ಸುಶಾಂತ್ ಸಿಂಗ್ ಎಂಬ ಪ್ರತಿಭಾನ್ವಿತ ನಟನ ಸಾವಿನ ಪ್ರಕರಣದಿಂದ ಹೊರಳಿಕೊಂಡು ಡ್ರಗ್ಸ್ ಮಾಫಿಯಾ ಮತ್ತು ಸಿನಿಮಾ ರಂಗದ ನಂಟಿನ ಕುರಿತ ಜಾಲಾಟ, ಮೊದಲಿಗೆ ಬಾಲಿವುಡ್, ಬಳಿಕ ಮಲಯಾಳ ಮತ್ತು ಕನ್ನಡ ಚಿತ್ರರಂಗಕ್ಕೂ ಚಾಚಿಕೊಂಡು ಈಗ ದೇಶವ್ಯಾಪಿ ಡ್ರಗ್ಸ್ ಮಾಫಿಯಾ ಕುರಿತ ತನಿಖೆ ಜೀವ ಪಡೆದಂತಿದೆ. ಇದು ಸರಳವಾಗಿ ಇಷ್ಟೇ ಆಗಿದ್ದರೆ ಈ ಲೇಖನ ಬಹುಶಃ ಮಾದಕವಸ್ತು ಸೇವನೆಯ ಇತಿಹಾಸ, ಅದರ ಪರಿಣಾಮ, ಒಳಿತು ಕೆಡುಕುಗಳು, ಕಾನೂನು ಇತ್ಯಾದಿಗಳ ಕುರಿತಾಗಿ ಇರುತ್ತಿತ್ತೇನೋ. ಆದರೆ, ಇಂದು ನಾವು ಈ ಪ್ರಸಂಗದ ಮೂಲಕ ಎರಡು ಭಿನ್ನವಾದ ಮುಖ್ಯ ಆಯಾಮಗಳ ಕುರಿತು ಚಿಂತಿಸುವ ತುರ್ತು ಸೃಷ್ಟಿಯಾಗಿದೆ.
***
‘ಈ ಇಡೀ ತನಿಖೆಯಲ್ಲಿ ಒಬ್ಬನೇ ಒಬ್ಬ ನಟನನ್ನೂ ಹೆಸರಿಸದಿರುವುದು ಮತ್ತು ಕೇವಲ ನಟಿಯರನ್ನು ಮಾತ್ರವೇ ಹೆಸರಿಸಿ ಅವಮಾನಿಸುತ್ತಿರುವುದು ಏಕೆ?’
- ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ
‘ನಟರು ಹಾಲು ಮತ್ತು ಬಿಸ್ಕತ್ತನ್ನು ಮಾತ್ರವೇ ಸೇವಿಸುತ್ತಾರೇನು?’
-ಗಾಯಕಿ, ಸೋನಾ ಮಹಾಪಾತ್ರ
‘ದೇಶದಲ್ಲಿ ಕೇವಲ ಮೂವರು ಮಹಿಳೆ/ನಟಿಯರು ಮಾತ್ರವೇ ಡ್ರಗ್ಸ್ ಬಳಸುತ್ತಿದ್ದಾರೆಂದು ತೋರುತ್ತಿದೆ. ಬನ್ನಿ ದೇಶವನ್ನು ಈ ಪಿಡುಗಿನಿಂದ ಬಹಳ ಸುಲಭವಾಗಿ ಸ್ವಚ್ಛಗೊಳಿಸಿಬಿಡಬಹುದು’
-ನಟಿ, ಪಾರುಲ್ ಯಾದವ್
***
ಈ ಮೂರು ಹೇಳಿಕೆಗಳು ಇಡೀ ತನಿಖೆ ಸಾಗುತ್ತಿರುವ ದಿಕ್ಕು, ತನಿಖಾಧಿಕಾರಿಗಳ ನಿಲುವು, ವರದಿ ಮಾಡುತ್ತಿರುವ ಮಾಧ್ಯಮಗಳ ಮನಃಸ್ಥಿತಿಗೆ ಹಿಡಿದ ಕನ್ನಡಿಯಂತಿವೆ. ಸ್ತ್ರೀ ಅಧೀನತೆಯನ್ನೇ ಸಂಸ್ಕೃತಿ ಎಂದು ನಂಬಿರುವ ಸಮಾಜದಲ್ಲಿ ಹೆಣ್ಣು ಮೃದು ಮತ್ತು ಸುಲಭದ ಶಿಕಾರಿ. ಪ್ರಶ್ನೆ ಇರುವುದು ನಟಿಯರನ್ನು ಹೆಸರಿಸಿರುವುದಕ್ಕಲ್ಲ, ಬದಲಿಗೆ ಅವರನ್ನು ಮಾತ್ರವೇ ಹೆಸರಿಸಿರುವುದಕ್ಕೆ. ಮಾಧ್ಯಮಗಳು ಈ ಪ್ರಶ್ನೆ ಎತ್ತಬೇಕಿತ್ತಲ್ಲವೇ?
