ದೀಪಾವಳಿ ಸಮೀಪಿಸಿದ್ದು, ‘ಧನ ತ್ರಯೋದಶಿ’ ಸಂದರ್ಭದಲ್ಲಿ ಚಿನ್ನದ ಒಡವೆ, ಚಿನ್ನದ ನಾಣ್ಯ ಖರೀದಿಸುವ ಸಂಪ್ರದಾಯ ಹಲವು ಕಡೆಗೆ ಇದೆ. ಕತ್ತಿನ ಹಾರಗಳು ಇತ್ತೀಚೆಗೆ ಟ್ರೆಂಡ್ ಆಗಿದ್ದು, ಯಾವ ವಿನ್ಯಾಸದ ಹಾರ ಖರೀದಿಸಬಹುದು?
***
ಒಡವೆ ಎಂದ ತಕ್ಷಣ ಹೆಣ್ಣುಮಕ್ಕಳ ಮೊಗ ಅರಳುತ್ತದೆ; ಕಣ್ಣುಗಳು ಮಿನುಗುತ್ತವೆ. ಚಿನ್ನಕ್ಕೆ ದರ ಹೆಚ್ಚಾದರೂ ಚಿನ್ನದ ಮೇಲಿನ ಪ್ರೀತಿ, ಒಲವು ಸ್ವಲ್ಪವೂ ಕಡಿಮೆಯಾಗಿಲ್ಲ. ಒಡವೆ ಖರೀದಿಸಿ ಮೈ ತುಂಬಾ ಒಡವೆ ಹಾಕಿಕೊಂಡು ಬೇರೆಯವರಲ್ಲಿ ಅಸೂಯೆ ಮೂಡಿಸಿದರೆ ಅದೇನೋ ಖುಷಿ. ಆ ಕಾರಣಕ್ಕೆ ವರ್ಷಕ್ಕೊಮ್ಮೆಯಾದರೂ ಒಡವೆಗಳನ್ನು ಖರೀದಿ ಮಾಡುತ್ತಲೇ ಇರುತ್ತಾರೆ. ಅಲ್ಲದೇ ಖರೀದಿಸಿದ ಒಡವೆಗಳನ್ನು ಪುನಃ ಪುನಃ ಬದಲಿಸುತ್ತಿರುತ್ತಾರೆ.
ದೀಪಗಳ ಹಬ್ಬ ಸಮೀಪಿಸಿದ್ದು, ಈ ಸಂದರ್ಭದಲ್ಲಿ ಚಿನ್ನ ಖರೀದಿಸುವುದು ಸಂಪ್ರದಾಯ. ಉತ್ತರ ಭಾರತೀಯರು ಮಾತ್ರವಲ್ಲ, ನಮ್ಮಲ್ಲಿಯೂ ಕೂಡ ನರಕ ಚತುರ್ದಶಿ ಹಿಂದಿನ ದಿನ ‘ಧನ ತ್ರಯೋದಶಿ’ (ಧನ್ ತೇರಾಸ್)ಯಂದು ಚಿನ್ನದ ಒಡವೆ, ಚಿನ್ನದ ನಾಣ್ಯ ಖರೀದಿಸುವ ರೂಢಿಯಿದೆ. ಖರೀದಿಸಿದ ಬಂಗಾರವನ್ನು ಮರುದಿನ ಅಮಾವಾಸ್ಯೆ– ಲಕ್ಷ್ಮಿ ಪೂಜೆಯಂದು ಪೂಜಿಸಿ ಧರಿಸುವ ಸಂಪ್ರದಾಯವಿದೆ.
ಸದ್ಯಕ್ಕಂತೂ ಫ್ಯಾಷನ್ ಕ್ಷೇತ್ರದಂತೆ ಆಭರಣ ಕ್ಷೇತ್ರದಲ್ಲೂ ದಿನಕ್ಕೊಂದು ಬಗೆಯ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಈ ಟ್ರೆಂಡ್‌ಗೆ ತಕ್ಕಂತೆ ಆಭರಣಗಳನ್ನು ಖರೀದಿ ಮಾಡುವವರೂ ಇದ್ದಾರೆ. ಇತ್ತೀಚೆಗೆ ಹೆಣ್ಣುಮಕ್ಕಳನ್ನು ಹೆಚ್ಚು ಸೆಳೆಯುತ್ತಿರುವುದು ಅಗಲವಾದ ಹಾಗೂ ಉದ್ದದ ಹಾರಗಳು. ದಪ್ಪವಾಗಿದ್ದು ವಿವಿಧ ವಿನ್ಯಾಸವನ್ನು ಒಳಗೊಂಡಿರುವ ಹಾರಗಳು ಸಾಂಪ್ರದಾಯಿಕ ಹಾಗೂ ಪಾಶ್ಚಾತ್ಯ ಎರಡೂ ಬಗೆಯ ಉಡುಪಿನೊಂದಿಗೂ ಧರಿಸಲು ಸೂಕ್ತ ಎನ್ನಿಸುತ್ತವೆ. ಆ್ಯಂಟಿಕ್, ಹಳದಿ ಚಿನ್ನ, ವಜ್ರ ಹೀಗೆ ಉದ್ದನೆಯ ಹಾರಗಳು ಟ್ರೆಂಡ್ ಆಗಿವೆ. ಇದು ಕೇವಲ ಸೀರೆ ಮಾತ್ರವಲ್ಲ ಚೂಡಿದಾರ್, ಲೆಹಂಗಾ, ಘಾಗ್ರಾ ಹಾಗೂ ಕುರ್ತಾ ಟಾಪ್‌ನೊಂದಿಗೂ ಹೊಂದುತ್ತದೆ.
