ಮದುವೆಗೆ ಮುನ್ನ ಪ್ರೀತಿ– ಪ್ರೇಮ, ಕೂಡಿ ಬಾಳುವ ಪದ್ಧತಿ ಈಗ ನಗರದ ನಿವಾಸಿಗಳಲ್ಲಿ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಆದರೆ ಡೇಟಿಂಗ್ ಅವಧಿಯಲ್ಲಿ ಆರಾಮವಾಗಿರುವ ಬದುಕಿನಲ್ಲಿ ಮದುವೆಯಾದ ಮೇಲೆ ಭಿನ್ನಾಭಿಪ್ರಾಯಗಳಿಂದ ಒಡಕು ಮೂಡಲಾರಂಭ. ಏಕೆ ಹೀಗೆ?
ಆತ ಖ್ಯಾತ ಟಿವಿ ಚಾನೆಲ್ ಒಂದರಲ್ಲಿ ನಿರೂಪಕ. ಆಕೆ ಒಳಾಂಗಣ ವಿನ್ಯಾಸಕಿ. ಬಾಲ್ಯದಿಂದಲೇ ಇಬ್ಬರ ನಡುವಿನ ಸ್ನೇಹ ಕಾಲೇಜಿನಲ್ಲಿ ಕ್ರಮೇಣ ಪ್ರೇಮಕ್ಕೆ ತಿರುಗಿತ್ತು. ವಿದ್ಯಾಭ್ಯಾಸ ಮುಗಿದು ಇಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ಹೆಸರು, ಹಣ ಮಾಡುತ್ತಿದ್ದಂತೆ ಹೆಚ್ಚು ಕಡಿಮೆ ಅದು ‘ಲಿವಿಂಗ್ ಟುಗೆದರ್’ ಆಗಿತ್ತು ಎನ್ನಬಹುದು. ಬದುಕು ಒಂದು ಸುಂದರ ಕಾವ್ಯದಂತೆ ಎಂದುಕೊಂಡ ಜೋಡಿ ಕೊನೆಗೂ ಮನೆಯವರ ಒಪ್ಪಿಗೆಯಿಂದಲೇ ಹಸೆಮಣೆ ಏರಿತು. ಆದರೆ ಅದೇನಾಯಿತೋ ಗೊತ್ತಿಲ್ಲ, ವಿವಾಹದ ಮೊದಲ ವಾರ್ಷಿಕೋತ್ಸವಕ್ಕೆ ಮುನ್ನವೇ ಬೇರೆಯಾದರು ದಂಪತಿ. ಮಾರನೆಯ ವರ್ಷವೇ ವಿಚ್ಛೇದನ ತೆಗೆದುಕೊಂಡು ವೈವಾಹಿಕ ಬದುಕಿಗೆ ಪರಸ್ಪರ ವಿದಾಯ ಹೇಳಿ ಶಾಶ್ವತವಾಗಿ ಬೆನ್ನು ಹಾಕಿ ನಡೆದರು.
