವೋಚರ್ ಕಳುಹಿಸಲಾಗುವುದು' ಎಂದು ಕರೆ ಕಡಿತಗೊಳಿಸಿದ. ನನಗೂ ಖುಷಿಯಾಗಿತ್ತು.
ಇದಾದ ಮರುದಿನವೇ ಯುವತಿಯೊಬ್ಬರು ಕರೆ ಮಾಡಿದ್ದರು. ಅಮೆಜಾನ್ ಗಿಫ್ಟ್ ವೋಚರ್ ವಿಭಾಗದ ಮುಖ್ಯಸ್ಥೆ ಎಂದಿದ್ದ ಯುವತಿ, 'ನಿಮ್ಮ ವಿಳಾಸಕ್ಕೆ ಗಿಫ್ಟ್ ವೋಚರ್ ಕಳುಹಿಸುತ್ತೇವೆ. ಅದರಲ್ಲಿರುವ ಗೌಪ್ಯ ಸಂಖ್ಯೆಗಳನ್ನು ಬಳಸಿಕೊಂಡು ಅಮೆಜಾನ್ ಜಾಲತಾಣದಲ್ಲಿ ವಸ್ತುಗಳನ್ನು ಖರೀದಿಸಬಹುದು. ನಿಮ್ಮ ಹೆಸರು ಹಾಗೂ ವಿಳಾಸ ಪರಿಶೀಲಿಸಬೇಕು. ಆಧಾರ್ ಕಳುಹಿಸಿ' ಎಂದರು. ಕಳುಹಿಸಿದೆ. ನಂತರ, ಬ್ಯಾಂಕ್ ಖಾತೆ ಮಾಹಿತಿ ಕೇಳಿದರು. ಅದನ್ನೂ ತಿಳಿಸಿದೆ.
10 ಲಕ್ಷ ಗಿಫ್ಟ್ ವೋಚರ್ ಪಡೆಯಲು ಕೆಲವು ಷರತ್ತು ಇರುವುದಾಗಿ ಹೇಳಿದ್ದರು. 1,500 ಶುಲ್ಕ ಸಮೇತ ನೋಂದಣಿ ಮಾಡಿಕೊಳ್ಳಬೇಕು ಎಂದಿದ್ದರು. ಅದನ್ನು ನಂಬಿ ಅವತು ಹೇಳಿದ್ದ ಖಾತೆಗೆ ₹1,500 ಪಾವತಿ ಮಾಡಿದ್ದೆ. ಮರುದಿನ ಪುನಃ ಕರೆ ಮಾಡಿದ್ದ ಯುವತಿ, 'ನಿಮ್ಮ ಗಿಫ್ಟ್ ವೋಚರ್ ಸಿದ್ಧವಾಗಿದೆ. ಸದ್ಯದಲ್ಲೇ ಕಳುಹಿಸಲಾಗುವುದು' ಎಂದಿದ್ದರು. ಆದರೆ, ಎರಡು ದಿನವಾದರೂ ಗಿಫ್ಟ್ ವೋಚರ್ ಬರಲಿಲ್ಲ.
ಯುವತಿಯಿಂದ ಮತ್ತೊಮ್ಮೆ ಕರೆ ಬಂತು. 'ನಿಮ್ಮ ಗಿಫ್ಟ್ ವೋಚರ್ ಕಳುಹಿಸಲು ಮತ್ತಷ್ಟು ಶುಲ್ಕ ಹಾಗೂ ಭಾರತ ಸರ್ಕಾರದ ತೆರಿಗೆ ಪಾವತಿಸಬೇಕು' ಎಂದರು. ಆಗಲೂ ₹10 ಸಾವಿರ ಕಳುಹಿಸಿದೆ. ಪುನಃ ಕರೆ ಮಾಡಿದ್ದ ಯುವತಿ, 'ನಿಮ್ಮ ಗಿಫ್ಟ್ ವೋಚರ್ ಮೊತ್ತ 10 ಲಕ್ಷ ಇದೆ. ಹೀಗಾಗಿ ಆದಾಯ ತೆರಿಗೆ ಅಧಿಕಾರಿಗಳಿಗೆ ಅಮೆಜಾನ್ ಕಂಪನಿಯಿಂದ ದಾಖಲೆ ನೀಡಬೇಕು. ಪರಿಶೀಲನೆ ಮಾಡಿಸಬೇಕು. ಇದಕ್ಕೂ ಶುಲ್ಕವಿದೆ' ಎಂದಿದ್ದರು.
ಅದನ್ನೂ ನಂಬಿ ₹ 10 ಲಕ್ಷ ಗಿಫ್ಟ್ ವೋಚರ್ ಸಿಗಬಹುದೆಂದು ₹25 ಸಾವಿರ ಪಾವತಿಸಿದ್ದೆ. ಇದಾದ ನಂತರ ಯುವತಿ, ಗಿಫ್ಟ್ ವೋಚರ್ ಹೆಸರಿನಲ್ಲಿ ಹಂತ ಹಂತವಾಗಿ 3.50 ಲಕ್ಷ ಪಡೆದಿದ್ದರು. ಕೊನೆಯಲ್ಲಿ ಯುವತಿ ಪದೇ ಪದೇ ನೋಂದಣಿ ಹಾಗೂ ಅಂಚೆ ಹೆಸರಿನಲ್ಲಿ ಹಣ ಕೇಳುತ್ತಿದ್ದಳು. ಆಗ ಅನುಮಾನ ಬಂದು, ಪತಿಗೆ ವಿಷಯ ತಿಳಿಸಿದೆ. ಅವರು ಇದೊಂದು ಸೈಬರ್ ವಂಚನೆ ಜಾಲವೆಂದು ಹೇಳಿದರು. ನಂತರವೇ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದೇನೆ. ಗಿಫ್ಡ್ ವೋಚರ್ ಆಸೆಗೆ ಹಣ ಕಳೆದುಕೊಂಡಿದ್ದೇನೆ. ನೀವು ಎಚ್ಚರಿಕೆ ವಹಿಸಿ. ಯಾವದೇ ಗಿಫ್ಟ್ ಹಾಗೂ ಆಮಿಶಗಳಿಗೆ ಒಳಗಾಗಬೇಡಿ.
- ನೊಂದ ಮಹಿಳೆ
ಅಮೆಜಾನ್, ಫ್ಲಿಪ್‌ಕಾರ್ಟ್, ಮಿಶೊ ಹೆಸರು ಬಳಕೆ ಸೈಬರ್ ವಂಚಕರು, ಪ್ರತಿಷ್ಠಿತ ಅಮೆಜಾನ್ - ಫ್ಲಿಪ್‌ಕಾರ್ಟ್, ಮಿಷೊ ಹಾಗೂ ಇತರೆ ಆನ್‌ಲೈನ್ ಶಾಪಿಂಗ್ ಜಾಲತಾಣಗಳ ಗಿಫ್ಟ್ ವೋಚರ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದಾರೆ. ಇಂಥ ಜಾಲದ ಬಗ್ಗೆ ಜನರು ಎಚ್ಚರಿಗೆ ವಹಿಸಬೇಕು.
ಸೈಬರ್ ಅಪರಾಧವಾದರೆ ದೂರು ನೀಡಿ:
112 ಅಥವಾ 1930 ಜಾಲತಾಣ: https://chbercrime.gov.in/
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.