ನಗರಗಳಲ್ಲಿ ಮಾತ್ರವಲ್ಲ, ವಲಸೆಯಿಂದ ಬರಿದಾದ ಹಳ್ಳಿಗಳಲ್ಲಿಯೂ ಕುಟುಂಬದ ಸದಸ್ಯರು, ಸಂಬಂಧಿಕರು ಒಟ್ಟು ಸೇರುವ ಸಂದರ್ಭ ವಿರಳ. ಆದರೆ ಹಬ್ಬದ ಹೆಸರಲ್ಲಿ ಇಂತಹ ಅಪರೂಪದ ಸಂದರ್ಭ ಸೃಷ್ಟಿಸಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಎಲ್ಲರೂ ಬೆರೆತು ಖುಷಿ ಅನುಭವಿಸುವುದರ ಜೊತೆಗೆ, ಇದು ಹುಮ್ಮಸ್ಸಿನಿಂದ ಬದುಕು ಸಾಗಿಸುವ ಇಂಧನವಿದ್ದಂತೆ.
ಅನ್ವಿತಾ ಆರು ತಿಂಗಳ ಹಿಂದೆ ಮದುವೆಯಾಗಿ ಬೆಂಗಳೂರಿಗೆ ಬಂದಿದ್ದಳು. ಊರಿನಲ್ಲಿ ತುಂಬು ಕುಟುಂಬದ ನಡುವೆ ಬೆಳೆದ ಅವಳಿಗೆ ಬೆಂಗಳೂರು ಒಂದೇ ತಿಂಗಳಿಗೆ ಬೇಸರ ಎನ್ನಿಸಿಬಿಟ್ಟಿತ್ತು. ಬೆಳಿಗ್ಗೆ ಕೆಲಸಕ್ಕೆ ಹೊರಟ ಗಂಡ ಮನೆ ಸೇರುವುದು ರಾತ್ರಿ 9ರ ನಂತರವೇ. ಅಕ್ಕಪಕ್ಕದ ಮನೆಯವರು ಪರಿಚಯವಿರಲಿಲ್ಲ. ಮನೆಕೆಲಸವೆಲ್ಲ ಮುಗಿದ ಮೇಲೆ ಸುಮ್ಮನೆ ಕೂರುವುದು, ಟಿವಿ ನೋಡುವುದು ಅವಳಿಗೂ ಬೇಸರವಾಗಿತ್ತು. ಮದುವೆಗೆ ಮೊದಲು ತಾನು ಅಜ್ಜ–ಅಜ್ಜಿ, ಅಪ್ಪ–ಅಮ್ಮ, ಚಿಕ್ಕಪ್ಪ–ಚಿಕ್ಕಮ್ಮ, ಹೀಗೆ ಅವರೆಲ್ಲರ ಜೊತೆ ಬೆರೆಯುತ್ತಿದ್ದದ್ದು ನೆನಪಾಗುತ್ತಿತ್ತು. ಅದರಲ್ಲೂ ಹಬ್ಬ ಹರಿದಿನಗಳು ಬಂತೆಂದರೆ ಸಾಕು ಮನೆಯವರೆಲ್ಲರೂ ಸೇರಿ ಸಂಭ್ರಮಿಸುತ್ತಿದ್ದ ಕ್ಷಣಗಳನ್ನು ನೆನೆದು ಅವಳ ಕಣ್ಣಾಲಿಗಳು ತುಂಬುತ್ತಿದ್ದವು.