ನಟಿಯರ ಹೆಸರುಗಳು ಕೇಳಿಬಂದಿರುವುದರಿಂದ ಆ ಬಗ್ಗೆ ಚರ್ಚೆಯಾಗುವುದೂ ಸರಿಯೇ. ಆದರೆ ಅವರ ಬಟ್ಟೆ, ವೈಯಕ್ತಿಕ ಬದುಕಿನ ವಿವರಗಳು ಚರ್ಚೆಯ ವಿಷಯವಾಗುತ್ತಿರುವುದೇಕೆ? ಅವರು ನಟಿಸಿರುವ ಯಾವುದೋ ಪಾತ್ರದ (ಗ್ಲಾಮರಸ್ ಎನಿಸಿಕೊಂಡ ಪಾತ್ರಗಳನ್ನೇ ಆಯ್ದುಕೊಳ್ಳುತ್ತಾರೆ!) ಉಲ್ಲೇಖ ಹಿಡಿದು ಅವರನ್ನು ಚಾರಿತ್ರ್ಯಹೀನ ಹೆಣ್ಣುಗಳು ಎಂಬಂತೆ ಬಿಂಬಿಸುವ ಮನಃಸ್ಥಿತಿ ಎಂತಹದ್ದು? (ನಟರ ಬಗ್ಗೆ ಪ್ರಸ್ತಾಪಿಸುವಾಗ ಅವರನ್ನು ಸೂಪರ್ ಹೀರೊ ಇಮೇಜ್ ತೋರುವ ಪಾತ್ರಗಳೊಂದಿಗೆ ಗುರುತಿಸುವುದರ ಹಿಂದಿರುವುದೂ ಇದೇ ಮನಃಸ್ಥಿತಿ). ಯಾವುದೋ ಚಿತ್ರದ ಪಾತ್ರಕ್ಕಾಗಿ ಅರೆಬರೆ ಬಟ್ಟೆತೊಟ್ಟ ಚಿತ್ರಗಳೇ ಪರದೆ ಮೇಲೆ ಕೆಟ್ಟದಾಗಿ ರಾರಾಜಿಸುವುದು ಏಕೆ? ಸುಶಾಂತ್ ಸಿಂಗ್ ಅವರ ಆತ್ಮಹತ್ಯೆಯ ಪ್ರಕರಣದಲ್ಲಿ ತಾನು ನಿರಪರಾಧಿ, ತನ್ನನ್ನು ನಂಬಿ ಮತ್ತು ಬೆಂಬಲಿಸಿ ಎಂದು ವಿನಂತಿಸಿಕೊಂಡು ರಿಯಾ ಚಕ್ರವರ್ತಿ ಮಾಡಿದ್ದ ವಿಡಿಯೊ ನೋಡಿ ಆಕೆಯ ಹೇಳಿಕೆಯನ್ನು ಅಲ್ಲೆಗಳೆಯುವುದೋ ಅಥವಾ ವಿರೋಧಿಸುವುದೋ ಮಾಡಿದ್ದರೆ ಬೇರೆ. ಆದರೆ, ಸುಶಾಂತ್ ಅವರ ಕುಟುಂಬಪರ ವಕೀಲರು, ‘ತಾನು ಸರಳ ಮತ್ತು ಮುಗ್ಧ ಹುಡುಗಿ ಎಂದು ಬಿಂಬಿಸುವುದಕ್ಕಾಗಿ ಆಕೆ ಸೆಲ್ವಾರ್ ತೊಟ್ಟು