ADVERTISEMENT

ನೀವು ವರ್ಕ್‌ ಮಾಡ್ತಾ ಇದ್ದೀರಾ?

ಶ್ರುತಿ ಎಸ್.
Published 5 ಜುಲೈ 2019, 19:30 IST
Last Updated 5 ಜುಲೈ 2019, 19:30 IST
woman makes cleaning
woman makes cleaning   

‘ನೀವು ವರ್ಕಿಂಗಾ?’

ಒಬ್ಬಳು ಮಹಿಳೆ ಎದುರಾದ ಕೂಡಲೇ ಕೇಳುವ ಸಾಮಾನ್ಯ ಪ್ರಶ್ನೆಯಿದು.‘ಇಲ್ಲ’ ಎಂದ ಕೂಡಲೇ ಆ ಮಹಿಳೆಯ ಮೌಲ್ಯ ಅರ್ಧಕ್ಕರ್ಧ ಇಳಿದು ಬಿಡುತ್ತದೆ. ಮಾತಿಗೂ ಅಲ್ಲಿ ಕತ್ತರಿ ಬೀಳುತ್ತದೆ. ಮಕ್ಕಳನ್ನು ಸಂಭಾಳಿಸುತ್ತ, ಅಡುಗೆ ಕೆಲಸ ನೋಡಿಕೊಳ್ಳುತ್ತ, ಉಳಿದ ಸಮಯದಲ್ಲಿ ಟಿವಿ ಧಾರಾವಾಹಿ ನೋಡುತ್ತ ಇರುವವಳ ಜೊತೆ ಮಾತನಾಡಲು ಏನಿರುತ್ತದೆ ಎನ್ನುವಂತಹ ಮನೋಭಾವ.

‘ವರ್ಕಿಂಗ್‌’ ಎಂದರೆ ಅದರ ಖದರೇ ಬೇರೆ. ಮನೆಯಲ್ಲೂ, ಸಮಾಜದಲ್ಲೂ ಒಂದು ರೀತಿಯ ಗೌರವಮಿಶ್ರಿತ ದೃಷ್ಟಿ. ಆರ್ಥಿಕ ಭದ್ರತೆ– ಸ್ವಾತಂತ್ರ್ಯ ತಂದು ಕೊಡುವ ಈ ಗೌರವ ಕೆಲವೊಂದು ಅಸಾಮರ್ಥ್ಯವನ್ನೂ ನಗಣ್ಯ ಮಾಡಿಬಿಡುತ್ತದೆ.

ADVERTISEMENT

ಒಬ್ಬಳು ಗೃಹಿಣಿ ಎಂದ ಕೂಡಲೇ ಅಸಮರ್ಥೆ ಎಂದು ಯಾಕೆ ತಿಳಿದುಕೊಳ್ಳಬೇಕು? ಗಂಡ, ಮಕ್ಕಳು, ಅತ್ತೆ– ಮಾವ.. ಎಂದೆಲ್ಲ ನೋಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆಕೆಯ ಬದುಕು ಅವರ ಸುತ್ತ ಸುತ್ತುತ್ತಲೇ ಇರುತ್ತದೆ. ಎಷ್ಟೆಂದರೆ 365 ದಿನಗಳ ಕಾಲ 24/7 ಕೆಲಸ ಮಾಡುತ್ತಲೇ ಇರಬೇಕು, ಸಂಬಳ, ರಜೆಯಿಲ್ಲದೆ. ಅಡುಗೆ ಮಾಡು, ಪಾತ್ರೆ ತೊಳೆ, ಬಟ್ಟೆ ವಾಷ್‌ ಮಾಡು, ಮಕ್ಕಳನ್ನು, ಮನೆಯವರನ್ನು ನೋಡಿಕೋ.. ಎಂದು ದಣಿವಾದರೂ ದುಡಿಯುತ್ತ, ಮನೆಯವರ ಬೇಕು– ಬೇಡಗಳ ಕಡೆ ಗಮನ ಕೊಡುತ್ತ, ಕೆಲವೊಮ್ಮೆ ತನ್ನ ವೈಯಕ್ತಿಕ ಆಸೆ– ಆಕಾಂಕ್ಷೆಗಳನ್ನೂ ಕಡೆಗಣಿಸುವ ಗೃಹಿಣಿಗೆ ಅದು ಹೇಗೆ ‘ವರ್ಕ್‌ ಮಾಡುತ್ತಿಲ್ಲವೇ’ ಎನ್ನುವಂತಹ ಪ್ರಶ್ನೆ ಎಸೆಯಬೇಕು!