ಆದರೆ ಬೆಂಗಳೂರಿನಲ್ಲಿ ಹಬ್ಬವಿರಲಿ, ಪೂಜೆ ಇರಲಿ, ಹುಟ್ಟುಹಬ್ಬವಿರಲಿ ಗಂಡ–ಹೆಂಡತಿ ಇಬ್ಬರೇ ಆಚರಿಸಬೇಕು. ಆ ಆಚರಣೆಯಲ್ಲಿ ಸಂಭ್ರಮದ, ಕೌಟುಂಬಿಕ ಬಾಂಧವ್ಯದ ಗುರುತೇ ಇರಲಿಲ್ಲ. ಇದನ್ನು ಅನ್ವಿತಾ ಗಂಡನ ಬಳಿ ತೋಡಿಕೊಂಡಾಗ ಗಂಡ ಒಂದು ಒಳ್ಳೆಯ ಐಡಿಯಾ ನೀಡಿದ್ದ. ಅದೇನೆಂದರೆ ನವರಾತ್ರಿ ಹಬ್ಬಕ್ಕೆ ಬೆಂಗಳೂರಿನಲ್ಲಿರುವ ತನ್ನ ಹಾಗೂ ಅನ್ವಿತಾಳ ಕುಟುಂಬದ ಸದಸ್ಯರನ್ನೆಲ್ಲಾ ಆಹ್ವಾನಿಸಿ ತಮ್ಮ ಮನೆಯಲ್ಲೇ ಹಬ್ಬ ಆಚರಿಸೋಣ ಎಂದು. ಅನ್ವಿತಾ ಪತಿಯ ಯೋಚನೆಗೆ ಸಾಥ್ ಕೊಟ್ಟು ಎಲ್ಲರನ್ನೂ ಕರೆಸಿ ಸಂಭ್ರಮದಿಂದ ಹಬ್ಬ ಆಚರಿಸಿದಳು. ಅವಳ ಆರು ತಿಂಗಳ ಬೇಸರಕ್ಕೆ ಈ ಹಬ್ಬ ವಿರಾಮ ನೀಡಿತ್ತು.
ಇದು ಕೇವಲ ಅನ್ವಿತಾ ಒಬ್ಬಳ ಕಥೆಯಲ್ಲ. ಪಟ್ಟಣಗಳಲ್ಲಿ ವಾಸಿಸುವ ಬಹುತೇಕರ ಕಥೆ. ಈಗ ಹಳ್ಳಿಗಳಲ್ಲೂ ಇದೇ ಗೋಳು. ಕುಟುಂಬವೆಂದರೆ ಅಣ್ಣ–ತಮ್ಮ, ಅಕ್ಕ–ತಂಗಿ, ಬಂಧು–ಬಾಂಧವರ ಸಮಾಗಮ ಎಂಬ ಮಾತಿದೆ. ಈಗ ಕುಟುಂಬದವರೆಲ್ಲಾ ಒಂದೆಡೆ ಸೇರುವುದೇ ಅಪರೂಪ. ಆದರೆ ಕುಟುಂಬದವರನ್ನು ಒಂದೆಡೆ ಸೇರಿಸಲೆಂದೇ ಹಬ್ಬಗಳು ಬರುತ್ತವೆ. ಒಂದಷ್ಟು ಸಂಪ್ರದಾಯಗಳು ಜೊತೆಯಾಗುತ್ತವೆ. ಎಲ್ಲೆಲ್ಲೋ ಇರುವ ಕುಟುಂಬದ ಮನಸ್ಸುಗಳನ್ನು ಒಂದುಗೂಡಿಸುತ್ತವೆ. ಹುಟ್ಟುಹಬ್ಬವೋ ಮದುವೆ ಆ್ಯನಿವರ್ಸರಿಯೋ ನಾಮಕರಣವೋ ಹೀಗೆ ಒಂದಷ್ಟು ಸಂತೋಷ, ಸಂಭ್ರಮ ಹಾಗೂ ಸಂಪ್ರದಾಯಗಳು ಕುಟುಂಬವನ್ನು, ಸದಸ್ಯರ ಮನಸ್ಸನ್ನು ಒಂದುಗೂಡಿಸುವಂತೆ ಮಾಡುತ್ತವೆ. ಅದು ಬಾಂಧವ್ಯದ ಬೆಸುಗೆಗೂ ಕಾರಣವಾಗುತ್ತದೆ.
ಇಂತಹ ಹಬ್ಬದ ಆಚರಣೆಯಲ್ಲಿ ನಮ್ಮ ಸಾಮಾಜಿಕ ಮತ್ತು ಮಾನಸಿಕ ಭಾವನೆಗಳು ಚಿಗುರುತ್ತವೆ. ಹಳೆಯ ನೆನಪುಗಳೊಂದಿಗೆ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಹಿಂದಿನ ಹಾಗೂ ಇಂದಿನ ತಲೆಮಾರಿನವರೊಂದಿಗೆ ಬೆಸೆಯಬಹುದು. ಇದರಿಂದ ಕೌಟುಂಬಿಕ ಮೌಲ್ಯಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬಹುದು. ಸಂಬಂಧ ಗಟ್ಟಿಗೊಂಡು, ಆಪ್ತ ಭಾವನೆ ಹೆಚ್ಚಾಗುತ್ತದೆ. ಕುಟುಂಬದಲ್ಲಿ ನಡೆಯುವ ಆಚರಣೆ ಹಾಗೂ ಸಂಪ್ರದಾಯಗಳು ಖುಷಿಯೊಂದಿಗೆ ಕೌಟುಂಬಿಕ ಮೌಲ್ಯವನ್ನು ತಿಳಿಸುವಂತೆ ಮಾಡುತ್ತವೆ.
