ಕಳೆದ ಮೇ ತಿಂಗಳಲ್ಲಿ ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ ಅನುರಾಧಾಗೆ ಲಾಕ್‌ಡೌನ್ ಕಾರಣದಿಂದಾಗಿ ಬಾಣಂತನಕ್ಕೆಂದು ತವರುಮನೆಗೆ ಹೋಗಲೂ ಸಾಧ್ಯವಾಗಲಿಲ್ಲ. ಹಾಗಂತ ಪತಿ ಮತ್ತು ಅತ್ತೆ ಯಾವುದಕ್ಕೂ ಕೊರತೆಯಾಗದಂತೆ ಚೆನ್ನಾಗಿಯೇ ನೋಡಿಕೊಂಡರು. ಆದರೆ ಮಗುವಿಗೆ ಮೂರು ವಾರಗಳಾದ ಮೇಲೆ ಅನುರಾಧಾಳಲ್ಲಿ ವಿಚಿತ್ರ ಬದಲಾವಣೆಗಳು ಕಾಣಿಸಿಕೊಂಡವು. ತೊಟ್ಟಿಲಲ್ಲಿದ್ದ ಮಗು ಸತ್ತು ಹೋಗಿದೆ ಎಂಬಂತಹ ಆಲೋಚನೆ ಬಂದು ಪದೇ ಪದೇ ನೋಡುವುದು, ಸಂಜೆಯಾಗುತ್ತಿದ್ದಂತೆ ಯಾವುದೋ ಅವ್ಯಕ್ತ ನೆರಳು ಮಗುವಿನ ಮೇಲೆ ಮುಸುಕಿ ಕೊಲ್ಲುತ್ತಿದೆ ಎನಿಸಿ ಕೆಲವೊಮ್ಮೆ ಚೀರುವುದು, ಗಂಡ ಮಗುವನ್ನು ಎತ್ತಿಕೊಂಡರೆ ಸ್ಮಶಾನಕ್ಕೆ ಒಯ್ಯುತ್ತಿರಬಹುದು ಎಂಬ ಕೆಟ್ಟ ಆಲೋಚನೆಗಳು ಬರುವುದು.. ಒಟ್ಟಿನಲ್ಲಿ ಎಲ್ಲವೂ ಅಯೋಮಯ.
ಕೋವಿಡ್‌ನಿಂದಾಗಿ ಸೀಮಂತದ ಸಂಭ್ರಮವನ್ನೂ ಕಾಣದ ಅನುರಾಧಾಗೆ ಚೊಚ್ಚಲ ಗರ್ಭದಿಂದಾಗಿ ಹುಟ್ಟಿಕೊಂಡ ಆತಂಕ ವಿಪರೀತ ದುಗುಡಕ್ಕೆ ಕಾರಣವಾಗಿತ್ತು. ಆಸ್ಪತ್ರೆಯಲ್ಲೂ ಆಪ್ತರನ್ನು ಹತ್ತಿರಕ್ಕೆ ಬಿಡದಿದ್ದರಿಂದ ಆತಂಕ ಇನ್ನಷ್ಟು ಹೆಚ್ಚಿತ್ತು. ಇವೆಲ್ಲವೂ ಸೇರಿಕೊಂಡು ಆಕೆಯಲ್ಲಿ ಪ್ರಸವಾನಂತರದ ಖಿನ್ನತೆ ಶುರುವಾಗಿತ್ತು.