ಇಂದಿನ ಕಾಲಘಟ್ಟದಲ್ಲಿ, ಆಧುನಿಕ ತಂತ್ರಜ್ಞಾನ ಮನೆಮನೆಗೆ ಕಾಲಿಟ್ಟಿದ್ದು, ವಾಷಿಂಗ್‌ ಮಷಿನ್‌, ಡಿಷ್‌ವಾಷರ್‌, ಫ್ರಿಡ್ಜ್‌, ಮೈಕ್ರೊವೇವ್‌ ಓವನ್‌.. ಎಂದೆಲ್ಲ ನೆರವಿಗೆ ನಿಂತಿವೆ. ಹೀಗಾಗಿ ಗೃಹಿಣಿಗೆ ಹೆಚ್ಚು ಕೆಲಸವಿಲ್ಲ ಎಂದು ಸಲೀಸಾಗಿ ಆಕೆಯ ದುಡಿಮೆಯ ಮೌಲ್ಯವನ್ನು ಇಳಿಸುವವರಿದ್ದಾರೆ. ಆದರೆ ಕುಟುಂಬವನ್ನು ಸಂತಸವಾಗಿಡಲು ಆಕೆ ನೀಡುವ ಕೊಡುಗೆ ನಗಣ್ಯವೇನಲ್ಲ. ಒಂದು ದಿನ ಆರಾಮಿಲ್ಲ ಎಂದು ಕೂತರೆ ಮನೆಯ ದೈನಂದಿನ ಕೆಲಸಗಳೆಲ್ಲ ತಾರಾಮಾರಾಗುತ್ತವೆ ಎಂಬುದು ಕುಟುಂಬದ ಇತರ ಸದಸ್ಯರಿಗೂ ಗೊತ್ತಿರುವ ವಿಷಯವೇ!

ಕಠಿಣ ಕೆಲಸ

‘ಅತ್ಯಂತ ಕಠಿಣವಾದ ಕೆಲಸವೆಂದರೆ ಅದು ಅಮ್ಮನಾಗುವುದು, ಮಕ್ಕಳು, ಮನೆಯನ್ನು ನೋಡಿಕೊಳ್ಳುವುದು’ ಎನ್ನುತ್ತಾರೆ ಲೇಖಕಿ ಒಲಿವಿಯಾ ಗುಡ್‌ಹೋಪ್‌. ಅವರ ಪ್ರಕಾರ, ಆಕೆಯ ಕೆಲಸಕ್ಕೇನಾದರೂ ವೇತನ ನೀಡಿದರೆ ಅದು ಅತ್ಯಂತ ಹೆಚ್ಚಿನ ಸಂಬಳ ಪಡೆಯುವ ಉದ್ಯೋಗ ಎಂದು ಶಿಫಾರಸ್ಸು ಮಾಡಬಹುದು. ಇತ್ತೀಚೆಗೆ ಬ್ರಿಟನ್ನಿನಲ್ಲಿ ಗೃಹಿಣಿಯೊಬ್ಬಳು ವಿಚ್ಛೇದನ ಪ್ರಕರಣದಲ್ಲಿ ತನಗೆ ಹೆಚ್ಚಿನ ಪರಿಹಾರ ಧನ ಕೊಡಬೇಕೆಂದು ವಾದಿಸಿದ್ದಳು. ಕಾರಣ ಕುಟುಂಬವನ್ನು ನೋಡಿಕೊಳ್ಳುವ ಸಲುವಾಗಿ ಆಕೆ ಹೆಚ್ಚಿನ ಸಂಬಳದ ಉದ್ಯೋಗವನ್ನು ಬಿಟ್ಟಿದ್ದಳು. ಇಂತಹ ತ್ಯಾಗಕ್ಕೆ ಬೆಲೆ ಇಲ್ಲವೇ ಎಂದು ಆ ಮಹಿಳೆ ವಾದಿಸಿ, ಗೆದ್ದಳೆನ್ನಿ!