ಕೌಟುಂಬಿಕ ಆಚರಣೆ
ಕೌಟುಂಬಿಕ ಆಚರಣೆಗಳು ಪುನರಾವರ್ತಿತವಾಗುವಂತಹವು. ಜೊತೆಗೆ ಅವು ಅರ್ಥಪೂರ್ಣವೂ ಹೌದು. ಕುಟುಂಬದಲ್ಲಿ ನಡೆಯುವ ಕೆಲವು ಆಚರಣೆಗಳು ಕುಟುಂಬಸ್ಥರೆಲ್ಲರನ್ನೂ ಒಂದೆಡೆ ಸೇರುವಂತೆ ಮಾಡುತ್ತವೆ. ಎಷ್ಟೋ ಕುಟುಂಬಗಳಲ್ಲಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತವೆ. ಅಲ್ಲದೇ ಬೇರೆ ಬೇರೆ ಊರುಗಳಲ್ಲಿ ನೆಲೆಸಿರುವ ಬಂಧುಗಳನ್ನು ಪರಿಚಯಿಸಲು ಕೂಡ ಇದು ಒಂದು ವೇದಿಕೆ ಇದ್ದಂತೆ. ಎಲ್ಲೋ ಇರುವ ಬಾಂಧವ್ಯದ ಸೆಲೆಯನ್ನು ಪುನಃ ಕಟ್ಟಿಕೊಡುತ್ತದೆ.
ಅಲ್ಲದೇ ತಲೆಮಾರುಗಳಿಂದ ಆಚರಿಸಿಕೊಂಡು ಬಂದಿರುವ ಹಬ್ಬ ಹರಿದಿನಗಳ ಗುರುತಿನ ದ್ಯೋತಕಕ್ಕೂ ಕುಟುಂಬದ ಈ ಆಚರಣೆಗಳು ನೆರವಾಗುತ್ತವೆ. ಅದರೊಂದಿಗೆ ಕೌಟುಂಬಿಕ ಮೌಲ್ಯ, ಇತಿಹಾಸ ಹಾಗೂ ಸಂಸ್ಕೃತಿಯನ್ನು ಮುಂದಿನ ತಲೆಮಾರುಗಳಿಗೆ ತಿಳಿಸುವಲ್ಲೂ ಈ ಆಚರಣೆಗಳು ಪ್ರಮುಖ ಪಾತ್ರ ವಹಿಸುತ್ತವೆ.
ಒಂದುಗೂಡುವ ಮನಸ್ಸು
ಕ್ರಿಸ್‌ಮಸ್, ದೀಪಾವಳಿ, ನವರಾತ್ರಿಯಂತಹ ಆಚರಣೆಗಳು ಕೌಟುಂಬಿಕ ಬಾಂಧವ್ಯ ಬೆಸೆಯಲು ಒಂದು ಉತ್ತಮ ಮಾರ್ಗ. ರಜಾದಿನಗಳು ಸಿಗುವುದರಿಂದ ಕುಟುಂಬಸ್ಧರೆಲ್ಲ ಒಂದೆಡೆ ಸೇರಬಹುದು. ಉದಾ: ದೀಪಾವಳಿ ಸಮಯದಲ್ಲಿ ಕುಟುಂಬದವರೆಲ್ಲಾ ಒಂದೆಡೆ ಸೇರಿ ದೀಪ ಹಚ್ಚುವುದು, ಸಿಹಿ ತಿನಿಸುಗಳನ್ನು ತಯಾರಿಸುವುದು, ಎಲ್ಲರೂ ಒಂದೆಡೆ ಸೇರಿ ಊಟ ಮಾಡುವುದು.. ಹೀಗೆ ಈ ಸಂಭ್ರಮ ಮನಸ್ಸುಗಳನ್ನು ಒಂದುಗೂಡಿಸುತ್ತವೆ.
