‘ನಮ್ಮ ಹುಡುಗನಿಗೆ ಮದ್ವೆ ಮಾಡ್ಬೇಕು. ಆದರೆ ಹುಡ್ಗೀನೇ ಸಿಕ್ತಾ ಇಲ್ಲ. ನಮ್ದೇನೂ ಡಿಮ್ಯಾಂಡ್ ಇಲ್ಲಾರಿ.. ನೋಡ್ಲಿಕ್ಕೆ ಸುಮಾರಾಗಿರೋ, ಡಿಗ್ರಿಯಾದ ಹುಡುಗಿಯಾದ್ರೂ ಸಾಕು. ಬೇಕಿದ್ರೆ ನಾವೇ ಖರ್ಚನ್ನೂ ಹಾಕಿ ಮದ್ವೆ ಮಾಡಿಸ್ಕೋತಿವಿ. ನಿಮ್ಗೆ ಯಾರಾದ್ರೂ ಗೊತ್ತಿದ್ರೆ ಹೇಳಿ..’
ಸಮುದಾಯವೊಂದರ ಸಮಾರಂಭವೊಂದರಲ್ಲಿ ಕಿವಿಗೆ ಬಿದ್ದ ಮಾತುಕತೆ ಇತ್ತೀಚಿನದ್ದೇನಲ್ಲ, ಆದರೆ ಹಲವು ವರ್ಷಗಳ ಹಿಂದಿನ ಈ ಅಪರೂಪದ ಸಂಭಾಷಣೆ ಈಗ ಮಾಮೂಲಾಗಿಬಿಟ್ಟಿದೆ; ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಹಲವು ಸಮುದಾಯಗಳಲ್ಲೂ ಕೇಳಿ ಬರುತ್ತಿದೆ.
ಯೋಗ್ಯ ವರ ಸಿಗದೆ, ಸಿಕ್ಕರೂ ಅವನ ಪೋಷಕರ ವರದಕ್ಷಿಣೆ ಬೇಡಿಕೆ ಪೂರೈಸಲಾಗದೆ ಅವಿವಾಹಿತರಾಗೇ ಉಳಿದ ಹೆಣ್ಣುಮಕ್ಕಳು, ಅವರ ಪಾಲಕರ ನೋವು ದಶಕದ ಹಿಂದಿನವರೆಗೂ ಇತ್ತು. ಈಗ ಅವರ ಸ್ಥಾನದಲ್ಲಿ ಗಂಡುಮಕ್ಕಳು, ಅವರಲ್ಲೂ ಕೃಷಿ ಕಾಯಕದಲ್ಲಿ ಸಂತಸ ಕಾಣುತ್ತಿರುವವರು ನಿಂತಿದ್ದಾರೆ. ಈ ಸಮಸ್ಯೆಗೆ ಬೇರೆ ಹಲವು ಕಾರಣಗಳು ಇದ್ದಿರಬಹುದಾದರೂ ಹುಡುಗಿಯರ ಸಂಖ್ಯೆ ಕಡಿಮೆಯಾಗಿರುವುದೂ ಒಂದು ಪ್ರಮುಖ ಕಾರಣ. ಹಾಗಾದರೆ ಈ ಹೆಣ್ಣುಮಕ್ಕಳೆಲ್ಲ ಎಲ್ಲಿಗೆ ಹೋದರು? ಮೊಬೈಲ್ ಸಿಗ್ನಲ್ ಟವರ್‌ಗಳಿಂದಾಗಿ ಗುಬ್ಬಿಗಳ ಸಂತತಿ ನಶಿಸುತ್ತಿದೆಯಲ್ಲ, ಹಾಗೆಯೇ ಅಣಬೆಗಳಂತೆ ಸಣ್ಣ ಪುಟ್ಟ ಪಟ್ಟಣಗಳಲ್ಲೂ ಎದ್ದಿರುವ ಭ್ರೂಣದ ಲಿಂಗ ಪತ್ತೆ ಕೇಂದ್ರಗಳು ಹೆಣ್ಣುಮಕ್ಕಳ ಸಂಖ್ಯೆ ಕುಸಿಯಲು ಕಾರಣವಾ?