ಶ್ವೇತಾ ಮಂದಣ್ಣ ಮತ್ತು ಗುಣಶೇಖರನ್ ಭೇಟಿಯಾಗಿದ್ದು ಎದುರುಬದುರು ಮನೆಯವರಾಗಿ. ಒಂದು ಮುಗುಳ್ನಗು ಸಾಕಾಗಿತ್ತು ಆಕರ್ಷಣೆಯ ಬಲೆಯಲ್ಲಿ ಸಿಲುಕಿಕೊಳ್ಳಲು. ಇಬ್ಬರಿಗೂ ಪರ್ಸ್ ತುಂಬಿ ತುಳುಕುವಷ್ಟು ಸಂಬಳ ಬರುವ ಒಳ್ಳೆಯ ಉದ್ಯೋಗ. ಸುತ್ತಾಟ, ಸಮಾನ ಮನಸ್ಕ ಗೆಳೆಯ– ಗೆಳತಿಯರ ಜೊತೆ ಪಾರ್ಟಿ, ಪಿಕ್ನಿಕ್.. ಬದುಕು ಎಷ್ಟೊಂದು ಸುಂದರ ಎಂದು ಆಸ್ವಾದಿಸುತ್ತ ಮೂರು ವರ್ಷಗಳ ನಂತರ ವರಮಾಲೆ ಬದಲಾಯಿಸಿಕೊಂಡು ಅಧಿಕೃತ ದಾಂಪತ್ಯ ಬದುಕಿಗೆ ಕಾಲಿಟ್ಟರು. ಆದರೆ ಕೆಲವೇ ತಿಂಗಳುಗಳಲ್ಲಿ ವೈವಾಹಿಕ ಬಂಧನವೆಂಬುದು ನಿಜವಾಗಿಯೂ ಬಂಧನ ಎನಿಸಿಬಿಟ್ಟಿತ್ತು ಗುಣಶೇಖರನ್‌ಗೆ. ಎಲ್ಲಾ ಖರ್ಚಿಗೂ ಲೆಕ್ಕಾಚಾರ, ತಡವಾಗಿ ಬಂದರೆ ವಿಚಾರಣೆ, ಫೋನ್‌ನಲ್ಲಿ ಮಾತನಾಡಿದರೂ ಯಾರು.. ಏನು.. ಎತ್ತ.. ಎಂದು ಪ್ರಶ್ನೆಗಳ ಸುರಿಮಳೆ. ಕೊನೆಗೆ ಇಬ್ಬರೂ ಕುಳಿತು ಮಾತನಾಡಿ ವಿಚ್ಛೇದನಕ್ಕೆ ಅರ್ಜಿ ಹಾಕಿ ಮನಸ್ಸು ನಿರಾಳ ಮಾಡಿಕೊಂಡರು.
ಇವು ಒಂದೆರಡು ಉದಾಹರಣೆಗಳಷ್ಟೆ. ಪ್ರೀತಿ– ಪ್ರೇಮವೆಂದು ಕನಸಿನ ಉಯ್ಯಾಲೆಯಲ್ಲಿ ತೂಗಿ, ವರ್ಷಗಟ್ಟಲೆ ಸುತ್ತಾಡಿ, ಕೂಡಿ ಬಾಳಿದ ಮೇಲೆ ‘ಓಹ್! ನಮ್ಮಿಬ್ಬರಲ್ಲೂ ಎಷ್ಟೊಂದು ಹೊಂದಾಣಿಕೆ; ಎಷ್ಟೊಂದು ಚೆನ್ನಾಗಿ ಪರಸ್ಪರ ಅರ್ಥ ಮಾಡಿಕೊಂಡಿದ್ದೇವೆ. ಇದು ಸಪ್ತಪದಿ ತುಳಿಯಲು, ಉಂಗುರ ಬದಲಾಯಿಸಿಕೊಳ್ಳಲು ಸಕಾಲ’ ಎಂದು ಮದುವೆ ಮಾಡಿಕೊಂಡವರ ವೈವಾಹಿಕ ಜೀವನದ ಆಯುಷ್ಯ ಆರು ತಿಂಗಳು, ಒಂದು ವರ್ಷ, ಎರಡು ವರ್ಷಗಳಿಗೇ ಕೋರ್ಟ್‌ನಲ್ಲಿ ಮುಗಿದ ಪ್ರಕರಣಗಳು ಬೇಕಾದಷ್ಟಿವೆ.
ಪ್ರೇಮ ದೀರ್ಘಾಯು!