ಇಂದಿನ ತಲೆಮಾರಿನಲ್ಲಿ ಹುಟ್ಟುಹಬ್ಬ ಆಚರಣೆ ಸಾಮಾನ್ಯ. ಮನೆಯಲ್ಲಿ ಕೇವಲ ತಂದೆ–ತಾಯಿಯಷ್ಟೇ ಸೇರಿ ಮಗುವಿನ ಹುಟ್ಟುಹಬ್ಬ ಆಚರಿಸುವ ಬದಲು ಹತ್ತಿರದ ಸಂಬಂಧಿಕರನೆಲ್ಲಾ ಕರೆದು ಆಚರಿಸಿದರೆ ಸಂಭ್ರಮ ಇನ್ನಷ್ಟು ಕಳೆ ಕಟ್ಟುತ್ತದೆ. ಸುಮ್ಮನೆ ಹುಟ್ಟುಹಬ್ಬದ ಹುಡುಗ / ಹುಡುಗಿಯ ಇಷ್ಟದ ಫ್ಲೇವರ್‌ನ ಕೇಕ್ ಕತ್ತರಿಸಿದರೂ ಸಾಕು. ಕುಟುಂಬಸ್ಥರೆಲ್ಲಾ ಸೇರಿ ಆಚರಿಸಿದರೆ ಇನ್ನಷ್ಟು ಖುಷಿ ಇರುತ್ತದೆ. ಆಗ ಒಂದಷ್ಟು ನಗೆಚಟಾಕಿಗಳು, ಹಾಡುಗಳ ಮೂಲಕ ಇನ್ನಷ್ಟು ಸಂಭ್ರಮಿಸಬಹುದು.
ಸಂಪ್ರದಾಯ, ಮೌಲ್ಯ
ಅನೇಕ ಕುಟುಂಬಗಳಲ್ಲಿ ತಲೆಮಾರುಗಳಿಂದ ಬಂದ ಸಂಪ್ರದಾಯಗಳಿರುತ್ತವೆ. ಇದನ್ನು ಪ್ರತಿಯೊಬ್ಬರೂ ಪಾಲಿಸಿ ಆಚರಿಸಿಕೊಂಡು ಬಂದರೆ ಅವು ಮಧುರ ನೆನಪುಗಳಾಗಿ ಉಳಿದುಕೊಳ್ಳುವುದರಲ್ಲಿ ಸಂಶಯವಿಲ್ಲ. ಅನೇಕ ವರ್ಷಗಳಿಂದ ಕುಟುಂಬಸ್ಥರೆಲ್ಲರೂ ಒಂದೆಡೆ ಸೇರುವ ಜಾತ್ರೆ, ಎಲ್ಲರೂ ಒಂದು ಕಡೆ ಸೇರಿ ಅಡುಗೆ ಮಾಡಿ ಒಟ್ಟಾಗಿ ಊಟ ಮಾಡುವಂತಹ ಸಂಪ್ರದಾಯಗಳು ಕೌಟುಂಬಿಕ ಮೌಲ್ಯಕ್ಕೆ ಒತ್ತು ನೀಡುತ್ತವೆ.
ಮದುವೆ ಮುಂಜಿಗಳಲ್ಲಿ ಎಲ್ಲರೂ ಒಂದಾಗುವುದು ಸಾಮಾನ್ಯ. ಅಂತಹ ಸಂದರ್ಭಗಳಲ್ಲಿ ಯಾವುದಾದರೂ ಹೊರಾಂಗಣ ಕ್ರೀಡೆಯಲ್ಲಿ ಮನೆಯವರೆಲ್ಲರೂ ತೊಡಗುವಂತೆ ಮಾಡಿ ಸಂಭ್ರಮಿಸಬಹುದು.ಮಾಡಬಹುದು. ಇದರಿಂದ ಮನಸ್ಸುಗಳು ತಿಳಿಯಾಗುತ್ತವೆ. ಅಲ್ಲದೇ ಮುಂದಿನ ಮದುವೆ, ಎಂಗೇಜ್‌ಮೆಂಟ್‌ನಂತಹ ಸಂಭ್ರಮಕ್ಕೆ ಕುಟುಂಬಸ್ಥರನ್ನು ಸೆಳೆಯಲು ಇದು ದಾರಿಯಾಗಬಹುದು.
*ಕುಟುಂಬವು ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿರುವುದರಿಂದ ಅದಕ್ಕೊಂದು ಅಸ್ಮಿತೆ ಲಭ್ಯವಾಗುತ್ತದೆ.
