ಪೂಜೆ ಪುನಸ್ಕಾರಗಳು ದೇವಿಗಿದ್ದಂಗ, ಅಕ್ಕರೆ ಆರೈಕೆಗಳು ಜೀವಿಗಳಿಗಿರಲಿ. ಸ್ತ್ರೀತ್ವದ ಆನಂದಿಸುವಿಕೆ ಅಂದ್ರ, ಅಕ್ಕರೆಯಿಂದ ಕಾಣೂದು. ಕಾಳಜಿ ಮಾಡೂದು. ಹೊಗಳದೇ ಇದ್ರೂ ಚಿಂತಿಲ್ಲ. ಅವಹೇಳನ, ತೆಗಳಿಕೆ ತೋರದೇ ಇದ್ರ ಸಾಕು. ಬದುಕು ಅರಳ್ತದ.
ವಿಜಯದಶಮಿಗೆ ವಿಜಯೋತ್ಸವ ಆಚರಿಸಿದ ನಂತರ ನಮಗೆಲ್ಲ ಮಹಾನವಮಿ ಮುಗಿದ್ಹಂಗ. ಆದ್ರ ಅಸುರರ ಜೊತಿಗೆ ಯುದ್ಧಕ್ಕ ಇಳಿದ ದೇವಿಗೆ ಮೈತುಂಬಾ ಗಾಯ ಆಗಿರ್ತಾವ. ದೇವಿ ಆರೈಕೆ ಮಾಡೋರು ಯಾರು?
ಗೆಲುವಿನ ಸಂಭ್ರಮದೊಳಗ ಆರಾಧನೆಯೇ ಹೆಚ್ಚು ಮುಂಚೂಣಿಯೊಳಗಿರುವಾಗ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದವರು ದೇವಿಯ ಆರೈಕೆ ಮಾಡ್ತಾರ. ಅಗ್ದಿ ಅಕ್ಕರೆಯಿಂದ, ಆಸ್ಥೆಯಿಂದ ಮಾಡ್ತಾರ. ಮತ್ತ ಈ ಆಚರಣೆಗೆ ಭಂಡಾರ ಅಂತ ಈ ಕಡೆ ಕರೀತಾರ.
ಭಂಡಾರದ ನಂತರ ಮೊಸರನ್ನದ ಅಲಂಕಾರ ಮಾಡಿ, ದೇವಿ ತಣಿಯುವಂತೆ ಮಾಡ್ತಾರ. ಅಕ್ಕರೆಯ ಆರೈಕೆ ಖರೇಯಂದ್ರ ದೇವಿಗಷ್ಟೆ ಅಲ್ಲ, ಮನ್ಯಾಗಿನ ಮಹಿಳೆಯರಿಗೂ ಬೇಕು. ದೇವಿ ಉಪಾಸನೆಯ ಹಬ್ಬಗಳು ಬಂದಾಗಲೆಲ್ಲ, ಮನೆಯ ಹೆಣ್ಣುಮಕ್ಕಳಿಗೆ ಒಂದಷ್ಟು ಕೆಲಸಗಳ ಚೌಕಟ್ಟು ಹಾಕಿ, ಹಾಡಿ, ಹೊಗಳಿ, ಆ ಕೆಲಸಗಳಿಗೆ ನೀನೆ ಆಗಬೇಕು ಅನ್ನುವ ಅಲಿಖಿತ ಆದೇಶ ಕೊಟ್ಟೇಬಿಡ್ತಾರ.
ನಮಗ ಹಾರೈಸುವ ಹಾರೈಕೆಗಳೂ ಹಂಗೇ ಇರ್ತಾವ. ಇವೆಲ್ಲ ನೋಡಿ, ಮನುಷ್ಯ ಸಹಜ ಸ್ವಭಾವದ್ಹಂಗ ನಾವೂ ಹೊಗಳಿಕೆಗೆ ಕರಗಿ ಹೋಗ್ತೀವಿ. ಕೆಲವೊಮ್ಮೆ ಉಬ್ಬಿ ಹೋಗ್ತೀವಿ. ಈ ಆರಾಧನೆಯ ಚೌಕಟ್ಟಿನಿಂದಾಚೆ ಬಂದು ಚೂರು ಆನಂದಿಸುವ ಹಂಗ ಮಾಡೂದು ಹೆಂಗ?
ಬಹಳ ಸರಳವಿದೆ...