ವಿಡಿಯೊ ಮಾಡಿದ್ದಾಳೆ’ ಎಂದು ಪ್ರತಿಕ್ರಿಯಿಸುವುದು ಇದೇ ಮನಃಸ್ಥಿತಿಯಿಂದ. ಹೆಣ್ಣು ಆಧುನಿಕ ಉಡುಗೆ ತೊಟ್ಟರೆ ತಾನಾಗಿಯೇ ಅತ್ಯಾಚಾರಕ್ಕೆ ಪ್ರಚೋದಿಸುತ್ತಿದ್ದಾಳೆ/ಆಹ್ವಾನಿಸುತ್ತಿದ್ದಾಳೆ ಎಂಬುದು ಎಷ್ಟು ಅಸಂಬದ್ಧವೋ ಇದೂ ಅಷ್ಟೇ ಹಾಸ್ಯಾಸ್ಪದ. ನಟಿಯರ ಬಗ್ಗೆ ವರದಿ ಮಾಡುವಾಗ ಸಲೀಸಾಗಿ ಏಕವಚನ ಪ್ರಯೋಗ ಆಗುವುದೇಕೆ? (ಗಮನಿಸಿ, ನಟರು ಯಾವಾಗಲೂ ಗೌರವಯುತ ಸಂಬೋಧನೆಗೆ ಸಹಜವಾಗಿ ಅರ್ಹರಾಗಿರುತ್ತಾರೆ!).
ಈ ನಟಿಯರನ್ನು ವಿಚಾರಣೆಗಾಗಿ ಕರೆದ ಮಾತ್ರಕ್ಕೆ ಅವರ ಚಾರಿತ್ರ್ಯಹರಣಕ್ಕೆ ಟೊಂಕಕಟ್ಟಿ ನಿಂತಿರುವ ಮಾಧ್ಯಮ ಅಪರಾಧ ಮಾಡಿ ಸಿಕ್ಕಿಹಾಕಿಕೊಂಡ ನಟರ ವಿಷಯದಲ್ಲಿ ಹೇಗೆ ನಡೆದುಕೊಂಡಿತೆಂಬುದನ್ನು ಮರೆಯಬಹುದೇ? ಅದು ಮಾರಕಾಸ್ತ್ರಗಳ ಸರಬರಾಜಿನಂತಹ ಘೋರ ಕೃತ್ಯವಿರಬಹುದು, ಸಹನಟಿಯ ಅಪಹರಣ, ಲೈಂಗಿಕ ದೌರ್ಜನ್ಯದಂತಹ ಹೀನ ಕೃತ್ಯವಿರಬಹುದು ಅಥವಾ ಹೆಂಡತಿಯ ಮೇಲೆ ನಡೆಸಿದ ಅಮಾನವೀಯ ಹಲ್ಲೆಯಿರಬಹುದು. ಪ್ರತೀ ಘಟನೆಯಲ್ಲೂ ಅದು ಪ್ರತಿಬಿಂಬಿತವಾಗಿದೆ. ಕುತೂಹಲಕ್ಕಾಗಿ ಅಥವಾ ‘ತಾವೂ ಮಾಡರ್ನ್’ ಎಂದು ತೋರಿಸಿಕೊಳ್ಳುವ ಅನಿವಾರ್ಯಕ್ಕಾಗಿ ಅಥವಾ ಬಲವಂತದಿಂದಾಗಿ ಆಗೀಗ ಪಾರ್ಟಿಗಳಲ್ಲಿ ಮಾದಕವಸ್ತು ಸೇವನೆ ಮಾಡುವುದು