ಮದುವೆಯಾದ ಅಥವಾ ಪ್ರೀತಿಸುತ್ತಿರುವ ಹಲವರಲ್ಲಿ ಸಂಗಾತಿ ಇದ್ದರೂ ತಾವು ಒಂಟಿ ಎನ್ನುವ ಭಾವನೆ ಕಾಡುತ್ತದೆ. ಸಂಬಂಧದಲ್ಲಿನ ಒಂಟಿತನವನ್ನು ದೂರ ಮಾಡಲು ಸಂಗಾತಿಗೆ ಹತ್ತಿರವಾಗುವ ಮಾರ್ಗವನ್ನು ಕಂಡುಕೊಳ್ಳಬೇಕು.
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಅನಿತಾ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಕೈ ತುಂಬಾ ಸಂಪಾದನೆ ಮಾಡುತ್ತಿದ್ದ ವಿನೋದ್‌ನನ್ನು ಮದುವೆಯಾಗಿದ್ದಳು. ಮನೆಯವರ ಇಚ್ಛೆಯಂತೆ, ಅವರು ತೋರಿಸಿದ್ದ ಹುಡುಗನನ್ನೇ ಮೆಚ್ಚಿ ಮದುವೆಯಾಗಿ ವಿದೇಶಕ್ಕೆ ಹಾರಿದ್ದ ಅವಳಿಗೆ ಕೆಲವೇ ದಿನಗಳಲ್ಲಿ ತಾನು ಒಂಟಿ ಎಂಬ ಭಾವನೆ ಮೂಡಲು ಆರಂಭವಾಗಿತ್ತು. ಅವನ ಪಾಡಿಗೆ ಅವನು, ಇವಳ ಪಾಡಿಗೆ ಇವಳು.
‘ಯಾವಾಗಲೋ ಒಮ್ಮೆ ಜೊತೆಯಾಗಿ ಹೊರಗೆ ಹೋಗುವುದು, ಒಟ್ಟಿಗೆ ಕುಳಿತು ಊಟ ಮಾಡುವುದು.. ಇಷ್ಟೇ ಜೀವನ ಎಂಬಂತಾಗಿಬಿಟ್ಟಿದೆ’ ಎಂದು ಅಳಲು ತೋಡಿಕೊಳ್ಳುವ ಅನಿತಾಗೆ ದೂರದ ದೇಶ, ಜನ ಇನ್ನಷ್ಟು ಒಂಟಿತನ ಹೆಚ್ಚುವಂತೆ ಮಾಡಿತ್ತು.
ಅನಿತಾಳಂತೆ ಹಲವರಲ್ಲಿ ಮದುವೆಯಾದ ಮೇಲೆ ಅಥವಾ ಸಂಗಾತಿ ಜೊತೆ ಇದ್ದಾಗಲೂ ಒಂಟಿತನದ ಭಾವನೆ ಕಾಡುತ್ತದೆ. ಸಂಗಾತಿಯ ಕೆಲವು ವರ್ತನೆಗಳು ಅವಳಲ್ಲಿ ತಾನು ಒಂಟಿ ಎಂಬ ಭಾವನೆ ಮೂಡುವಂತೆ ಮಾಡಬಹುದು. ‘ಸಂಬಂಧದಲ್ಲಿನ ಒಂಟಿತನವನ್ನು ಹೋಗಲಾಡಿಸಲು ಕೆಲವೊಂದು ಸೂಕ್ತ ಮಾರ್ಗಗಳಿಂದ ಸಂಗಾತಿಯನ್ನು ಒಲಿಸಿಕೊಂಡು ಉತ್ತಮ ದಾಂಪತ್ಯ ಜೀವನವನ್ನು ಸಾಗಿಸಲು ಸಾಧ್ಯ. ಆದರೆ ತಾಳ್ಮೆ ಇರಬೇಕಷ್ಟೇ’ ಎನ್ನುತ್ತಾರೆ ಆಪ್ತಸಮಾಲೋಚಕಿ ಆಯೇಷಾ ಬಾನು.
‘ಉತ್ತಮ ದಾಂಪತ್ಯ ಜೀವನ ನಮ್ಮದಾಗಬೇಕು ಎಂದರೆ ಅದೃಷ್ಟವಿರಬೇಕು ಎಂದು ಹಲವರು ನಂಬಿರುತ್ತಾರೆ. ಆದರೆ ಒಂದು ಉತ್ತಮ ಸಂಬಂಧದಲ್ಲಿ ಸ್ನೇಹ, ಪರಸ್ಪರ ಒಬ್ಬರನ್ನೊಬ್ಬರು ಆರಾಧಿಸುವುದು, ಸಂಗಾತಿಯ ಪ್ರತಿಭೆಯನ್ನು ಗೌರವಿಸುವುದು, ಅರ್ಥ ಮಾಡಿಕೊಳ್ಳುವುದು ತುಂಬಾ ಮುಖ್ಯ’ ಎನ್ನುವುದು ಆಯೇಷಾ ಅವರ ಅಭಿಪ್ರಾಯ.
