ADVERTISEMENT

ಕೋವಿಡ್ ಸಂಕಟ ಯುವತಿಯರ ಸದ್ದಿಲ್ಲದ ಹೋರಾಟ

ಸುಧಾ ಹೆಗಡೆ
Published 5 ಮಾರ್ಚ್ 2021, 19:30 IST
Last Updated 5 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌–19 ಪಿಡುಗು ಶುರುವಾದಾಗ 29ರ ಹರೆಯದ ನರ್ಸ್ ಕಿರಣ್ಮಯಿಯ ಬದುಕು ಅಕ್ಷರಶಃ ಮೂರಾಬಟ್ಟೆಯಾಯಿತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಕೆ ಹೆಚ್ಚಾಗಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ರೂಢಿ ಇಟ್ಟುಕೊಂಡಿದ್ದಳು. ಆರನೇ ತರಗತಿ ಓದುತ್ತಿದ್ದ ಮಗಳು ಶಾಲೆಗೆ ಹೋದಾಗ ಆರಾಮವಾಗಿ ನಿದ್ರೆ; ಸಂಜೆ ನಾಲ್ಕು ಗಂಟೆಗೆ ಹಿಂದಿರುಗುತ್ತಿದ್ದ ಮಗಳ ಜೊತೆ ಆಟ, ಹೋಂವರ್ಕ್‌, ನಂತರ ಬರುವ ಪತಿಯ ಜೊತೆ ಮಾತುಕತೆ.. ಒಂದಿಷ್ಟು ಹೊಂದಾಣಿಕೆಗಳ ಜೊತೆ ಜೀವನ ಆರಾಮವಾಗೇ ಸಾಗುತ್ತಿತ್ತು.

ಆದರೆ ಕೊರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಲು ಆರಂಭಿಸಿದಾಗ ಕಿರಣ್ಮಯಿಯನ್ನು ಕೋವಿಡ್‌ ವಾರ್ಡ್‌ಗೆ ವರ್ಗಾಯಿಸಲಾಯಿತು. ಮಗಳಿಗೂ ತನ್ನಿಂದ ಸೋಂಕು ತಗಲಿದರೆ ಎಂಬ ಭಯದಿಂದ ಕೆಲಸ ಬಿಟ್ಟು ಮನೆಯಲ್ಲೇ ಕುಳಿತ ಆಕೆ ಮಗಳ ಜೊತೆ ಆನ್‌ಲೈನ್‌ ತರಗತಿಗೆ ಕೂರಲಾರಂಭಿಸಿದಳು. ಆದರೆ ಒಂದೆರಡು ತಿಂಗಳಲ್ಲೇ ಇನ್ನೊಂದು ಆಘಾತ ಕಾದಿತ್ತು. ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದ ಪತಿ ಕೆಲಸ ಕಳೆದುಕೊಂಡು ಮನೆಯಲ್ಲೇ ಕೂರಬೇಕಾಯಿತು. ಆದಾಯವಿಲ್ಲದ್ದರಿಂದ ಕುಟುಂಬ ಚಿಕ್ಕಮಗಳೂರಿನ ಪುಟ್ಟ ಊರಿನಲ್ಲಿರುವ ಪೋಷಕರ ಮನೆಗೆ ಸ್ಥಳಾಂತರಗೊಂಡಿದೆ. ಇರುವ ಸಣ್ಣ ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ಹೇಗೋ ಬದುಕು ಸಾಗಿಸುತ್ತಿದೆ.

‘ಈ ಕೋವಿಡ್‌ ಪಿಡುಗು ಬರುವುದಕ್ಕಿಂತ ಮುಂಚೆ ಆರ್ಥಿಕವಾಗಿ ಚೆನ್ನಾಗೇ ಇದ್ದೆವು. ಹೂಡಿಕೆಯನ್ನು ಕೂಡ ಮಾಡಿದ್ದೆ. ಆದರೆ ಈಗ ಎಲ್ಲವನ್ನೂ ಕಳೆದುಕೊಂಡು ಬರಿಗೈಯಲ್ಲಿ ಹಿಂದಿರುಗಬೇಕಾಯಿತು’ ಎನ್ನುವುದು ಕಿರಣ್ಮಯಿ ಅಳಲು.