ಒಂದೆಡೆಯಾದರೆ, ಅದನ್ನೇ ಚಟವಾಗಿಸಿಕೊಳ್ಳುವುದು ಮತ್ತೊಂದೆಡೆ. ಕಾರಣ ಏನೇ ಇದ್ದರೂ ಮೊದಲನೆಯದು ಕಾನೂನು ಪ್ರಕಾರ ಅಪರಾಧ (ಡ್ರಗ್ಸ್‌ನ ಸಮಸ್ಯೆಯಿಂದ ಸಮಾಜ ಮುಕ್ತವಾಗಬೇಕಾದರೆ ಆ ಕಾರಣಗಳನ್ನು ವಸ್ತುನಿಷ್ಠವಾಗಿ ಚರ್ಚಿಸಬೇಕಾದ ಅಗತ್ಯವಿದೆ) ಮತ್ತು ಎರಡನೆಯದು ಒಂದು ಮಾನಸಿಕ ಮತ್ತು ದೈಹಿಕ ಆರೋಗ್ಯದ ಸಮಸ್ಯೆ. ಆದರೆ, ಮಾಧ್ಯಮಗಳು ಅದೆಲ್ಲವನ್ನೂ ಬಿಟ್ಟು ಡ್ರಗ್ಸ್ ಸೇವನೆಯನ್ನು ಒಂದು ನೈತಿಕ ಸಮಸ್ಯೆಯೆಂಬ ಸಾಮಾನ್ಯ ಅನಿಸಿಕೆಯನ್ನೇ ಮತ್ತಷ್ಟು ಬಲಪಡಿಸುವಂತೆ ಬಿಂಬಿಸಿ, ಆ ನಟಿಯರನ್ನು ಚಾರಿತ್ರ್ಯಹೀನರೆಂದು ಜರಿದು ಬಲಿಪಶುವಾಗಿಸುತ್ತಿರುವುದು ಅತ್ಯಂತ ಹೇಯವಾದ ನಡೆ. ಪುರುಷಪ್ರಧಾನ ಸಮಾಜವು ‘ಸಮಾಜದ ನೈತಿಕತೆಯ ನೊಗ’ವನ್ನು ಹೊರಿಸಿರುವುದು ಹೆಣ್ಣಿನ ಹೆಗಲ ಮೇಲೆಯೇ. ಇವರು ಹೇಳಿದಂತಹ ಬಟ್ಟೆತೊಟ್ಟು, ಹೇಳಿದವರನ್ನು ವರಿಸುವ, ಇವರು ಬಯಸಿದಾಗ ಮಕ್ಕಳನ್ನು ಹೆತ್ತುಕೊಡುವ, ಸಂಸಾರ ಸಲಹುವ, ವಿಧೇಯಳಾಗಿ, ಅಧೀನಳಾಗಿರಬೇಕಾದ ಹೆಣ್ಣು ಸ್ವಾವಲಂಬಿಯಾಗಿ, ಸ್ವತಂತ್ರವಾಗಿ ಅಸಮಾನ ಕಟ್ಟುಪಾಡುಗಳನ್ನು ದಾಟಿ ಬೆಳೆದಾಗ, ‘ಇಂತಹ ಹೆಣ್ಣುಗಳು ಕೊನೆಗೆ ಹೀಗೆಯೇ ಅಂಕೆ ಮೀರುತ್ತಾರೆ’ ಎಂಬ ಒಳ ಸಂದೇಶ ರವಾನಿಸುವ ಲಜ್ಜಾಹೀನ ಮನಃಸ್ಥಿತಿ ಇದು.
ಒಬ್ಬ ಉದಯೋನ್ಮುಖ ನಟಿಯಾದ ರಿಯಾ ‘ತನ್ನ ಗೆಳೆಯ ಸುಶಾಂತ್‍ನ ಹಣದಲ್ಲಿ ಐಷಾರಾಮದ ಜೀವನ ನಡೆಸುತ್ತಿದ್ದಳು ಎಂಬಲ್ಲಿಂದ ಹಿಡಿದು, ಸಂಜನಾ ಅನ್ಯಧರ್ಮೀಯನನ್ನು ಮದುವೆಯಾಗಿದ್ದಾಳೆ, ಗಂಡಸಿನಂತೆ ಗಹಗಹಿಸಿ ನಗುವ ಅನುಶ್ರೀ ಪಾರ್ಟಿಗಳಲ್ಲಿ ಮಾದಕ ನೃತ್ಯ ಮಾಡುತ್ತಿದ್ದಳು’ ಎಂದೆಲ್ಲ ಕಿರುಚಾಡುವ ಮಾಧ್ಯಮಗಳ ರೋಗಗ್ರಸ್ಥ ಮನಃಸ್ಥಿತಿಗೆ ಅತೀ ಅಗತ್ಯವಾಗಿ ಡ್ರಗ್ಸ್ (ಮದ್ದು) ನೀಡಬೇಕಿದೆ.
ಮೂವತ್ತು ವರ್ಷಗಳ ಹಿಂದೆ ಖಿನ್ನತೆಯಿಂದ ಬಳಲುತ್ತಿದ್ದ ನಟಿ ರೇಖಾಳ ಪರಿತ್ಯಕ್ತ ಪತಿ ಮುಕೇಶ್ ಅಗರ್‌ವಾಲ್ ಆತ್ಮಹತ್ಯೆ ಮಾಡಿಕೊಂಡಾಗ ಬಾಲಿವುಡ್‍ನ ‘ಪುರುಷೋತ್ತಮರು’ (ಸುಭಾಷ್ ಗಾಯ್, ಅನುಪಮ್ ಖೇರ್ ಇತ್ಯಾದಿ) ಆಕೆಯನ್ನು ‘ಮಾಟಗಾತಿ, ಸಿನಿಮಾರಂಗದ ಕಪ್ಪುಚುಕ್ಕಿ’ ಎಂದೆಲ್ಲಾ ಜರಿದು, ‘ಆಕೆಯನ್ನು ಪ್ರೇಕ್ಷಕರು ಇನ್ನು ಹೇಗೆತಾನೇ ಭಾರತೀಯ ನಾರಿಯಾಗಿ ಒಪ್ಪಿಕೊಳ್ಳಲು ಸಾಧ್ಯ?’ ಎಂದೆಲ್ಲ ಒರಲಿದ್ದನ್ನು ಮಾಧ್ಯಮಗಳು ಮುಖಪುಟ ಲೇಖನ ಮಾಡಿದ್ದವು. ಇಂದು ಸುಶಾಂತ್ ತೀರಿಕೊಂಡಿರುವಾಗ ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಆತನ ಗೆಳತಿಯನ್ನು ಮಾಟಗಾತಿ, ಧನಪಿಶಾಚಿ ಎಂದೆಲ್ಲಾ ಕರೆದು ‘ಪೌರುಷ’ ತೋರುತ್ತಿವೆ. ಆದರೆ, ನಟಿ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಾಗ ಆಕೆಯ ಗೆಳೆಯ ಸೂರಜ್ ಪಂಚೋಲಿಯ ಉಡುಗೆ, ಮನಃಸ್ಥಿತಿ, ಪ್ರಚೋದನೆ ಯಾವುವೂ ಮಾಧ್ಯಮಗಳ ಕಟು ವಿಮರ್ಶೆಗೆ ಒಳಗಾಗಲಿಲ್ಲ ಎಂಬುದನ್ನು ನಾವು ಮರೆತಿಲ್ಲ.