ಗ್ಲೋಬಲ್ ಹೆಲ್ತ್ ಸ್ಟ್ರಾಟಜೀಸ್ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಲಿಂಗಾನುಪಾತ ಮತ್ತು ಹೆಣ್ಣು ಶಿಶು ಮರಣ ಪ್ರಮಾಣದ ಅಂಕಿ– ಅಂಶವೂ ಇದಕ್ಕೆ ಪುಷ್ಟಿ ನೀಡಿದೆ. ಕರ್ನಾಟಕದಲ್ಲಿ 2007ರಲ್ಲಿ ಒಂದು ಸಾವಿರ ಗಂಡುಮಕ್ಕಳಿಗೆ 1004ರಷ್ಟಿದ್ದ ಹೆಣ್ಣುಮಕ್ಕಳ ಸಂಖ್ಯೆ 2016ರಲ್ಲಿ 896ಕ್ಕೆ ಕುಸಿದಿದೆ ಎಂದರೆ ಹೆಣ್ಣು ಭ್ರೂಣ ಹತ್ಯೆ ಎಗ್ಗಿಲ್ಲದಂತೆ ಸಾಗಿದೆ ಎಂಬುದು ಸ್ಪಷ್ಟ. ತಾಯಿಯ ಹೊಟ್ಟೆಯೊಳಗೇ ಹುಟ್ಟುವ ಈ ಲಿಂಗ ತಾರತಮ್ಯ ಅದರಾಚೆ ವಿಸ್ತರಿಸಿರುವುದರ ಹಿಂದಿನ ವಿಷವರ್ತುಲ ಕೊನೆಗೊಳ್ಳುವುದಕ್ಕೊಂದು ನಾಂದಿ ಇರಬೇಕಲ್ಲವೇ? ಅದು ನಿಮ್ಮಿಂದಲೇ ಆರಂಭವಾಗಲಿ.
‘ಹೆಣ್ಣುಮಗು ಹುಟ್ಟಿತೆಂದು ನನ್ನ ಗಂಡ ಮೂರು ತಿಂಗಳುಗಳವರೆಗೂ ನೋಡೋಕೆ ಬಂದಿರಲಿಲ್ಲ’ ಎನ್ನುವ ಬ್ಯಾಂಕ್ ಉದ್ಯೋಗಿ 52ರ ಹರೆಯದ ನೀತಾ ಸುರೇಶ್ ಮಾತಿನಲ್ಲಿ ನೋವಿನ ಬದಲು ಲೇವಡಿಯಿತ್ತು. ‘ಆದರೆ ನನ್ನ ಮಗಳಿಗೆ ಮಗಳು ಅಂದರೆ ನನಗೆ ಮೊಮ್ಮಗಳು ಹುಟ್ಟಿದಾಗ ಅಳಿಯ ಸಹೋದ್ಯೋಗಿಗಳಿಗೆಲ್ಲ ಪಾರ್ಟಿ ಕೊಟ್ಟನಂತೆ’ ಎನ್ನುವಾಗ ಆಕೆಯ ಕಂಗಳಲ್ಲಿ ಕಳೆದುಕೊಂಡ ಸಂಭ್ರಮದ ನೆರಳಿತ್ತು.
ಹೌದು, ಹೆಣ್ಣುಮಗು ಹುಟ್ಟಿದಾಗಲೇ ಸಂಭ್ರಮವೂ ಶುರುವಾಗಲಿ. ಹೆಣ್ಣುಮಗು ಹುಟ್ಟಿದರೆ ಜಿಲೇಬಿ, ಗಂಡು ಮಗು ಹುಟ್ಟಿದಾಗ ಪೇಡಾ ಹಂಚುವ ತಾರತಮ್ಯಕ್ಕೂ ತಿಲಾಂಜಲಿ ನೀಡಿ ಡಬಲ್ ಸ್ವೀಟ್ ಹಂಚುವ ರೂಢಿ ಆರಂಭಿಸಿ. ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಂಚಿಕೊಂಡು, ವಾಟ್ಸ್‌ಆ್ಯಪ್‌ನಲ್ಲಿ ಇಮೋಜಿ ಹರಿದಾಡಿಸಿ ಖುಷಿಪಡಿ.