ತೀರಾ ಹಿಂದೆ ಬೇಡ, 15– 20 ವರ್ಷಗಳ ಹಿಂದಕ್ಕೆ ಹೋದರೂ ಸಾಕು. 20– 30 ದಿನಗಳಲ್ಲೇ ಸಂಬಂಧಿಕರ ಮೂಲಕವೋ, ಪರಿಚಯದವರು ಹೇಳಿದ್ದಾರೆ ಎಂತಲೋ ಹುಡುಗ– ಹುಡುಗಿಯ ಸಂಬಂಧ ಕುದುರಿಸಿ, ಛತ್ರ ಬುಕ್ ಮಾಡಿ ಮದುವೆ, ಆರತಕ್ಷತೆ ಎಂದು ಮುಗಿಸಿ ನಿರಾಳವಾಗುತ್ತಿದ್ದರು ಹುಡುಗಿಯ ತಂದೆ– ತಾಯಿ. ಮದುವೆ ಮಾತುಕತೆ ಮುಗಿದ ನಂತರ ಜಾಸ್ತಿ ದಿನಗಳನ್ನು ಬಿಟ್ಟರೆ ಯಾರೋ ಆಗದವರು ಹೇಳಿಕೊಟ್ಟು ಎಲ್ಲಿ ಸಂಬಂಧ ಮುರಿದು ಹೋಗುತ್ತದೆಯೋ ಎಂಬ ಭಯವೂ ಈ ಜಟ್‌ಪಟ್ ಮದುವೆಯ ಹಿಂದೆ ಇರುತ್ತಿತ್ತು. ನಿಶ್ಚಿತಾರ್ಥ ಕೂಡ ಮದುವೆಯ ಹಿಂದಿನ ದಿನ ಮಾಡಿಕೊಂಡವರೂ ಇದ್ದಾರೆ. ಕೆಲವೊಮ್ಮೆ ನಿಶ್ಚಿತಾರ್ಥ ಮುಗಿಸಿ, ಮದುವೆ ಮೂರು, ಆರು ತಿಂಗಳ ನಂತರ ಎಂದು ಮನೆಯವರು ನಿರ್ಧಾರ ಮಾಡಿದರೂ, ಜೊತೆಗೆ ಸುತ್ತಾಡುವುದು ದೂರದ ಮಾತೇ ಸರಿ. ಇನ್ನು ಮೊಬೈಲ್ ಇಲ್ಲದ ಕಾಲದಲ್ಲಿ ಪರಸ್ಪರ ಮಾತುಕತೆಗೂ ಬರವೇ! ಆದರೂ ಅಲ್ಲೊಂದು, ಇಲ್ಲೊಂದು ವಿಚ್ಛೇದನ ಬಿಟ್ಟರೆ, ಸಣ್ಣಪುಟ್ಟ ಮನಸ್ತಾಪದ ಮಧ್ಯೆಯೇ ಬಹುತೇಕ ಮದುವೆಗಳು ದೀರ್ಘಾಯುಷ್ಯ ಬಾಳುತ್ತಿವೆ. ಆದರೆ ಪ್ರೀತಿ– ಪ್ರೇಮದ ಆಯುಷ್ಯ ದೀರ್ಘವಾದರೂ, ಮದುವೆಯ ನಂತರದ ದಾಂಪತ್ಯದ ಆಯುಷ್ಯ ಅಲ್ಪ. ಯಾಕೆ ಹೀಗೆ?
ಹೊಣೆಗಾರಿಕೆ ಬಂದಾಗ..