ಇವೆಲ್ಲದರ ಮೂಲದಲ್ಲಿರುವುದು ಸ್ತ್ರೀದಮನದ ಪುರುಷಾಧಿಪತ್ಯದ ಮನಃಸ್ಥಿತಿ. ಇದಕ್ಕೆ ಮುಖ್ಯ ಕಾರಣ ಇತರ ಎಲ್ಲ ರಂಗಗಳಂತೆಯೇ ಇಲ್ಲೂ ಮಹಿಳೆಯರಿಗೆ ಸಮಾನ ಪ್ರತಿನಿಧೀಕರಣ ಇಲ್ಲದಿರುವುದು. ಇನ್ನು ಸಿನಿಮಾಗಳಲ್ಲಿ ಕೆಲವು ಅಪವಾದಗಳನ್ನು ಹೊರತುಪಡಿಸಿ ಸ್ತ್ರೀಪಾತ್ರಗಳು ಬಹುತೇಕ ‘ಎಂಥ ಮಾಲು!’ ಎಂಬಲ್ಲಿಂದ ಶುರುವಾಗಿ ತ್ಯಾಗಮಯೀ ತಾಯಿ ಎಂಬಲ್ಲಿಗೆ ಕೊನೆಯಾಗುತ್ತವೆ.
ಇವೆಲ್ಲದರ ಒಟ್ಟು ಪರಿಣಾಮದಿಂದಲೇ ಹೆಣ್ಣು ಸಾಮಾನ್ಯವಾಗಿ ಇಲ್ಲಿ ಎರಡು ಸಿದ್ಧ ಮಾದರಿಗಳಲ್ಲಿ ಬಿಂಬಿತವಾಗುತ್ತಾಳೆ. ಅ) ಭೋಗದ, ಲೈಂಗಿಕತೆಯ ವಸ್ತು (ಆಬ್ಜೆಕ್ಟ್ ಆಫ್ ಪ್ಲೆಷರ್). ಆ) ಪೂಜನೀಯ ವಸ್ತು (ಆಬ್ಜೆಕ್ಟ್ ಆಫ್ ವರ್ಷಿಪ್) - ಆದರ್ಶ ತಾಯಿ, ಪರಿಪೂರ್ಣ ಗೃಹಿಣಿ ಮಾದರಿಗಳಲ್ಲಿ. ಹೆಣ್ಣು ಈ ಆದರ್ಶದ ಚೌಕಟ್ಟಿಗೆ ಸರಿಹೊಂದಬೇಕು. ಹಾಗಿಲ್ಲವಾದರೆ ಆಕೆ ಗಂಡಿನ ಭೋಗದ ವಸ್ತುವಾಗಲು ಲಾಯಕ್ಕಾದವಳು ಎಂಬಂತಹ ಅಲಿಖಿತ ನಿಯಮವನ್ನು ಹರಿಯಬಿಡಲಾಗಿದೆ.
ನಮ್ಮ ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳು ಇವೆಲ್ಲವುಗಳ ಮೂಲಕ ತಮ್ಮ ಸ್ತ್ರೀ ದ್ವೇಷ ಮತ್ತು ಪುರುಷಾಧಿಪತ್ಯದ ಮನಃಸ್ಥಿತಿಯನ್ನು ಅಸಹ್ಯಕರವಾಗಿ ಪ್ರದರ್ಶಿಸುತ್ತಿರುವುದು ಈ ಪ್ರಸಂಗದ ಒಂದು ಆಯಾಮವಾದರೆ, ಮಾಧ್ಯಮ ಮತ್ತು ಆಳುವವರ್ಗದ ಅನೈತಿಕ ಒಳರಾಜಕೀಯ ನಿಚ್ಚಳವಾಗುತ್ತಿರುವುದು ಇದರ ಮತ್ತೊಂದು ಆಯಾಮ. ಅಧಿಕಾರಸ್ಥರು ಸ್ವಹಿತ, ಸ್ವಾರ್ಥ ಸಾಧನೆಗಾಗಿ ಮತ್ತು ಕೆಲವೊಮ್ಮೆ ಸ್ವಪ್ರತಿಷ್ಠೆಗಾಗಿ ತೆಗೆದುಕೊಂಡಿರುವ ಮೂರ್ಖ ನಿರ್ಧಾರಗಳು ಜನರ ಬದುಕನ್ನು ಮೂರಾಬಟ್ಟೆಯಾಗಿಸುತ್ತಿರುವಾಗ, ಬಲಹೀನ ಜನರ ದನಿಯಾಗಬೇಕಾದ ಮಾಧ್ಯಮಗಳ ಬಾಲಬಡುಕತನ ಬೆಚ್ಚಿಬೀಳಿಸುವ ಮಟ್ಟ ತಲುಪಿದೆ. ಸರ್ಕಾರಕ್ಕೆ ಸಾಮಾನ್ಯ ಜನರನ್ನು ತತ್‌ಕ್ಷಣ ಮತ್ತು ದೀರ್ಘಕಾಲದಲ್ಲಿ ಕಾಡುವ ಮುಖ್ಯ ವಿಷಯಗಳಿಂದ ವಿಮುಖರಾಗಿಸುವ ಸುಲಭ ಮಾರ್ಗವೆಂದರೆ ಸಮಾಜದಲ್ಲಿ ಗಣ್ಯರೆನಿಸಿಕೊಂಡವರ ಮೇಲೆ ದಾಳಿ ಮಾಡುವುದು.
