ಅಳುವುದಕ್ಕೂ ಒಂದು ಸಮಯ ಇದೆಯೇ?
ಅವರನ್ನೊಮ್ಮೆ ಕೇಳಿ ನೋಡಿ. ಅವರು ಅಳುವ ಸಮಯ ತಿಳಿಸುತ್ತಾರೆ.ದುಃಖವಾದಾಗ ಅಳುವನ್ನು ತಡೆದುಕೊಂಡು, ನೋವಿನಲ್ಲೂ ನಗುವಿನ ಮುಖವಾಡ ಹಾಕಿಕೊಂಡು, ತಮ್ಮ ದುಃಖದಿಂದ ಮನೆಯ ಯಾವುದೇ ಕೆಲಸಕ್ಕೆ ಚ್ಯುತಿ ಬಾರದಂತೆ ನೋಡಿಕೊಂಡು, ಒಂದು ನಿಗದಿತ ಸಮಯ ಗೊತ್ತು ಮಾಡಿಕೊಂಡು ಅಳುವುದೇ ಅಳುವ ಸಮಯ.
ಹೌದು, ಸುನೀತಾ ಮತ್ತು ಆ ರೀತಿಯ ಗೃಹಿಣಿಯರನ್ನು ಭೇಟಿಯಾಗುವವರೆಗೂ ಅಳುವುದಕ್ಕೂ ಸಮಯವಿದೆ ಎಂದು ತಿಳಿದಿರಲಿಲ್ಲ. ಸುನೀತಾ ಬೆಳಗಿನ ಎಲ್ಲ ಕೆಲಸ ಮುಗಿಸಿ, ಮಧ್ಯಾಹ್ನದ ಬಿಡುವಿನ ಸಮಯವನ್ನು ಅಳುವುದಕ್ಕೆ ಬಳಸಿಕೊಳ್ಳುತ್ತಾರಂತೆ.
ಸುನೀತಾ ಅವರಂತೆಯೇ ಕೆಲವು ಗೃಹಿಣಿಯರು ಮಧ್ಯಾಹ್ನದ ಹೊತ್ತು ಕಣ್ಣೀರು ಸುರಿಸುತ್ತಾರೆ. ಇದು ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳನ್ನು ನೋಡಿ ಅಲ್ಲ; ಅದರ ಪ್ರಭಾವ ಇದ್ದರೂ ಇರಬಹುದು, ಆದರೆ ಏನೋ ಒಂದು ರೀತಿಯ ಖಾಲಿತನದಿಂದ, ಕೆಲವೊಮ್ಮೆ ತಮ್ಮನ್ನೇ ತಾವು ದೂಷಿಸಿಕೊಳ್ಳುತ್ತ ಅಳುತ್ತಾರೆ. ಅತ್ತು ಸುಸ್ತಾದ ಮೇಲೆ ಮತ್ತೆ ಸಂಜೆಯ ಕೆಲಸಕ್ಕೆ ಸಿದ್ಧರಾಗುತ್ತಾರೆ. ತಾವು ಮಧ್ಯಾಹ್ನ ಅತ್ತೇ ಇಲ್ಲವೇನೋ ಎಂಬಂತೆ ಕೆಲಸದಲ್ಲಿ ಮುಳುಗಿ ಹೋಗುತ್ತಾರೆ. ಮತ್ತೆ ಆ ರೀತಿಯ ಮಧ್ಯಾಹ್ನಕ್ಕಾಗಿ ಅಳುವನ್ನು ದಾಸ್ತಾನು ಇಟ್ಟುಕೊಂಡಿರುತ್ತಾರೆ.ಇದನ್ನು ಕೆಲವು ಮಹಿಳೆಯರು ನೇರವಾಗಿ ಹೇಳಿಕೊಳ್ಳುತ್ತಾರೆ, ಕೆಲವರು ಸುತ್ತಿಬಳಸಿ ಅವರನ್ನು ಮಾತಿಗೆ ಎಳೆದಾಗ ಹೇಳುತ್ತಾರೆ. ಇದು ಒಂದು ರೀತಿಯ ಆಶ್ಚರ್ಯ. ಈ ಮಹಿಳೆಯರು ಯಾರೂ ತಮ್ಮ ಕೆಲಸವನ್ನು ನಿಲಕ್ಷಿಸಿದವರಲ್ಲ. ಹೀಗಿರುವಾಗ ಈ ಮಹಿಳೆಯರು ಅಳುವುದು ಏಕೆ?
