ADVERTISEMENT

ಸ್ವಾವಲಂಬನೆಯ ಹಾದಿಯಲ್ಲಿ ಹೆಣ್ಣು...

ಮೇಘನಾ ಸುಧೀಂದ್ರ
Published 26 ಅಕ್ಟೋಬರ್ 2018, 19:33 IST
Last Updated 26 ಅಕ್ಟೋಬರ್ 2018, 19:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಫೀಸಿನಲ್ಲಿ ನಡೆಯುವ ಅಮೆರಿಕ ಕ್ಲೈಂಟಿನ ತಡರಾತ್ರಿಯ ಮೀಟಿಂಗ್‌ಗಳಲ್ಲಿ ಸುಮಾರು ಹೆಣ್ಣುಮಕ್ಕಳ ಸುತ್ತಮುತ್ತ ಸಿಕ್ಕಾಪಟ್ಟೆ ಗದ್ದಲವಿರುತ್ತದೆ. ಬಾಸ್ ಒಮ್ಮೆ ಮ್ಯೂಟ್ ಮಾಡಿಕೊಳ್ಳಿ ಎಂಬ ಎಚ್ಚರಿಕೆ ಕೊಟ್ಟಮೇಲೆ ಸಂಧ್ಯಾ ತಪ್ಪದೇ ಮ್ಯೂಟ್ ಮಾಡುತ್ತಿದ್ದಳು. ‘ಏನಾಯಿತೇ?’ ಎಂದು ಮರುದಿವಸ ಕೇಳಿದಾಗ ‘ಅಯ್ಯೋ, ಅಡುಗೆ ಮಾಡಬೇಕಿತ್ತೇ, ಅದಕ್ಕೆ ಫೋನ್ ಅನ್ನು ಅಲ್ಲೇ ತಗೊಂಡು ಹೋದೆ, ಗಂಡ ಬರೋಹೊತ್ತಿಗೆ ಮಾಡಬೇಕಲ್ಲ, ಈ ಬಾಸ್‌ಗೆ ಅವರ ಮನೆಯಲ್ಲಿ ಹೆಂಡತಿ ಮಾಡಿಹಾಕ್ತಾರೆ, ನಂಗೆಲ್ಲಿ ಮುಗಿಯತ್ತೆ ಕರ್ಮ, ಅದ್ಯಾಕೆ ಲೇಟ್ ನೈಟ್ ಮೀಟಿಂಗ್ ಇಡ್ತಾರೋ’ ಎಂದು ಒಂದೆ ಸಮನೆ ಸಂಧ್ಯಾ ಉಸುರುತ್ತಿದ್ದಳು. ಆಫೀಸಿನ ನಂತರ ಅವಳಿಗೆ ಮಾತ್ರ ಮನೆ ಜವಾಬ್ದಾರಿ ಬಿದ್ದಿರುತ್ತಿತ್ತು. ಗಂಡ ಆರಾಮಾಗಿ ಮನೆಗೆ ಬಂದ ನಂತರ ‘ಹಸಿವು’ ಅಂದಾಕ್ಷಣ ಆಕೆ ತಟ್ಟೆ ತಂದು ಇಡಬೇಕಿತ್ತು. ‘ಈ ಸಂಭ್ರಮಕ್ಕ್ಯಾಕೆ ಕೆಲಸ ಮಾಡಬೇಕು’ ಎಂದು ಆಗಾಗ ಗೊಣಗುತ್ತಿದ್ದಳು. ಸೌಭಾಗ್ಯ ಅದಕ್ಕೆ ತದ್ವಿರುದ್ಧವಾಗಿ ‘ನನ್ನ ಗಂಡ ಇವತ್ತು ಪುಲಾವ್ ಮಾಡಿದ’ ಎಂದು ಲಂಚ್ ಟೈಮಿನಲ್ಲಿ ಎಲ್ಲರಿಗೂ ಹಂಚಿದಳು. ‘ಏನ್ ವಿಶೇಷ, ಗುಡ್ ನ್ಯೂಸಾ?’ ಎಂದು ಸಂಧ್ಯಾ ಚುಡಾಯಿಸಿದಾಗ ‘ಇಲ್ಲ ಕಣೆ ಇವತ್ತು ಅವನದ್ದೇ ಕೆಲಸ, ದಿನ ಬಿಟ್ಟು ದಿನ ಒಬ್ಬೊಬ್ಬರು ಅಡುಗೆ ಮಾಡುತ್ತೇವೆ, ಭಾನುವಾರ ಕಡ್ಡಾಯವಾಗಿ ಆಚೆ ತಿಂತೀವಿ, ಎಲ್ಲಾ ಕೆಲಸವನ್ನು ಹಂಚಿಕೊಂಡು ಮಾಡುತ್ತೇವೆ’ ಎಂದಾಗ ಸಂಧ್ಯಾ ‘ಪುಣ್ಯ’ ಎಂದು ಪಲಾವ್ ತಿನ್ನುತ್ತಾ ಕೂತಳು.

