ಹುಣಸೂರು: ಹನಗೋಡು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಛಾಯಾ ಸುನಿಲ್ ಅವರು ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕಿ. ವೃತ್ತಿ, ಪ್ರವೃತ್ತಿಯನ್ನು ಸಾಹಸ ಮನೋಭಾವದಿಂದ ಬೆಸೆದುಕೊಂಡಿದ್ದಾರೆ.
ನಿತ್ಯ ನಿಸರ್ಗದೊಂದಿಗೆ ಸಖ್ಯ ಬೆಳೆಸಿಕೊಂಡ ಛಾಯಾ, ಪತಿ ಫೋಟೊ ಗ್ರಾಫರ್ ಸುನಿಲ್ ಅವರಿಗೆ ಸಹಾಯಕಿ ಯಾಗಿ, ಆರಂಭದಲ್ಲಿ ಕ್ಯಾಮೆರಾ ಹಿಡಿದು ಮನೆ ಸುತ್ತಲಿನ ಪಕ್ಷಿಗಳ ಚಿತ್ರ ಸೆರೆಹಿಡಿದು ಈಗ ಹವ್ಯಾಸಿ ಛಾಯಾಗ್ರಾಹಕಿಯಾಗಿ ಹೊರ ಹೊಮ್ಮಿದ್ದಾರೆ.
‘ಕಾಡಂಚಿನ ಗ್ರಾಮದಲ್ಲಿ ನಿತ್ಯವೂ ಮಾನವ– ಪ್ರಾಣಿ ಘರ್ಷಣೆಯ ಮಾತು ಕೇಳಿ ವನ್ಯಜೀವಿ ಫೋಟೊಗ್ರಾಫರ್ ಆಗಬೇಕೆಂಬ ಆಸೆ ಚಿಗುರೊಡೆಯಿತು. ಅರಣ್ಯದೊಳಗಿನ ಸಂಚಾರಕ್ಕೂ, ಹೊರಗೆ ನಿಂತು ನೋಡುವುದಕ್ಕೂ ಅಜಗಜಾಂತರ. ಸಾವಿರಾರು ಪ್ರಾಣಿ, ಪಕ್ಷಿಗಳಿಗೆ ಆಶ್ರಯವಾಗಿರುವ ಅಡವಿಯ ಜೀವನ ಶೈಲಿ ಬಗೆದಷ್ಟೂ ಅಂತ್ಯವೇ ಇಲ್ಲದ ಹೊಸ ವಿಷಯ, ವಿಸ್ಮಯವನ್ನು ತನ್ನಲ್ಲಿ ಹುದುಗಿಸಿಕೊಂಡಿದೆ’ ಎನ್ನುತ್ತಾರೆ ಅವರು.
‘ಅರಣ್ಯ ಎಂದಾಕ್ಷಣ ಹುಲಿ, ಆನೆ, ಚಿರತೆ, ಹೀಗೆ ದೊಡ್ಡ ಪ್ರಾಣಿಗಳಿಗಷ್ಟೇ ಅಲ್ಲದೆ, ಅದನ್ನು ಮೀರಿದ ಜೀವಿಗೆ ಆಶ್ರಯ ನೀಡಿದೆ ಎಂದು ತಿಳಿಸುವ ಹೊಣೆಗಾರಿಕೆ ಛಾಯಾಗ್ರಾಹಕರ ಮೇಲಿದೆ. ಕ್ಯಾಮೆರಾ ಹಿಡಿದು ತಾಳ್ಮೆಯಿಂದ ಗಂಟೆಗಟ್ಟಲೆ ಕಾದು ಪಕ್ಷಿ ಚಿತ್ರ ಸೆರೆಹಿಡಿಯಬೇಕಾಗುತ್ತದೆ. ಅದನ್ನೇ ಧೈರ್ಯದಿಂದ ಹವ್ಯಾಸವಾಗಿ ಮೈಗೂಡಿಸಿ ಕೊಂಡಿದ್ದೇನೆ. ಆರಂಭ ದಲ್ಲಿ ಕಾಡಿನಲ್ಲಿ ಪ್ರಾಣಿಗಳ ಆತಂಕವಿತ್ತು. ವನ್ಯಜೀವಿ ಛಾಯಾ ಗ್ರಹಣ ಶಿಬಿರಗಳಲ್ಲಿ ಬೆರೆತು ಅಥವಾ ಒಂಟಿಯಾಗಿ ಫೋಟೊ ತೆಗೆಯುವ ಮನಃಸ್ಥಿತಿ ಹಾಗೂ ಧೈರ್ಯ ಮೈಗೂಡಿಸಿ ಕೊಂಡೆ’ ಎಂದು ವಿವರಿಸಿದರು.