ADVERTISEMENT

ಕೋವಿಡ್‌ ಎಂಬುದು ಯಾರನ್ನೂ, ಯಾವ ಪ್ರದೇಶವನ್ನೂ ಸುಮ್ಮನೆ ಬಿಟ್ಟಿಲ್ಲ. ಆದರೆ ಮಿಲೇನಿಯಲ್‌ ಯುವತಿ (25– 35 ವರ್ಷ ವಯಸ್ಸಿನವರು)ಯರ ಮೇಲೆ ತೀವ್ರತರದ ಪರಿಣಾಮ ಬೀರಿದೆ. ಚಿಕ್ಕ ಮಕ್ಕಳ ಪಾಲನೆ, ಉದ್ಯೋಗ ನಷ್ಟ.. ಇನ್ನಿಲ್ಲದಂತೆ ಕಂಗೆಡಿಸಿದೆ.

ಬದುಕು ಸಂಭಾಳಿಸಲು ಹೋರಾಟ

ಹೌದು, ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಿದೆ. ಕೆಲವೆಡೆ ಕೋವಿಡ್‌ನ ಎರಡನೇ ಅಲೆ ಶುರುವಾದರೂ ಹಲವೆಡೆ ಕೊರೊನಾ ಅಬ್ಬರ ಕಮ್ಮಿಯಾಗಿದೆ. ಆರ್ಥಿಕತೆಯೂ ಚೇತರಿಸಿಕೊಳ್ಳುತ್ತಿದೆ. ಆದರೆ ಸುಮಾರು 10 ತಿಂಗಳಲ್ಲಿ ಇಂತಹ ಯುವತಿಯರು ಅನುಭವಿಸಿದ ನೋವು, ಎದುರಿಸಿದ ಏರಿಳಿತಗಳು ಎಷ್ಟಿವೆಯೆಂದರೆ ಈಗಲೂ ಕೂಡ ಬದುಕನ್ನು ಸಂಭಾಳಿಸಲು ಹೋರಾಟ ನಡೆಸುವಂತಹ ಪರಿಸ್ಥಿತಿ ಇದೆ.

ಶಾಲೆಗಳು ಮುಚ್ಚಿವೆ: ಡೇ ಕೇರ್‌ಗಳು ಕೆಲವು ಕಡೆ ತೆರೆದರೂ ಅಲ್ಲಿ ಮಕ್ಕಳನ್ನು ಬಿಡಲು ಆತಂಕ. ಹೀಗಾಗಿ ಮಕ್ಕಳ ಪೋಷಣೆಯ ಹೊಣೆ ತಾಯಂದಿರ ಹೆಗಲಿಗೆ ಪೂರ್ಣ ಪ್ರಮಾಣದಲ್ಲಿ ಬಿದ್ದಿದೆ. ವೈರಸ್‌ ಸೋಂಕು ಶುರುವಾಗುವುದಕ್ಕಿಂತ ಮೊದಲೂ ಕೂಡ ಮಕ್ಕಳ ಪಾಲನೆ– ಪೋಷಣೆ, ಮನೆಗೆಲಸದ ಜವಾಬ್ದಾರಿ ಮಹಿಳೆಯರದ್ದೇ ಆಗಿತ್ತು. ಆದರೆ ಇಂತಹ ಕೆಲಸಗಳಿಗಾಗಿ ಈಗ ಹೆಚ್ಚಿನ ಸಮಯ ಮೀಸಲಿಡಬೇಕಾದ ಅನಿವಾರ್ಯತೆ ಇದೆ.

ಉದ್ಯೋಗಸ್ಥ ತಾಯಂದಿರ ಮೇಲೆ ಈ ಪಿಡುಗು ತೀವ್ರ ಪರಿಣಾಮ ಬೀರಿದೆ. ಕಳೆದ ಒಂದು ವರ್ಷದಲ್ಲಿ ದೇಶದಲ್ಲಿ ಉದ್ಯೋಗ ತ್ಯಜಿಸಿದ ಇಂಥವರ ಸಂಖ್ಯೆ 20 ಲಕ್ಷವನ್ನೂ ದಾಟಿದೆ ಎನ್ನುತ್ತದೆ ಸಮೀಕ್ಷೆ. ಸಾಮಾನ್ಯವಾಗಿ 40 ವರ್ಷವೆಂದರೆ ಉದ್ಯೋಗದಲ್ಲಿ ಬಡ್ತಿ, ಉನ್ನತ ಸ್ಥಾನಮಾನ, ಹೆಚ್ಚಿನ ವೇತನ ಎಲ್ಲವನ್ನೂ ಪಡೆಯುವ ವಯಸ್ಸು. ಅಂತಹ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳನ್ನು ಬಿಟ್ಟರೆ ಉದ್ಯೋಗವನ್ನು ತ್ಯಜಿಸುವ ನಿರ್ಧಾರ ಮಾಡುವವರು ಕಡಿಮೆ. ಆದರೆ ಈ ಪಿಡುಗು ಎನ್ನುವುದು ಮಿಲೇನಿಯಲ್‌ ತಾಯಂದಿರನ್ನು ಎಂತಹ ಪರಿಸ್ಥಿತಿಗೆ ದೂಡಿದೆಯೆಂದರೆ ಉದ್ಯೋಗ ಕ್ಷೇತ್ರದಲ್ಲಿ ಯುವತಿಯರ ಪಾಲ್ಗೊಳ್ಳುವಿಕೆಯ ಪ್ರಮಾಣ ಕೆಲವು ದಶಕಗಳಷ್ಟು ಹಿಂದಿನ ಮಟ್ಟಕ್ಕೆ ಕುಸಿದಿದೆ ಎಂದು ವಿಶ್ವಸಂಸ್ಥೆಯ ವರದಿ ಕೂಡ ಹೇಳಿದೆ.