‘ನಾನು ಚಿಕ್ಕವಳಿದ್ದಾಗ ನನಗೆ ಬಾರ್ಬಿ ಬೊಂಬೆ ಕೊಡಿಸಿದರು. ಆದರೆ ಎರಡೇ ವರ್ಷಕ್ಕೆ ದೊಡ್ಡವನಾದ ನನ್ನ ಅಣ್ಣನಿಗೆ ಕೀ ಕೊಟ್ಟರೆ ಓಡುವ ರೈಲು, ಕ್ರಿಕೆಟ್ ಆಡಲು ಬ್ಯಾಟ್– ಬಾಲ್ ಎಲ್ಲಾ ಬಂದವು. ಶಾಲೆಯಲ್ಲಿ ನನಗೆ ಫುಟ್ಬಾಲ್ ಆಡುವ ಮನಸ್ಸಿದ್ದರೂ ಟೆನ್ನಿಕಾಯ್ಟ್‌ಗೆ ಸೇರಿಕೊ ಎಂದು ಹೇಳುತ್ತಿದ್ದರು’ ಎಂಬ ವಾಟ್ಸ್‌ಆ್ಯಪ್ ಗುಂಪಿನ ಸ್ನೇಹಿತೆ ರೀನಾ ಮಥಾಯ್ ಪೋಸ್ಟಿಂಗ್‌ನಲ್ಲಿ ಆಗ ಅನುಭವಿಸಿದ ನಿರಾಶೆಯನ್ನು ಈಗ ಈಚೆ ಹಾಕುವ ತುರ್ತು ಇದ್ದಿದ್ದಂತೂ ನಿಜ.
ಆಟಿಕೆ, ಉಡುಪಿನಲ್ಲಿ ಲಿಂಗ ಭೇದವನ್ನು ಬಹುಶಃ ಯಾರೂ ಹೇಳಿ ಕೊಡಬೇಕಾಗಿಲ್ಲ. ಅದು ಅಲಿಖಿತ ನಿಯಮವೆಂಬಂತೆ ಬೇರೆನೂ ಯೋಚಿಸದೆ ಜಾರಿಯಾಗಿ ಬಿಡುತ್ತದೆ. ಹೆಣ್ಣುಮಗು ಗುಲಾಬಿ ಫ್ರಾಕ್ ತೊಟ್ಟು, ಅದೇ ರಂಗಿನ ಹೆಣ್ಣು ಬೊಂಬೆಯ ಜೊತೆ ಆಟವಾಡುತ್ತ ಯಾಕೆ ತನ್ನ ಮನಸ್ಸಿನಲ್ಲೂ ಮತ್ತದೇ ಭೇದ– ಭಾವದ ಭಾವನೆಗಳನ್ನು ಹುಟ್ಟಿಸಿಕೊಳ್ಳಬೇಕು? ಗಾಢ ನೀಲಿ ವರ್ಣದ ಪ್ಯಾಂಟ್, ಶಾರ್ಟ್ಸ್ ತೊಡಿಸಿ; ಬ್ಯಾಟ್ ಕೊಟ್ಟು ಕ್ರಿಕೆಟ್ ಆಡಿಸಿ.
ಚಿಕ್ಕಂದಿನಿಂದಲೇ ತಾನು ಖರ್ಚಿನ ಬಾಬ್ತು ಎಂದು ಬಹುತೇಕ ಹೆಣ್ಣು ಮಕ್ಕಳು ಕೇಳಿ ಬೆಳೆದವರೇ. ‘ಎಷ್ಟು ಓದಿದರೂ ಗಂಡನ ಮನೆಯ ಪಾತ್ರೆ ತೊಳೆಯುವ ಕೆಲಸ ಬಿಡಲು ಸಾಧ್ಯವಿಲ್ಲ’ ಎಂದು ಅನ್ನಿಸಿಕೊಂಡವರೇ ಈಗಿನ ಎಕ್ಸ್ ಜನರೇಶನ್‌ನವರು. ಅಂತಹ ಮಾತುಗಳನ್ನು ನಿಮ್ಮ ಮನಸ್ಸೆಂಬ ಲ್ಯಾಪ್‌ಟಾಪ್‌ನಲ್ಲಿ ಡಿಲೀಟ್ ಮಾಡಿಬಿಡಿ. ಹೆಣ್ಣೊಂದು ವಿದ್ಯೆ ಕಲಿತರೆ ತೊಂದರೆ ಏನಿಲ್ಲ ಬಿಡಿ. ಆಕೆ ಸ್ವಾವಲಂಬಿಯಾಗಲು ನೀವು ನೆರವು ನೀಡಿ. ಮದುವೆಯಾದರೂ ಹೆತ್ತವರ ಮೇಲೆ ಕಕ್ಕುಲತೆ, ತನ್ನ ಹೆತ್ತವರ ಮನೆತನದ ಹೆಸರು ಉಳಿಸಿಕೊಂಡೇ ಕೊನೆಗೆ ಗಂಡನ ಹೆಸರನ್ನು ಸೇರಿಸಿಕೊಳ್ಳುವಷ್ಟು ಪ್ರೀತಿ ಆಕೆಗಂತೂ ಇದೆ. ಜೊತೆಗೊಂದು ಸಂತಸದ ಸುದ್ದಿಯೂ ಇದೆ– ಈಗಿನ ತಲೆಮಾರಿನವರು ಮಕ್ಕಳ ಮದುವೆಗಿಂತ ವಿದ್ಯೆಗೆ ಹೆಚ್ಚು ಆದ್ಯತೆ ಕೊಡುತ್ತಾರಂತೆ.