ಸಮೀಕ್ಷೆಯೊಂದರ ಪ್ರಕಾರ ಶೇ 40ರಷ್ಟು ಮಂದಿ ತಮ್ಮ ಸಂಬಂಧದಲ್ಲಿ ತಾವು ಒಂಟಿಯಾಗಿದ್ದೇವೆ ಎಂಬ ನೋವಿನೊಂದಿಗೆ ಬದುಕುತ್ತಾರಂತೆ. ಅಂದರೆ ದೈಹಿಕವಾಗಿ ಅಥವಾ ವಾಸ್ತವವಾಗಿ ಸಂಗಾತಿಯಿಂದ ದೂರವಿರುವುದು ಎಂದರ್ಥವಲ್ಲ. ಭಾವನಾತ್ಮಕವಾಗಿ ಸಂಗಾತಿಗೆ ಸ್ಪಂದಿಸದೇ ಇದ್ದರೆ ಸಂಗಾತಿ ಸಂಬಂಧದಲ್ಲಿ ಏಕಾಂಗಿತನವನ್ನು ಅನುಭವಿಸಬಹುದು. ಗಂಡನಾದವನು ತನ್ನ ಗುರಿ, ಭಯ ಹಾಗೂ ಕನಸುಗಳ ಬಗ್ಗೆ ಕೇಳಿಸಿಕೊಳ್ಳದೇ ಇದ್ದಾಗ ಹೆಂಡತಿಗೆ ತಾನು ಒಂಟಿ ಎಂಬ ಭಾವ ಮೂಡಲು ಆರಂಭವಾಗುತ್ತದೆ. ದಾಂಪತ್ಯದಲ್ಲಿ ತಾನು ಒಂಟಿ ಎನ್ನುವ ಭಾವನೆ ಹೊಂದಿರುವ ಪೋಷಕರು ತಮ್ಮ ಮಕ್ಕಳನ್ನು ಕಡೆಗಣಿಸುವುದಿಲ್ಲ. ಆದರೆ ಹಲವರು ಮಕ್ಕಳ ಮೇಲೆ ಪ್ರೀತಿ, ಅಕ್ಕರೆ ತೋರಿಸುವ ಭರದಲ್ಲಿ ಸಂಗಾತಿಯ ಭಾವನೆಗಳನ್ನು ಕಡೆಗಣಿಸುತ್ತಾರೆ. ಆಗಲೂ ಸಂಬಂಧದಲ್ಲಿ ಒಂಟಿತನ ಕಾಡಬಹುದು.
ಸಂಬಂಧದಲ್ಲಿನ ಒಂಟಿತನ ನಿವಾರಿಸುವುದು ಹೇಗೆ?
ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಿ
ನಿಮ್ಮ ಸಂಬಂಧದಲ್ಲಿ ನೀವು ಒಂಟಿ ಎನ್ನಿಸಿದರೆ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಿಲ್ಲ ಎಂದು ಅರ್ಥವಲ್ಲ. ನಿಮ್ಮ ನಡುವೆ ಭಾವನಾತ್ಮಕ ಅಂತರ ಹೆಚ್ಚಿದ್ದು, ಪ್ರೀತಿಗೆ ಅಗತ್ಯವಾದ ಅನ್ಯೋನ್ಯತೆಯ ಕೊರತೆಯಿದೆ ಎಂದು ಅರ್ಥ. ಹಾಗಾದರೆ ಅವರು ನಿಮ್ಮೊಂದಿಗೆ ಯಾವ ಕಾರಣಕ್ಕೆ ಹೀಗಿದ್ದಾರೆ ಎಂಬ ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಿ. ಸರಿಪಡಿಸುವ ದಾರಿಯನ್ನು ಕಂಡುಕೊಳ್ಳಿ.
ಭರವಸೆ ಕಳೆದುಕೊಳ್ಳಬೇಡಿ
ಭಾವನಾತ್ಮಕವಾಗಿ ನಿಮ್ಮಲ್ಲಿ ಒಂಟಿ ಎಂಬ ಭಾವನೆ ಮೂಡಿದರೆ ನಿಮ್ಮ ಸಂಬಂಧದಿಂದ ದೂರ ಉಳಿಯಲು ಪ್ರಯತ್ನಿಸಬೇಡಿ. ಕಳೆದುಕೊಳ್ಳುವ ಭೀತಿ ಇದ್ದರೂ ಆಶಾದಾಯಕವಾಗಿರಿ. ಇಂದಲ್ಲ ನಾಳೆ ಸಂಬಂಧ ಸರಿ ಹೋಗುತ್ತದೆ ಎಂಬ ಭರವಸೆ ಇರಲಿ.
ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳಿ
ಸಂಬಂಧದಲ್ಲಿನ ಏಕಾಂಗಿತನವನ್ನು ಹೋಗಲಾಡಿಸಲು ವರ್ತನೆಯಲ್ಲಿ ಬದಲಾವಣೆ ತಂದುಕೊಳ್ಳುವುದು ಮುಖ್ಯ. ನಿಮ್ಮ ಪತಿ ಅಥವಾ ಪ್ರೇಮಿಗೆ ನಿಮ್ಮ ಯಾವ ವರ್ತನೆ ಇಷ್ಟವಾಗುತ್ತಿಲ್ಲ ಎಂಬುದನ್ನು ನೀವೇ ಅರಿತುಕೊಂಡು ಅದರಲ್ಲಿ ಬದಲಾವಣೆ ಮಾಡಿಕೊಳ್ಳಿ.
ಸಣ್ಣ ಪುಟ ಸರ್ಪ್ರೈಸ್‌ಗಳನ್ನು ನೀಡಿ
ನಿಮ್ಮ ಸಂಗಾತಿ ಊಹಿಸಿಯೇ ಇರದ ಸಣ್ಣ ಪುಟ್ಟ ಸರ್ಪ್ರೈಸ್‌ಗಳನ್ನು ನೀಡಿ. ಭಾವನಾತ್ಮಕ ಬಂಧ ಗಟ್ಟಿಯಾಗುವಂತೆ ನೋಡಿಕೊಳ್ಳಿ. ನಿಮ್ಮ ಭಾವನೆ ಹಾಗೂ ಯೋಚನೆಗಳನ್ನು ಹಂಚಿಕೊಳ್ಳಿ, ಅವರ ಭಾವನೆ, ಯೋಚನೆಗಳಿಗೆ ಸ್ಪಂದಿಸಿ.
ಅವರ ಪ್ರಪಂಚದಲ್ಲಿ ಜಾಗ ಮಾಡಿಕೊಳ್ಳಿ
ಸಂಗಾತಿಯ ಯೋಚನಾ ಪ್ರಪಂಚದೊಳಗೆ ನಿಮ್ಮ ಜಾಗವನ್ನು ಭದ್ರಪಡಿಸಿಕೊಳ್ಳಿ. ನಿಮ್ಮಿಬ್ಬರ ನಡುವಿನ ಭಾವನಾತ್ಮಕ ಬಂಧ ಗಟ್ಟಿಯಾಗಲು ಅವರ ದೃಷ್ಟಿಕೋನಕ್ಕೆ ತಕ್ಕಂತೆ ಸಾಗುವುದು ಮುಖ್ಯವಾಗುತ್ತದೆ.
ಪ್ರತಿದಿನ ಒಂದು ನಿಮಿಷ ಕಣ್ಣುಮುಚ್ಚಿ ಯೋಚಿಸಿ. ನಿಮ್ಮ ಸಂಗಾತಿಯ ಜಗತ್ತು ಪ್ರಸ್ತುತ ಹೇಗಿದೆ ಎಂದು ಊಹಿಸಿಕೊಳ್ಳಿ. ಈ ಕ್ಷಣಕ್ಕೆ ಅವರು ಏನು ಯೋಚಿಸುತ್ತಿದ್ದಾರೆ, ಅವರಿಗೇನು ಬೇಕು? ವಾಸ್ತವವೇನು? ಸವಾಲುಗಳು ಏನಿರಬಹುದು? ಅವರು ಎಲ್ಲಿ ಸಂತೋಷವನ್ನು ಹುಡುಕುತ್ತಿದ್ದಾರೆ? ಅವರ ಚಿಂತೆ ಏನು? ಹಂಬಲ ಏನು? ಇದೆಲ್ಲದರ ಬಗ್ಗೆಯೂ ಯೋಚಿಸಿ ತಿಳಿದುಕೊಳ್ಳಿ. ಆ ಮೂಲಕ ಅವರಿಗೆ ಹತ್ತಿರವಾಗಲು ಪ‍್ರಯತ್ನಿಸಿ.ನಿಮ್ಮ ಒಂಟಿತನವನ್ನು ದೂರ ಮಾಡಲು ದಾರಿ ಕಂಡುಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.