ಹೊಂದಾಣಿಕೆ

ಹಾಗಂತ ಎಲ್ಲಾ ಯುವತಿಯರೂ ಪರಿಸ್ಥಿತಿಯ ಬಗ್ಗೆ ಆತಂಕಪಡುತ್ತ ಕೂತಿಲ್ಲ. ತಮ್ಮ ಕುಟುಂಬವನ್ನು ಸಂಭಾಳಿಸಲು ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು ಬದುಕನ್ನು ಹಳಿಗೆ ತರಲು ಹೋರಾಡುತ್ತಿದ್ದಾರೆ.

ನೀತಾ ಸಾಗರ್‌ ಅಂಥವರಲ್ಲೊಬ್ಬರು. ಇಬ್ಬರು ಪುಟ್ಟ ಮಕ್ಕಳಿರುವ ಆಕೆ ಉದ್ಯೋಗದ ಮೂಲಕ ಅಸ್ಮಿತೆಯನ್ನು ಕಂಡುಕೊಳ್ಳಲು ಟಿವಿ ಚಾನೆಲ್‌ ಒಂದರಲ್ಲಿ ತಾತ್ಕಾಲಿಕವಾಗಿ ಕೆಲಸ ಮಾಡುತ್ತಿದ್ದರು. ಕೋವಿಡ್‌ ಶುರುವಾದ ನಂತರ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಉದ್ಯೋಗ ತ್ಯಜಿಸಿದರೂ, ಯೂಟ್ಯೂಬ್‌ ಚಾನೆಲ್‌ನಲ್ಲಿ ಅಡುಗೆ, ಕಸೂತಿಯ ವಿಡಿಯೊ ಮಾಡಿ ಸಾಕಷ್ಟು ಸಂಪಾದಿಸುತ್ತಿದ್ದಾರೆ. ಪತಿಯೂ ಕೆಲಸದಲ್ಲಿರುವುದರಿಂದ ಅಷ್ಟೊಂದು ಸಮಸ್ಯೆಯಾಗಿಲ್ಲ ಎನ್ನುವ ನೀತಾ, ಕುಟುಂಬದ ನಿರ್ವಹಣೆ ವೆಚ್ಚವನ್ನು ಕಡಿಮೆ ಮಾಡಿರುವುದಾಗಿ ಒಪ್ಪಿಕೊಳ್ಳುತ್ತಾರೆ.

ಆದರೆ ಬಹುತೇಕ ತಾಯಂದಿರು ಮಾನಸಿಕ ಒತ್ತಡ ಅನುಭವಿಸಿದ್ದಂತೂ ನಿಜ. ಕೆಲಸ ಕಳೆದುಕೊಂಡ ಅಥವಾ ಕಳೆದುಕೊಳ್ಳುವ ಭೀತಿ, ಮಕ್ಕಳ ಪಾಲನೆಯ ಜೊತೆ ಅವರ ಸುರಕ್ಷತೆಯ ಆತಂಕ, ಪೋಷಕರಿದ್ದರೆ ಅವರ ಆರೋಗ್ಯದ ನಿರ್ವಹಣೆಯ ಹೊಣೆ... ಇವೆಲ್ಲವೂ ಕಂಗಡಿಸಿಬಿಟ್ಟಿವೆ.