ಉದ್ಯೋಗ ಮಾಡಿದರೆ ಎಷ್ಟು ಸಂಬಳ ಸಿಗುತ್ತಿತ್ತು ಎಂದು ಲೆಕ್ಕ ಹಾಕುತ್ತ ಕೂರುವುದನ್ನು ಸದ್ಯಕ್ಕೆ ಬಿಡಿ. ಅಡುಗೆ, ಕ್ಲೀನಿಂಗ್‌, ಮಗುವನ್ನು ನೋಡಿಕೊಳ್ಳುವುದು, ಅದಕ್ಕೆ ಟ್ಯೂಷನ್‌ ಕೊಡುವುದು, ಜೊತೆಗೆ ಕುಟುಂಬದ ಸದಸ್ಯರಿಗೆ ಸಲಹೆ ಕೊಡುತ್ತ, ಆಪ್ತ ಸಮಾಲೋಚಕಿಯಾಗಿ, ಸಂಘಟನಾ ಶಕ್ತಿಯಾಗಿ ಕೆಲಸ ಮಾಡುವ ಗೃಹಿಣಿಯ ವೇತನ ಲೆಕ್ಕ ಹಾಕಿದರೆ ನಿಮ್ಮ ಊಹೆಗೂ ಮೀರಿದ್ದು ಅದು. ವಾರ್ಷಿಕ ವೇತನ ₹37,80,000 ಎಂದು ಪುಣೆಯ ಮಹಿಳಾ ಕಲ್ಯಾಣ ಸಂಸ್ಥೆಯೊಂದು ಲೆಕ್ಕ ಹಾಕಿದೆ!

ಪಾಶ್ಚಾತ್ಯ ರಾಷ್ಟ್ರಗಳೇಕೆ, ನಮ್ಮಲ್ಲೂ ಕೂಡ ಮನೆಯಲ್ಲೇ ಇರುವುದು ಹಳೆಯ ಫ್ಯಾಷನ್‌, ಸಮಾಜಕ್ಕೆ ಆರ್ಥಿಕವಾಗಿ ದೊಡ್ಡ ಹೊರೆ ಎಂಬಂತೆ ಬಿಂಬಿಸಲಾಗುತ್ತಿದೆ. ಆಕೆಯ ಗಂಡನೇನಾದರೂ ಕೈ ತುಂಬ ದುಡಿಯುವ ಸಿರಿವಂತನಾದರೆ, ಹೈಸೊಸೈಟಿಯಲ್ಲಿ ಓಡಾಡುತ್ತ, ಪಾರ್ಟಿ ಮಾಡುತ್ತ ಕಾಲ ಕಳೆಯುವ ‘ಸೋಷಿಯಲೈಟ್‌’ ಹಾಗೂ ಸೋಮಾರಿ ಮಹಿಳೆ ಎಂಬಂತೆ ಬಿಂಬಿಸಲಾಗುತ್ತಿದೆ. ವಿದೇಶಗಳಿಗೆ ಹೋಗಿ ಅಲ್ಲಿ ಖಾಲಿ ಕುಳಿತರೆ ಡಾಲರ್‌ನಲ್ಲಿ ನಷ್ಟ ಎಣಿಸುವ ಪರಿಪಾಠವಿದೆ.

ಜಿಡಿಪಿ ಕುಸಿತವೇ?

ಆಕೆಯ ನಿತ್ಯದ ಕೆಲಸಗಳಾದ ಕ್ಲೀನಿಂಗ್‌, ಅಡುಗೆ, ಮಕ್ಕಳನ್ನು ಬೆಳೆಸುವುದು... ಎಲ್ಲವನ್ನೂ ರಾಷ್ಟ್ರೀಯ ಅಭಿವೃದ್ಧಿ ದರಕ್ಕೆ ತಳಕು ಹಾಕಲಾಗುತ್ತದೆ. ಒಬ್ಬ ಪುರುಷ ಉದ್ಯೋಗ ಮಾಡದ ಯುವತಿಯನ್ನು ಮದುವೆಯಾದರೆ ‘ಓಹ್‌. ಜಿಡಿಪಿ ಕಡಿಮೆಯಾಗುತ್ತಿದೆ’ ಎನ್ನುವವರು ಬಹಳಷ್ಟು ಮಂದಿ. ಅದೇ ಒಬ್ಬಳು ಉದ್ಯೋಗಸ್ಥ ಯುವತಿ ಮಗುವನ್ನು ಕ್ರಷ್‌ನಲ್ಲಿ ಬಿಟ್ಟು, ಮಗುವಿಗಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೇಬಿ ಫುಡ್‌ ಖರೀದಿಸಿದರೆ ಜಿಡಿಪಿ ಏರಿಬಿಡುತ್ತದೆ! ಶಿಕ್ಷಣ, ಉದ್ಯೋಗ ಕ್ಷೇತ್ರದಲ್ಲಿ ಸರಿಸಮಾನವಾಗಿ ದುಡಿಯುವ ಮಹಿಳೆಯಿಂದಾಗಿ ಉತ್ಪಾದನೆ ಹೆಚ್ಚಾಗುತ್ತದೆ.. ಆರ್ಥಿಕತೆ ಅಭಿವೃದ್ಧಿ ಹೊಂದುತ್ತದೆ... ಆದರೆ ಮನೆಯಲ್ಲೇ ಉಳಿಯುವ ಗೃಹಿಣಿಯರು, ತಾಯಂದಿರಿಂದಾಗಿ ಅಭಿವೃದ್ಧಿ ದರ ಕುಸಿದು ಬಿಡುತ್ತದೆ. ಚೀನಾ, ಜಪಾನ್‌ನಂತಹ ದೇಶಗಳಲ್ಲಂತೂ ಮಗು ಮಾಡಿಕೊಳ್ಳುವ ಮೊದಲು ತಾವು ದುಡಿಯುವ ಕಂಪನಿಯಿಂದ ಪರವಾನಗಿ ಪಡೆಯಬೇಕಂತೆ. ಅವರು ಗರ್ಭಿಣಿಯಾಗಿ, ಮಗು ಹೆತ್ತು ಹೆರಿಗೆ ರಜೆ ತಗೊಂಡರೆ ದೇಶದ ಜಿಡಿಪಿಗೆ ಹೊಡೆತವಲ್ಲವೇ!

