ADVERTISEMENT

ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ: ಯಾವುದು ಸೂಕ್ತ ಆಯ್ಕೆ?

ಡಾ.ವೀಣಾ ಎಸ್‌ ಭಟ್ಟ‌
Published 26 ಜುಲೈ 2024, 23:36 IST
Last Updated 26 ಜುಲೈ 2024, 23:36 IST
   

32 ವರ್ಷ. ಆಫೀಸಿನ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದೇನೆ. ಎರಡನೇ ಬಾರಿಗೆ ಗರ್ಭಿಣಿಯಾಗಿದ್ದೇನೆ. ಮೊದಲ ಮಗನಿಗೆ 4 ವರ್ಷ. ಸಹಜ ಹೆರಿಗೆಯಾಗಿತ್ತು. ಈ ಬಾರಿ ಹೆರಿಗೆಯ ನಂತರ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು. ಕೈ ಆಪರೇಷನ್‌ ಮಾಡಿಸಲೇ ಅಥವಾ ಕರೆಂಟ್‌ ಆಪರೇಷನ್‌  ಒಳ್ಳೆಯದೇ. ನನ್ನದು ಉಷ್ಣಶರೀರ ಪ್ರಕೃತಿ. ಖಾಸಗಿ ವೈದ್ಯರ ಹತ್ತಿರ ತೋರಿಸುತ್ತಿರುವೆ. ಸಿಸೇರಿಯನ್‌ ಮಾಡಿಸಿಕೊಂಡು ಒಟ್ಟಿಗೆ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಳ್ಳುವುದು ಒಳ್ಳೆಯದೇ? ಸಲಹೆ ನೀಡಿ.– ಪಂಕಜ, ಊರು ತಿಳಿಸಿಲ್ಲ. 

ಪಂಕಜ ಅವರೇ  ಮೊದಲನೆಯದಾಗಿ ನೀವು ಯಾವುದೇ ಕಾರಣಕ್ಕೂ ಸಂತಾನಶಕ್ತಿ ಹರಣ ಚಿಕಿತ್ಸೆಗಾಗಿ ಸಿಸೇರಿಯನ್   ಮಾಡಿಸಿಕೊಳ್ಳುವುದು ಬೇಡ.  ಮೊದಲನೆಯದು ಸಹಜ ಹೆರಿಗೆಯಾಗಿದೆ. ಸಿಸೇರಿಯನ್ ಹೆರಿಗೆ ಸುರಕ್ಷಿತ ಅನಿಸಿದರೂ ಅದು ದೊಡ್ಡಶಸ್ತ್ರ ಚಿಕಿತ್ಸೆಯ ವ್ಯಾಪ್ತಿಯಡಿ ಬರುತ್ತದೆ. ಅದರದ್ದೆ ಆದ ಸಾಧಕ ಬಾಧಕಗಳು ಇವೆ. ಮೊದಲ ಹೆರಿಗೆ ನಿಮಗೆ ಸಹಜವಾಗಿ ಆಗಿರುವುದರಿಂದ ಈಬಾರಿಯೂ ಹೆಚ್ಚಿನ ಪಕ್ಷ ಸಹಜ ಹೆರಿಗೆಯೇ ಆಗುವುದು. ನೀವು ಮಗು ಜನನವಾದ ಮೇಲೆ ಮಗುವಿನ ಆರೋಗ್ಯ ಸ್ಥಿತಿ ಹೇಗಿದೆ ಎಂದು ನೋಡಿಕೊಂಡು ನಂತರ ಶಾಶ್ವತ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸಿಕೊಳ್ಳಿ. ಹೆರಿಗೆಯಾದ ತಕ್ಷಣ ‘ಮಿನಿಲ್ಯಾಪ್’ ಅಥವಾ ಕೈಆಪರೇಷನ್ ಎಂದು ಜನಸಾಮಾನ್ಯರು ಹೇಳುವ ಈ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯನ್ನ ಕೇವಲ ಒಂದೆರಡು ಇಂಚು ಮಾತ್ರ ಕೊಯ್ದು, ಆ ರಂಧ್ರದಿಂದ ಗರ್ಭನಾಳಗಳನ್ನ ಒಂದೊಂದಾಗಿ ಕೈಬೆರಳಿಂದ ಹೊರತಂದು ನಿರ್ದಿಷ್ಟ ಜಾಗದಲ್ಲಿ ಒಂದು ಸೆಂ.ಮಿನಷ್ಟು ಕತ್ತರಿಸಿ ಸೂಕ್ತದಾರದಿಂದ ಹೊಲಿಗೆ ಹಾಕಿ ಉದರದೊಳಗೆ ಸೇರಿಸಿ ಹೊಟ್ಟೆಯನ್ನ ಪುನಃ ಹೊಲಿಗೆ ಹಾಕುತ್ತಾರೆ. ಈ ವಿಧಾನವನ್ನು ಹೆರಿಗೆಯಾಗಿ ಒಂದೆರಡು ದಿನಗಳಲ್ಲೇ ಮಾಡಬಹುದು. ಇಲ್ಲವೇ ಮಗುವಿನ ಬೆಳವಣಿಗೆ ನೋಡಿಕೊಂಡು ನಂತರದ ದಿನಗಳಲ್ಲೂ ಮಾಡಿಸಿಕೊಳ್ಳಬಹುದು.