ಒಂದು ಕಡೆ ನಲವತ್ತೈದು ವರ್ಷಗಳಲ್ಲೇ ಅತೀ ಹೆಚ್ಚು ನಿರುದ್ಯೋಗ, ಧನಾತ್ಮಕವಾಗಿ ಬೆಳೆಯುತ್ತಿದ್ದ ಬೆಳವಣಿಗೆ ದರ ಋಣಾತ್ಮಕವಾಗಿ ಪಾತಾಳ ತಲುಪಿರುವುದು, ರೈತರು, ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ಮಾಡುತ್ತಿರುವುದು, ಕಾನೂನಿನ ಭಯವೇ ಇಲ್ಲದೆ ಸ್ತ್ರೀಯರ, ದಲಿತರ, ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು, ನ್ಯಾಯಾಂಗದ ತೀರ್ಪುಗಳು ನ್ಯಾಯದ ಪರಿಕಲ್ಪನೆಯ ಗಡಿದಾಟಿ ಬಹುಸಂಖ್ಯಾತರ ಓಲೈಕೆಗೆ ಇಳಿದು ಸಮಾಜದ ಅಂತಃಸ್ಥೈರ್ಯವನ್ನೇ ಕಲಕುತ್ತಿದೆ. ಇವುಗಳಿಂದ ಸಾಮಾನ್ಯರ ಗಮನ ಸ್ಥಳಾಂತರಿಸಲು ಒದಗಿಬಂದಿರುವ ವಿಷಯ ಸುಶಾಂತ್ ಸಾವು ಮತ್ತು ಅದನ್ನು ಬಳಸಿಕೊಂಡು ಚಿತ್ರರಂಗದ ಮೇಲೆ ಎರಗಿರುವ ಸರ್ಕಾರ ಒಂದೇ ಕಲ್ಲಿಗೆ ಹಲವು ಹಕ್ಕಿಗಳನ್ನು ಬೀಳಿಸಲು ಹೊರಟಂತಿದೆ. ಜಗತ್ತಿನ ಪುರುಷೇತಿಹಾಸ ಪದೇ ಪದೇ ಋಜುವಾತು ಪಡಿಸಿರುವಂತೆಯೇ ಈಗಲೂ ಈ ರಾಜಕೀಯ ತಂತ್ರಕ್ಕೆ ಸುಲಭ ದಾಳವಾಗುತ್ತಿರುವುದು ಹೆಣ್ಣು.
