1 ಕಿಟಕಿ, ಬಾಗಿಲು, ಗವಾಕ್ಷಿಗಳನ್ನು ಗಟ್ಟಿಯಾಗಿ ಮುಚ್ಚಿ, ಒಳಗಿನ ಗಾಳಿಯನ್ನೂ ಬಂಧಿಸಿಟ್ಟಿದ್ದ ಕೋಣೆ. ಅರ್ಧರಾತ್ರಿ. ಮೈಮೇಲೆ ಹಲ್ಲಿ-ಹಾವು ಸರಿದಂತೆ ಬೆಚ್ಚಿ ಎಚ್ಚರಾದ ಅವಳು ನಿದ್ದೆಗಣ್ಣಲ್ಲಿ ನೋಡಿದಾಗ ಎದುರಿಗೆ ಗೋಡೆಗೊರಗಿ ಕುಳಿತ ಅವನು ಇವಳನ್ನೇ ದಿಟ್ಟಿಸಿ ನೋಡುತ್ತಿದ್ದ. ತುಟಿಗಳಲ್ಲಿ ಉರಿಯುತ್ತಿದ್ದ ಸಿಗರೇಟಿನ ಉರಿಬೆಂಕಿಗಿಂತಲೂ ತೀಕ್ಷ್ಣವಾಗಿದ್ದ ಅವನ ಕಣ್ಣುಗಳಲ್ಲಿ ತಣ್ಣನೆಯ ಕ್ರೌರ್ಯ. ಅಲ್ಯುಮಿನಿಯಂ ತಟ್ಟೆಯ ಮೇಲೆ ಮರಳು ಅಲ್ಲಾಡಿದಾಗ ಬರುವ ದನಿಯಲ್ಲಿ ಆತ ಕೇಳುತ್ತಾನೆ, ‘ಕೆಲವು ಗಂಡಂದಿರು ಯಾರಿಗೂ ಗೊತ್ತೇ ಆಗದ ಹಾಗೆ ಹೆಂಡತಿಯರನ್ನು ಕೊಲೆ ಮಾಡಿಬಿಡುತ್ತಾರೆ, ಗೊತ್ತಾ?’ ಒಂದು ಮಾತೂ ಬೈಯದೆ, ಹೊಡೆಯದೆ, ತಳ್ಳದೆ, ಮೈಮೇಲೆ ಒಂದು ಸಣ್ಣ ಕಲೆಯನ್ನೂ ಉಳಿಸದೆ ಅವನು ಅವಳ ರಾತ್ರಿಗಳ ನಿದ್ದೆಯನ್ನೂ ಹಗಲುಗಳ ನೆಮ್ಮದಿಯನ್ನೂ ಸಿಗರೇಟಿನ ಮೊನೆಯಿಂದ ಸುಟ್ಟು ಹಾಕಿರುತ್ತಾನೆ.