ಇವಿಷ್ಟು ಸಂಭಾಷಣೆಗಳು ಈ ನಡುವೆ ಆಫೀಸಿನಲ್ಲಿ ನಮ್ಮ ಎದುರಲ್ಲಿ ನಡೆಯುತ್ತಲೇ ಇರುತ್ತದೆ. ಗಂಡಿನ ಹಾಗೆಹೆಣ್ಣು ಕೆಲಸಕ್ಕೆ ಮನೆ ಆಚೆ ಬಂದರೂ ಮನೆ ಒಳಗಿನ ಕೆಲಸ ಕಚೇರಿಯ ಕೆಲಸದ ನಂತರ ಅವಳ ಹೆಗಲೇರುತ್ತದೆ.ಒಂದಷ್ಟು ದಿವಸದ ಹಿಂದೆ ಬೊಂಬೆಹಬ್ಬಕ್ಕೆಂದು ಒಬ್ಬರ ಮನೆಗೆ ಹೋದಾಗ ಸಹಜವಾಗಿ ನನ್ನ ಮುಂದೆ ‘ನಮ್ಮಪ್ಪ ಅಮ್ಮ ಚೆನ್ನಾಗಿ ಓದಿಸ್ಬುಟ್ರು, ಏನ್ ಮಾಡೋದು ಈಗ ಇಲ್ಲಿಂದ ವೈಟ್‌ಫೀಲ್ಡ್‌ಗೆ ಹೋಗ್ಲೇಬೇಕು’ ಎಂದು ಅಲವತ್ತುಕೊಳ್ಳುತ್ತಿದ್ದರು. ಆ ಸಮಯದಲ್ಲಿ ಜಾಮೂನು ಸುಟ್ಟು ಕರಕಲಾಯ್ತು. ಹೀಗೆ ಮನೆಕೆಲಸ ಮತ್ತು ಆಫೀಸಿನ ಕೆಲಸವನ್ನು ಸಂಭಾಳಿಸುವ ಸರ್ಕಸ್ಸಿನಲ್ಲಿ ಹೆಣ್ಣು ತನ್ನನ್ನು ತಾನು ಪೂರ್ತಿ ಮರೆತುಬಿಟ್ಟಿರುತ್ತಾಳೆ.

ಆದರೂ ಅವಳೆಲ್ಲಾ ಸುಸ್ತನ್ನು, ದುಃಖವನ್ನು ಮರೆಮಾಡುವ ಪ್ರಯತ್ನ ಈ ಕೆಲಸ ಮತ್ತು ಕೆಲಸದ ವಾತಾವರಣ ಉಂಟುಮಾಡಿರುತ್ತದೆ. ನಮ್ಮ ಮನೆಯ ಹತ್ತಿರ ಒಂದು ಬ್ಯಾಂಕ್ ಇದೆ. ಅಮ್ಮ ಒಮ್ಮೆ ಅವಳ ಕೆಲಸಕ್ಕೆಂದು ಹೋದಾಗ ಎಲ್ಲಾ ಹೆಣ್ಣುಮಕ್ಕಳು ಒಂದೇ ಬಣ್ಣದ ಸೀರೆ ಉಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಯೂನಿಫಾರ್ಮ ಎಂದುಕೊಂಡು ಮಾತಿಗೆಳೆದಾಗ ‘ಇಲ್ಲ ಮೇಡಂ ಸುಮ್ನೆ ಹೀಗೆ, ಎಲ್ಲಾ ಒಂದೇ ಥರ ಸೀರೆ ಆಚೆ ರೋಡಿನ ಸೇಲಿನಲ್ಲಿ ತಗೊಂಡ್ವಿ’ ಅಂದಾಗ ಅಮ್ಮ ಖುಷಿಯಾಗಿ ‘ಏನೇ ಆದ್ರೂ ಮನೇಲಿ ಇವೆಲ್ಲ ಮಾಡಕ್ಕಾಗಲ್ಲ ಕಣೆ, ಏನೋ ತಾರತಮ್ಯ ಆಗ್ಬಿಡತ್ತೆ’ ಅಂತ ಮೆತ್ತಗೆ ಹೇಳುತ್ತಿದ್ದಳು. ಇದು ಬಹಳ ಸತ್ಯವಾದ ಮಾತು. ಮನೆಯಲ್ಲಿ ಒಬ್ಬರಂತೆ ಒಬ್ಬರಿರುವುದಿಲ್ಲ ಮತ್ತು ಹಾಗೆ ಇರುವುದಕ್ಕೂ ಇಚ್ಛೆ ಪಡುವುದಿಲ್ಲ. ಕೆಲಸ ಮಾಡುವ ಜಾಗದಲ್ಲಿ ಒಂದೇ ಥರ ಇರುವುದು ಎನ್ನುವುದು ಒಂದು ಥರದ ಸಮಾನತೆ ತರುತ್ತದೆ. ಈ ಸಮಾನತೆ ಈಗ ಹಣಕಾಸಿನ ವಿಚಾರದಲ್ಲಿಯೂ ಮನೆಯಲ್ಲಿ ಕಾಲಿಟ್ಟಿದೆ. ಆಚೆ ಕಡೆ ಕೆಲಸ ಮಾಡುವ ಹೆಣ್ಣುಮಕ್ಕಳಿಗೆ ಮನೆಯ ಗಂಡಸರು ಕೊಡುವ ಗೌರವ ಬೇರೆಯ ಥರದ್ದೇ ಇರತ್ತೆ. ನೀವು ಮನೆಯಲ್ಲಿ ಕೊಂಚ ಗಮನಿಸಿ, ಮನೆಯನ್ನು ಸಂಭಾಳಿಸಿ ನೋಡಿಕೊಳ್ಳುವವಳ ಗಂಡನಿಗೆ ಯಾವ ಕೆಲಸವೂ ಬರುವುದಿಲ್ಲ, ಅವಳು ಅವನಿಗೆ ಕೆಲಸ ಮಾಡಲು ಬಿಡುವುದಿಲ್ಲ. ಆದರೆ ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳಿರುವ ಮನೆಯಲ್ಲಿ ಗಂಡ, ಹೆಂಡತಿಯ ಸಮಸಮಕ್ಕೂ ಕೆಲಸ ಮಾಡುವ ಅನಿವಾರ್ಯತೆ ಇದೆ. ಈ ವಿಷಯ ಮನೆಯಲ್ಲಿನ ಎಲ್ಲ ಅಸಮಾನತೆಯ ಗೋಡೆಗಳನ್ನು ಒಡೆದು ಹಾಕುತ್ತದೆ.