ಗಂಡು– ಹೆಣ್ಣು ಪರಸ್ಪರ ಪ್ರೇಮಿಸುವಾಗ ದೈಹಿಕ ಆಕರ್ಷಣೆ, ಹೊಣೆಯಿಲ್ಲದ ಬೆಸುಗೆ ಜಾಸ್ತಿಯೇ ಇರುವುದೂ ಮದುವೆಗೆ ಮುಂಚಿನ ದಿನಗಳು ಸುಗಮವಾಗಿ ಸರಿದು ಹೋಗಲು ಒಂದು ಕಾರಣ. ‘ಒಂದು ಗಂಡು– ಹೆಣ್ಣು ಪ್ರೀತಿಯಲ್ಲಿ ಮುಳುಗಿದಾಗ ಹೊಣೆಗಾರಿಕೆಯ ಬಂಧನ ಇರುವುದಿಲ್ಲ. ಪರಸ್ಪರ ಅವಲಂಬನೆಯೂ ಇರುವುದಿಲ್ಲ. ಕೂಡಿ ಬಾಳಿದರೂ (ಲಿವಿಂಗ್ ಟುಗೆದರ್) ಕೂಡ ಯಾವಾಗ ಬೇಕಾದರೂ ಹೆತ್ತವರ ಮನೆಗೆ ಅಥವಾ ತನ್ನದೇ ಆದ ಮನೆಗೆ ವಾಪಸ್ಸು ಹೋಗಬಹುದು ಎಂಬ ಧೈರ್ಯ ಇರುತ್ತದೆ. ಆದರೆ ಮದುವೆಯಾದ ಮೇಲೆ ಹೊಸ ಜವಾಬ್ದಾರಿಗಳನ್ನು ಹೊರುವುದು, ಹೊಸ ತರಹದ ಸಮಸ್ಯೆಗಳನ್ನು ಎದುರಿಸುವುದರ ಜೊತೆಗೆ ಅತ್ತೆ– ಮಾವ ಇದ್ದರೆ ಅವರಿಗೆ ಹೊಂದಿಕೊಳ್ಳುವ ಕಷ್ಟವನ್ನು ಎದುರಿಸಬೇಕಾಗುತ್ತದೆ. ಪರಸ್ಪರ ಅವಲಂಬನೆಯೂ ಇದ್ದೇ ಇರುತ್ತದೆ’ ಎನ್ನುವ ಆಪ್ತ ಸಮಾಲೋಚಕಿ ಸಂಜನಾ ತೇರದಾಳ್, ‘ಅರೇಂಜ್ಡ್ ಮದುವೆ
ಯಲ್ಲಿ ಕೂಡ ಈ ಸಮಸ್ಯೆಗಳು ಇದ್ದರೂ ಕಾದು ನೋಡುವ, ಹೊಂದಾಣಿಕೆ ಮಾಡಿಕೊಳ್ಳುವ ಗುಣ ಜಾಸ್ತಿ. ಏಕೆಂದರೆ ಅದು ಹೊಸ ಸಂಬಂಧವಲ್ಲವೇ’ ಎಂದು ವಿಶ್ಲೇಷಿಸುತ್ತಾರೆ.
ಮದುವೆಯಾದ ಮೇಲೆ ಪರಸ್ಪರ ನಿರೀಕ್ಷೆಗಳೂ ಬದಲಾಗುತ್ತವೆ. ಪ್ರತಿಯೊಂದಕ್ಕೂ ಪ್ರಶ್ನಿಸುವ ಮನೋಭಾವ ಬೆಳೆಯುತ್ತದೆ. ಕುಟುಂಬದ ಇತರ ಸದಸ್ಯರ, ಸಂಬಂಧಿಕರ ನಿರೀಕ್ಷೆಗೆ ತಕ್ಕ ಹಾಗೆಯೇ ನಡೆದುಕೊಳ್ಳುವ ಒತ್ತಡ ಸೃಷ್ಟಿಯಾಗುತ್ತದೆ. ಇಲ್ಲಿಯವರೆಗೆ ಇದರ ಬಗ್ಗೆ ಆಲೋಚಿಸದ, ಸ್ವತಂತ್ರವಾಗಿ ತಮಗೆ ಬೇಕಾದ ಹಾಗೆ ಬದುಕಿದ ಜೋಡಿಗೆ ಇದು ಕಿರಿಕಿರಿ ಎನಿಸುವುದು ಸಹಜವೇ. ಒಂದು ವ್ಯವಸ್ಥಿತ ರೀತಿಗೆ ಹೊಂದಿಕೊಳ್ಳುವುದು ಇಂದಿನ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಇಂಥವರಿಗೆ ಸದ್ಯಕ್ಕಂತೂ ಕಷ್ಟವೇ. ಏಕೆಂದರೆ ಈ ಕಡೆ ಪೂರ್ತಿ ಸಾಂಪ್ರದಾಯಕವಾಗಿ ಬದುಕಲೂ ಸಾಧ್ಯವಿಲ್ಲ, ಪಾಶ್ಚಾತ್ಯರಂತೆ ಪೂರ್ತಿ ಸ್ವತಂತ್ರ ಬದುಕೂ ಅಲ್ಲ. ಹೀಗಾಗಿ ಎಲ್ಲಿಯೂ ಸಲ್ಲದೇ ದಾಂಪತ್ಯ ಜೀವನದಿಂದಲೇ ಹೊರ ನಡೆಯಬೇಕಾಗುತ್ತದೆ.