ಈ ಪ್ರಸವಾನಂತರದ ಖಿನ್ನತೆ ಎನ್ನುವುದು ಬಾಣಂತಿಯರಲ್ಲಿ ಅಪರೂಪವೇನಲ್ಲ. ಆದರೆ ಕೋವಿಡ್‌ಗಿಂತ ಮುಂಚೆ ಇದ್ದ ಪ್ರಮಾಣ ಈಗ ಒಮ್ಮೆಲೇ ಜಾಸ್ತಿಯಾಗಿದೆ ಎನ್ನುತ್ತದೆ ಅಂಕಿ– ಅಂಶ. ಲಾಕ್‌ಡೌನ್ ಹಾಗೂ ನಂತರದ ದಿನಗಳಲ್ಲಿ ಗರ್ಭಿಣಿಯರು ಹಾಗೂ ಬಾಣಂತಿಯರಲ್ಲಿ ಈ ದಿಗಿಲು ಹಾಗೂ ಖಿನ್ನತೆಯ ಪ್ರಮಾಣ ಎಷ್ಟು ಹೆಚ್ಚಾಗಿದೆಯೆಂದರೆ ಒಂದು ಸಮೀಕ್ಷೆಯ ಪ್ರಕಾರ ಇದು ಭಾರತದಲ್ಲಿ ಶೇ 68ರಷ್ಟಿದೆ. ಬ್ರಿಟನ್‌ನಲ್ಲಿ ನಡೆದ ಸಮೀಕ್ಷೆಯಲ್ಲಿ ಇದು ಶೇ 15ರಿಂದ ಶೇ 43ಕ್ಕೆ ಏರಿರುವುದು ಕಂಡು ಬಂದಿದೆ.
ಇದಕ್ಕೆ ಕಾರಣ ಸರಳ, ಕೋವಿಡ್ ಪಿಡುಗು ಹಾಗೂ ಅದರಿಂದ ಉದ್ಭವಿಸಿದ ಸಮಸ್ಯೆ ಸೃಷ್ಟಿಸಿದ ಒತ್ತಡ. ಆದರೆ ಇದನ್ನು ಅನುಭವಿಸುತ್ತಿರುವವರ ಲಕ್ಷಣಗಳನ್ನು ಪತ್ತೆ ಮಾಡುವುದು ಈ ಪರಿಸ್ಥಿತಿಯಲ್ಲಿ ಅಷ್ಟು ಸರಳವಲ್ಲ.
‘ನನ್ನ ಬಳಿ ಬರುವ ಗರ್ಭಿಣಿಯರಲ್ಲಿ ಬಹುತೇಕ ಮಂದಿಯಲ್ಲಿ ಈ ಒತ್ತಡ, ದಿಗಿಲಿನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಗರ್ಭಿಣಿಯರಲ್ಲಿ, ಅದರಲ್ಲೂ ಚೊಚ್ಚಲಾಗಿದ್ದರೆ ಈ ಆತಂಕ ಸಾಮಾನ್ಯವೇ. ಆದರೆ ಕೋವಿಡ್‌ನಿಂದಾಗಿ ಅವರಲ್ಲಿ ಅಭದ್ರತೆಯ ಜೊತೆಗೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡು ಖಿನ್ನತೆಗೆ ಕಾರಣವಾಗುತ್ತಿದೆ’ ಎನ್ನುತ್ತಾರೆ ಪ್ರಸೂತಿ ತಜ್ಞೆ ಡಾ. ವೈಶಾಲಿ ಎಂ.
ಲಕ್ಷಣಗಳು
ಹೆರಿಗೆಯ ನಂತರ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಸಮಸ್ಯೆ ಕೆಲವೊಮ್ಮೆ ಗಂಭೀರ ಸ್ಥಿತಿಯನ್ನು ತಲುಪಬಹುದು. ಬಾಣಂತಿಯರಲ್ಲಿ ಅಲ್ಪಸ್ವಲ್ಪ ಕಿರಿಕಿರಿ ಸಾಮಾನ್ಯವೆಂದು ಪರಿಗಣಿಸಬಹುದು. ಆದರೆ ಕಾರಣವಿಲ್ಲದೇ ಅಳುವುದು, ಒಮ್ಮೆಲೇ ರೇಗುವುದು, ಇಡೀ ದಿನ ಚಡಪಡಿಸುವುದು, ಹಸಿವು ಹಾಗೂ ನಿದ್ರೆಯ ಕೊರತೆ ಇವೆಲ್ಲವೂ ಪ್ರಸವಾನಂತರದ ಖಿನ್ನತೆಯ ಲಕ್ಷಣಗಳು; ಮಗುವಿಗೆ ಏನೋ ತೊಂದರೆ ಆಗಿದೆ ಎನ್ನುವುದು, ಕೆಲವೊಮ್ಮೆ ಮಗುವಿಗೆ ದೈಹಿಕವಾಗಿ ಹಾನಿ ಮಾಡಲು ಯತ್ನಿಸುವುದು ತೀವ್ರತರದ ಖಿನ್ನತೆಯ ಲಕ್ಷಣ ಎನ್ನುತ್ತಾರೆ ತಜ್ಞರು.
