ಗೆಳತಿಯೊಬ್ಬಳು ದಿನದಲ್ಲಿ ನಾಲ್ಕೈದು ಬಾರಿ ವಾಟ್ಸ್‌ಆ್ಯಪ್‌ನಲ್ಲಿ ಸ್ಟೇಟಸ್ ಫೋಟೊ ಅಪ್‌ಲೋಡ್ ಮಾಡುತ್ತಿದ್ದಳು. ‘ಇವಳಿಗೆ ಬೇರೆ ಕೆಲಸ ಇಲ್ಲಾ…ಸ್ವಲ್ಪನೂ ಜವಾಬ್ದಾರಿ ಇಲ್ಲ ನೋಡು. ಒಂದು ಮಗುವಾಗಿದ್ರೂ ಹೀಂಗೆಲ್ಲಾ ಮಾಡ್ತಾ ಇದ್ದಾಳೆ’ ಎಂದು ನನ್ನ ಇನ್ನೊಬ್ಬಳು ಗೆಳತಿ ಇವಳ ಸ್ಟೇಟಸ್ ಫೋಟೊ ಸ್ಕ್ರೀನ್ ಶಾಟ್ ಮಾಡಿಟ್ಟುಕೊಂಡು ನನಗೆ ತೋರಿಸುತ್ತಿದ್ದಳು. ಹೆಚ್ಚು ಕಮ್ಮಿ ಒಂದೋ, ಎರಡೋ ವರ್ಷ ಅಂತರದ ಗೆಳತಿಯರಾದ ನಾವೆಲ್ಲರೂ ಮದುವೆಯಾಗಿ ಕೆಲವರು ಒಂದು, ಇನ್ನು ಕೆಲವರು ಎರಡು ಮಕ್ಕಳ ತಾಯಿ ಕೂಡ ಆಗಿದ್ದೇವೆ. ಮೊದಲೆಲ್ಲಾ ಹೆಚ್ಚು ಕಮ್ಮಿ ಒಂದೇ ರೀತಿ ಯೋಚಿಸುತ್ತಿದ್ದವರು ಈಗ ಮಾತ್ರ ತುಸು ಭಿನ್ನರಾಗಿದ್ದೇವೆ. ಕೆಲವರು ಮೊದಲಿನ ಹಾಗೇ ಇದ್ದರೆ, ಒಂದಿಬ್ಬರು ಮಾತ್ರ ‘ಅಯ್ಯೋ ಯಾಕೆ ಬೇಕು ಕಣೆ ಈ ಸೆಲ್ಫಿ, ಈ ಶೋಕಿ! ನಮಗೆ ಈ ಸಂಸಾರ ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುವುದೇ ಸಾಕಾಗಿದೆ. ಐ ಬ್ರೋ ಮಾಡೋಣವೆಂದು ಬ್ಯೂಟಿ ಪಾರ್ಲರ್‌ಗೆ ಹೋಗುವುದಕ್ಕೆ ಸರಿಯಾಗಿ ಸಮಯ ಸಿಗುತ್ತಿಲ್ಲ. ಮದುವೆಯಾಗಿದೆ. ಮಗು ಇದೆ. ಸಾಕು ಇನ್ನು ಯಾಕೆ ಈ ಅಂದ ಚೆಂದ’ ಎಂದು ಈವಾಗಲೇ ವೈರಾಗ್ಯವೆಲ್ಲಾ ಹಾಸಿ ಹೊದ್ದುಕೊಂಡವರಂತೆ ಮಾತನಾಡುತ್ತಾರೆ.