ಕರೆಂಟ್ ಆಪರೇಷನ್ ಎಂದರೆ ಉದರದರ್ಶಕ ಅಥವಾ ಲ್ಯಾಪ್ರೋಸ್ಕೋಪಿಕ್ ಟ್ಯೂಬೆಕ್ಟಮಿ- ಅಂದರೆ ಈ ವಿಧಾನದಲ್ಲಿ ಹೊಟ್ಟೆಯಲ್ಲಿ ಸಣ್ಣರಂಧ್ರವನ್ನು ಮಾಡಿ ಉದರದರ್ಶಕವನ್ನು ತೂರಿಸಿ ಕಾರ್ಬನ್‌ಡೈ ಆಕ್ಸೈಡ್‌ ಅನಿಲದ ಮೂಲಕ ಸ್ಥಳಾವಕಾಶಮಾಡಿಕೊಂಡು ಗರ್ಭನಾಳವನ್ನು ಗುರುತಿಸಿ ಸೂಕ್ತ ಜಾಗದಲ್ಲಿ ಪ್ಲಾಸ್ಟಿಕ್‌ಕ್ಲಿಪ್ ಅಥವಾ ಬ್ಯಾಂಡ್‌ಗಳನ್ನು ಗರ್ಭನಾಳಕ್ಕೆ ಅಳವಡಿಸುತ್ತಾರೆ. ಈ ವಿಧಾನವನ್ನೇ ಜನಸಾಮಾನ್ಯರು ಕರೆಂಟ್ ಆಪರೇಷನ್ ಅನ್ನುತ್ತಾರೆ. ಆದರೆ ಈ ವಿಧಾನವನ್ನು ಹೆರಿಗೆಯಾದ ತಕ್ಷಣ ಮಾಡಲು ಸಾಧ್ಯವಿಲ್ಲ. ಕನಿಷ್ಠ 6ರಿಂದ 8ತಿಂಗಳು ಕಳೆದ ಮೇಲೆ ಮಾಡಲು ಸಾಧ್ಯವಾಗುವುದು. ಈ ಎರಡು ವಿಧಾನದಲ್ಲಿಯೂ ಒಂದೆರಡು ದಿನಗೊಳಗಾಗಿ ಮನೆಗೆ ತೆರಳಬಹುದು. ಉದರದರ್ಶಕದಲ್ಲಿ ಗರ್ಭನಾಳದ ಬ್ಯಾಂಡ್ ತುಂಬಾ ಅಪರೂಪದ ಸಂದರ್ಭದಲ್ಲಿ ಕಳಚಿಬೀಳಬಹುದು. ಶರೀರದ ಉಷ್ಣತೆಗೂ ಲ್ಯಾಪ್ರೋಸ್ಕೋಪ್ಕಿ ಆಪರೇಷನ್‌ಗೂ ಯಾವ ಸಂಬಂಧವೂ ಇಲ್ಲ. ಎರಡೂ ವಿಧಾನಗಳು ಸಂತಾನಶಕ್ತಿ ಹರಣ ಚಿಕಿತ್ಸೆಗೆ ಉತ್ತಮ ವಿಧಾನಗಳೇ. ಲ್ಯಾಪ್ರೋಸ್ಕೋಪ್ಕಿ ವಿಧಾನದಲ್ಲಿ ಬೇಗನೇ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳಬಹುದು 