ಹೆರಿಗೆಯ ನಂತರ ಕೆಲವು ವಾರಗಳ ಕಾಲ ಬಾಣಂತಿಗೆ ಮಾನಸಿಕವಾಗಿ ಏರುಪೇರಾಗುವುದರಿಂದ ಈ ಅವಧಿಯಲ್ಲಿ ಹೆಚ್ಚಿನ ನಿಗಾ ವಹಿಸುವುದು ಸಾಮಾನ್ಯ. ಭಾರತದಲ್ಲಂತೂ ತವರುಮನೆಯಲ್ಲಿ ತಾಯಂದಿರೇ ಮಗಳ ಬಾಣಂತನ ಮಾಡುವ ಸಂಪ್ರದಾಯ ಬಹುತೇಕ ಸಮುದಾಯಗಳಲ್ಲಿದೆ. ಆದರೆ ಕೋವಿಡ್‌ನಿಂದಾಗಿ, ಅದರಲ್ಲೂ ಲಾಕ್‌ಡೌನ್ ಅವಧಿಯಲ್ಲಿ ಈ ಕೌಟುಂಬಿಕ ಸಾಂತ್ವನ ಅನುಭವಿಸುವ ಅದೃಷ್ಟ ಕೆಲವರಿಗೆ ಇರಲಿಲ್ಲ. ಇದಲ್ಲದೇ ಅಂತರ ಕಾಪಾಡಿಕೊಳ್ಳುವ ನಿಯಮದಿಂದಾಗಿ ಎಷ್ಟೋ ಮಂದಿ ಗರ್ಭಿಣಿಯರು, ಬಾಣಂತಿಯರು ಆಪ್ತರ ಉಪಸ್ಥಿತಿಯಿಲ್ಲದೇ ನೋವು ಅನುಭವಿಸಬೇಕಾಯಿತು.ಅನುರಾಧಾಳಿಗೆ ಆಗಿದ್ದೂ ಇದೇ ಅನುಭವ. ಹೆರಿಗೆ ಯಾವುದೇ ಸಮಸ್ಯೆಗಳಿಲ್ಲದೇ ಆದರೂ ಕೂಡ ಆಕೆಗೆ ಕೊನೆಯ ಸ್ಕ್ಯಾನಿಂಗ್‌ಗೆ ಹೋಗಲು ಕಷ್ಟವಾಯಿತು. ಜೊತೆಗೆ ದೂರದ ಊರಿನಲ್ಲಿದ್ದ ತಾಯಿಗೆ ಮಗಳನ್ನು ಹೆರಿಗೆಗೆ ಕರೆದೊಯ್ಯಲೂ ಆಗಿಲ್ಲ. ಮಗುವಿನೊಂದಿಗೆ ಆಸ್ಪತ್ರೆಯಿಂದ ಮನೆಗೆ ಬಂದಾಗಲೂ ತಾಯಿ– ಮಗುವಿಗೆ ಸೋಂಕಾಗಿಬಿಟ್ಟರೆ ಎಂಬ ಭಯದಿಂದ ಮನೆಯವರು ಆದಷ್ಟು ದೂರವೇ ಉಳಿಯುತ್ತಿದ್ದರು. ಇವೆಲ್ಲವೂ ಸೇರಿ ವಿನಾಕಾರಣ ಕೋಪ, ದುಃಖ, ತನ್ನ ಮಗುವಿಗೆ ಏನೋ ಆಗಿದೆ ಎಂಬ ಶಂಕೆ ಆಕೆಯನ್ನು ಆವರಿಸಿದ್ದವು.