ADVERTISEMENT

ಕೆಲಸಕ್ಕೆ ಹೋಗುವ ಹೆಣ್ಣುಮಕ್ಕಳು ಸ್ವಾವಲಂಬಿಗಳಾಗಿರುತ್ತಾರೆ. ಬರೀ ದುಡ್ಡು, ಮನೆ ಆ ವಿಚಾರದಲ್ಲಿ ಮಾತ್ರವಲ್ಲ ಅವರು ಯೋಚಿಸುವ, ಅವಲೋಕಿಸುವ ಪರಿಯನ್ನು ಅದು ವಿಶಾಲ ಮಾಡುತ್ತದೆ. ಮನೆಯಲ್ಲಿ ಯಾರೊ ಏನೋ ಅಂದರು ಕಿರಿಕಿರಿ ಮಾಡುವ ವಿಷಯವನ್ನು ಆಫೀಸಿಗೆ ಬಂದ ತಕ್ಷಣ ಮರೆತುಬಿಡುತ್ತಾರೆ. ನೈಸರ್ಗಿಕವಾಗಿ ಬಂದಿರುವ ಮಲ್ಟಿಟಾಸ್ಕಿಂಗ್ ಅವರು ಕೆಲಸ ಮಾಡುವ ವೇಗವನ್ನು ಹೆಚ್ಚಿಸುತ್ತದೆ. ಸುಮಾರು ಕಂಪನಿಗಳಲ್ಲಿ ಈಗಲೂ ಹಣಕಾಸು, ಎಚ್ ಆರ್ ವಿಭಾಗ ಹೆಣ್ಣುಮಕ್ಕಳ ರಾಜ್ಯವೇ. ಮನೆಯಲ್ಲಿ ಆಫೀಸಿನಲ್ಲಿ ನಡೆಯುವ ಕೆಲಸಗಳ ಮಧ್ಯೆ ಒಂದು ಅಚ್ಚುಕಟ್ಟಾದ ಬೌಂಡ್ರಿ ಹಾಕಿಕೊಂಡು ಅಲ್ಲಿಂದ ಇಲ್ಲಿಯವರೆಗೆ ಎಲ್ಲಾ ಕೆಲಸಗಳನ್ನು ಮಾಡುವ ಪರಿ ವಿಶೇಷವೇ. ಹಣಕಾಸಿನ ಸ್ವಾವಲಂಬನೆಯಂತೂ ಅವಳನ್ನು ಯಾವ ಪರಿ ಗಟ್ಟಿ ಮಾಡುತ್ತದೆ ಎಂದರೆ ಅವಳ ನಿಲುವನ್ನು ಅವಳು ದೃಢವಾಗಿ ಹೇಳುವ ಧೈರ್ಯ ಎಲ್ಲಿಯೂ ಕರಗುವುದಿಲ್ಲ. ತನ್ನ ದುಡ್ಡಿನಲ್ಲಿಯೇ ತೆಗೆದುಕೊಂಡ ಮನೆ, ಗಾಡಿ, ಒಡವೆ, ಸೀರೆ ಹಾಗೂ ಮಕ್ಕಳ ಫೀಸಿನ ಜವಾಬ್ದಾರಿ ಅವಳನ್ನು ಮನೆಯ ಎಲ್ಲರೂ ಗೌರವಿಸುವ ಒಂದು ವ್ಯಕ್ತಿಯನ್ನಾಗಿ ಮಾಡುತ್ತದೆ. ಅವಳನ್ನು ಒಬ್ಬರ ಹೆಂಡತಿ, ಮಗಳು, ಸೊಸೆ ಅಥವಾ ತಾಯಿಯಾಗಿ ನೋಡುವ ಬದಲಾಗಿ ಅವಳನ್ನು ಅವಳ ಹೆಸರಿನಿಂದ ವ್ಯಕ್ತಿತ್ವದಿಂದ ಗುರುತಿಸುವ ರೀತಿ ಒಂದು ನಿಜವಾದ ಗೆಲುವು. ಈ ಗೆಲುವುಗಳು ಹೆಣ್ಣನ್ನು ಇನ್ನೂ ಗಟ್ಟಿಯಾಗಿ ಮಾಡುತ್ತದೆ. ಸುಮ್ಮನೆ ಹಬ್ಬ ಹರಿದಿನ ಎಂದು ದಿನ ಪೂರ್ತಿ ಅಡುಗೆಮನೆಯಲ್ಲಿ ನಾಲ್ಕು ಮಾತಿನ ಹೊಗಳಿಕೆಗೆ ಕೂತು ಸುಸ್ತು ಮಾಡಿಕೊಳ್ಳದೆ ಸ್ಮಾರ್ಟಾಗಿ ಏನು ಮಾಡಬೇಕೋ ಅದನ್ನ ಮಾತ್ರ ಮಾಡಿ ಆಪ್ಟಿಮೈಜ್ಡ್‌ ಆಗಿ ಜೀವನ ನಡೆಸುವ ರೀತಿ ಅವಳಿಗೆ ಹೊರಗಿನ ಪ್ರಪಂಚ ಕಲಿಸುತ್ತೆ. ಇದು ಹೊರಗಿನ ಕೆಲಸದ ಸಂಭ್ರಮ. ಇದೇ ಸ್ವಾಭಿಮಾನ ಎಲ್ಲ ಹೆಣ್ಣುಮಕ್ಕಳಿಗೂ ಬರಲಿ ಎಂಬುದೇ ನನ್ನ ಆಶಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.