2 ಗಡಿಯಾರದ ಮುಳ್ಳು 10 ಗಂಟೆ ದಾಟುತ್ತಿದ್ದಂತೆ ಅವಳು ಚಡಪಡಿಸಲು ಆರಂಭಿಸುತ್ತಾಳೆ. ಶರ್ಟಿಗೆ ಕಾಜಾಗುಂಡಿ ಹಾಕುತ್ತಿರುವ ಕೈಬೆರಳುಗಳಲ್ಲಿ ಸಣ್ಣ ನಡುಕ. ಇದು ಐದನೆಯ ಶರ್ಟು, ರಾತ್ರಿ ಮುಗಿಯುವುದರಲ್ಲಿ ಇನ್ನೊಂದು ಶರ್ಟ್ ಮುಗಿಸಲೇಬೇಕು. ಅವಳ ಯೋಚನೆ ಅದಲ್ಲ, ಇನ್ನೇನು ಸೂಪರ್ವೈಸರ್ ಫೋನ್ ಬರುವ ಸಮಯ, ಅಷ್ಟರಲ್ಲಿ ಅವಳು ಬಾತ್‌ರೂಂ ಸೇರಿಕೊಳ್ಳಬೇಕು, ಅಷ್ಟು ಹೊತ್ತೂ ಬಚ್ಚಲುಮನೆಯಲ್ಲಿ ಇರುವುದಕ್ಕೆ ಗಂಡನಿಗೆ ಅನುಮಾನ ಬರದಿರಲಿ ಎಂದು ಬೇಡಿಕೊಳ್ಳುತ್ತಾ, ಟಿ.ವಿ ನೋಡುತ್ತಾ ಕುಳಿತ ಗಂಡನ ಕಡೆ ನೋಡುತ್ತಾಳೆ. ಲಾಕ್‌ಡೌನ್‌ನಿಂದಾಗಿ ಕೆಲಸವಿಲ್ಲದೆ ಮನೆಯಲ್ಲಿ ಕುಳಿತ ಅವನಿಗೆ ಹೋದ ತಿಂಗಳ ಸಂಬಳವೂ ಬಂದಿಲ್ಲ, ತನ್ನ ಪೀಸ್‌ವರ್ಕ್ ಕೆಲಸ ಹೋದರೆ ಮುಂದಿನ ತಿಂಗಳ ಅಂಗಡಿ ಬಾಕಿ ಕಟ್ಟಲು ದಾರಿಯಿಲ್ಲ. ಒಂದು ಹತ್ತು ನಿಮಿಷ, ವಾಟ್ಸ್ಆ್ಯಪ್‌ನಲ್ಲಿ ಬರುವ ವಿಡಿಯೊ ಕಾಲ್‌ಗೆ ಎದುರಾಗಿ ಕುಪ್ಪಸ ಕಳಚಿ ನಿಲ್ಲದಿದ್ದರೆ, ಮುಂದಿನ ಲಾಟಿನಲ್ಲಿ ಬಟ್ಟೆ ಬರುವುದಿಲ್ಲ. ಗಡಿಯಾರದ ಮುಳ್ಳಿನ ಉರಿಗೆ ಅವಳು ಬೇಯುತ್ತಿದ್ದಾಳೆ.
3 ‘ಫ್ಯಾಮಿಲಿ ಪ್ಲೇಸ್’ ಎನ್ನುವ ಮಹಿಳಾ ಸಹಾಯ ಕೇಂದ್ರಕ್ಕೆ ಒಂದು ಕರೆ ಬರುತ್ತದೆ. ನಡುಗುತ್ತಿರುವ ಹೆಣ್ಣುದನಿಯೊಂದು, ‘ಅವನು ಪಕ್ಕದ ಕೋಣೆಯಲ್ಲೇ ಇದ್ದಾನೆ, ನಾನು ಮಾತನಾಡುವುದು ಅವನಿಗೆ ಕೇಳಿಸಿದರೆ, ಫೋನ್ ಕಟ್ ಮಾಡಿಬಿಡುತ್ತೇನೆ’ ಎಂದು ಮೊದಲೇ ಹೇಳಿ ನಂತರ ತನ್ನ ಕಥೆ ಹೇಳಲಾರಂಭಿಸುತ್ತದೆ.