ಮಧ್ಯಾಹ್ನ ಸಿಂಡ್ರೋಮ್
ಇದನ್ನು ನಾವು ‘ಮಧ್ಯಾಹ್ನ ಸಿಂಡ್ರೋಮ್’ ಎನ್ನಬಹುದೇನೋ? ಕೆಲವು ಮಹಿಳೆಯರು ಮದುವೆಗೆ ಮುಂಚೆ ವಿದ್ಯಾಭ್ಯಾಸದಲ್ಲಿ ಮುಂದಿದ್ದಿರಬಹುದು, ಉತ್ತಮ ಕೆಲಸವನ್ನೂ ಕೈಗೊಂಡಿದ್ದಿರಬಹುದು, ಬಹಳಷ್ಟು ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಿರಬಹುದು. ಆದರೆ ಮದುವೆಯ ನಂತರ ಮನೆ, ಗಂಡ, ಮಕ್ಕಳು ಎಂದು ಅವರ ವೃತ್ತಿ- ಪ್ರವೃತ್ತಿ ಬದುಕು ಹಿಂದೆ ಸರಿದು ಸಂಸಾರದ ಜವಾಬ್ದಾರಿಯೇ ಮುನ್ನೆಲೆಗೆ ಬಂದಿರುತ್ತದೆ.
ತಾವೂ ಒಂದು ವೃತ್ತಿ ಮಾಡಬೇಕು, ತಮ್ಮದೇ ಚಟುವಟಿಕೆಯಲ್ಲಿ ತೊಡಗಬೇಕು ಎಂಬ ಆಸೆ ಇದ್ದರೂ ಅದನ್ನು ಕಾರ್ಯರೂಪಕ್ಕೆ ತರಲಾಗದ ಹತಾಶ ಭಾವ ಅವರನ್ನು ಅಳುವಂತೆ ಮಾಡುತ್ತದೆ. ಇಂತಹ ಮಹಿಳೆಯರಲ್ಲಿ ಬಹಳಷ್ಟು ಜನರು ಆ ಭಾವನೆಯನ್ನು ತೋರಿಸಿಕೊಳ್ಳದೆ, ಯಾರೂ ಇಲ್ಲದಾಗ, ಬಿಡುವಿನ ಸಮಯದಲ್ಲಿ ಅಳುತ್ತಾರೆ. ಬೆಳಗ್ಗೆ ಮತ್ತು ಸಂಜೆ ಮನೆಯ ಸದಸ್ಯರಿಗೆ ನೆರವಾಗುವ ಹೆಚ್ಚಿನ ಕೆಲಸ, ಮಧ್ಯಾಹ್ನ ತುಸು ಬಿಡುವು ಸಿಕ್ಕಾಗ ಮನಸ್ಸಿನ ಭಾವನೆ ಕಣ್ಣೀರಾಗಿ ಹರಿಯುತ್ತದೆ.