ಇದನ್ನೂ ಓದಿ:ಡೇಟಿಂಗ್ ಆ್ಯಪ್; ಆಗದಿರಿ ಟ್ರ್ಯಾಪ್
‘ಮದುವೆಗೆ ಮುಂಚೆ ಎಲ್ಲಾ ಪಾರ್ಟಿಗಳಿಗೆ ಆತ ಒತ್ತಾಯ ಮಾಡಿ ಕರೆದುಕೊಂಡು ಹೋಗುತ್ತಿದ್ದ. ಆದರೆ ಮದುವೆಯಾಗಿದ್ದೇ ತಡ ಅದೆಲ್ಲ ಬಂದ್. ಮನೆಯಲ್ಲಿ ಅಮ್ಮನ ಜೊತೆ ಇರುವಂತೆ ತಾಕೀತು. ಆದರೆ ಆತನೇನೂ ಅಂತಹದ್ದನ್ನೆಲ್ಲ ಎಂಜಾಯ್ ಮಾಡುವುದನ್ನು ಬಿಡಲಿಲ್ಲ’ ಎನ್ನುವ ಒಳಾಂಗಣ ವಿನ್ಯಾಸಕಿ ಸಿರಿ ಪಾಠಕ್, ‘ಇದೊಂದು ಉದಾಹರಣೆ ಅಷ್ಟೆ. ನಾನು ಮಾತ್ರ ತಕ್ಷಣಕ್ಕೆ ಬದಲಾವಣೆಗೆ ಹೊಂದಿಕೊಳ್ಳಬೇಕು. ಆತ ಮಾತ್ರ ಹಾಗೆಯೇ ಇರಬಹುದು ಎಂಬುದನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಮನೆಯಿಂದ ಹೊರ ನಡೆದೆ’ ಎನ್ನುತ್ತಾಳೆ.
