ADVERTISEMENT

PV Web Exclusive | This is Wrong ಎಂದು ಗಟ್ಟಿಯಾಗಿ ಹೇಳಬೇಕಿದೆ

ರಶ್ಮಿ ಕಾಸರಗೋಡು
Published 7 ಸೆಪ್ಟೆಂಬರ್ 2020, 6:07 IST
Last Updated 7 ಸೆಪ್ಟೆಂಬರ್ 2020, 6:07 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನಿನ್ನೆ ಟ್ವಿಟರ್‌ನಲ್ಲಿ #ThisIsWrong ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡ್ ಆಗಿತ್ತು. ‘ಕಿರಿಕ್‌ ಪಾರ್ಟಿ‘ ಚಿತ್ರದ ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಮತ್ತು ಸ್ನೇಹಿತೆ ಮೇಲಿನ ಹಲ್ಲೆ ಪ್ರಕರಣ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲು ಟ್ವೀಟಿಗರು #ThisIsWrong ಹ್ಯಾಷ್‌ಟ್ಯಾಗ್ ಬಳಸಿದ್ದರು. ಒಂದೆಡೆ ಈ ಘಟನೆಯ ವಿಡಿಯೊಗಳು ವೈರಲ್ ಆಗುತ್ತಿದ್ದಂತೆ ಘಟನೆಯ ಸತ್ಯಾಸತ್ಯತೆ 'ಅರಿಯದೆ' ಜನರ ಗಮನ ಸೆಳೆಯುವ ಹಪಾಹಪಿಯಲ್ಲಿರುವ ವಿಡಿಯೊ ತುಣುಕುಗಳು, ಸುದ್ದಿಗಳು ರೋಚಕ ಶೀರ್ಷಿಕೆಯೊಂದಿಗೆ ಹರಿದಾಡಿದವು. ಪರ ವಿರೋಧದ ವಾದಗಳೊಂದಿಗೆ 'ಸಂಸ್ಕೃತಿ'ಯ ಪಾಠವೂ ಕಾಮೆಂಟ್‌, ಟ್ವೀಟ್‌ಗಳಲ್ಲಿತ್ತು. ಇದೆಲ್ಲದರ ನಡುವೆ ಸೆಕ್ಸಿಸ್ಟ್ ಜೋಕ್‌ಗಳಿಗೇನೂ ಬರವಿರಲಿಲ್ಲ.