ಭಾರತದಲ್ಲಿ ಕೊರೊನಾ ಪಿಡುಗಿನ ಮೊದಲ ಐದು ತಿಂಗಳಲ್ಲಿ ‘ವರದಿಯಾಗಿರುವ’ ಬಾಲ್ಯವಿವಾಹ ಪ್ರಕರಣಗಳು 1680. ಅವುಗಳಲ್ಲಿ 1158ಅನ್ನು ನಿಲ್ಲಿಸಲಾಗಿದೆ, 122 ಬಾಲ್ಯವಿವಾಹಗಳು ನಡೆದುಹೋಗಿವೆ. ಲಾಕ್‌ಡೌನ್ ಸಮಯದಲ್ಲಿ ಮತ್ತು ಅದರ ನಂತರ ಬೆಂಗಳೂರಿನ 5-6 ವಾರ್ಡುಗಳಲ್ಲಿ ಪರಿಹಾರ ಕಾರ್ಯಗಳಲ್ಲಿ ಕೆಲಸ ಮಾಡುತ್ತಿರುವ ಜನಾರೋಗ್ಯ ಚಳವಳಿಯ ವಿಜಯ್ ಅವರ ಪ್ರಕಾರ, ಕೊರೊನಾಗೂ ಮೊದಲೇ ಸಂಕಷ್ಟದಲ್ಲಿದ್ದ ಹಲವಾರು ಉತ್ಪಾದನಾ ಘಟಕಗಳು ಈಗ ಇದೇ ನೆಪದಲ್ಲಿ ಕಾರ್ಮಿಕರಿಗೆ ಪರಿಹಾರವನ್ನೂ ಕೊಡದೆ ಮುಚ್ಚಿವೆ. ಗಾರ್ಮೆಂಟ್ಸ್, ಮನೆಕೆಲಸ ಇತ್ಯಾದಿ ಕೆಲಸ ಮಾಡುತ್ತಿದ್ದ ಹೆಣ್ಣುಮಕ್ಕಳು ಎರಡುರೀತಿಯಲ್ಲಿ ತೊಂದರೆಗೀಡಾಗಿದ್ದಾರೆ. ಅವರು ದುಡಿಯುತ್ತಿದ್ದ ಹಣ ಮನೆ ಖರ್ಚಿಗೆ ಸಹಾಯವಾಗುತ್ತಿತ್ತಲ್ಲದೆ, ಅವರಿಗೆ ಘನತೆ ಮತ್ತು ಸ್ವಾತಂತ್ರ್ಯವನ್ನೂ ಕೊಟ್ಟಿತ್ತು. ಈಗ ಹೆಣ್ಣುಮಕ್ಕಳು ಎರಡನ್ನೂ ಕಳೆದುಕೊಂಡಿದ್ದಾರೆ. ಕೆಲಸ ಕಳೆದುಕೊಂಡ ಗಂಡಸರು ಅವರ ಅಸಹನೆ ಮತ್ತು ಅಸಹಾಯಕತೆಯನ್ನು ಮನೆಯಲ್ಲಿ ಹೆಂಡತಿ, ಅಕ್ಕ, ತಂಗಿ ಮತ್ತು ತಾಯಂದಿರ ಮೇಲೆ ತೋರಿಸುತ್ತಿದ್ದಾರೆ.
ಕೊರೊನಾ ದೆಸೆಯಿಂದ ಸಾಫ್ಟ್‌ವೇರ್ ಉದ್ಯೋಗಿ ಹೆಣ್ಣುಮಕ್ಕಳ ಕೆಲಸದ ಸ್ಥಳದ ಜೊತೆಗೆ ಅವರು ಅನುಭವಿಸುವ ಹಿಂಸೆಯ ಸ್ವರೂಪವೂ ಬದಲಾಯಿತು. ‘ವಿಶಾಖಾ ಮಾರ್ಗಸೂಚಿ’ ಊಹಿಸಿಯೂ ಇರದ ರೀತಿಯಲ್ಲಿ ಮಾನಸಿಕ ಕಿರುಕುಳ ನಡೆಯುತ್ತಿದೆ. ಲಭ್ಯವಿರುವ ತಾಂತ್ರಿಕತೆಯನ್ನು ಬಳಸಿಕೊಂಡೇ ಈ ದೌರ್ಜನ್ಯ ನಡೆಯುತ್ತಿದೆ. ಮೊನ್ನೆ ಪತ್ರಿಕೆಗಳಲ್ಲಿ ಬಂದ ಸುದ್ದಿಯೊಂದರ ಪ್ರಕಾರ ಉತ್ತರಪ್ರದೇಶದಲ್ಲಿ ಒಬ್ಬಾತ
ಸ್ನೇಹಿತರೊಡನೆ ಜೂಜಾಡುವಾಗ ಪತ್ನಿಯನ್ನು ಪಣಕ್ಕಿಟ್ಟು ಸೋತ. ಗೆದ್ದ ನಾಲ್ಕು ಜನರು ಆಕೆಯ ಮೇಲೆ ಅತ್ಯಾಚಾರವೆಸಗಿದರು.ಅವರನ್ನು ಏನೂ ಮಾಡಲಾಗದ ಪತಿ, ಸಿಟ್ಟಿಗೆ ಪತ್ನಿಯ ಗುಪ್ತಾಂಗದ ಮೇಲೆ ಆಸಿಡ್ ಸುರಿದ.
ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಾರ್ಚ್ 24ರಿಂದ 30ರ ನಡುವೆ ಕೌಟುಂಬಿಕ ಹಿಂಸೆಯ ಬಗ್ಗೆ 58 ದೂರುಗಳು ಬಂದಿವೆ. ಪತಿ ನೀಡುವ ದೈಹಿಕ ಹಿಂಸೆ ತಾಳಲಾಗದೇ ಲಾಕ್‌ಡೌನ್ ನಡುವೆಯೂ ತವರು ಮನೆ ಸೇರಿದ ಅನೇಕ ಪ್ರಕರಣಗಳೂ ವರದಿಯಾಗಿವೆ. ‘ನಮಗೆ ಈವರೆಗೆ ಇ-ಮೇಲ್ ಮೂಲಕ ಬಂದಿರುವುದು 58 ದೂರುಗಳು ಮಾತ್ರ. ವಾಸ್ತವದಲ್ಲಿ ಇದರ ಐದಾರು ಪಟ್ಟು ಹೆಚ್ಚು ಕೌಟುಂಬಿಕ ಹಿಂಸಾಚಾರದ ಪ್ರಕರಣಗಳು ಈ ಅವಧಿಯಲ್ಲಿ ನಡೆದಿರುವ ಸಾಧ್ಯತೆ ಇದೆ’ ಎನ್ನುತ್ತಾರೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ.
ವಿಶ್ವಸಂಸ್ಥೆಯ ಅಧ್ಯಯನವೊಂದರ ಪ್ರಕಾರ, ಪ್ರತೀ ಮೂವರು ಹೆಣ್ಣುಮಕ್ಕಳಲ್ಲಿ ಒಬ್ಬರು ಯಾವುದೋ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೊರೊನಾ ನಂತರ ಕೌಟುಂಬಿಕ ಹಿಂಸೆಯ ಪ್ರಮಾಣ ಮತ್ತು ಭೀಕರತೆ ಎರಡೂ ಹೆಚ್ಚಿವೆ ಎನ್ನುತ್ತಿವೆ ವರದಿಗಳು. ಇದಕ್ಕೆ ಪ್ರತ್ಯೇಕವಾಗಿ ಒಂದು ಹೊಸ ಹೆಸರನ್ನೇ ಕೊಡಲಾಗಿದೆ, ‘ಶ್ಯಾಡೋ ಪ್ಯಾಂಡೆಮಿಕ್’ ಎಂದು. ಅಂದರೆ ಪಿಡುಗಿನ ನೆರಳಾಗಿ ಬಂದ ಮತ್ತೊಂದು ಪಿಡುಗು. ಮಹಿಳಾ ದೌರ್ಜನ್ಯವನ್ನು ತಡೆಗಟ್ಟಲು ಇದ್ದ ಸಹಾಯವಾಣಿಗಳು ನಿಲ್ಲದಂತೆ ಮೊರೆಯುತ್ತಿವೆ. ದೇಶವಿದೇಶಗಳ ಮಹಿಳಾ ಆಶ್ರಯತಾಣಗಳು ತುಂಬಿಹೋಗಿವೆ.