ಕೋವಿಡ್ ಸಂದರ್ಭದಲ್ಲಿ ಒಂದಿಷ್ಟು ದಿನಗಳ ಕಾಲ ಸಂತಾನ ನಿಯಂತ್ರಣದ ಮಾತ್ರೆಗಳ ಕೊರತೆಯಿಂದಾಗಿ ಕೆಲವರು ಬೇಡದ ಗರ್ಭ ಧರಿಸಿ ಸಮಸ್ಯೆ ಅನುಭವಿಸಿದರು. ಈ ಸಂದರ್ಭದಲ್ಲಿ ಹೆಚ್ಚಾದ ಕೌಟುಂಬಿಕ ಹಿಂಸೆಯೂ ಖಿನ್ನತೆಗೆ ಇನ್ನೊಂದು ಕಾರಣ ಎನ್ನಬಹುದು. ಮೊದಲೇ ಒಂದು ಮಗುವಿದ್ದು, ಎರಡನೆಯ ಹೆರಿಗೆಯಾದಾಗ ಕುಟುಂಬದ ಸದಸ್ಯರ ನೆರವೂ ಇಲ್ಲದಿದ್ದರೆ ಮೊದಲ ಮಗುವನ್ನೂ ನಿಭಾಯಿಸಬೇಕು. ಹಾಗೆಯೇ ಖರ್ಚು ಹೆಚ್ಚಾಗುವ ಆತಂಕವೂ ಈ ಖಿನ್ನತೆಗೆ ದಾರಿಯಾಗಬಹುದು. ಇದರ ಜೊತೆಗೆ ಕೆಲವೊಂದು ಆಸ್ಪತ್ರೆಗಳು ಹೆರಿಗೆಗೆಂದು ಬಂದ ಗರ್ಭಿಣಿಯರಿಗೆ ಪ್ರವೇಶ ನೀಡದೆ ವಾಪಸ್ ಕಳಿಸಿದಂತಹ ಪ್ರಕರಣಗಳು ಕೂಡ ನಡೆದು ಇತರ ಗರ್ಭಿಣಿಯರಲ್ಲಿ ಆತಂಕ ಮೂಡಿಸಿತ್ತು.
ಚಿಕಿತ್ಸೆ
‘ಫೋನ್ ಮೂಲಕ, ಆನ್‌ಲೈನ್ ಮೂಲಕ ವೈದ್ಯರು ಸಲಹೆಗಳನ್ನು ನೀಡಬೇಕಾದ ಸಂದರ್ಭವಿತ್ತು. ಇಂತಹ ಲಕ್ಷಣಗಳನ್ನು ವೈಯಕ್ತಿಕವಾಗಿ ರೋಗಿಗಳನ್ನು ನೋಡಿದರೆ ಮಾತ್ರ ಪತ್ತೆ ಹಚ್ಚಬಹುದು. ಆದರೂ ಕುಟುಂಬದ ಸದಸ್ಯರು ಸೂಕ್ಷ್ಮವಾಗಿ ಗಮನಿಸಿದರೆ, ಅದರಲ್ಲೂ ಅನುಭವಿ ತಾಯಂದಿರು ಇದನ್ನು ಪತ್ತೆ ಹಚ್ಚಿ ಹೇಳಿದರೆ ವೈದ್ಯರಿಗೆ ಚಿಕಿತ್ಸೆ ನೀಡುವುದು ಸುಲಭ’ ಎನ್ನುತ್ತಾರೆ ಡಾ. ವೈಶಾಲಿ. ಪ್ರಸವಾನಂತರದ ಆತಂಕ, ಖಿನ್ನತೆಗೆ ಆಪ್ತ ಸಮಾಲೋಚನೆ, ಔಷಧಿ ಮೊದಲಾದ ಪರಿಹಾರಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.