ಕೋವಿಡ್‌ ಶುರುವಾಗುವುದಕ್ಕಿಂತ ಮೊದಲೂ ಎಷ್ಟೋ ಮಂದಿ ತಾಯಂದಿರು ಮಕ್ಕಳ ಸಲುವಾಗಿ ಉದ್ಯೋಗ ಬಿಟ್ಟು ಮನೆಯಲ್ಲೇ ಇರುವುದು ಸಾಮಾನ್ಯ ಎಂಬಂತಾಗಿತ್ತು. ‘ಮಗಳು ಹುಟ್ಟಿದ ಮೇಲೆ ಎರಡು ವರ್ಷ ಬ್ರೇಕ್‌ ತಗೊಂಡೆ. ಪುನಃ ಒಂದೆರಡು ವರ್ಷ ಕೆಲಸ ಮಾಡಿದೆ. ನಂತರ ಅನಾಥ ಗಂಡು ಮಗುವನ್ನು ದತ್ತು ತಗೊಂಡೆ. ಅವನು ಬಹಳ ತುಂಟ. ಹೀಗಾಗಿ ನಾಲ್ಕೈದು ವರ್ಷಗಳಿಂದ ಎಲ್ಲೂ ಕೆಲಸ ಮಾಡುತ್ತಿಲ್ಲ’ ಎನ್ನುವ ಇಂಗ್ಲಿಷ್‌ ದೈನಿಕವೊಂದರಲ್ಲಿ ಉಪ ಸಂಪಾದಕಿಯಾಗಿದ್ದ ಜಯಾ, ‘ಮಕ್ಕಳನ್ನು ಶಾಲೆಗೆ, ಷಾಪಿಂಗ್‌ಗೆ, ಪಾರ್ಕ್‌ಗೆ, ಪ್ರವಾಸಕ್ಕೆಂದು ಕರೆದೊಯ್ಯುವುದರಲ್ಲಿ ಖುಷಿಯಿತ್ತು. ಅವರ ಬಗ್ಗೆ ಕನಸು ಕಾಣುವುದರಲ್ಲೂ ಸುಖವಿತ್ತು. ಆದರೆ ಈಗ ಭಯವಾಗುತ್ತಿದೆ. ಮಕ್ಕಳ ಸುರಕ್ಷತೆ, ಅವರ ಭವಿಷ್ಯದ ಬಗ್ಗೆ ಯೋಚಿಸಿದರೆ ತಲೆ ಕೆಟ್ಟು ಹೋಗಬಹುದು’ ಎನ್ನುತ್ತಾರೆ.

ಮಾನಸಿಕ ಒತ್ತಡ

ತಮ್ಮ ಪರಿಸ್ಥಿತಿ ಬಗ್ಗೆ ಮಾತನಾಡಿದವರಲ್ಲಿ ಹೆಚ್ಚಿನವರು ನಾಳೆಗಳ ಬಗ್ಗೆ ಆಶಾಭಾವನೆ ಇಟ್ಟುಕೊಂಡವರು. ಈ ಪರಿಸ್ಥಿತಿ ತಾತ್ಕಾಲಿಕ. ಕುಟುಂಬದವರು, ಸಂಬಂಧಿಕರ ಬೆಂಬಲದಿಂದ ಹೇಗೋ ಜಯಿಸಿ ಮೊದಲಿನ ಬದುಕಿಗೆ ಹಿಂದಿರುಗಬಹುದು ಎಂಬ ಸಕಾರಾತ್ಮಕ ಧೋರಣೆ ಇಟ್ಟುಕೊಂಡವರು. ಮನದೊಳಗೆ ಆತಂಕ, ಒತ್ತಡ ಇದ್ದರೂ ಕೂಡ ಮಕ್ಕಳ ಪಾಲನೆ, ಉದ್ಯೋಗ ನಿರ್ವಹಣೆಯ ವಿಷಯದಲ್ಲಿ ಒಂದಿಷ್ಟು ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬ ಧೋರಣೆ ಅವರದು.

ಸಿಂಗಲ್‌ ತಾಯಂದಿರಲ್ಲಿ ಮಾನಸಿಕ ತೊಳಲಾಟವಿದೆ. ಹಣಕಾಸಿನ ಸಮಸ್ಯೆ ಬಗ್ಗೆ ಚಿಂತೆಯಿದೆ. ಒಳಗೊಳಗೇ ಇದ್ದ ಒತ್ತಡ ದೀರ್ಘಕಾಲದಲ್ಲಿ ಆತಂಕ, ಖಿನ್ನತೆಯಂತಹ ಮಾನಸಿಕ ಸಮಸ್ಯೆಯಾಗಿ ಕಾಡಬಹುದು ಎಂಬ ಆತಂಕ ತಜ್ಞರದ್ದು.

ಕೊನೆಯಲ್ಲೊಂದು ಆಶಾಭಾವನೆ– ಈ ಕೋವಿಡ್‌ ಎಂಬುದು ಬಹಳ ದಿನಗಳ ಕಾಲ ಕಾಡಲಾರದು. ಶೀಘ್ರ ಎಲ್ಲವೂ ಸರಿಹೋಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.