ಮಹತ್ತರ ಕಾರ್ಯ
ಆದರೆ ಈ ಮಹಿಳೆಯರು ತಾವು ಎಂಥ ಮಹತ್ತರ ಕಾರ್ಯ ಮಾಡುತ್ತಿದ್ದೇವೆ ಎಂಬುದನ್ನೇ ಮರೆತಿದ್ದಾರೆ. ಮನೆ ನಡೆಸುವುದು ಸುಲಭದ್ದೂ ಅಲ್ಲ ಹಾಗೂ ನಿರ್ಲಕ್ಷಿಸುವ ಕೆಲಸವೂ ಅಲ್ಲ. ಹೊರಗಿನ ಕೆಲಸ ಸಂಬಳಕ್ಕಷ್ಟೇ ಸೀಮಿತವಾಗಿರುತ್ತದೆ. ಆದರೆ ಮನೆಯ ನಿರ್ವಹಣೆಯ ಕೆಲಸದಲ್ಲಿ ಪ್ರೀತಿ, ವಾತ್ಯಲ್ಯ, ಮಮಕಾರ, ತ್ಯಾಗ ಎಲ್ಲವೂ ಸೇರಿರುತ್ತದೆ. ಇದಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಇಂತಹ ಕೆಲಸವನ್ನೇ ಪ್ರಮುಖವಾಗಿ ಮಾಡುವಾಗ ಅದಕ್ಕೆ ಅಂಜಿಕೆ, ಕೀಳರಿಮೆ ಏಕೆ? ಅಷ್ಟಕ್ಕೂ ತಮ್ಮ ಕೆಲಸವೇನಿದ್ದರೂ ತಮ್ಮ ಮನೆ, ಗಂಡ, ಮಕ್ಕಳ ಏಳಿಗೆಗಾಗಿಯೇ. ಆ ಕೆಲಸಕ್ಕೆ ಹೆಮ್ಮೆ ಪಡಬೇಕು. ಅದರಲ್ಲೂ ಇದೆ ಖುಷಿ.
ನಿರಂತರ ಪ್ರಯತ್ನ
ಕೆಲವೊಮ್ಮೆ ಕೆಲವರಿಗೆ ತಮ್ಮ ಇಷ್ಟದ ಕೆಲಸ ಸಿಗಬಹುದು. ಮನೆಗೆಲಸ, ಹೊರಗಿನ ಕೆಲಸ ಎರಡನ್ನೂ ಅವರು ಸರಿದೂಗಿಸಿಕೊಂಡು ಹೋಗಲು ಸಾಧ್ಯವಾಗಬಹುದು. ಅದಕ್ಕೆ ಕಾರಣ ಅವರ ಪ್ರತಿಭೆ, ಸಾಮರ್ಥ್ಯದ ಜೊತೆಗೆ ಮನೆಯ ವಾತಾವರಣ, ಸದಸ್ಯರ ಸಹಕಾರ, ಇನ್ನಿತರ ನೆರವೂ ಇರಬಹುದು. ಇದೇ ಪರಿಸ್ಥಿತಿ ಎಲ್ಲ ಮಹಿಳೆಯರಿಗೂ ಇರುವುದಿಲ್ಲ. ಕೆಲವರಿಗೆ ತಮ್ಮ ಇಷ್ಟದ ಕೆಲಸ ಸಿಕ್ಕರೂ ಓಡಾಟ ಮತ್ತು ಸಮಯ ಹೊಂದಾಣಿಕೆಯ ಕಷ್ಟವೂ ಇರುತ್ತದೆ. ಎಲ್ಲವೂ ಅಂದುಕೊಂಡಂತೆ ಆಗುವುದೂ ಇಲ್ಲ, ಹಾಗಂತ ಸುಮ್ಮನೆ ಕೂರುವುದೂ ಸರಿಯಲ್ಲ. ಅವರವರ ಪರಿಸ್ಥಿತಿಯಲ್ಲಿ, ಅವರಿಗೆ ಸಿಕ್ಕ ಅವಕಾಶದಲ್ಲಿ ಅವರಿಗೆ ಏನು ಸಾಧ್ಯವೋ ಅದನ್ನು ಮಾಡುತ್ತಿರಬೇಕು. ಆದರೆ ನಮ್ಮೊಬ್ಬರದೇ ಈ ರೀತಿಯ ಪರಿಸ್ಥಿತಿ, ಯಾರೋ ಬಂದು ನಮ್ಮ ಪರಿಸ್ಥಿತಿಯನ್ನು ಬದಲಾಯಿಸುತ್ತಾರೆ ಎಂದು ನಿರೀಕ್ಷಿಸುತ್ತಾ ಕೂರುವುದು ಸರಿಯಲ್ಲ. ನಾವು ಬಯಸುವ ಪರಿಸ್ಥಿತಿ ಉಂಟಾಗಲು ನಾವೇ ಪ್ರಯತ್ನಿಸಬೇಕು ಅಥವಾ ಇರುವ ಪರಿಸ್ಥಿತಿಯನ್ನು ನಮಗೆ ಹೊಂದಿಸಿಕೊಳ್ಳಬೇಕು.