ಇಂಥ ಘಟನೆಗಳು ವಿವಾದಗಳಿರಲಿ, ವಿಷಯಗಳಿರಲಿ, ಇದರಲ್ಲಿ ಸಿಲುಕಿರುವವರು ಸೆಲಿಬ್ರಿಟಿ ಅಥವಾ ಸಾಮಾನ್ಯ ಮಹಿಳೆಯೇ ಆಗಿರಲಿಟ್ರೋಲ್‌ಗೆ ಆಹಾರವಾಗುವವರು ಮಾತ್ರ ಮಹಿಳೆಯರೇ. ಅದನ್ನೆಲ್ಲಾ ಸೀರಿಯಸ್ಸಾಗಿ ತಗೋಬಾರದು, ಸುಮ್ಮನೆ ತಮಾಷೆಗೆ ಹೇಳಿದ್ದು ಎಂದು ಹ್ಹಹ್ಹಹ್ಹ ಎಂಬ ಇಮೋಜಿಯೊಂದಿಗೆ ಸಮಜಾಯಿಷಿ ನೀಡುತ್ತಾ ಲೈಕು ಗಿಟ್ಟಿಸಿಕೊಳ್ಳುವ, ಲೈಕ್ ಬಯಸುವ ಹಲವಾರು ಫೇಸ್‌ಬುಕ್ ಸ್ಟೇಟಸ್ ಅಥವಾ ವಾಟ್ಸಾಪ್ ಫಾರ್ವರ್ಡ್ ಮೆಸೇಜ್‌ಗಳು ಸೆಕ್ಸಿಸ್ಟ್ ಜೋಕ್‌ಗಳು ಎಂಬುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಅದರಲ್ಲೂ ಬಾಡಿ ಶೇಮಿಂಗ್‌ನದ್ದು(ವ್ಯಕ್ತಿಯ ಅಂಗಾಂಗಳ ಬಗ್ಗೆ, ದೇಹ ರಚನೆಯನ್ನು ಅಣಕಿಸುವುದು) ಮೇಲುಗೈ. ಈ ರೀತಿ ಹೆಣ್ಣಿನ ದೇಹ ರಚನೆ, ಆಕಾರವನ್ನು ಹಾಸ್ಯದ ವಸ್ತುವಾಗಿಸುವುದು ಕೂಲ್ ಎನಿಸಿಕೊಳ್ಳುತ್ತದೆ. ಅದು ಹಾಸ್ಯವೋ ಅಪಹಾಸ್ಯವೋ ಎಂದು ಚಿಂತಿಸುವ ಪುರುಸೋತ್ತು ಯಾರಿಗಿದೆ? ಹೆಣ್ಣಿನ ಬಗ್ಗೆ ತಮಾಷೆ, ಲೇವಡಿ, ಟೀಕೆ ಎಲ್ಲವೂ ಕೂಲ್ ವಿಷಯವೇ ಅಲ್ವಾ?.ಈ ಹಿಂದೆ #MeToo ಅಭಿಯಾನದ ಮೂಲಕ ಹೆಣ್ಮಕ್ಕಳು ಪುರುಷ ದೌರ್ಜನ್ಯದ ವಿರುದ್ಧ ದನಿಯೆತ್ತಿದಾಗಲೂ ಸಂತ್ರಸ್ತೆಯ ಬಾಡಿ ಶೇಮಿಂಗ್ ಮಾಡಿ ಸದ್ದಡಗಿಸುವ ಪ್ರಯತ್ನ ನಡೆದಿದ್ದನ್ನು ಮರೆಯುವಂತಿಲ್ಲ.

ಕಳೆದ ಮೂರು ತಿಂಗಳಿನಿಂದ ಸುದ್ದಿ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಚರ್ಚೆಯಾಗುತ್ತಿರುವ ವಿಷಯ ರಿಯಾ ಚಕ್ರವರ್ತಿ. ಈಕೆ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ!. ಈ ಪ್ರಕರಣದ ತನಿಖೆ ನಡೆಯುತ್ತಿದೆ. ಆಕೆಯ ಮೇಲಿನ ಆರೋಪ ಇನ್ನೂ ಸಾಬೀತಾಗಿಲ್ಲ. ಆದರೆ ಕೆಲವು ಸುದ್ದಿವಾಹಿನಿಗಳು ಈಗಾಗಲೇ ರಿಯಾಳನ್ನು ಅಪರಾಧಿಯಾಗಿ ಘೋಷಿಸಿವೆ. ನ್ಯಾಯಾಲಯ ವಿಚಾರಣೆಗೊಳಿಸುವ ಮುನ್ನವೇ ಸುದ್ದಿವಾಹಿನಿಗಳು ಆಕೆಯ ವಿಚಾರಣೆ ನಡೆಸುತ್ತಿವೆ. ದಿನಕ್ಕೊಂದು ಹೊಸ ಹ್ಯಾಷ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ರಿಯಾ ಸುದ್ದಿ ಟ್ರೆಂಡ್ ಆಗುತ್ತದೆ. ಆಕೆ ಸೆಲೆಬ್ರಿಟಿ ಹೌದು. ಸುಶಾಂತ್ ಸಿಂಗ್‌ನ ಪ್ರೇಯಸಿ ಆಗಿದ್ದಳು ನಿಜ. ಆಕೆಯ ಮೇಲೆ ಆರೋಪವಿದೆ ಒಪ್ಪೋಣ. ಆಕೆಗೂ ಖಾಸಗಿತನ ಎಂಬುದು ಇದೆ. ಆದರೆ ಮಾಧ್ಯಮಗಳ ಚೀರಾಟ, ಟಿಆರ್‌ಪಿ ಮತ್ತು ಬಿಗ್ ಬ್ರೇಕಿಂಗ್ ಹೋರಾಟದ ನಡುವೆ ಇದು ಯಾವುದೂ ಲೆಕ್ಕಕ್ಕಿಲ್ಲದಂತಾಗಿದೆ. ಆಕೆಯನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಛೀಮಾರಿ ಹಾಕುತ್ತಾ ಆಕೆಯ ಬಗ್ಗೆಯೇ ಕ್ಷಣದ ಕ್ಷಣದ ಮಾಹಿತಿ ಬಿತ್ತರಿಸುತ್ತಿರುವುದು ಈಗಲೂ ಮುಂದುವರಿದಿರುವುದು ಖಂಡನೀಯ.