ಹಣವೇ ಮೇಲು
ದಂಪತಿಯ ಮಧ್ಯೆ ಬಿರುಕು ಮೂಡಿಸುವ ಇನ್ನೊಂದು ವಿಷಯವೆಂದರೆ ಹಣಕಾಸಿನ ವಿಚಾರ. ಮದುವೆಗೆ ಮುನ್ನವೇ ಹಣಕಾಸಿನ ಪಾಲುದಾರಿಕೆ ಬಗ್ಗೆ ಮಾತುಕತೆ, ಒಪ್ಪಂದ ಪಾಶ್ಚಾತ್ಯರಲ್ಲಿ ಸಾಮಾನ್ಯ. ವಿಚ್ಛೇದನದ ಸಂದರ್ಭದಲ್ಲಿಯೂ ಇದೇ ‘ಪ್ರೀ ಮೆರಿಟಲ್’ ಒಪ್ಪಂದವನ್ನೇ ಪರಿಗಣಿಸುವ ಪರಿಪಾಠ ಅಮೆರಿಕ, ಯೂರೋಪ್‌ನ ಬಹುತೇಕ ರಾಷ್ಟ್ರಗಳಲ್ಲಿದೆ. ಆದರೆ ಭಾರತದಲ್ಲಿ ಈ ಪದ್ಧತಿ ಇನ್ನೂ ಕಾಲಿಟ್ಟಿಲ್ಲ. ಪ್ರೇಮಿಗಳು ಸುತ್ತಾಡುವಾಗ ಈ ಬಗ್ಗೆ ಆಲೋಚಿಸುವುದು ಕಡಿಮೆ. ದುಡಿಯುವುದೇ ಖರ್ಚು ಮಾಡಲಿಕ್ಕೆ ಎಂಬ ಮನೋಭಾವ ಆ ವಯಸ್ಸಿನಲ್ಲಿ. ಆದರೆ ಮದುವೆಯಾದ ಮೇಲೆ ಉಳಿತಾಯ, ಹೂಡಿಕೆಯ ಪ್ರಶ್ನೆ ಬರುತ್ತದೆ. ಸಂಗಾತಿಯ ವೆಚ್ಚದ ಮೇಲೆ ಕಣ್ಣಿಡುವ ಮನೋಭಾವ ಬೆಳೆಯುತ್ತದೆ. ಇದು ಹೆಚ್ಚಿನ ದಂಪತಿಗಳಲ್ಲಿ ಒಡಕಿಗೆ ಕಾರಣ ಎನ್ನುತ್ತಾರೆ ಆಪ್ತ ಸಮಾಲೋಚಕರು.
ಆಧುನಿಕತೆ– ಸಂಪ್ರದಾಯದ ನಡುವೆ
‘ಈ ರೀತಿಯ ತಲ್ಲಣಗಳು, ಗೊಂದಲಗಳು ಮಧ್ಯಮ ವರ್ಗದವರಲ್ಲೇ ಜಾಸ್ತಿ’ ಎನ್ನುತ್ತಾರೆ ವಕೀಲರಾದ ಶೇಖರ್ ಮೂಲಿಮನಿ. ಮಧ್ಯಮ ವರ್ಗದವರ ದುಡಿಯುವ ಸಾಮರ್ಥ್ಯ ಹೆಚ್ಚಾಗಿದೆ. ಆರ್ಥಿಕ ಸ್ವಾವಲಂಬನೆ ಜೊತೆಗೆ ವೈಯಕ್ತಿಕ ಸ್ವಾತಂತ್ರ್ಯವೂ ಸಿಕ್ಕಿದೆ. ಆದರೆ ಒಬ್ಬಳು ಯುವತಿ ಕೂಡಿ ಬಾಳುವಾಗ ತನ್ನ ಪ್ರಿಯಕರನ ಜೊತೆ ಹೇಗೆ ಬಿಂದಾಸ್ ಆಗಿರುತ್ತಾಳೆ, ಸ್ವತಂತ್ರವಾಗಿ ಆಲೋಚನೆ, ನಡವಳಿಕೆಗೆ ಇಂಬು ಸಿಗುತ್ತದೆಯೋ ಅದು ಮದುವೆಯ ನಂತರ ಇರುವುದಿಲ್ಲ. ಮದುವೆಯ ಮುಂಚಿನ ಆಧುನಿಕ ನಡವಳಿಕೆ, ಆಲೋಚನೆಗಳು ಮದುವೆಯ ನಂತರ ಸಂಪ್ರದಾಯದ ನಡುವೆ ನುಗ್ಗಾಗಿಬಿಡುತ್ತವೆ. ಇದು ಸಹಜವಾಗಿಯೇ ಭಾವನಾತ್ಮಕ ಒತ್ತಡ ಸೃಷ್ಟಿಸುತ್ತದೆ ಎಂಬುದು ಅವರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.