ಕೋವಿಡ್ ಲಾಕ್‌ಡೌನ್‌ನಿಂದಾಗಿ ಜನರು ಮನೆಯಲ್ಲೇ ಉಳಿಯುವಂತಾಗಿದೆ. ವರ್ಕ್ ಫ್ರಮ್ ಹೋಮ್ ಎಂಬ ವ್ಯವಸ್ಥೆಗೆ ಬಹುತೇಕ ಮಂದಿ ಹೊಂದಿಕೊಂಡಿದ್ದಾರೆ. ಆದರೆ ಮನೆಗೆಲಸ? ಕೊರೊನಾ ಲಾಕ್‍ಡೌನ್ ಘೋಷಿಸಿದ ಕೂಡಲೇ ಮನೆಕೆಲಸದ 'ಆಯಿ', 'ಅಕ್ಕ, 'ಅಮ್ಮ' ಅವರವರ ಮನೆಯಲ್ಲೇ ಇರಬೇಕಾಗಿ ಬಂತು.ಉದ್ಯೋಗಸ್ಥ ಮಹಿಳೆಯರು ಮನೆಗೆಲಸ ಮತ್ತು ಕಚೇರಿ ಕೆಲಸವನ್ನು ಜತೆಯಾಗಿ ಸರಿದೂಗಿಸಿಕೊಂಡು ಹೋಗಬೇಕಾದ ಪರಿಸ್ಥಿತಿ.ಇನ್ನೊಂದೆಡೆ ದೇಶವ್ಯಾಪಿ ಲಾಕ್‌ಡೌನ್ ಹಲವರ ಉದ್ಯೋಗವನ್ನು ಕಿತ್ತುಕೊಳ್ಳುವ ಮೂಲಕ ಮಹಿಳೆಯರ ಜೀವನೋಪಾಯದ ಮೇಲೆ ಭಾರೀ ಪರಿಣಾಮ ಬೀರಿವೆ ಎಂದು ಸಮೀಕ್ಷೆಗಳು ಹೇಳುತ್ತಿವೆ.
ಸಾಮಾನ್ಯವಾಗಿ ಭಾರತೀಯ ಮಹಿಳೆಯರು ಮನೆಯ ಕೆಲಸಕ್ಕಾಗಿ ದಿನಕ್ಕೆ 352 ನಿಮಿಷಗಳವರೆಗೆ ವ್ಯಯಿಸುತ್ತಾರೆ. ಪುರುಷರು ಇದೇ ಕಾರ್ಯಕ್ಕಾಗಿ 52 ನಿಮಿಷಗಳನ್ನು ವ್ಯಯಿಸುತ್ತಾರೆ. ಅಂದರೆ ಮಹಿಳೆಯರು ಪುರುಷರಿಗಿಂತ ಶೇ 577 ಹೆಚ್ಚು ಸಮಯವನ್ನು ಮನೆ- ಕುಟುಂಬಕ್ಕಾಗಿ ಖರ್ಚು ಮಾಡುತ್ತಾರೆ. ಮನೆಗೆಲಸ ಎಂಬುದು ವೇತನರಹಿತ ಕೆಲಸ. ಅಂದಹಾಗೆ ಭಾರತೀಯ ಮಹಿಳೆಯರ ವೇತನರಹಿತಕೆಲಸವು ಆರ್ಥಿಕತೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಜಿಡಿಪಿಯ ಶೇ.3.1ಗೆ ಸಮಾನವಾಗಿದೆ. ಆದಾಗ್ಯೂ, ಈ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಇಲ್ಲದಂತೆ ಅಥವಾ ಅದು ಮಹಿಳೆಯ ಜವಾಬ್ದಾರಿ ಎನ್ನುವ ಮೂಲಕ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಈ ರೀತಿಯ ಕೆಲಸವು ಆರ್ಥಿಕತೆಗೆ ನಿಗೂಢ ಸಬ್ಸಿಡಿಯ ವರ್ಗಾವಣೆ ಎಂದು ಆಕ್ಸ್‌ಫಾಮ್ವರದಿ ಉಲ್ಲೇಖಿಸಿತ್ತು.
ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಮ್ಐಇ) ಪ್ರಕಾರ, ಭಾರತದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಿರುದ್ಯೋಗ ದರಗಳು ಶೇ23 ಕ್ಕಿಂತ ಹೆಚ್ಚಿದ್ದು, ಇದು ಕಳೆದ ವರ್ಷಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ ವರದಿ- 2020 ಪ್ರಕಾರ ಕೋವಿಡ್‌ನಿಂದಾಗಿ, ಅಂದಾಜು 40 ಕೋಟಿಅನೌಪಚಾರಿಕ ವಲಯದ ಕಾರ್ಮಿಕರು ಈ ದೇಶದಲ್ಲಿ ಕಡು ಬಡತನ ಅನುಭವಿಸಲಿದ್ದಾರೆ ಎಂದು ಸೂಚಿಸಿದೆ. ಅದೇ ವೇಳೆ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚುಉದ್ಯೋಗ ನಷ್ಟವಾಗಲಿದೆ ಎಂದು ವರದಿ ಹೇಳಿದೆ.
ಭಾರತದಲ್ಲಿ ಮನೆಗೆಲಸದ ವಿಚಾರಕ್ಕೆ ಬಂದರೆ ಇಲ್ಲಿ ಲಿಂಗ ಅಸಮಾನತೆ ಜಾಸ್ತಿ ಇದೆ. ಮೊದಲ ರಾಷ್ಟ್ರೀಯ ಸಮಯ ಬಳಕೆಯ ಸಮೀಕ್ಷೆಯ (ಟಿಯುಎಸ್) (1998-99) ಪ್ರಕಾರ, ಮಹಿಳೆಯರು ವಾರಕ್ಕೆ ಸುಮಾರು 4.47 ಗಂಟೆಗಳನ್ನು ಆರೈಕೆ ಕೆಲಸಗಳಿಗಾಗಿ ಖರ್ಚು ಮಾಡುತ್ತಾರೆ.ಇದರಲ್ಲಿ ಮಕ್ಕಳು, ವೃದ್ಧರು, ಅನಾರೋಗ್ಯ ಮತ್ತು ಅಂಗವಿಕಲರನ್ನು ನೋಡಿಕೊಳ್ಳುವುದು ಒಳಗೊಂಡಿರುತ್ತದೆ.ಆದರೆ ಪುರುಷರು ವಾರಕ್ಕೆ ಕೇವಲ 0.88 ಗಂಟೆ ಖರ್ಚು ಮಾಡಿದ್ದಾರೆ. ವೇತನ ರಹಿತ ಆರೈಕೆ ಕೆಲಸದಲ್ಲಿನ ಲಿಂಗ ಅಸಮತೋಲನ,ಮನೆಕೆಲಸಗಳ ಹೊರೆ, ಅನಗತ್ಯ ವೇತನ ಕಡಿತ ಮತ್ತು ಉದ್ಯೋಗ ನಷ್ಟ ಮೊದಲಾದವುಗಳಿಂದಾಗಿಪರಿಸ್ಥಿತಿ ಮತ್ತಷ್ಟು ಹದಗೆಡುವಂತೆ ಮಾಡಿದೆ.
ಏತನ್ಮಧ್ಯೆ , ಸ್ವಯಂ ಉದ್ಯೋಗಿ ಮಹಿಳೆಯರು ನಿಶ್ಚಿತ ಕೆಲಸದ ಸ್ಥಳವಿಲ್ಲದೆ ಮತ್ತು ಆರಕ್ಕಿಂತ ಕಡಿಮೆ ಕಾರ್ಮಿಕರೊಂದಿಗೆ ಮನೆಯ ಆವರಣದಲ್ಲಿಯೇ ಕೆಲಸ ನಿರ್ವಹಿಸಿದ್ದಾರೆ. ನಿಯಮಿತ ವೇತನವನ್ನು ಗಳಿಸುವ ಮಹಿಳಾ ಉದ್ಯೋಗಿಗಳ ಮಾಹಿತಿಯನ್ನು ನಾವು ಪರಿಶೀಲಿಸಿದರೆ, ಅವರಲ್ಲಿ ಹಲವಾರು ಲಿಖಿತ ಉದ್ಯೋಗ ಒಪ್ಪಂದಗಳನ್ನು ಹೊಂದಿಲ್ಲ. ಹಾಗಾಗಿ ಇವರುಯಾವುದೇ ವೇತನ ರಜೆ ಪಡೆಯಲು ಅರ್ಹರಲ್ಲ ಅಥವಾ ಯಾವುದೇ ಸಾಮಾಜಿಕ ಭದ್ರತಾ ಪ್ರಯೋಜನಗಳಿಗೆ ಅರ್ಹರಲ್ಲ.ಉದ್ಯೋಗದಾತ-ಉದ್ಯೋಗಿ ಸಂಬಂಧದ ಕೊರತೆಯ ಈ ಕಹಿ ವಾಸ್ತವವನ್ನು ಗಮನಿಸಿದರೆ, ಮಹಿಳೆಯರು ಹೆಚ್ಚು ಉದ್ಯೋಗ ನಷ್ಟ ಅನುಭವಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ.