*ಖುಷಿ, ನಗು, ಹಾಸ್ಯ, ತಮಾಷೆಗೆ ಸದವಕಾಶ
*ಪ್ರೀತಿಪಾತ್ರರ ಜೊತೆ ನೆನಪುಗಳ ಹಂಚಿಕೆ
*ಕುಟುಂಬದವರ ಜೊತೆಗಿನ ಬಾಂಧವ್ಯವನ್ನು ಹೊಚ್ಚ ಹೊಸದಾಗಿಸುವುದು
*ಕುಟುಂಬದ ಹೊಸ ಸದಸ್ಯರ ಪರಿಚಯಕ್ಕೆ ಅವಕಾಶ
*ಅಜ್ಜಿ ತಾತಂದಿರಿಗೆ ತಮ್ಮ ಸಂಪ್ರದಾಯ, ಸಂಸ್ಕೃತಿ, ಅನುಭವ, ಧಾರ್ಮಿಕ ನಂಬಿಕೆ ಹೇಳಿಕೊಳ್ಳಲು ಅವಕಾಶ
*ಕುಟುಂಬದ ಹಳೆಯ ಕಾಲದ ವಸ್ತುಗಳು, ಸ್ಮರಣಿಕೆಗಳು, ಕಲಾಕೃತಿಗಳನ್ನು ಯುವ ಸದಸ್ಯರಿಗೆ ನೀಡಲು ಅವಕಾಶ
*ಸಾಮುದಾಯಿಕ ಬದುಕನ್ನು ಗಟ್ಟಿಕೊಳಿಸುವುದು.
ಆಚರಣೆಗೆ ಕೆಲವು ಟಿಪ್ಸ್
*ಕುಟುಂಬದ ಸಂಪ್ರದಾಯವನ್ನು ಅನುಸರಿಸಿ. ರಂಗೋಲಿ ಬಿಡಿಸಿ. ಹಾಡು ಹೇಳಿ. ಸಿಹಿ ತಯಾರಿಸಿ. ಮಕ್ಕಳಲ್ಲಿ ಕೂಡ ಇಂತಹ ಸಿಹಿ ನೆನಪುಗಳು ಒಳ್ಳೆಯ ಸಂಪ್ರದಾಯಕ್ಕೆ ನಾಂದಿ ಹಾಡಬಲ್ಲವು.
*ಪಿಕ್ನಿಕ್‌ಗೆ ಹೋಗಿ. ಹಬ್ಬದ ಹಿಂದಿನ ದಿನ ಅಥವಾ ಮರುದಿನ ಸಣ್ಣ ಪುಟ್ಟ ಪ್ರವಾಸ ಮಾಡಿ. ಇದು ಸದಸ್ಯರ ಮಧ್ಯೆ ಬಾಂಧವ್ಯವನ್ನು ಗಟ್ಟಿ ಮಾಡುತ್ತದೆ.
*ಕುಟುಂಬದ ಸದಸ್ಯರು ಬೇರೆ ಬೇರೆ ಕಡೆ ವಾಸಿಸುವವರು ಸಿಹಿ ತಿನಿಸು ತಯಾರಿಸಿ ತಂದರೆ ಪರಸ್ಪರ ಹಂಚಿಕೊಂಡು ತಿನ್ನಬಹುದು.
*ಆಟ: ದೀಪಾವಳಿಯಲ್ಲಿ ದೊಡ್ಡವರು ಕಾರ್ಡ್ಸ್ ಆಡಿದರೆ ಮಕ್ಕಳಿಗೆ ಅಂತಾಕ್ಷರಿ ಆಡಿಸಿ.
*ಫೋಟೊ ತೆಗೆಸಿಕೊಳ್ಳಿ. ಇದು ಕುಟುಂಬದ ಆಲ್ಬಂನಲ್ಲಿ ಶಾಶ್ವತ ನೆನಪನ್ನು ಉಳಿಸುತ್ತದೆ.
*ಹಿರಿಯರು ಬೇರೆ ಕಡೆ ನೆಲೆಸಿದ್ದರೆ ಅವರನ್ನು ಭೇಟಿ ಮಾಡಲು ಇದು ಸುಸಂದರ್ಭ.
*ಬಂಧುಗಳ, ನೆರೆಮನೆಯವರ, ಸ್ನೇಹಿತರ ಮನೆಗೆ ಭೇಟಿ ನೀಡಿ.ಮಕ್ಕಳಿಗೂ ಪರಿಚಯಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.