ದೃಢ ನಿಲುವು ಮುಖ್ಯ
ಕಥೆ, ಕವನ ಬರೆಯುವುದರಲ್ಲಿ ಆಸಕ್ತಿಯುಳ್ಳ ಸುಮಿತ್ರಾ ಅವರದು ತಮಗೆ ಏನೋ ಒಂದು ವಿಷಯ ಹೊಳೆದಾಗ, ಅದನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂಬ ಅಳಲು. ಅವರಿಗೆ ಚಪಾತಿ ಹಿಟ್ಟು ಕಲೆಸುವಾಗ, ಮಗಳಿಗೆ ತಲೆಯುಜ್ಜಿ ಸ್ನಾನ ಮಾಡಿಸುವಾಗ, ಮಕ್ಕಳಿಗೆ ಊಟ ಬಡಿಸುವಾಗ, ಬೆಳಿಗ್ಗೆ ವಾಕಿಂಗ್ ಮಾಡುವಾಗ, ರಾತ್ರಿ ಮಲಗುವ ಸಮಯದಲ್ಲಿ ಹಲವಾರು ವಿಷಯಗಳು ಹೊಳೆಯುತ್ತವೆ. ತಕ್ಷಣಕ್ಕೆ ಬರೆದಿಟ್ಟುಕೊಳ್ಳಲು ಸಾಧ್ಯವಾಗದೇ, ಎಷ್ಟೋ ವಿಷಯಗಳು ಮರತೇಹೋಗುತ್ತವೆ. ಇದರಿಂದ ಅವರು ಪೇಚಾಡಿಕೊಂಡು, ಕಣ್ಣೀರು ಸುರಿಸುತ್ತಾರೆ. ಇನ್ನೂ ಕೆಲವು ಮಹಿಳೆಯರದು ಇದೇ ರೀತಿಯ ತೊಳಲಾಟ.
ಕೆಲವರು ತಾವು ಬೇರೆ ಏನೋ ಕೆಲಸ ಮಾಡುವಾಗ ಮತ್ತೇನೋ ಒಂದು ವಿಷಯ ಥಟ್ಟನೆ ಹೊಳೆದು, ಆ ವಿಷಯವನ್ನು ಬೆಳೆಸಿ, ಅದನ್ನು ಬಳಸಿಕೊಂಡಿರುವುದಾಗಿ ಹೇಳುತ್ತಾರೆ. ಕೆಲವರಿಗೆ ಆ ರೀತಿ ಥಟ್ಟನೆ ಹೊಳೆಯುವ ವಿಷಯವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ, ಆ ವಿಷಯ ನೆನಪಲ್ಲಿ ಉಳಿಯುವುದೂ ಇಲ್ಲ.
ಆದರೆ ನಮ್ಮ ಆಧುನಿಕ ತಂತ್ರಜ್ಞಾನ ನಮ್ಮ ಪ್ರತಿಭೆ, ಸಾಮರ್ಥ್ಯದ ವಿಚಾರಗಳನ್ನು ಆ ಕ್ಷಣವೇ ಮುದ್ರಿಸಿಕೊಳ್ಳುವ ಸೌಲಭ್ಯ ಒದಗಿಸಿದೆ. ನಮ್ಮ ಮೊಬೈಲ್ ನಮ್ಮ ಬಳಿಯೇ ಇದ್ದರೆ, ನಮ್ಮ ಆಲೋಚನೆಗಳನ್ನು ರೆಕಾರ್ಡ್ ಮಾಡಬಹುದು. ಬಿಡುವಾದಾಗ ಅದನ್ನು ಕೇಳಿ ಸರಿಪಡಿಸಬಹುದು. ಜೊತೆಗೆ ಯಾವಾಗಲೂ ಒಂದು ಪೆನ್ನು, ಸಣ್ಣ ಪುಸ್ತಕ ಇಟ್ಟುಕೊಳ್ಳುವುದು ಉತ್ತಮ. ಅದು ತಕ್ಷಣಕ್ಕೆ ಕೈಗೆ ಸಿಗುವಂತಿರಬೇಕು.