ಅನೌಪಚಾರಿಕ ವಲಯದಲ್ಲಿ ಶೇ 87ನಿರುದ್ಯೋಗವಿತ್ತು. ಹೀಗಿರುವಾಗಲೇ ದೇಶದಲ್ಲಿ ಕೋವಿಡ್ ಬಿಕ್ಕಟ್ಟು ಕೂಡಾ ತಲೆದೋರಿತು. ಅಂದಹಾಗೆಮಹಿಳೆಯರಿಗೆ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರ ಕೃಷಿ ಆಗಿದೆ.ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ಐಎಲ್‌ಒ)ಈ ವಲಯವನ್ನು ಕಡಿಮೆ -ಮಧ್ಯಮ ಅಪಾಯದ ವರ್ಗ ಎಂದುಗುರುತಿಸಿದ್ದರೂ, ಭಾರತದಲ್ಲಿ ಕೃಷಿ ಕ್ಷೇತ್ರವು ಇಂದಿಗೂ ಅನೌಪಚಾರಿಕವಾಗಿ ಉಳಿದಿದೆ ಮತ್ತು ಈ ಉದ್ಯಮದಲ್ಲಿ ಹೆಚ್ಚಿನ ಮಹಿಳಾ ಕಾರ್ಮಿಕರು ಭೂರಹಿತರಾಗಿದ್ದಾರೆ.
ಸುಮಾರು ಶೇ14 ಮಹಿಳೆಯರು ಉತ್ಪಾದನಾ ಉದ್ಯಮದಲ್ಲಿ ಭಾಗಿಯಾಗಿದ್ದಾರೆ. ಕೋವಿಡ್‌ನಿಂದಾಗಿ ಅತೀ ಹೆಚ್ಚು ಹೊಡೆತ ಅನುಭವಿಸಿದ ಉದ್ಯಮ ಇದಾಗಿದೆ. ಇಲ್ಲಿ ಕಾರ್ಮಿಕರು ಜಾಸ್ತಿ ಬೇಕಾಗಿರುವುದರಿಂದ ಕಡಿಮೆ ಕೌಶಲವಿರುವ ಮಹಿಳಾ ಕಾರ್ಮಿಕರಿಗೆ ಇಲ್ಲಿ ಕೆಲಸ ನೀಡಲಾಗುತ್ತದೆ.ಇತ್ತೀಚೆಗೆ ಅನಿವಾರ್ಯವಲ್ಲದ ಸರಕುಗಳ ಬೇಡಿಕೆಯೂ ಕುಸಿದಿರುವುದರಿಂದ ಇಲ್ಲಿರುವವರ ಕೆಲಸಕ್ಕೂ ಕುತ್ತು ಬಂದಿದೆ.
ಸಾರ್ವಜನಿಕ ಆಡಳಿತ, ಆರೋಗ್ಯ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಉದ್ಯೋಗ ನಷ್ಟದ ಭೀತಿ ಕಡಿಮೆ ಇದ್ದರೂ ಈ ಕ್ಷೇತ್ರಗಳಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುವವರ ಸಂಖ್ಯೆ ಜಾಸ್ತಿ ಇದೆ.ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತ (ಆಶಾ) ಮತ್ತು ಅಂಗನವಾಡಿ ಕಾರ್ಮಿಕರು ಈ ಗುಂಪಿಗೆ ಸೇರುತ್ತಾರೆ. ಈ ಕಾರ್ಯಕರ್ತರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ. ವೇತನದ ಬದಲು ಇವರಿಗೆ ಗೌರವ ಧನ ನೀಡಲಾಗುತ್ತದೆ.ಇದು ಕನಿಷ್ಠ ವೇತನಕ್ಕಿಂತಲೂ ಕಡಿಮೆ ಆಗಿರುತ್ತದೆ.