ಅಮೆರಿಕಾ, ನಾರ್ವೆಯಂತಹ ದೇಶಗಳು ಗೃಹಿಣಿಯರ ವೇತನರಹಿತ ಕೆಲಸಕ್ಕೆ ಹೆಚ್ಚಿನ ಅಂಕ ನೀಡುತ್ತಿವೆ, ಎಷ್ಟೆಂದರೆ ಉತ್ಪಾದನಾ ಕ್ಷೇತ್ರಕ್ಕಿಂತ ಅಧಿಕ. ಆದರೂ ಕೂಡ ಅಲ್ಲಿಯೂ ಗೃಹಿಣಿಯರೆಂದರೆ ಸಿರಿವಂತರ ಪತ್ನಿಯರೇ!

ಸ್ವೀಡನ್‌ನಲ್ಲಂತೂ ಗೃಹಿಣಿ ಎಂಬ ಶಬ್ದವೇ ಮಾಯವಾಗಿಬಿಟ್ಟಿದೆಯಂತೆ. ಬಹುತೇಕ ಮಹಿಳೆಯರು ಉದ್ಯೋಗ ಮಾಡುವವರು. ಮಗುವನ್ನು ನೋಡಿಕೊಳ್ಳಲು ಪುರುಷರು ಪಿತೃತ್ವ ರಜೆ ತೆಗೆದುಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಜೊತೆಗೆ ಮಗುವನ್ನು ನೋಡಿಕೊಳ್ಳುವ ಸಲುವಾಗಿ ‘ಹೋಂ ಕೇರ್‌’ ಭತ್ಯೆಯನ್ನು ಅಲ್ಲಿಯ ಕಂಪನಿಗಳು ಕೊಡುತ್ತಿವೆಯಂತೆ. ಅಂದರೆ ಮಹಿಳೆಯರು ಗೃಹಿಣಿ ಪಟ್ಟ ತೆಗೆದುಕೊಂಡು ಮನೆಯಲ್ಲಿ ಕೂರಬಾರದು! ಸಂಬಳ ತೆಗೆದುಕೊಳ್ಳುತ್ತ, ಹೆಚ್ಚು ಹೆಚ್ಚು ಹಣ ಖರ್ಚು ಮಾಡುತ್ತ, ಸರ್ಕಾರಕ್ಕೆ ತೆರಿಗೆ ಕಟ್ಟುತ್ತ ಇರಬೇಕು!

ಜಾಹೀರಾತಿನಲ್ಲೂ ಗೃಹಿಣಿಯರು ಮಾಯ!