ಮೊದಲು ಆರೋಗ್ಯದ ಸಮಸ್ಯೆ, ಮೆನೋಪಾಸ್ (ಮುಟ್ಟು ನಿಲ್ಲುವ ಅವಧಿ), ಕೆಲಸದ ಒತ್ತಡ ಇವುಗಳೆಲ್ಲಾ ಖಿನ್ನತೆಗೆ ಕಾರಣವಾಗುತ್ತಿದ್ದವು. ಆದರೆ ಈಗ ವರ್ಷ ಮೂವತ್ತಾಯಿತು ಎಂದ ಕೂಡಲೇ ಕೆಲವು ಹೆಣ್ಣುಮಕ್ಕಳ ಮನಸ್ಸಿನಲ್ಲಿ ಸೌಂದರ್ಯದ ಕುರಿತು ವೈರಾಗ್ಯದ ಗೆರೆಯೊಂದು ನಿಧಾನಕ್ಕೆ ತನ್ನ ಛಾಪು ಮೂಡಿಸಲು ಶುರುಮಾಡಿದರೆ, ಇನ್ನು ಕೆಲವರಲ್ಲಿ ಸೌಂದರ್ಯ ಮಾಸಿ ಹೋಗುತ್ತಿದೆ, ಇನ್ನು ಮುಗಿಯಿತು ತಮ್ಮ ಜೀವನ ಎಂದು ಒಂದು ರೀತಿಯ ಅಭದ್ರತೆಯ ಮನೋಭಾವ ಶುರುವಾಗುತ್ತದೆ. ಕೆಲವು ಹೆಣ್ಣುಮಕ್ಕಳು ‘ಅಯ್ಯೋ ಮದುವೆ, ಮಕ್ಕಳು ಆಯ್ತು, ಇದಕ್ಕೆಲ್ಲಾ ಸಮಯವೆಲ್ಲಿ ಸಿಗುತ್ತೆ?’ ಎಂದು ಗೊಣಗಾಡಿಕೊಂಡರೆ, ಮತ್ತೆ ಕೆಲವರು ಅತಿಯಾಗಿ ಮೇಕಪ್ ಮಾಡುವುದು, ಚಿಕ್ಕ ಹುಡುಗಿಯರಂತೆ ಕಾಣಲು ತಮಗೆ ಹೊಂದಿಕೊಳ್ಳದ ಉಡುಪು ಧರಿಸಲು ಶುರು ಮಾಡುವುದು, ಪದೇ ಪದೇ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದು ಜಾಸ್ತಿಯಾಗಿ ಇತರರ ಟೀಕೆಗೆ ಒಳಗಾಗುವುದೂ ಇದೆ.
ಇನ್ನೊಂದು ವಿಷಯವೆಂದರೆ ನಾವೇ ನಮ್ಮೊಳಗೊಂದು ಆ ರೀತಿಯ ಕಟ್ಟುಪಾಡನ್ನು ಹಾಕಿಕೊಳ್ಳುವುದಕ್ಕೆ ಶುರುಮಾಡುವುದೂ ಇದೆ. ಇಷ್ಟು ದಿನ ಯಾವುದ್ಯಾವುದೋ ಫೇರ್‌ನೆಸ್ ಕ್ರೀಮ್‌ಗಳು ಇರುತ್ತಿದ್ದ ಡ್ರೆಸ್ಸಿಂಗ್ ಟೇಬಲ್ ಮೇಲೆ ಈಗ ನಿಧಾನಕ್ಕೆ ಏಜ್ ಮಿರಾಕಲ್ಸ್, ಆ್ಯಂಟಿ ರಿಂಕಲ್ ಕ್ರೀಮ್, ಲೋಷನ್‌ಗಳು ಬಂದು ಕೂತಿರುತ್ತವೆ. ಇದರ ಜತೆಗೆ ನಿಧಾನಕ್ಕೆ ಖಿನ್ನತೆಯೂ ಎದೆಯಲ್ಲಿ ತಳವೂರಲು ಶುರುಮಾಡುತ್ತದೆ.
ಖಿನ್ನತೆಯ ತೆಕ್ಕೆಗೆ..