‘ಮಿಸ್ ಫನ್ನಿ ಬೋನ್ಸ್’ ಲೇಖಕಿ, ನಟಿ ಟ್ವಿಂಕಲ್ ಖನ್ನಾ ಹಿಂದೊಮ್ಮೆ ಸಂದರ್ಶನದಲ್ಲಿ ‘ನಾನು ಈಗ ಮನೆಯಿಂದ ಹೊರಟಾಗ ನನ್ನ ಅಡುಗೆಯವಳು ‘‘ರಾತ್ರಿ ಊಟಕ್ಕೆ ಏನು?’’ ಎಂದು ಕೇಳಿದಳು. ಬೆಳಿಗ್ಗೆಯಿಂದ ಮನೆಯಲ್ಲೇ ಇರುವ ನನ್ನ ಪತಿ (ನಟ ಅಕ್ಷಯ್‌ಕುಮಾರ್)ಯ ಬಳಿ ಇದನ್ನು ಕೇಳಬಹುದಿತ್ತಲ್ಲ’ ಎಂದೆ. ಅಂದರೆ ಅಡುಗೆಯ ವಿಷಯ ಬಂದಾಗ ಅದು ಮಹಿಳೆಯರಿಗೆ ಸಂಬಂಧಿಸಿದ್ದು ಅಂತಲಾ?’ ಎಂದು ಪ್ರಶ್ನಿಸಿದ್ದರು.
ಹೆಣ್ಣುಮಗುವನ್ನು ನೀನು ಅಡುಗೆಮನೆಗೆ ಮಾತ್ರ ಸೀಮಿತವಲ್ಲ ಎಂಬ ಭಾವನೆ ಮೂಡಿಸಿ. ಆಕೆಗೆ ಸಹೋದರನಿದ್ದರೆ ಅಡುಗೆ ವಿಷಯ ಅವನಿಗೂ ಸಂಬಂಧಿಸಿದ್ದು ಎಂದು ಮನಸ್ಸಿಗೆ ನಾಟುವಂತೆ ಮಾಡಿ.
ಆಟದ ವಿಷಯದಲ್ಲಿಯೂ ಅಷ್ಟೆ. ಹೆಣ್ಣುಮಕ್ಕಳೆಂದರೆ ಸುರಕ್ಷಿತವಾಗಿ ನೆಲದ ಮೇಲೆ ಆಡುವ ಕುಂಟಬಿಲ್ಲೆ, ಕಣ್ಣಾಮುಚ್ಚಾಲೆ, ಷಟ್ಲ್, ಟೆನಿಸ್, ಥ್ರೋಬಾಲ್ ಮೊದಲಾದ ಆಟಗಳಿಗೆ ಕಳಿಸುವ ಸಂಪ್ರದಾಯ ಬಿಡಿ. ಏಕೆಂದರೆ ಹೆಣ್ಣುಮಗು ಮುಂದೆಯೂ ಅಂದರೆ ಉದ್ಯೋಗ, ಬದುಕಿನಲ್ಲೂ ಯಾವ ರಿಸ್ಕ್ ತೆಗೆದುಕೊಳ್ಳದೇ, ಸವಾಲು ಎದುರಿಸದೇ ಸುರಕ್ಷಿತವಾದದ್ದನ್ನೇ ಆಯ್ಕೆ ಮಾಡಿಕೊಳ್ಳುತ್ತದೆ. ಚಿಕ್ಕಂದಿನಿಂದಲೇ ಬಿದ್ದು ಏಟಾದರೂ ಅಡ್ಡಿಯಿಲ್ಲ, ಕ್ರಿಕೆಟ್, ಫುಟ್ಬಾಲ್, ವಾಲಿಬಾಲ್ ಎಂದು ನೆಗೆಯುವ, ಓಡುವ ಆಟಗಳಿಗೆ ಒಗ್ಗಿಸಿ. ಮುಂದೆ ಯಾವುದಕ್ಕೂ ಹೆದರದೇ, ಧೈರ್ಯವಾಗಿ ಮುನ್ನುಗ್ಗುವ ಛಾತಿ ಬೆಳೆಸಿಕೊಳ್ಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.