ADVERTISEMENT

ಶಿಕ್ಷಣ ಕೊಟ್ಟ ಹೆಣ್ಣಿನ ಬದುಕು...

ದೀಪಾ ಗಿರೀಶ್
Published 20 ಜುಲೈ 2018, 19:30 IST
Last Updated 20 ಜುಲೈ 2018, 19:30 IST
   

ಮೆಟ್ರೊ ರೈಲಿನ ಮೊದಲ ಬೋಗಿಯ ರಶ್ಶಿನ ಒಳಗೆ ಅದು ಹೇಗೋ ದಾರಿ ಹೊಂಚಿಕೊಂಡ ದೇಹ ‘ಸ್ವಲ್ಪ ದಾರಿಬಿಡಿ, ಪ್ಲೀಸ್’ ಎನ್ನುತ್ತಾ ಬೋಗಿಯ ಮಧ್ಯಕ್ಕೆ ಜರುಗುತ್ತದೆ. ರೈಲು ಸುರಂಗವನ್ನು ಹೊಕ್ಕುವ ಸಮಯಕ್ಕೆ ಲೈಟುಗಳು ಹೊತ್ತಿಕೊಳ್ಳುತ್ತವೆ... ಮಂದಬೆಳಕಿನ ಎದುರಿನ ಗಾಜಿನಲ್ಲಿ ನನ್ನದೇ ಪ್ರತಿಬಿಂಬ. ಬೆಳಿಗ್ಗೆ ಚಂದವಾಗಿ, ಒಪ್ಪವಾಗಿ ಹೊರಟವಳ ಮುಖದಲ್ಲಿ ಸಂಜೆಯ ಹೊತ್ತಿಗೆ ತೆಳುವಾದ ಎಣ್ಣೆಯ ಪೊರೆ. ಬೆಳಿಗ್ಗೆ ಬೋಗಿಯ ತುಂಬೆಲ್ಲಾ ಮತ್ತೇರಿಸುವ ಸೆಂಟಿನ ಕಮಟು, ಸಂಜೆಗತ್ತಲಿನ ಹೊತ್ತಿಗೆ ಬೆವರ ಘಮಲು. ಗೊತ್ತು, ರೈಲಿನ ಎಲ್ಲ ಮೂರು ಬೋಗಿಗಳ ಪಾಡೂ ಇದೇ ಈ ಹೊತ್ತಿಗೆ. ಆದರೆ ಮೊದಲ ಬೋಗಿಯಲ್ಲಿನ ಬಾಡಿದ ಹೂವಿಗೆ, ಜೋಲುಬಿದ್ದ ಮುಖಕ್ಕೆ, ಮೊಬೈಲಿನ ಪರದೆಯಲ್ಲಿ ಕಳೆದುಹೋದ ಕಣ್ಣುಗಳಿಗೆ, ಇಯರ್ ಫೋನು ತಾಕಿಸಿಕೊಂಡ ಕಿವಿಗಳಿಗೆ, ತೂಕ ಕಳೆದುಕೊಂಡ ಊಟದ ಬ್ಯಾಗು ಹಿಡಿದ ಕೈಗಳಿಗೆ, ನಿಂತ ನಿಲುವು ಬದಲಿಸುತ್ತಲೇ ಇರುವ ಬಸವಳಿದ ಕಾಲುಗಳಿಗೆ ಇರುವ ಗಮ್ಮತ್ತೇ ಬೇರೆ!

ಹಾಗೇ ಯೋಚಿಸುತ್ತೇನೆ, ಪ್ರತಿಯೊಂದು ಮುಖದಲ್ಲೂ ದುಡಿಮೆಯ ಹೆಮ್ಮೆಯೊಂದು ಪ್ರಜ್ವಲಿಸುತ್ತಿದೆ. ವಿದ್ಯೆಯೊಂದು ಇಲ್ಲದೇ ಹೋಗಿದ್ದರೆ ನಮ್ಮಗಳ ಪಾಡೇನಾಗಿರುತ್ತಿತ್ತು? ಎಷ್ಟೆಷ್ಟೋ ಡಿಗ್ರಿಗಳನ್ನು ಪಡೆದವರ ಲೆಕ್ಕಾಚಾರಗಳನ್ನು ತಲೆಕೆಳಗುಮಾಡುವ ಅನಕ್ಷರಸ್ಥ; ಆದರೆ, ವಿವೇಕಯುತ ಮಂದಿ ನಮ್ಮ ಮಧ್ಯೆ ಇಲ್ಲವೆಂದಿಲ್ಲ. ಆದರೆ ಅಂಕಿ–ಅಂಶಗಳನ್ನೊಮ್ಮೆ ತಿರುವಿ ಹಾಕಿದರೆ ‘ಶಿಕ್ಷಣವೇ ನಮ್ಮ ಬದುಕಿನ ಧೀಃಶಕ್ತಿ’ ಎಂಬುದು ಮತ್ತೆ ಮತ್ತೆ ಖಾತ್ರಿಯಾಗುತ್ತದೆ.