ADVERTISEMENT

ಮೇಡಂ ನನಗೆ ಮದುವೆಯಾಗಿ 3ವರ್ಷಗಳಾಯಿತು. ನನಗೆ ಆಸ್ತಮಾ ಕಾಯಿಲೆಯಿದ್ದು, ಅದಕ್ಕಾಗಿ ಇನ್‌ಹೇಲರ್‌ಅನ್ನು ವೈದ್ಯರು ಕೊಟ್ಟಿರುತ್ತಾರೆ. ನನಗೆ ಕಳೆದ ವರ್ಷ ಗರ್ಭಧಾರಣೆಯಾಗಿ 2ನೇ ತಿಂಗಳಿಗೆ ಗರ್ಭಪಾತವಾಯಿತು ಮತ್ತೆ ಗರ್ಭನಿಂತರೆ ಹೀಗೆ ಆಗುತ್ತದೆಯೇ? ಇನ್‌ಹೇಲರ್ ತೆಗೆದುಕೊಂಡಿರುವುದರಿಂದ ಹೀಗಾಯಿತೇ? ಮಗುವಿಗೂ ಆಸ್ತಮಾ ಬರಬಹುದೇ?

–ಗಂಗಾ, ಊರು ತಿಳಿಸಿಲ್ಲ.

ಗಂಗಾ, ನಿಮಗೆ ಈ ಮೊದಲು ಆಗಿರುವ ಗರ್ಭಪಾತವು ಖಂಡಿತವಾಗಿಯೂ ನೀವು ತೆಗೆದುಕೊಳ್ಳುತ್ತಿರುವ ಔಷಧಿಯಿಂದ ಆಗಿರಲಿಕ್ಕಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಆಸ್ತಮ ಇದ್ದಾಗ ಇನ್‌ಹೇಲರ್ ಔಷಧಗಳನ್ನು ತೆಗೆದುಕೊಳ್ಳುವುದರಿಂದ ಗರ್ಭಪಾತವಾಗುವ ಸಂಭವವೂ ತುಂಬಾ ಕಡಿಮೆ.   ತಜ್ಞವೈದ್ಯರ ಮೇಲ್ವಿಚಾರಣೆಯಲ್ಲಿ ಔಷಧಗಳನ್ನು ಮುಂದುವರಿಸುತ್ತಾ ಗರ್ಭಧಾರಣೆಯಾದರೂ ಹೆಚ್ಚಿನ ತೊಂದರೆಯಾಗದೇ ಸುರಕ್ಷಿತವಾಗಿ ಈ ಹಂತವನ್ನು ದಾಟಬಹುದು.  ಅಲರ್ಜಿಕ್ ಆಸ್ತಮಾ ಇದ್ದರೆ ನಿಮ್ಮ ಮಗುವಿಗೆ ಅದು ಬರುವ ಸಂಭವ ಹೆಚ್ಚಿದ್ದರೂ ಗರ್ಭಾವಸ್ಥೆಯಲ್ಲಿ ಪೌಷ್ಟಿಕ ಆಹಾರ ಸೇವಿಸುತ್ತಾ ಹೆರಿಗೆಯ ನಂತರವೂ ಮುಂದುವರಿಸಿ. ಜತೆಗೆ ಮಗುವಿಗೆ ದೀರ್ಘಾವಧಿಯವರೆಗೆ ಸ್ತನ್ಯಪಾನ ಮಾಡಿಸಿದರೆ ಮಗುವಿಗೆ ಆಸ್ತಮಾ ಬರುವ ಸಂಭವವೂ ಕಡಿಮೆ ಆಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.