ಪಾಸಿಟಿವ್ ಚಿಂತನೆಗೆ ಮೀಸಲಿಡಿ
ಕೆಲವೊಮ್ಮೆ ಕೆಲವರ ಪರಿಸ್ಥಿತಿಯಲ್ಲಿ ವಿಶೇಷವಾಗಿ ಏನು ಮಾಡಲೂ ಸಾಧ್ಯವಾಗದೇ ಹೋಗಬಹುದು. ಮಿತಿಮೀರಿ ಪ್ರಯತ್ನಿಸಿ
ದರೂ ನಿರೀಕ್ಷಿಸಿದ ಫಲ ಸಿಗದೇ ಹೋಗಬಹುದು. ಆಗ ಪರಿಸ್ಥಿತಿಗೆ ತಕ್ಕಂತೆ ಇರುವುದು, ಅವರವರ ಇತಿಮಿತಿಯಲ್ಲಿ, ಏನು ಸಾಧ್ಯವೋ ಅದನ್ನು ಮಾಡುತ್ತಾ, ಸಂತೋಷವಾಗಿರುವುದೇ ಉತ್ತಮ. ಅಳುವ ಸಮಯವನ್ನು ಯೋಚನೆಗೆ ಮೀಸಲಿಟ್ಟು, ಬಿಡುವಿನ ಸಮಯದಲ್ಲಿ ಏನು ಮಾಡಬಹುದು, ಖುಷಿಯಾಗಿರು
ವುದು ಹೇಗೆ ಎಂದು ಯೋಜಿಸಬಹುದಲ್ಲವೇ?
ನೀವು ದುಃಖದ ವ್ಯಸನಿಯೇ?
ಜೀವನೋತ್ಸಾಹವಿಲ್ಲದ ಮುಖಗಳನ್ನು ನೋಡಿದಾಗ ಹೀಗೊಂದು ಪ್ರಶ್ನೆ ಎದುರಾಗುವುದು ಸಹಜ. ಪ್ರತಿ ಬಾರಿ ಖುಷಿಯನ್ನು ಅನುಭವಿಸುವಾಗಲೂ ಹಿಂದೆಯೇ ಭಯವೊಂದು ನುಸುಳುತ್ತದೆ. ತಕ್ಷಣವೇ ಮನಸ್ಸು ಅಪರಾಧಿ ಮನೋಭಾವಕ್ಕೆ ಜಾರಿ ಬಿಡುತ್ತದೆ. ಹಿಂದೆಯೇ ಖುಷಿ ಕಳೆದುಕೊಂಡ ಮನಸ್ಸು ಮುದುಡಿಕೊಂಡು ಕೂರುತ್ತದೆ. ಹೌದು, ಇಂತಹ ತಲ್ಲಣಗಳು ಕಾಡಿದರೆ ಅಸಂತೋಷ ಅಥವಾ ದುಃಖದ ವ್ಯಸನ ನಿಮ್ಮನ್ನು ಅಂಟಿಕೊಂಡಿದೆ ಎಂದೇ ಅರ್ಥ.