ಅಗ್ದಿ ಸರಳದ. ಸ್ತ್ರೀತ್ವದ ಸಂಭ್ರಮಿಸುವಿಕೆ ಈ ಆರಾಧನೆಗಿಂತಲೂ ಸರಳದ. ಧೈರ್ಯ ಲಕ್ಷ್ಮಿ ಅಂತ ಹೊಗಳೂ ಬದಲಿ, ಆತ್ಮವಿಶ್ವಾಸ ಮೂಡಿಸಿದ್ರ ಸಾಕು. ಮಹಿಳೆಯರ ಆತ್ಮಗೌರವಕ್ಕ ಧಕ್ಕೆ ತರದ್ಹಂಗ, ಇದ್ರ, ನೀವು ಬೆಳಗುವ ಆರತಿಗಿಂತಲೂ, ಹಚ್ಚುವ ಊದುಬತ್ತಿಗಿಂತಲೂ ಹೆಚ್ಚಿನ ಆಸ್ಥೆ ಒಂದು ಜೀವದ ಬಗ್ಗೆ ತೋರಿದಂತೆ.
ಬಹಳಷ್ಟು ಕಡೆ ಹೆಣ್ಣುಮಕ್ಕಳನ್ನು ಹಣಿಯಬೇಕೆಂದರೆ ಅವರ ಚಾರಿತ್ರ್ಯದ ಬಗ್ಗೆಯೇ ಮಾತನಾಡುತ್ತಾರೆ. ಮನೆಯ ಹೆಣ್ಣುಮಕ್ಕಳ ಚಾರಿತ್ರ್ಯದ ಬಗ್ಗೆ ಹಳಿಯುತ್ತ, ದೂಷಿಸುತ್ತ, ಅವಮಾನಿಸುತ್ತ, ಅನುಮಾನಿಸುತ್ತಲೇ ಗುಡಿಸುತ್ತ ಸುತ್ತುತ್ತಾರೆ. ತಮ್ಮೊಳಗಿನ ಹೊಲಸನ್ನು ಗುಡಿಸುತ್ತ, ಗುಡಿ ಸುತ್ತಬೇಕು. ಒಳಗೆಲ್ಲ ವಿಷವನ್ನಿರಿಸಿ ಕೊಂಡು, ಸುದೀರ್ಘ ಕಾಲ ತಪ ಮಾಡಿದರೇನು ಫಲು, ಜಪ ಮಾಡಿದರೇನು ಫಲ? ದೇವಿಯ ಹೆಸರಿನಲ್ಲಿ ಧ್ಯಾನ, ನೈವೇದ್ಯ ಮತ್ತು ಪೂಜೆ ಮಾಡಿದರೇನು ಫಲ?
ಸ್ತ್ರೀತ್ವದ ಆನಂದಿಸುವಿಕೆ ಅಂದ್ರ, ಅಕ್ಕರೆಯಿಂದ ಕಾಣೂದು. ಕಾಳಜಿ ಮಾಡೂದು. ಹೊಗಳದೇ ಇದ್ರೂ ಚಿಂತಿಲ್ಲ. ಅವಹೇಳನ, ತೆಗಳಿಕೆ ತೋರದೇ ಇದ್ರ ಸಾಕು. ಬದುಕು ಅರಳ್ತದ. ಆದ್ರ ಗ್ರಾಮೀಣ ಭಾಗದೊಳಗ ಬಹುತೇಕ ಮನಿಯೊಳಗಿನ ಸಮಸ್ಯೆಗಳಂದ್ರ ಮಹಿಳೆಯರನ್ನು ಜೀತದಾಳುಗಳಂತೆ ಕಾಣುವುದು. ಕುಟುಂಬದವರು ಜರೆಯುವುದು, ಮಹಿಳೆಯರು ಹಿಂಜರಿಯುವುದು ತೀರ ಸಾಮಾನ್ಯವಾಗಿದೆ.
ಆತ್ಮ ವಿಶ್ವಾಸ ತುಂಬಬೇಕು
ನವರಾತ್ರಿಯ ಬಣ್ಣಗಳಲ್ಲಿ ಮಿಂದೇಳುವಾಗ, ಬದುಕಿನ ಬಣ್ಣಗಳಲ್ಲಿ ನಾವು ಹೊಳೆದಿದ್ದೆಷ್ಟು? ಬೆಳೆದಿದ್ದೆಷ್ಟು? ಗಿಲೀಟು ಎಷ್ಟು ಅನ್ನುವ ಆತ್ಮಾವಲೋಕನ ಮಾಡಿಕೊಳ್ಳುತ್ತ ಇದ್ರ, ಬದುಕು ಸಂಭ್ರಮಿಸೂದು ಸರಳ ಆಗ್ತದ. ಸುಲಭ ಆಗ್ತದ.
ಆದ್ರ ಬದುಕು ಅಷ್ಟು ಸರಳಾದ್ರ ಸಸಾರ ಆಗೂದಿಲ್ಲ? ಇಂಥದ್ದೊಂದು ಪ್ರಶ್ನೆಯನ್ನಿರಿಸಿಕೊಂಡು ಒದ್ದಾಡುವ ಹಂಗ, ಎಲ್ಲಾರೂ ಬದುಕ್ತಾರ.