ADVERTISEMENT

ಒಂದು ವೇಳೆ 'ರಿಯಾ' ಬದಲು ಆರೋಪಿ ಗಂಡಸು ಆಗಿದ್ದರೆ ಮಾಧ್ಯಮಗಳು, ಟೀಕಾಕಾರರು ಈ ರೀತಿ ವರ್ತಿಸುತ್ತಿದ್ದರೆ? ಬಿಹಾರದ ಡಿಜಿಪಿ ಗುಪ್ತೇಶ್ವರ್ ಪಾಂಡೆ 'ಬಿಹಾರದ ಮುಖ್ಯಮಂತ್ರಿ ಬಗ್ಗೆ ಮಾತನಾಡಲು ರಿಯಾಗೆ ಯಾವ ಯೋಗ್ಯತೆ ಇದೆ?' ಎಂದು ಕೇಳಿದರು. ರಿಯಾ ಬಗ್ಗೆ ಸುದ್ದಿವಾಹಿನಿಯ ಚರ್ಚೆಯಲ್ಲಿ 'ಅವಳ ಮಾತನ್ನು ಏನು ಕೇಳುವುದು?' ಎಂದು ಸುದ್ದಿ ನಿರೂಪಕರೊಬ್ಬರು ಕೂಗಾಡಿದ್ದರು. ಈ ನಡುವೆಯೇ ರಿಯಾಳನ್ನು ಕೆಟ್ಟದಾಗಿ ಬೈದಿರುವ ಭೋಜ್‌ಪುರಿ ಹಾಡು ಕೂಡಾ ವೈರಲ್ ಆಗಿತ್ತು. ‘ಆಕೆ ರಾಜಕಾರಣಿಯೊಂದಿಗೆ ಸಂಬಂಧ ಹೊಂದಿದ್ದಾಳೆ‘ ಎಂಬ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿ ಸುದ್ದಿಯಾದಾಗ, ಅದು ರಿಯಾ ಅಲ್ಲ ಬೇರೊಬ್ಬ ನಟಿ ಎಂಬುದು ಫ್ಯಾಕ್ಟ್‌ಚೆಕ್‌ನಿಂದ ತಿಳಿದು ಬಂತು. ಸುಶಾಂತ್ ಪ್ರಕರಣದ ಬಗ್ಗೆ ಸಿಬಿಐ ವಿಚಾರಣೆ ನಡೆಸುತ್ತಿದೆ, ಪ್ರಕರಣದಲ್ಲಿ ಅಪರಾಧಿ ಯಾರು ಎಂಬುದು ವಿಚಾರಣೆಯ ನಂತರವೇ ತಿಳಿಯಲಿದೆ. ಆದರೆ ರಿಯಾ ಸಮಾಜದ ಮುಂದೆ ಅತೀ ದೊಡ್ಡ ಅಪರಾಧಿ ಎಂದು ಬಿಂಬಿತವಾಗಿದ್ದಾಳೆ.