ಹಾಗೆಯೇ ಜೋರಾಗಿ ನಗುವುದರ ಹಿಂದೆಯೂ ಇಂತಹುದೇ ಭಾವ. ಅಂದರೆ ಮುಂದೆ ಏನೋ ಕೆಟ್ಟದು ಕಾದಿದೆ ಎಂಬ ಶಂಕೆ. ‘ಜಾಸ್ತಿ ನಗಬೇಡ. ಮುಂದೆ ಅಳಬೇಕಾದೀತು’ ಎಂಬ ಭಾರತೀಯರ ನಂಬಿಕೆಯೂ ಇದಕ್ಕೆ ಕಾರಣವಿರಬಹುದು. ಸದ್ಯ ‘ಹ್ಯಾಪಿನೆಸ್ ರ‍್ಯಾಂಕಿಂಗ್’ನಲ್ಲಿ ಭಾರತ 140ನೇ ಸ್ಥಾನಕ್ಕೆ ಕುಸಿದಿದ್ದನ್ನೂ ಇಲ್ಲಿ ಸ್ಮರಿಸಬಹುದು.
ಬಹಳಷ್ಟು ಮಂದಿ ಅವರಲ್ಲೂ ಮಹಿಳೆಯರು ಖಷಿಯ ಹಾದಿಯಲ್ಲಿ ನಡೆಯುತ್ತಿರುವಾಗ ಖುಷಿಯನ್ನು ಕಳೆದುಕೊಳ್ಳಲು ಕಾರಣಗಳನ್ನು ಹುಡುಕುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. ‘ಇಂತಹ ಭಾವನೆಗಳಿದ್ದರೆ, ತಾವು ಕಷ್ಟದ ಹಾದಿಯಲ್ಲಿ ಹೋಗುತ್ತಿದ್ದೇವೆ ಎಂದು ಕಲ್ಪಿಸಿಕೊಂಡರೆ ತಮ್ಮ ವೈಯಕ್ತಿಕ ಅಥವಾ ವೃತ್ತಿ ಬದುಕಿನಲ್ಲಿ ದೊಡ್ಡ ಸಾಧನೆ ಮಾಡಬಹುದು ಎಂಬುದು ಅವರ ನಂಬಿಕೆ’ ಎನ್ನುತ್ತಾರೆ ಸಂತೋಷದ ಕುರಿತು ಸಂಶೋಧನೆ ನಡೆಸಿರುವ ಡೇವಿಡ್ ಸ್ಯಾಕ್.
ಅಸಂತೋಷದ ಲಕ್ಷಣಗಳು
* ಯಾವುದೋ ದುಃಖದ, ಕಷ್ಟ ಅನುಭವಿಸಿದ ಘಟನೆಗಳನ್ನು ಪದೇ ಪದೇ ಹೇಳುವುದು
* ತಾನೇ ಪ್ರತಿಯೊಂದು ಸಲವೂ ಬಲಿಪಶುವಾಗುವುದು ಎಂಬಂತೆ ಬಿಂಬಿಸುವುದು
*ಸದ್ಯದ ಖುಷಿಯನ್ನು ಬಲವಂತವಾಗಿ ಹಿಂದೂಡುವುದು
*ಪ್ರತಿಯೊಂದಕ್ಕೂ ದೂರುವುದು.ಎಲ್ಲದಕ್ಕೂ ಅಸಂತೃಪ್ತಿಯನ್ನು ವ್ಯಕ್ತಪಡಿಸುವುದು.
ಹೀಗೆ ಮಾಡಿ
* ಕಾಡುವ ಸಮಸ್ಯೆಗೆ ಪರಿಹಾರ ಹುಡುಕಿ
* ನೆಗೆಟಿವ್ ಭಾವನೆಯ ಮೂಲವನ್ನು ಅರ್ಥ ಮಾಡಿಕೊಳ್ಳಿ
* ನಿಮ್ಮ ಕಾಳಜಿಯನ್ನು ನೀವೇ ಮಾಡಿಕೊಳ್ಳಿ
* ಹಿನ್ನಡೆಯನ್ನು ಗೆಲುವನ್ನಾಗಿಸುವ ಪ್ರಯತ್ನ ಮಾಡಿ
*ಸಂಗೀತ ಕೇಳಿ
*ವ್ಯಾಯಾಮ ಮಾಡಿ
*ಪ್ರವಾಸಕ್ಕೆ ಹೋಗಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.