ಒಂದಷ್ಟು ಜಗಳಗಳನ್ನು ನೋಡಿದಾಗ, ಒಂದು ಸಾಮಾನ್ಯ ವಾಕ್ಯ ಆಗಾಗ ಪುನರಾವರ್ತನೆ ಆಗಿಕೊಂತ ಇರ್ತದ. ‘ಏನು ಕಡಿಮಿ ಆಗೇದ? ಉಡಾಕ ಇಲ್ಲ, ತೊಡಾಕ ಇಲ್ಲ, ಉಣ್ಣಾಕ ಇಲ್ಲ.. ಬಂಗಾರ, ಬೆಳ್ಳಿ, ವಸ್ತ್ರ, ವೈಢೂರ್ಯ ಎಲ್ಲ ಇದ್ದೂ ಹಿಂಗ ಜಗಳ ಬರ್ತಾವಲ್ಲ ಅಂತ...
ಇಂಥ ವಸ್ತ್ರ ಒಡವಿ ಬದಲು, ಹೆಣ್ಮಕ್ಕಳಿಗೆ ಅಗ್ದಿ ಭೂಷಣ ಅನಿಸೂದದಂದ್ರ ಆತ್ಮವಿಶ್ವಾಸ. ಅಕಿ ಚಂದ ಅದಾಳ, ಛೊಲೊ ಅದಾಳ, ಅಕಿನ್ನ ಸಾಹಚರ್ಯದಿಂದ ಬದುಕು ಚಂದಾಗೇದ, ಸಾಂಗತ್ಯದೊಳಗ ಎಲ್ಲ ಕಷ್ಟಗಳೂ ಹಗುರಾಗ್ತಾವ ಅನ್ನುವ ಭಾವ ಇದ್ರ, ಅದಕ್ಕಿಂತ ಪರಮ ತೇಜಸ್ಸು ಇನ್ನೊಂದಿರೂದಿಲ್ಲ.
ದೇವರಿಗೆ ಹೂ ಮುಡಿಸಿ, ಗಂಧ ಲೇಪಿಸಿ, ಅಲಂಕರಿಸುವಂತೆ, ಮಹಿಳೆಯರ ಸಂಘರ್ಷಗಳನ್ನು ಸ್ವೀಕರಿಸಿ, ಗೌರವಿಸಿ, ಅವನ್ನು ಒಪ್ಪಿಸಿಕೊಂಡ್ರ ಅಕ್ಕರೆ ತಾನೇ ಮೂಡ್ತದ. ಅಕ್ಕರೆ ಮತ್ತು ಆರೈಕೆಗಳೆರಡೂ ಇದ್ದಾಗ, ಆರಾಧನೆಗಿಂತಲೂ ಮಿಗಿಲಾದ ಆನಂದ ಬದುಕಿನಾಗ ಹಾಸಿಹೊಕ್ತದ.
ಮಾಯುವ ಗಾಯಗಳಿಗೆ ಅರಿಸಿನದ ಲೇಪನ ಔಷಧಿ ಆಗ್ತದ. ಮಾಯದ ಗಾಯಗಳಿಗೆ ನಾವು ಕೊಡುವ ಸಮಯ ಮತ್ತು ಕಾಳಜಿನೆ ಮುಲಾಮಾಗ್ತದ. ಮತ್ತ ಹಿಂಗ ಮಾಡಾಕ ಯಾವ ಶೌರ್ಯನೂ ಬೇಕಾಗಿಲ್ಲ. ಬರೇ ಅಂತಃಕರುಣೆ ಬೇಕು.
ಪೂಜೆ ಪುನಸ್ಕಾರಗಳು ದೇವಿಗಿದ್ದಂಗ, ಅಕ್ಕರೆ ಆರೈಕೆಗಳು ಜೀವಿಗಳಿಗಿರಲಿ. ಆವಾಗ ಹಬ್ಬ ಹಬ್ಬ ಅನಸ್ತಾವ. ಇಲ್ಲಾಂದ್ರ, ಉಂಡು, ತಿಂದು, ಉಟ್ಟು, ತೊಟ್ಟು, ಬದುಕನ್ನ ಮೌಲ್ಯಗಳಿಂದಲ್ಲ, ಬೆಲೆಗಳಿಂದಲೇ ಅಳಿಯೂಹಂಗ ಆಗ್ತದ. ಜೀವ ಅಳಿಯೂದ್ರೊಳಗ ಈ ಹಬ್ಬದಾಚರಣೆ ಬದಲಾಗಲಿ. ದೇವ ಪ್ರಸನ್ನ ಆಗೂದು, ಜೊತೆಗಿದ್ದ ಜೀವ ಪ್ರಸನ್ನ ಆದಾಗ!!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.