ಅನೌಪಚಾರಿಕ ಕಾರ್ಮಿಕರಿಗೆ ಲಾಕ್‌ಡೌನ್ ಹೊಡೆತ
ಸಿವಿಲ್ ಸೊಸೈಟಿ ಸಂಸ್ಥೆ ಆ್ಯಕ್ಷನ್ ಏಡ್ ಅಸೋಸಿಯನ್ ಇತ್ತೀಚೆಗೆಅನೌಪಚಾರಿಕ ಕಾರ್ಮಿಕರ (informal workers) ಸಮೀಕ್ಷೆ ನಡೆಸಿತ್ತು. ಮೇ-ಜೂನ್ ತಿಂಗಳಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ 11,537 ಮಂದಿ ಭಾಗವಹಿಸಿದ್ದು ಇದರಲ್ಲಿ 3,221 ಅಂದರೆ ಶೇ.28ರಷ್ಟು ಮಹಿಳೆಯರಿದ್ದರು.ಈ ಸಮೀಕ್ಷೆ ಪ್ರಕಾರ ಪುರುಷರಿಗೆ ಹೋಲಿಸಿದರೆ ಹೆಚ್ಚಿನ ಮಹಿಳೆಯರು ( ಶೇ79.23ಗಿಂತಲೂ ಹೆಚ್ಚು) ಲಾಕ್‌ಡೌನ್ ನಂತರ ಕೆಲಸ ಬಿಟ್ಟಿದ್ದಾರೆ. ಶೇ 51.6ಮಹಿಳೆಯರು ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ವೇತನವನ್ನು ಪಡೆದಿಲ್ಲ.
ಮನೆಗೆಲಸ ಮಾಡುವವರಲ್ಲಿ ಲಾಕ್‌ಡೌನ್ ನಂತರ ಶೇ 85 ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಹಲವಾರು ಮಂದಿ ಜೀವನ ನಿರ್ವಹಣೆಗಾಗಿ ಉಳಿತಾಯ ಮಾಡಿಟ್ಟ ಹಣವನ್ನೇ ಪೂರ್ತಿಯಾಗಿ ವಿನಿಯೋಗಿಸಿದ್ದಾರೆ.ಲಾಕ್‌ಡೌನ್ ವೇಳೆ ಜೀವನ ನಿರ್ವಹಣೆಗಾಗಿ ಸಾಲ ಪಡೆದುಕೊಂಡವರ ಸಂಖ್ಯೆ ಶೇ68 ಆಗಿದೆ.ಶೇ88ರಷ್ಟು ಮನೆಗೆಲಸದ ಕಾರ್ಮಿಕರು ನಗರದಲ್ಲಿ ವಾಸಿಸುತ್ತಿದ್ದು ಶೇ11.5 ರಷ್ಟು ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ, ಶೇ40ರಷ್ಟು ಮಂದಿ ವಲಸೆ ಕಾರ್ಮಿಕರು.
ಲಾಕ್‍ಡೌನ್‌ಗೆ ಮುಂಚೆ ನಡೆಸಿದ ಸಮೀಕ್ಷೆಯಲ್ಲಿ ಶೇ 90ರಷ್ಟು ಪುರುಷ ಕಾರ್ಮಿಕರಿಗೆ ಹೋಲಿಸಿದರೆ ಮಹಿಳಾ ಕಾರ್ಮಿಕರ ಸಂಖ್ಯೆ ಶೇ 85ರಷ್ಟಿತ್ತು. ಆದಾಗ್ಯೂ ಮೇ ತಿಂಗಳ ಮಧ್ಯಭಾಗದಲ್ಲಿ ಶೇ75ರಷ್ಟು ಪುರುಷರು ನಿರುದ್ಯೋಗಿಗಳಾಗಿದ್ದು, ಉದ್ಯೋಗ ಕಳೆದುಕೊಂಡ ಮಹಿಳೆಯರ ಸಂಖ್ಯೆ ಶೇ79 ಆಗಿದೆ.