ಮೊದಲಿಗೆ ಬಿಹಾರದ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಹಾರದ ಹುಡುಗ ಸುಶಾಂತ್‍ಗೆ ನ್ಯಾಯ ಕೊಡಿಸುತ್ತೇವೆಂಬ ಭಾವನಾತ್ಮಕ ಕಣ್ಕಟ್ಟು ಹೆಣೆಯುತ್ತಲೇ, ನಿಜದಲ್ಲಿ ಆತನ ಚಾರಿತ್ರ್ಯವಧೆ ಮಾಡಲಾಗುತ್ತಿದೆ. ಆತನ ಪ್ರತಿಭೆ, ಸಮಾಜಮುಖಿ ಕೆಲಸಗಳು ಎಲ್ಲವನ್ನೂ ಬದಿಗೆ ಸರಿಸಿ ಈಗ ಆತನೊಬ್ಬ ಮಾದಕವ್ಯಸನಿ ಎಂಬಂತೆ ಬಿಂಬಿಸುತ್ತಾ, ‘ಆದರೂ ಆತ ಅಮಾಯಕ, ಅದಕ್ಕೆ ಕಾರಣ ಒಬ್ಬ ಹೆಣ್ಣು’ ಎಂಬ ಸಿದ್ಧಸೂತ್ರ ಹಿಡಿದು ರಾಜಕೀಯ ಮಾಡುತ್ತಿರುವುದು ಹಾಸ್ಯಾಸ್ಪದ. ಇನ್ನು ದೀಪಿಕಾರಂತಹ ತಾರಾ ವರ್ಚಸ್ಸಿನ ನಟಿಯ ಮೇಲಿನ ದಾಳಿ, ಪೌರತ್ವ ಕಾಯ್ದೆಯ ಕುರಿತ ಆಕೆಯ ನಿಲುವು ಮತ್ತು ಆಕೆಯ ಜೆಎನ್‍ಯು ವಿದ್ಯಾರ್ಥಿ ಪ್ರತಿಭಟನೆಯ ವೇಳೆಯ ಭೇಟಿಯನ್ನು ನೆನಪಿಸದೆ ಇರುವಷ್ಟು ಅಮಾಯಕತನವನ್ನು ತೋರುವ ಮಾಧ್ಯಮಗಳನ್ನು ಕನಿಕರಿಸಬಹುದಷ್ಟೆ. ಜೊತೆಗೇ ಸಾರಾ, ಶ್ರದ್ಧಾರಂತಹ ಇತರರ ಮೇಲಿನ ದಾಳಿಗಳು ಒಟ್ಟಾರೆ ತನ್ನ ಮುಂದೆ ಮಂಡಿಯೂರಲೊಪ್ಪದ ಬಾಲಿವುಡ್‌ಅನ್ನು ಮಣಿಸಿ, ಭಾರತದಂತಹ ದೇಶದಲ್ಲಿ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾಗಿರುವ ಚಿತ್ರರಂಗವನ್ನು ತನ್ನ ಪ್ರಚಾರಯಂತ್ರದ ಭಾಗವಾಗಿಸಿಕೊಳ್ಳುವ ದೊಡ್ಡ ಹುನ್ನಾರದಂತೆ ತೋರುತ್ತದೆ. ಈ ಪ್ರಯತ್ನದ ಭಾಗವಾಗಿಯೇ ಈಗಾಗಲೇ ತಯಾರಾಗಿರುವ ಕೆಲವು ಸಿನಿಮಾಗಳು, ವ್ಯಕ್ತಿ ಪೂಜೆಯ ಪರ ಮತ್ತು ವಿರೋಧಿ ಗುಂಪುಗಳಾಗಿ ಹರಿದು ಹಂಚಿಹೋಗಿರುವ ಚಿತ್ರರಂಗ ನಮ್ಮ ಕಣ್ಮುಂದಿದೆ.
ಇದಾವುದನ್ನೂ ಪಟ್ಟು ಹಿಡಿದು ಪ್ರಶ್ನಿಸದೆ, ನಟಿಯರ ಚಾರಿತ್ರ್ಯವಧೆಯನ್ನೇ ತಿಂಗಳುಗಟ್ಟಲೆ ಕಾಯಕ ಮಾಡಿಕೊಂಡಿರುವ ಮಾಧ್ಯಮಗಳು ತಮ್ಮ ತಳಾತಳ ತಲುಪಿಯಾಗಿದೆ. ಉಳಿದ ಕೆಲವೇ ಮಾಧ್ಯಮಗಳೊಡನೆ ಹೋರಾಟದ ಪರ್ಯಾಯಗಳನ್ನು ಹುಡುಕಿ ಕಟ್ಟಿಕೊಳ್ಳುವುದೇ ಈಗ ನಮ್ಮ ಮುಂದಿರುವ ದಾರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.