ವಯಸ್ಸು ಮೂವತ್ತರ ಗಡಿ ದಾಟಿದೆ. ಮುಖದಲ್ಲಿ ಮೊದಲಿನಷ್ಟು ಹೊಳಪು ಇಲ್ಲ. ತ್ವಚೆ ದೊರಗಾಗಿ ಸಡಿಲವಾಗುತ್ತಿದೆ. ಬಳುಕುವಂತಿದ್ದ ದೇಹದಲ್ಲಿ ಎಲ್ಲೆಲ್ಲೋ ಬೊಜ್ಜು ಸೇರಿಕೊಳ್ಳುತ್ತಿದೆ. ತೂಕವೂ ಏರುತ್ತಿದೆ. ಆಕರ್ಷಣೆ ಸ್ವಲ್ಪ ಕಡಿಮೆ ಅಗಿದೆ... ಹೀಗೆ ಸೌಂದರ್ಯದ ಕುರಿತು ಅತಿಯಾಗಿ ತಲೆ ಕೆಡಿಸಿಕೊಂಡು ತನಗೆ ಗೊತ್ತಿದ್ದೋ, ಗೊತ್ತಿಲ್ಲದೇಯೋ ನಿಧಾನಕ್ಕೆ ಖಿನ್ನತೆಯ ತೆಕ್ಕೆಯೊಳಗೆ ಜಾರುತ್ತಾರೆ. ಮಕ್ಕಳು ಇದ್ದರಂತೂ ಕೇಳುವುದೇ ಬೇಡ. ಸರಿಯಾಗಿ ಮುಖ ತೊಳೆದುಕೊಂಡು ಫ್ರೆಷ್ ಆಗುವುದಕ್ಕೂ ಸಮಯವಿಲ್ಲ, ಇನ್ನು ಈ ಪೆಡಿಕ್ಯೂರ್, ಐಬ್ರೋ ಅಂತೂ ದೂರದ ಮಾತು. ಮಗು ಚಿಕ್ಕದಿದೆ, ಅದನ್ನು ನೋಡಿಕೊಳ್ಳುವುದಕ್ಕೆ ಸಮಯ ಸಾಕಾಗುತ್ತಿಲ್ಲ. ನನಗ್ಯಾಕೆ ಬೇಕು ಇದೆಲ್ಲಾ! ಕೂದಲು ಕಟ್ ಮಾಡಿಸಿಕೊಂಡರೆ ಅತ್ತೆ-ಮಾವನಿಗೆ ಇಷ್ಟವಾಗಲ್ಲ, ಫೇಶಿಯಲ್ ಮಾಡೊದಕ್ಕೆ ಹೋದರೆ ತುಂಬಾ ಸಮಯ ಹಿಡಿಯುತ್ತದೆ. ಮನೆ ಕೆಲಸ ಬಾಕಿ ಉಳಿಯುತ್ತದೆ. ಕಚೇರಿಯಲ್ಲಿ ಬಾಸ್ ಕಿರಿಕಿರಿ, ಕೆಲಸದ ಒತ್ತಡ ಸಹಿಸಿಕೊಂಡು ಮನೆಗೆ ಬಂದರೆ ಸಾಕಾಗಿರುತ್ತದೆ. ಇನ್ನು ಈ ಪಾರ್ಲರ್ ಹೋಗುವುದಕ್ಕೆ ಟೈಮ್ ಆದರೂ ಎಲ್ಲಿದೆ ಎಂದು ಸುಮ್ಮನಾಗಿ ಬಿಡುವವರೇ ಹೆಚ್ಚು.
ನಮ್ಮದೇ ಬದುಕಿನ ಶೈಲಿಯನ್ನು ಬದಲಾಯಿಸಿಕೊಂಡು ಆಧುನಿಕ ಡ್ರೆಸ್ ಅಥವಾ ಫೇಶಿಯಲ್, ಕ್ಲೀನ್ ಅಪ್, ಐಬ್ರೋಸ್ ಎಂದು ಪಾರ್ಲರ್‌ನ ಬಾಗಿಲು ಬಡಿದರೆ ನೋಡುಗರದ್ದು ಇನ್ನೊಂದು ರೀತಿಯ ಮಾತು. ಈ ವಯಸ್ಸಿನಲ್ಲಿ ಅವಳಿಗೆ ಇದೆಲ್ಲಾ ಬೇಕಾ? ಹೀಗೆ ನೂರೆಂಟು ಮಾತುಗಳು. ಯಾರದ್ದೋ ಮಾತಿಗೆ ಅಂಜಿಯೊ ಇಲ್ಲ, ನಮ್ಮನ್ನು ನಾವೇ ಒಂದು ಚೌಕಟ್ಟಿನೊಳಗೆ ಇರಿಸಿಕೊಂಡೊ ಖಿನ್ನರಾಗುತ್ತಾ ಹೋಗುತ್ತೇವೆ.