ಶೇ 46 ಪುರುಷರಿಗೆ ಹೋಲಿಸಿದರೆ ಸುಮಾರು ಶೇ52ಮಹಿಳಾ ಕಾರ್ಮಿಕರು ಯಾವುದೇ ವೇತನವನ್ನು ಪಡೆದಿಲ್ಲ. ಈ ಅಂಕಿ ಅಂಶ ಗಮನಿಸಿದರೆಲಾಕ್‌ಡೌನ್ ನಂತರ ಮಹಿಳಾ ಕಾರ್ಮಿಕರ ಮೇಲಿನ ಆರ್ಥಿಕ ಹೊರೆ ಎಷ್ಟು ಇದೆ ಎಂಬುದು ಊಹಿಸಿಕೊಳ್ಳಬಹುದು. ಲಾಕ್‍ಡೌನ್ ನಂತರ ಸುಮಾರು ಶೇ16ಪುರುಷರು ಮತ್ತು ಮಹಿಳೆಯರು ಭಾಗಶಃ ವೇತನವನ್ನು ಪಡೆದರೆ, ಶೇ32ಮಹಿಳಾ ಕಾರ್ಮಿಕರು ಮತ್ತು ಶೇ37ಪುರುಷ ಕಾರ್ಮಿಕರು ಪೂರ್ಣ ವೇತನವನ್ನು ಪಡೆದಿದ್ದಾರೆ. ಮನೆಗೆಲಸ ಮಾಡುವ ಬಹುತೇಕ ಕಾರ್ಮಿಕರಿಗೆ ಆಧಾರ್ ಕಾರ್ಡ್ ಇದ್ದರೂ, ಸರ್ಕಾರಿ ಯೋಜನೆಗಳಲ್ಲಿ ಈ ಕಾರ್ಮಿಕರ ದಾಖಲಾತಿ ತೀರಾ ಕಡಿಮೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ. ಶೇ 60ಜನರು ಪಡಿತರ ಚೀಟಿಗಳನ್ನು ಹೊಂದಿದ್ದಾರೆ. ಈ ಪೈಕಿ ಕೇವಲ ಶೇ10ಮಾತ್ರ ಉಜ್ವಲಾ ಯೋಜನೆಯ ಫಲಾನುಭವಿಗಳು, ಶೇ19ಜನ ಧನ್ ಯೋಜನೆ, ಶೇ79ಜನರು ಪಿಎಂ ಗರಿಬ್ ಕಲ್ಯಾಣ್ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಲಾಕ್‍ಡೌನ್‌ನಿಂದಾಗಿ ಮಹಿಳೆಯರು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದರೂ ಭಾರತೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಬಗ್ಗೆ ಮೌನ ಕಾಪಾಡಿಕೊಂಡಿದೆ.ಲಾಕ್‌ಡೌನ್ ಜಾರಿಯಾದಾಗ ಅದನ್ನುರಜಾದಿನದಂತೆ ಪರಿಗಣಿಸಬಾರದು ಮತ್ತು ಹಗಲು ಹೊತ್ತಲ್ಲಿಅನೇಕ ಬಾರಿ ಅಡುಗೆ ಮಾಡಿ ಕೊಡಿ ಎಂದು ಮಹಿಳೆಯರಿಗೆ ಹೇಳಬೇಡಿ ಎಂದು ಒಡಿಶಾ ಸರ್ಕಾರ ಪುರುಷರಿಗೆ ಸೂಚಿಸಿತ್ತು. ಲಾಕ್‍ಡೌನ್ ಹೊತ್ತಲ್ಲಿ ಮಹಿಳೆಯರಿಗೆ ಈ ರೀತಿ ಮಾಡಬೇಡಿ ಪುರುಷರಿಗೆ ಹೇಳಲು ಸರ್ಕಾರವೇ ಬರಬೇಕಾ?.
ಅಲಿಖಿತ ನಿಯಮದಂತೆ ನಮ್ಮ ಸಮಾಜದಲ್ಲಿ ಬಹುತೇಕ ಪುರುಷರು ಮನೆಗೆಲಸವನ್ನು ಹಂಚಿಕೊಂಡು ಮಾಡುವ ಮನಸ್ಥಿತಿ ಹೊಂದಿರುವುದಿಲ್ಲ. ಅದೇನಿದ್ದರೂ ಅವಳ ಕೆಲಸ, ಅವಳ ಜವಾಬ್ದಾರಿ ಎಂಬಲ್ಲಿಗೆ ಮಾತು ಮುಗಿಯುತ್ತದೆ. ಇದೆಲ್ಲದರ ನಡುವೆ ಮನೆಯೊಳಗೆ ಮಹಿಳೆಯರ ಮೇಲೆ ನಡೆಯುವಲೈಂಗಿಕ ದೌರ್ಜನ್ಯಗಳ ಸಂಖ್ಯೆಯೂ ಹೆಚ್ಚುತ್ತಿದೆ. ಕೊರೊನಾ ವಿರುದ್ಧದ ಹೋರಾಟದ ಜತೆಗೆ ಈ ರೀತಿಯ ದೌರ್ಜನ್ಯಗಳ ವಿರುದ್ಧದ ಹೋರಾಟವೂ ತೀವ್ರತೆ ಪಡೆಯಲಿ ಎಂದು ಆಶಿಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.