ಅದೇಕೆ, ನಮ್ಮಲ್ಲಿ ಕೂಡ ಇಂತಹದು ನಿಧಾನವಾಗಿ ನುಸುಳುತ್ತಿದೆ. ಟಿವಿಯಲ್ಲಿ ಬರುವ ಕೆಲವು ಜಾಹೀರಾತುಗಳನ್ನು ನೋಡಿ. ಅದರಲ್ಲೂ ಗೃಹೋಪಯೋಗಿ ಉಪಕರಣಗಳು, ಕ್ಲೀನಿಂಗ್‌, ವಾಷಿಂಗ್‌ ಪೌಡರ್‌ ಜಾಹೀರಾತುಗಳು. ಹಿಂದೆ ಗೃಹಿಣಿಯರನ್ನು ತೋರಿಸುತ್ತಿದ್ದ ಈ ಜಾಹೀರಾತುಗಳಲ್ಲಿ ಈಗ ಪುರುಷ ರೂಪದರ್ಶಿಗಳೇ ಕಾಣಿಸಿಕೊಳ್ಳುತ್ತಿದ್ದಾರೆ. ಮಗಳ ಉಡುಪಿನ ಮೇಲೆ ಬಿದ್ದ ಜಾಮ್‌ ಅನ್ನು ವಾಷಿಂಗ್‌ ಪೌಡರ್‌ ಬಳಸಿ ತೊಳೆದು ಹಾಕುವ ಅಪ್ಪ ಸಂತಸದ ನಗು ಬೀರುವುದನ್ನು ನೋಡಿದರೆ ಈ ಗೃಹಿಣಿ ಎಂಬ ಕಲ್ಪನೆ ನಿಧಾನಕ್ಕೆ ಮಾಯವಾಗುತ್ತಿದೆ ಎನಿಸಬಹುದು. ಚಾಕೊಲೇಟ್‌ನಿಂದ ಕಾರಿನವರೆಗೂ ಉದ್ಯೋಗಸ್ಥ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡಿವೆ ಈ ಜಾಹೀರಾತುಗಳು. ಅಂದರೆ ಇಲ್ಲಿಯೂ ಗೃಹಿಣಿಯರೆಂದರೆ ಆರ್ಥಿಕವಾಗಿ ಸಬಲರಲ್ಲದ, ನಿರ್ಧಾರ ಕೈಗೊಳ್ಳುವ ಸ್ಥಾನದಲ್ಲಿರದವರು ಎಂದೇ ಪರಿಗಣಿಸಲಾಗುತ್ತದೆ.

ಒಟ್ಟಾರೆ ಎಲ್ಲಾ ಸಾಮಾಜಿಕ ರೀತಿ ರಿವಾಜುಗಳ ಮೇಲೂ ಆರ್ಥಿಕತೆಗೆ ಒತ್ತು ನೀಡುವ ನೆರಳಿದೆ. ತೆರಿಗೆ ಮೊತ್ತ ಹೆಚ್ಚು ಸಂಗ್ರಹವಾಗಬೇಕು. ಅಂದರೆ ಮಹಿಳೆಯರು ಹೆಚ್ಚು ಹೆಚ್ಚು ಉದ್ಯೋಗ ಮಾಡಲು ಮುಂದೆ ಬರಬೇಕು, ಅವರಿಗೆ ಆರ್ಥಿಕ ಸ್ವಾತಂತ್ರ್ಯ ಸಿಗುತ್ತದೆ, ಸಾಮಾಜಿಕ ಲಾಭ ಸಿಗುತ್ತದೆ, ವೈಯಕ್ತಿಕ ಸ್ವಾತಂತ್ರ್ಯ, ಸಂತೃಪ್ತಿ ಲಭಿಸುತ್ತದೆ ಎಂದೇ ಬಿಂಬಿಸಲಾಗುತ್ತಿದೆ.

ಮತ್ತದೇ ‘ನೀವು ವರ್ಕಿಂಗಾ?’ ಎಂಬ ಪ್ರಶ್ನೆ ಬಂದರೆ... ‘ಹೌದು’ ಎಂದರೆ ಉದ್ಯೋಗ ಸ್ಥಳದಲ್ಲಿ ಕೆಲಸ ಮುಂದುವರಿಯುತ್ತದೆ. ‘ಇಲ್ಲ’ ಎಂದರೂ ಮನೆಯಲ್ಲಿ ಕೆಲಸ ಮುಂದುವರಿಯುತ್ತದೆ.

ಬಾಕ್ಸ್

ಕುಟುಂಬದ ಸಿಇಒ ಇದ್ದಂತೆ..