ಅಂದ ಹೆಚ್ಚಿಸುತ್ತದೆ..
ಕತ್ತಿಗೆ ದಪ್ಪ ಹಾಗೂ ಉದ್ದನೆಯ ಹಾರವನ್ನು ಧರಿಸುವುದರಿಂದ ನಮ್ಮ ಕತ್ತಿನ ಅಂದವು ಹೆಚ್ಚುತ್ತದೆ. ಇದನ್ನು ಧರಿಸಿದಾಗ ನಮ್ಮ ನೋಟಕ್ಕೆ ಬೇರೊಂದು ಲುಕ್ ಬರುವುದರಲ್ಲಿ ಎರಡು ಮಾತಿಲ್ಲ. ಈ ಹಾರವನ್ನು ಧರಿಸಿದಾಗ ಕತ್ತಿಗೆ ಬೇರೆ ಆಭರಣವನ್ನು ಧರಿಸುವ ಅಗತ್ಯ ಬೀಳುವುದಿಲ್ಲ. ಇದು ಕತ್ತಿನಿಂದ ಎದೆಯ ಕೆಳಗಿನವರೆಗೂ ಇಳಿ ಬೀಳುತ್ತದೆ. ಸೆಲೆಬ್ರೆಟಿಗಳು ಇತ್ತೀಚೆಗೆ ಹಾರದ ಮೇಲೆ ಹೆಚ್ಚು ಒಲವು ತೋರುತ್ತಿದ್ದು ದೇವರ ವಿನ್ಯಾಸದ ಹಾರಕ್ಕೆ ಹೆಚ್ಚು ಬೇಡಿಕೆ ಇದೆ.
ಆ್ಯಂಟಿಕ್‌ಗೆ ಬೇಡಿಕೆ ಹೆಚ್ಚು
ದಪ್ಪನೆಯ ಆ್ಯಂಟಿಕ್ ಹಾರಗಳಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಿದೆ. ಆ್ಯಂಟಿಕ್ ಹಾರ ಧರಿಸಿದಾಗ ಅದೇ ರೀತಿಯದ್ದೇ ಬಳೆ ಹಾಗೂ ಕಿವಿಯೋಲೆಯನ್ನು ಧರಿಸಬಹುದು. ಆ್ಯಂಟಿಕ್‌ನಲ್ಲಿ ದೇವರ ಹಾಗೂ ಹೂವಿನ ಚಿತ್ತಾರವಿರುವ ಹಾರಗಳು ಆಭರಣ ಮಾರುಕಟ್ಟೆಯಲ್ಲಿ ಹೆಚ್ಚು ಖ್ಯಾತಿ ಪಡೆದಿವೆ. ಸಂಗ್ರಹದ ವಿಷಯಕ್ಕೆ ಬಂದರೂ ಕೂಡ ಆ್ಯಂಟಿಕ್ ಹಾರಗಳಲ್ಲೇ ಸಂಗ್ರಹ ಹೆಚ್ಚಿದೆ. ಲಕ್ಷ್ಮೀ, ಗಣೇಶ, ಸರಸ್ವತಿಯಂತಹ ದೇವರ ಚಿತ್ತಾರವಿರುವ ಆ್ಯಂಟಿಕ್ ಹಾರಗಳು ಹೆಣ್ಣುಮಕ್ಕಳ ಕತ್ತಿಗೆ ಭಿನ್ನ ನೋಟ ಸಿಗುವಂತೆ ಮಾಡುತ್ತಿರುವುದು ಸುಳ್ಳಲ್ಲ.