ಇಲ್ಲಿ ರಿಯಾ ಒಂದು ಉದಾಹರಣೆ ಅಷ್ಟೇ. ಯಾವುದೇ ಅಪರಾಧ ಪ್ರಕರಣಗಳನ್ನೇ ನೋಡಿ ಅಲ್ಲಿ ಹೆಣ್ಣು ಆರೋಪಿ ಆದರೆ ಆಕೆ ಅಪರಾಧಿ ಎಂಬಂತೆಯೇ ಬಿಂಬಿಸಲಾಗುತ್ತದೆ. ‘ಆಕೆ ಹೆಣ್ಣಾಗಿ ಆ ರೀತಿ ಮಾಡಿದಳು‘. ‘ಆಕೆಯೂ ಒಂದು ಹೆಣ್ಣಾ?‘ ಎಂದು ಸಮಾಜ ಗಾಬರಿ ಬೀಳುತ್ತದೆ. ಅದೇ ಸ್ಥಾನದಲ್ಲಿ ಗಂಡಸು ಇದ್ದರೆ ಅದರ ನಿರೂಪಣೆಯೇ ಬದಲಾಗುತ್ತದೆ. ತಪ್ಪು ಯಾರೇ ಮಾಡಿದರೂ ತಪ್ಪೇ. ತಪ್ಪು ಯಾವುದು? ಒಪ್ಪು ಯಾವುದು? ತೀರ್ಮಾನಿಸಲು ನ್ಯಾಯಾಂಗ ವ್ಯವಸ್ಥೆ ಇದೆ. ಆದರೆ ಹೆಣ್ಣು ತಪ್ಪು ಮಾಡಿದರೆ ಅಥವಾ ತಪ್ಪು ಸಾಬೀತು ಆಗುವವರೆಗೆ ಈ ವಿಷಯಗಳು ಬಹಳ ರೋಚಕತೆಯೊಂದಿಗೆ ಹರಿದಾಡುತ್ತವೆ. ಇನ್ಯಾವುದೇ ವಿಷಯ ಇರಲಿ ಸಿಟ್ಟು ಬಂದರೆ ಹೆಣ್ಣಿನ ಕುಲಕ್ಕೇ ಬೈದು, ಆಕೆಯನ್ನು ವಿವಿಧ ಹೆಸರುಗಳಿಂದ ನಿಂದಿಸಿದರೆ ಮುಗೀತು. ಒಟ್ಟಿನಲ್ಲಿ ಹೆಣ್ಣು ಎಂಬುದು ಎಲ್ಲರಂತೆಯೇ ಇರುವ ಜೀವ ಎಂಬುದನ್ನು ಬಿಟ್ಟು ಆಕೆ ಹೆಣ್ಣಾಗಿರುವುದೇ ಇಲ್ಲಿ ದೊಡ್ಡ ವಿಷಯವಾಗಿ ಬಿಟ್ಟಿರುತ್ತದೆ. ಹಾಗಾಗಿಯೇ ಪುರುಷ ಪ್ರಧಾನ ಸಮಾಜದಲ್ಲಿ ಅದೃಶ್ಯ ಚೌಕಟ್ಟಿನೊಳಗಿರುವ ಬದುಕುವ ಹೆಣ್ಣು ಜೀವಗಳು ಕೂಡಾ ತಪ್ಪು ಕಂಡಾಗ ಪ್ರತಿಕ್ರಿಯಿಸಲು ಹಿಂದೇಟು ಹಾಕುತ್ತಿವೆ. ThisIsWrong ಎಂಬುದು ಬರೀ ಹ್ಯಾಷ್‌ಟ್ಯಾಗ್ ಅಲ್ಲ. ಸಮಾಜದಲ್ಲಿ ತಪ್ಪು ಕಂಡಾಗ 'ಇದು ತಪ್ಪು' ಎಂದು ಹೇಳುವ ದನಿಯಾಗಿ ಬದಲಾಗಬೇಕಿದೆ. ಅದಕ್ಕೆ ಲಿಂಗ ಬೇಧ ಇರಬಾರದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.