ಬಾಹ್ಯ ಸೌಂದರ್ಯವೇಕೆ ಮುಂಚೂಣಿಗೆ?
ದೈಹಿಕ ಸೌಂದರ್ಯದ ವಿಷಯಕ್ಕೆ ಬಂದರೆ ಹೆಣ್ಣು ಗಂಡಿಗಿಂತ ತುಸು ಸೂಕ್ಷ್ಮ ಎನ್ನಬಹುದೇನೋ. ತಾನು ಆಕರ್ಷಕವಾಗಿ ಕಾಣಿಸಿದರೆ ಮಾತ್ರ ಎಲ್ಲರೂ ತನ್ನೆಡೆಗೆ ನೋಡುತ್ತಾರೆ ಎಂಬ ಭಾವವನ್ನು ಕೆಲವು ಹೆಣ್ಣುಮಕ್ಕಳು ಹೊಂದಿರುತ್ತಾರೆ. ಇಲ್ಲಿ ವ್ಯಕ್ತಿತ್ವ, ಗುಣಕ್ಕಿಂತ ನೋಡುವವರ ನೋಟ ಬಾಹ್ಯ ಸೌಂದರ್ಯದ ಮೇಲೇ ಹೆಚ್ಚಿರುತ್ತದೆ. ಇನ್ನೊಬ್ಬರಿಗೆ ನಾವು ಹೀಗಿದ್ದರೆ ಚೆಂದ ಕಾಣ್ತಿವೋ ಇಲ್ವೋ ಎಂಬ ಭಾವ ನಮ್ಮನ್ನು ಆವರಿಸಿಕೊಂಡಷ್ಟೂ ಮನಸ್ಸು ಖಿನ್ನತೆಯತ್ತ ಮುಖ ಮಾಡುತ್ತಾ ಹೋಗುತ್ತದೆ. ಯಾರನ್ನೋ ಮೆಚ್ಚಿಸುವುದಕ್ಕಾಗಿ ನಮ್ಮೊಳಗೆ ನಮ್ಮದಲ್ಲದ ವ್ಯಕ್ತಿತ್ವವೊಂದನ್ನು ಸ್ಥಾಪಿಸುತ್ತಾ ಹೋಗುತ್ತೇವೆ. ಇದರಿಂದ ಹೊರ ಬರುವುದಕ್ಕೆ ಆಗದೇ ಒದ್ದಾಡುತ್ತೇವೆ.
ಮೂವತ್ತು ದಾಟಿತು ಎಂದ ಕೂಡಲೇ ಎಲ್ಲಕ್ಕೂ ನಿವೃತ್ತಿ ಘೋಷಿಸುವ ಅಗತ್ಯವಿಲ್ಲ. ಹಾಗಂತ ನಮ್ಮ ಬದುಕನ್ನು ಇನ್ಯಾರದ್ದೋ ಬದುಕಿಗೆ ಹೋಲಿಸಿಕೊಂಡು ಬದುಕುವ ಅನಿವಾರ್ಯವೂ ಇಲ್ಲ. ಸಿಗುವ ಸಮಯದಲ್ಲಿ ನಮ್ಮ ದೇಹದತ್ತ ನಾವು ಕಾಳಜಿ, ಪ್ರೀತಿ ತೋರಿದರೆ ಸಾಕು. ನಿಮಗಿಷ್ಟವಾಗುವ ಹಾಗೇ ಸಿಂಗರಿಸಿಕೊಳ್ಳುವ ಕಲೆ ಕರಗತ ಮಾಡಿಕೊಳ್ಳಿ. ಮನಸ್ಸನ್ನು ಆದಷ್ಟು ಶಾಂತವಾಗಿಟ್ಟುಕೊಂಡರೆ ಇದು ನಮ್ಮ ಬಾಹ್ಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ.
* ದೇಹ ಮೂವತ್ತು ದಾಟಿದರೇನಂತೆ, ಮನಸ್ಸಿಗೆ ಎನಗಿಂತ ಕಿರಿಯರಿಲ್ಲ ಎಂದು ಹೇಳಿಕೊಳ್ಳಿ.
* ನಿತ್ಯ ಒಂದಿಷ್ಟು ನಡಿಗೆ, ವ್ಯಾಯಾಮ, ಯೋಗ ರೂಢಿಸಿಕೊಳ್ಳಿ.