ಕೊರೊನಾ ಪಿಡುಗು, ಸ್ಟೇ ಅಟ್ ಹೋಂ, ವರ್ಕ್ ಫ್ರಂ ಹೋಂ ಪರಿಕಲ್ಪನೆಗಳನ್ನು ನಿತ್ಯನಿಯಮವನ್ನಾಗಿಸಿತು. ಆದರೆ, ಕೌಟುಂಬಿಕ ಹಿಂಸೆ ಅನುಭವಿಸುತ್ತಿದ್ದ ಹೆಣ್ಣುಮಕ್ಕಳಿಗೆ ಮನೆ ಬಿಟ್ಟು ಹೊರಹೋಗುವ ಅವಕಾಶವೇ ತಪ್ಪಿಹೋಗಿ ಅವರ ಪರಿಸ್ಥಿತಿ ಶೋಚನೀಯವಾಯಿತು. ಹಿಂಸೆಗೊಳಗಾಗುತ್ತಿದ್ದವರು ಹಿಂಸೆ ಕೊಡುವವರ ಜೊತೆಯಲ್ಲೇ ನಾಲ್ಕು ಗೋಡೆಗಳ ನಡುವೆ ಇರಲೇಬೇಕಾದ ಸಂದರ್ಭ ಸೃಷ್ಟಿಯಾಯಿತು. ಬಳಿಕ ಕೆಲಸ ಕಳೆದುಕೊಂಡ ಪರಿಣಾಮ ಮಹಿಳೆಯರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಅನಿವಾರ್ಯದಿಂದ ಆರ್ಥಿಕ ಮತ್ತು ಲೈಂಗಿಕ ಶೋಷಣೆಗೆ ಗುರಿಯಾಗಬೇಕಾಯಿತು. ಲಾಕ್‌ಡೌನ್ ಪರಿಣಾಮವಾಗಿ ಅತ್ಯಾಚಾರ ಮತ್ತು ಲೈಂಗಿಕ ಹಲ್ಲೆಗಳ ಸಂಖ್ಯೆ ಕಡಿಮೆಯಾದಂತೆ, ಕೌಟುಂಬಿಕ ಹಿಂಸೆಯ ಪ್ರಮಾಣ ಜಾಸ್ತಿಯಾಯಿತು.
ರಾಷ್ಟ್ರೀಯ ಮಹಿಳಾ ಆಯೋಗದ ವರದಿ ಪ್ರಕಾರ, ಮೇನಲ್ಲಿ ಕಠಿಣವಾದ ಲಾಕ್‌ಡೌನ್ ನಿಯಮಗಳು ಜಾರಿಯಾಗಿದ್ದ ಪ್ರದೇಶಗಳಲ್ಲಿ ಕೌಟುಂಬಿಕ ಹಿಂಸೆಯೂ ಹೆಚ್ಚಾಗಿದೆ. ತಾನು ಸಾಮಾಜಿಕ ಶ್ರೇಣಿಯ ಯಾವುದೇ ಮೆಟ್ಟಿಲಲ್ಲಿದ್ದರೂ, ಹಳ್ಳಿ ಅಥವಾ ಪಟ್ಟಣದಲ್ಲಿದ್ದರೂ ಹೆಣ್ಣನ್ನು ಎರಡನೆಯ ದರ್ಜೆಯವಳನ್ನಾಗಿಯೇ ನೋಡುವ, ಅವಳು ಹೆಣ್ಣಾದ ಕಾರಣಕ್ಕೆ ತಾನು ತನ್ನೆಲ್ಲಾ ಸಿಟ್ಟು, ಹತಾಶೆಯನ್ನು ಅವಳ ಮೇಲೆ ತೋರಿಸಿಕೊಳ್ಳಬಹುದು ಎಂದು ಗುಟುರು ಹಾಕುವ ‘ಗಂಡು ಮನಃಸ್ಥಿತಿ’ ಇದಕ್ಕೆ ಕಾರಣ. ಹೆಣ್ಣಾದ ಕಾರಣಕ್ಕೆ ಗಂಡಿನ ಎಲ್ಲಾ ಅಹಮಿಕೆಯನ್ನೂ ಸಹಿಸಿಕೊಳ್ಳಬೇಕು ಎಂದು ಹೆಣ್ಣುಮಕ್ಕಳ ವರ್ಣತಂತುಗಳಲ್ಲಿ ಅಸಹಾಯಕತೆಯನ್ನು ತುಂಬುವ ಸಮಾಜದ ಗುಲಾಮ ಮನಃಸ್ಥಿತಿಯೂ ಇದಕ್ಕೆ ನೀರೆರೆದಿದೆ.