ದೇಶದ ಪ್ರಗತಿ, ಸಾಧನೆಯನ್ನು ಬಿಂಬಿಸಬೇಕಾದರೆ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಅಳತೆಗೋಲಾಗಿ ತೆಗೆದುಕೊಳ್ಳುವ ಸಂಪ್ರದಾಯ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಮಾತ್ರವಲ್ಲ, ನಮ್ಮಲ್ಲೂ ಶುರುವಾಗಿದೆ. ಅದರಲ್ಲೂ ಉನ್ನತ ಶಿಕ್ಷಣ ಪಡೆದ, ಕೌಶಲಗಳನ್ನು ಕರಗತ ಮಾಡಿಕೊಂಡ ವೃತ್ತಿಪರರಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯವೇ. ಆದರೆ ಬಹುತೇಕ ಭಾರತೀಯ ಮಹಿಳೆಯರು ಗೃಹಿಣಿಯಾಗಿ ಮನೆಯಲ್ಲೇ ಕೆಲಸ ಮಾಡುತ್ತಿದ್ದಾರೆ, ಉದ್ಯಮಿಯಾಗಿಯೋ ಅಥವಾ ಫ್ರೀಲಾನ್ಸರ್‌ ಆಗಿಯೋ ಅಲ್ಲ, ಗೃಹಿಣಿಯಾಗಿ.

ಹಾಗೆ ನೋಡುವುದಾದರೆ ಗೃಹಿಣಿ ಅಥವಾ ಒಂದು ಕಂಪನಿಯ ಸಿಇಒ ಕೆಲಸದ ವಿಷಯ ತೆಗೆದುಕೊಂಡರೆ ಅಂತಹ ವ್ಯತ್ಯಾಸವೇನೂ ಕಾಣಿಸುವುದಿಲ್ಲ ಎನ್ನುತ್ತಾರೆ ಲೇಖಕಿ ವಂದನಾ ಶ್ರೀವಾಸ್ತವ್‌. ಸಿಇಒ ಕಂಪನಿಯ ಇಡೀ ವ್ಯವಹಾರ ನೋಡಿಕೊಂಡು ಮುನ್ನಡೆಸಿದರೆ, ಗೃಹಿಣಿ ಕುಟುಂಬದ ಎಲ್ಲ ಆಗುಹೋಗುಗಳನ್ನು ನೋಡಿಕೊಳ್ಳುತ್ತಾಳೆ. ಸಿಇಒ ದಿನದ 10–12 ತಾಸು ಕೆಲಸ ಮಾಡಿ ಹಣಕಾಸು, ಮಾರಾಟ ವಿಭಾಗ, ಮಾನವ ಸಂಪನ್ಮೂಲ ಎಂದು ನೋಡಿಕೊಂಡರೆ, ಗೃಹಿಣಿಯೂ ಇದೇ ತೆರನಾದ ಆಡಳಿತಗಾರಳಾಗಿ ನಿಭಾಯಿಸಬಲ್ಲಳು. ಆದರೆ ಸಿಇಒ ಲಕ್ಷಗಟ್ಟಲೆ ವೇತನ ಪಡೆದರೆ, ಗೃಹಿಣಿಯ ಕೆಲಸ ಬೇರೆಯವರ ಕಣ್ಣಿಗೆ ನಗಣ್ಯ. ಅದು ಆಕೆಯ ಕರ್ತವ್ಯವಲ್ಲವೇ ಎಂಬ ಮಾತು ಬಂದು ಬಿಡುತ್ತದೆ.

ಸೆಲೆಬ್ರಿಟಿಗಳ ಬದುಕನ್ನು ಕುತೂಹಲದಿಂದ ನೋಡುವ, ಅದನ್ನೇ ಅನುಸರಿಸಲು ಯತ್ನಿಸುವ ಮಿಲೆನಿಯಲ್‌ ತಲೆಮಾರಿನವರನ್ನು ತೆಗೆದುಕೊಂಡರೆ ಹೆಚ್ಚಿನ ಸಂಖ್ಯೆಯ ಯುವತಿಯರು ಮನೆಯಲ್ಲೇ ಆರಾಮವಾಗಿರಲು ಬಯಸುತ್ತಾರಂತೆ. ಅಮೆರಿಕಾದ ಮಿಶಿಗನ್‌ ಹಾಗೂ ಟೆಕ್ಸಾಸ್‌ ವಿಶ್ವವಿದ್ಯಾಲಯಗಳು ಜಂಟಿಯಾಗಿ ನಡೆಸಿದ ಅಧ್ಯಯನದಲ್ಲಿ ‘ಪುರುಷರೇ ಕುಟುಂಬದ ಯಜಮಾನರು. ಅವರೇ ಎಲ್ಲಾ ರೀತಿಯ ಹಣಕಾಸಿನ ಹೊಣೆ ಹೊರಬೇಕು’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.