ಅನೇಕ ಹೆಣ್ಣುಮಕ್ಕಳು ಬದುಕಿನಲ್ಲಿ ನಿರುದ್ಯೋಗಕ್ಕೆ, ಅನಾರೋಗ್ಯಕ್ಕೆ, ಆಪ್ತರು ಬಿಟ್ಟುಹೋದರೆಂಬ ಶೋಕಕ್ಕೆ ಊಟ ಬಿಟ್ಟದ್ದಿದೆ, ನಿದ್ದೆ ತೊರೆದದ್ದಿದೆ, ಸ್ನಾನ ಮರೆತದ್ದಿದೆ, ನಿಜ. ಆದರೆ ಹಸಿವೆ, ನಿದ್ರೆ, ಶೌಚಗಳನ್ನು ಮರೆತವರನ್ನು ಮತ್ತೆ ಮತ್ತೆ ಎಚ್ಚರಿಸಿ ಬದುಕಿಗೆ ಕರೆವ ಅಕ್ಷರವೆಂಬ ನಕ್ಷತ್ರ ನಮ್ಮ ಪಾಲಿಗೆ ನಿಲುಕಿದ ಕತೆಯೇ ವಿಸ್ಮಯ! ಸಾವಿತ್ರಿ ಬಾಯಿ ಫುಲೆಯಾದಿಯಾಗಿ ಅನೇಕರು ತಮಗೆ ಒದಗಿಬಂದ ಸಂಕಷ್ಟಗಳನ್ನು ಬದಿಗಿಟ್ಟು ವಿದ್ಯೆಯೆಂಬ ಸಂಪತ್ತನ್ನು ನಮ್ಮ ಉಡಿತುಂಬಿದ್ದಾರೆ. ಅವರಿಲ್ಲದೇ ಹೋಗಿದ್ದರೆ?

ADVERTISEMENT

ಈಗಿನ ವರದಿಗಳನ್ನೇ ನೋಡಿ, ‘ದೇಶ ದೇಶದೊಳಗೂ ನಮ್ಮ ದೇಶ ಚಂದ’ ಎನ್ನುತ್ತಲೇ ಜನಸಂಖ್ಯಾ ನಿಯಂತ್ರಣದ ಎಲ್ಲಾ ಯೋಜನೆ, ಅಭಿಯಾನಗಳನ್ನು ಹಿಂದಿಕ್ಕಿ ನಾವು ಮನುಷ್ಯರೇ 132.42 ಕೋಟಿ ದಾಟಿಬಿಟ್ಟೆವು. ಆದರೆ ಇನ್ನೂ ಗರ್ಭನಿರೋಧಕ ಕ್ರಮಗಳ ಬಗ್ಗೆ ಅರಿವಿಲ್ಲ! ಮಿಲಿಯನ್ನು ದಾಟಿದ ಜನರಲ್ಲಿ ಮಹಿಳೆಯರ ಸಂಖ್ಯೆ ಸಾವಿರಕ್ಕೆ 940ಕ್ಕೆ ಇಳಿದಿದೆ, ಆದರೆ ಹೆಣ್ಣುಭ್ರೂಣಗಳನ್ನು ಚಿವುಟುವ ದುಷ್ಟಬುದ್ಧಿ ಅಳಿದಿಲ್ಲ! ಇನ್ನು, NHFS-4ರ ಪ್ರಕಾರ ನಗರದ ಶೇ 23 ಹಾಗೂ ಗ್ರಾಮೀಣ ಪ್ರದೇಶದ ಶೇ 29 ಮಹಿಳೆಯರು ಕೌಟುಂಬಿಕ ದೌರ್ಜನ್ಯ, ಹಲ್ಲೆ ಎದುರಿಸುತ್ತಲೇ ಇದ್ದಾರೆ. ಆದರೆ ದನಿ ಎತ್ತಲು ಭರವಸೆಯೇ ಇಲ್ಲ! ಕೆಲಸಕ್ಕೆ ಹೋಗುವುದು ಸುಲಭವಿಲ್ಲ, ಹೋದರೂ ಸಂಬಳ ನಮ್ಮ ಪಾಲಲ್ಲ! ಇದು ಯಾವುದೋ ಕಾಲದ ಕತೆಯಲ್ಲ. ಈ ಕಳೆದ ಹತ್ತು ವರ್ಷದ ಒಳಗಿನ ಸಂಶೋಧನೆ, ಸರ್ವೇಗಳು ನೀಡಿರುವ ಅಂಕಿ-ಅಂಶ.

ಇದೆಲ್ಲದರ ಹಿಂದೆ ‘ಅವಳು’ ಮರೆತು ಹೋದ ಶಾಲೆಯ ದಾರಿ ಕಾಣುತ್ತದೆಯಲ್ಲವೇ? 2011ರ ಜನಗಣತಿಯ ವರದಿಯೂ, ನಾವು ಮಹಿಳೆಯರು ಶಿಕ್ಷಣದಲ್ಲಿ ಪುರುಷರಿಗಿಂತ 16.68ರಷ್ಟು ಹಿಂದೆ ಉಳಿದಿರುವುದನ್ನು ಸಾರುತ್ತದೆ. ಹೀಗಿರುವಾಗ ನಮ್ಮ ಜ್ಞಾನದ ಪಾತ್ರೆಗಳು ಬರಿದಾಗಿ, ಹಕ್ಕುಗಳ ಸುತ್ತ ಮುಳ್ಳಬೇಲಿ ಎದ್ದು, ಸ್ವಾತಂತ್ರ್ಯವನ್ನು ಸಾಲ ಪಡೆಯುವ ದುಃಸ್ಥಿತಿಗೆ ಯಾರು ಜವಾಬ್ದಾರರು?

ಶಿಕ್ಷಣ ಕೊಟ್ಟ ಬದುಕಿನಿಂದಾಗಿಯೇ ಈ ಮಾತು, ಬರಹಗಳು ಎಲ್ಲವೂ. ಇಷ್ಟಾಗಿಯೂ ಅನಿಸದೇ ಇರದು, ಶಿಕ್ಷಣವೇ ಇರದ ದಿನಗಳಲ್ಲಿ ‘ಅವಳೊಳಗಿನ ನಾನು’ ಹೇಗಿದ್ದಿರಬಹುದು?

*


–ದೀಪಾ ಗಿರೀಶ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.