ಹಲವು ಸಲ ಜಾತಿ ಸಹ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಾರಣವಾಗುತ್ತದೆ. ಸಮಾಜದ ಮೇಲಿನ ಸ್ತರದ ವರ್ಗಗಳ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಉಂಟುಮಾಡುವ ಸಾಮಾಜಿಕ ಹೊಯ್ಲು ಮತ್ತು ಪ್ರತೀಕಾರ ಚರ್ಯೆಯನ್ನು ಕೆಳಸ್ತರದಲ್ಲಿರುವ ವರ್ಗಗಳ ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರಗಳು ಮಾಡುವುದಿಲ್ಲ. ಆದರೆ ನಾವು ಗಮನಿಸಬೇಕಾದ ವಿಷಯ ಒಂದಿದೆ. ಇಲ್ಲಿ ‘ಪ್ರತಿಕ್ರಿಯೆ’ ಬದಲಾಗಿದೆಯೇ ಹೊರತು ‘ಕ್ರಿಯೆ’ಯ ಪರಿಣಾಮವಲ್ಲ. ಯಾವುದೇ ಜಾತಿ, ವರ್ಗಕ್ಕೆ ಸೇರಿದ್ದರೂ ಲೈಂಗಿಕ ಶೋಷಣೆ ಮತ್ತು ಅತ್ಯಾಚಾರಕ್ಕೆ ಒಳಗಾದ ಹೆಣ್ಣುಮಕ್ಕಳು ಅನುಭವಿಸುವ ನೋವು ಮತ್ತು ಅವಮಾನ ಒಂದೇ.
ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಎಂದ ತಕ್ಷಣ ಲೈಂಗಿಕ ದೌರ್ಜನ್ಯವೇ ಆಗಬೇಕಿಲ್ಲ, ಸಾಮಾಜಿಕ, ಮಾನಸಿಕ, ಶಾರೀರಿಕ, ಆರ್ಥಿಕ, ಸಾಂಸ್ಕೃತಿಕ ಯಾವುದೇ ರೂಪದಲ್ಲಿ ಇದು ಕಾಣಿಸಿಕೊಳ್ಳಬಹುದು. ‘ಗಂಡನನ್ನೂ ನಾವೇ ಸಾಕಬೇಕು, ಅವನ ಹಿಂಸೆಯನ್ನೂ ತಡೆದುಕೊಳ್ಳಬೇಕು. ಆದರೆ, ಮನೆಬಾಡಿಗೆ ಕೊಡುವುದರಿಂದ ಹಿಡಿದು ಸಮಾಜದಲ್ಲಿ ಒಂದಿಷ್ಟು ಮರ್ಯಾದೆ ಸಿಗಬೇಕಾದರೂ ಗಂಡ ಅನ್ನುವವನು ಬೇಕಲ್ಲ ಮೇಡಂ?’ ಎಂದ ಆ ಗಾರ್ಮೆಂಟ್ಸ್ ಹೆಣ್ಣಿನ ಮಾತನ್ನು ನಾನಿನ್ನೂ ಮರೆಯಲಾಗಿಲ್ಲ.