ಹಾರದೊಂದಿಗೆ ಚೋಕರ್
ಉದ್ದನೆಯ ಹಾರ ಧರಿಸಿದಾಗ ಅದೇ ವಿನ್ಯಾಸದ ಕತ್ತನ್ನು ಮಾತ್ರ ಅಲಂಕರಿಸುವಂತಿರುವ ಚೋಕರ್ ಧರಿಸಬಹುದು. ಚೋಕರ್‌ಗಳು ಇಡೀ ಕತ್ತನ್ನು ಅಲಂಕರಿಸುವಂತಿದ್ದು ಸೀರೆ ಅಥವಾ ಘಾಗ್ರಾದಂತಹ ಡ್ರೆಸ್ ತೊಟ್ಟಾಗ ಇದನ್ನು ಹಾರದೊಂದಿಗೆ ಧರಿಸಬಹುದು. ಸೀರೆಗೆ ಈ ಎರಡರ ಕಾಂಬಿನೇಷನ್ ಬಹಳ ಚೆನ್ನಾಗಿ ಹೊಂದಿಕೆಯಾಗುತ್ತದೆ. ಆ್ಯಂಟಿಕ್ ಹಾರ ಧರಿಸಿದಾಗ ಆ್ಯಂಟಿಕ್‌ದೇ ಚೋಕರ್ ಧರಿಸಬೇಕು. ಹಳದಿ ಚಿನ್ನದೊಂದಿಗೆ ಆ್ಯಂಟಿಕ್ ಅನ್ನು ಸೇರಿಸಿ ಧರಿಸುವುದು ಸೂಕ್ತವಲ್ಲ.
ಸೀರೆಗೆ ಬೆಸ್ಟ್ ಕಾಂಬಿನೇಷನ್
ರೇಷ್ಮೆ, ಬನಾರಸಿ, ಕಲಂಕರಿ, ಕಾಂಜಿವರಂ, ಬಂದಾನಿ ಹೀಗೆ ಯಾವುದೇ ಸೀರೆಯೊಂದಿಗೂ ಈ ಉದ್ದನೆಯ ಹಾರ ಹೆಚ್ಚು ಹೊಂದುತ್ತದೆ. ಸೀರೆಯೊಂದಿಗೆ ಇದನ್ನು ಧರಿಸಿದಾಗ ಅಂದಕ್ಕೆ ಹೊಸ ಆಯಾಮ ಬರುವುದರಲ್ಲಿ ಎರಡು ಮಾತಿಲ್ಲ. ಸೀರೆಯ ಅಂದವೂ ಇದರೊಂದಿಗೆ ಇಮ್ಮಡಿಗೊಳುತ್ತದೆ.
ಚೂಡಿದಾರ್, ಘಾಗ್ರಾ ಲೆಹೆಂಗಾಕ್ಕೂ ಕಾಂಬಿನೇಷನ್
ದಪ್ಪ, ಉದ್ದನೆಯ ಹಾರವನ್ನು ಲೆಹೆಂಗಾ, ಚೂಡಿದಾರ್, ಕುರ್ತಾ ಟಾಪ್‌ನೊಂದಿಗೂ ಧರಿಸಬಹುದು. ಅದನ್ನು ಸರಳ ಉಡುಪಿನೊಂದಿಗೆ ಧರಿಸಿದಾಗ ಅದ್ಧೂರಿ ನೋಟ ಸಿಗುವಂತೆ ಮಾಡುತ್ತದೆ. ಸರಳವಾಗಿ ಉದ್ದನೆಯ ಹಾರ ಧರಿಸುವುದರಿಂದ ಸಾಂಪ್ರದಾಯಿಕ ನೋಟವು ಸಿಗುತ್ತದೆ.
ಹಾರದೊಂದಿಗೆ ಪೆಂಡೆಂಟ್
ದಪ್ಪನೆಯ ಹಾರದೊಂದಿಗೆ ಅದೇ ವಿನ್ಯಾಸ ಪೆಂಡೆಂಟ್ ಇದ್ದರೆ ಇನ್ನೂ ಚೆನ್ನಾಗಿರುತ್ತದೆ. ಇತ್ತೀಚೆಗೆ ಪೆಂಡೆಂಟ್ ಇಲ್ಲದ ಉದ್ದನೆಯ ಹಾರವೂ ಹೆಚ್ಚು ಸದ್ದು ಮಾಡುತ್ತಿದೆ. ಮಲ್ಲಿಗೆ ಚಿಗುರಿನ ವಿನ್ಯಾಸದ ಹಾರ ಹಾಗೂ ಚೋಕರ್ ಈಗ ಹೆಚ್ಚು ಸದ್ದು ಮಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.