* ಪೌಷ್ಟಿಕ ಆಹಾರ, ತರಕಾರಿ– ಹಣ್ಣು ಸೇವಿಸಿ. ಸಾಕಷ್ಟು ನೀರು ಕುಡಿಯಿರಿ.
* ಆಕರ್ಷಕವಾಗಿ ಕಾಣಲು ಆಧುನಿಕ ಉಡುಪು, ಸೌಂದರ್ಯ ಸಾಧನಗಳನ್ನು ಬಳಸಿದರೆ ತಪ್ಪೇನಿಲ್ಲ. ಆದರೆ ಅವುಗಳು ನಿಮಗೆ ಹೊಂದುತ್ತವೆಯೇ ಎಂದು ನೋಡಿಕೊಳ್ಳಿ.
ಮನಸ್ಸು ಚಿರಯೌವನೆ
ಮದುವೆಯವರೆಗೆ ನನಗೂ ಕನ್ನಡಿ ಆಪ್ತಸಖಿಯಾಗಿತ್ತು, ಮದುವೆಯ ನಂತರ ದಿನ ಕಳೆದಂತೆ ಏನೋ ಒಂದು ಬಗೆಯ ನೀರಸ ಭಾವದೊಂದಿಗೆ ಕನ್ನಡಿ ಮುಂದೆ ನಿಲ್ಲತೊಡಗಿದೆ.
ಯಾಕೆ ಹೀಗಾಯಿತು? ಎಂದು ಪ್ರಶ್ನಿಸಿಕೊಂಡೆ. ಯಾಕೋ ನನ್ನನ್ನು ನಾನೇ ಒಂದು ಸೀಮಿತ ರೇಖೆಯೊಳಗೆ ನಿಲ್ಲಿಸಿಕೊಂಡು ‘ಯಾರೂ ನನ್ನ ಗಮಸುತ್ತಿಲ್ಲ’ ಎಂಬ ಖಿನ್ನತೆಗೆ ನಿಧಾನಕ್ಕೆ ಜಾರುತ್ತಿರುವುದು ಅರಿವಾಯಿತು. ನಿಜವಾಗಿ ನನ್ನ ಬಗ್ಗೆ ಗಮನ ನೀಡುವುದನ್ನು ನಾನೇ ನಿಲ್ಲಿಸಿದ್ದೆ. ನಮ್ಮನ್ನು ನಾವು ಪ್ರೀತಿಸುವಷ್ಟು, ಅರ್ಥಮಾಡಿಕೊಳ್ಳುವಷ್ಟು ಬೇರೆ ಯಾರೂ ಅರ್ಥಮಾಡಿಕೊಳ್ಳಲಾರರು. ದಿನದ ಒಂದು ತಾಸನ್ನು ಮನಸ್ಸಿಗೆ ನೆಮ್ಮದಿ ಕೊಡುವ ಚಟುವಟಿಕೆಯಲ್ಲಿ ವಿನಿಯೋಗಿಸಿಕೊಂಡಾಗ ಮನಸ್ಸು ಉಲ್ಲಸಿತವಾಗಿ ಕ್ರಿಯಾಶೀಲವಾಗುತ್ತದೆ.
ದೇಹಕ್ಕೆ ಮೂವತ್ತು, ನಲವತ್ತು ಎಷ್ಟಾದರೇನು ಮನಸ್ಸು ಚಿರಯೌವನೆಯಾಗಿರುತ್ತದೆ. ನಮ್ಮನ್ನು ನಾವು ಪ್ರೀತಿಸಿದಾಗ ನಮ್ಮ ಸುತ್ತಲಿನ ಬದುಕು ಸುಂದರವಾಗಿ ಕಾಣುತ್ತದೆ, ನಮ್ಮನ್ನು ನಾವು ಮೆಚ್ಚಿಕೊಂಡಾಗ ಜೀವನಪ್ರೀತಿ ಬೆಳೆಯುತ್ತದೆ.
ಇದನ್ನೂ ಓದಿ: ನಲವತ್ತರಲ್ಲೂ ಇಪ್ಪತ್ತರ ಸೌಂದರ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.