ಆಕೆಯನ್ನು ಆ ಸ್ಥಿತಿಗೆ ತಂದಿಡುವುದರಲ್ಲಿ ‘ಏನೇ ಆಗಲಿ ತವರಿಗೆ ಬರಬಾರದು, ನಿನ್ನ ಮನೆ ನಿನ್ನ ಜವಾಬ್ದಾರಿ’ ಎಂದು ಕೈಕೊಡವಿಕೊಂಡು, ಏನಾದರೂ ಹೆಚ್ಚುಕಡಿಮೆಯಾದ ಮೇಲೆ ‘ಮದುವೆ ಆದಾಗಿನಿಂದ ಅಳಿಯ ಕಿರುಕುಳ ಕೊಡುತ್ತಲೇ ಇದ್ದ, ನಾವೇ ಹೊಂದಿಕೊಂಡು ಹೋಗು ಅನ್ನುತ್ತಿದ್ದೆವು’ ಎನ್ನುವ ತವರು ಮನೆತನ, ಅಕ್ಕಪಕ್ಕದ ಮನೆಗಳಲ್ಲಿ ನಡೆಯುವ ಕೌಟುಂಬಿಕ ಹಿಂಸೆಯನ್ನು ಅವರ ‘ಖಾಸಗಿ ವಿಷಯ’ ಎಂದು ಕಣ್ಣುಮುಚ್ಚಿಕೊಳ್ಳುವ ಸಮಾಜ, ಗಂಡ ಹೊಡೆದ ಎಂದು ಕಂಪ್ಲೇಂಟ್ ಕೊಡಲು ಹೋದರೆ ‘ಸಂಸಾರ ಎಂದ ಮೇಲೆ ಗಂಡ ಹೊಡೀದೇ ಇರ್ತಾನೇನಮ್ಮ’ ಎನ್ನುವ ಪೊಲೀಸ್ ವ್ಯವಸ್ಥೆ ಎಲ್ಲ ಈ ಹಿಂಸೆಗೆ ಪಾಲುದಾರರೇ. ಬದಲಾಗಬೇಕೆಂದರೆ ಇವರೆಲ್ಲರ ಮನೋಭಾವ ಬದಲಾಗಬೇಕು. ಹೆಣ್ಣಿನ ವಿರುದ್ಧದ ಹಿಂಸೆ ಮಾನವಹಕ್ಕುಗಳ ಉಲ್ಲಂಘನೆ ಎಂದೇ ಪರಿಗಣಿತವಾಗಬೇಕು. ಕಠಿಣವಾದ ಕಾನೂನು ಜಾರಿಯಾಗಬೇಕು.
ಈ ನವೆಂಬರ್ 25ರಂದು ವಿಶ್ವಸಂಸ್ಥೆ ಮಹಿಳೆಯರ ವಿರುದ್ಧದ ದೌರ್ಜನ್ಯದ ನಿರ್ಮೂಲನಕ್ಕೆ ಕರೆಕೊಟ್ಟಿದೆ. ಜನವಾದಿ ಸಂಘಟನೆಯ ಕೆ.ಎಸ್. ವಿಮಲಾ ಅವರು ಹೇಳುವ ಹಾಗೆ ಇಲ್ಲಿ ಗಮನಿಸಬೇಕಾದ ಪದ ‘ನಿರ್ಮೂಲನೆ’. ಇಲ್ಲಿಯವರೆಗೂ ಇದ್ದ ‘ತಡೆ’ ಮತ್ತು ‘ನಿಷೇಧ’ ಪದಗಳಿಗಿಂತ ಹೆಚ್ಚಾದ ಇಚ್ಛಾಶಕ್ತಿ ಹೊಂದಿರುವ ಈ ಪದ ಮಹಿಳಾ ದೌರ್ಜನ್ಯದ ವಿರುದ್ಧದ ಧ್ಯೇಯವಾಕ್ಯವಾಗಲಿ. ‘ಒಂದು ದೇಶದ ಅಭಿವೃದ್ಧಿಯನ್ನು ನಾನು ಆ ದೇಶದ ಮಹಿಳೆಯರ ಸ್ಥಿತಿಗತಿಯ ಮಾಪಕದಿಂದ ಅಳೆಯುತ್ತೇನೆ’ ಎಂದ ಬಾಬಾಸಾಹೇಬ್ ಅಂಬೇಡ್ಕರರ ಮಾತು ನಮಗೆ ದಾರಿದೀಪವಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.