‘ಶಿಕ್ಷಕಿಯಾಗಿರುವುದರಿಂದ ವನ್ಯ ಜೀವಿ ಛಾಯಾಗ್ರಹಣದ ಪ್ರತಿ ಅನುಭವ ವನ್ನು ಮಕ್ಕಳೊಂದಿಗೆ ಹಂಚಿಕೊಂಡು, ಅರಣ್ಯ ಮತ್ತು ವನ್ಯಪ್ರಾಣಿ, ಪಕ್ಷಿಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದ್ದೇನೆ. ಮಕ್ಕಳಲ್ಲಿ ಪಕ್ಷಿ ಸಂಕುಲ ಉಳಿವು, ಗಿಡ ಮರ
ಸಂರಕ್ಷಣೆ, ಭವಿಷ್ಯದ ಪೀಳಿಗೆ ಜಾಗೃತಿಯೊಂದಿಗೆ ಹೊಸ ಲಹರಿ ಹುಟ್ಟು ಹಾಕುವ ಪ್ರಯತ್ನ ನಡೆದಿದೆ’ ಎಂದು ಛಾಯಾ ತಿಳಿಸಿದರು.
ಪಕ್ಷಿಗಳ ಸ್ವರ್ಗ ನಾಗರಹೊಳೆ, ಬಂಡೀಪುರ
‘ನಾಗರಹೊಳೆ, ಬಂಡೀಪುರ, ಕಬಿನಿ ಹಿನ್ನೀರು ಮೈಸೂರು ಪ್ರದೇಶ ಪಕ್ಷಿಗಳಿಗೆ ಆಶ್ರಯವಾಗಿದ್ದರೂ, ಕೇರಳದ ತಟ್ಟಿಕಾಡು ಬರ್ಡ್ಸ್ ಪ್ಯಾರಡೈಸ್, ಮಹಾ ರಾಷ್ಟ್ರದ ಬೀಗ್ ವಾನ್ ಐರೋಪ್ಯ ದೇಶದಿಂದ ವಲಸೆ ಬರುವ ಪಕ್ಷಿಗಳ ಸ್ವರ್ಗ. ಗುಜರಾತ್ ತಡೋಬಾ ಅಂಧೇರಿ ಹುಲಿ ಸಂರಕ್ಷಿತ ಅರಣ್ಯ, ಮೇಘಾಲಯ ಪಕ್ಷಿಗಳ ಸಂತಾನೋತ್ಪತ್ತಿಗೆ ಪೂರಕ ಅರಣ್ಯಗಳು’ ಎಂದು ಛಾಯಾ ಹೇಳಿದರು.
***
ಶ್ರದ್ಧೆ ಇದ್ದರೆ ಸಾಧನೆ ಸಾಧ್ಯ. ಪ್ರತಿ ಕ್ಷೇತ್ರದಲ್ಲೂ ಅಡ್ಡಿಗಳು ಇರುತ್ತವೆ. ಅವುಗಳನ್ನು ಮೀರಿ ಬೆಳೆಯುವ ಪ್ರಯತ್ನ ನಡೆಸಿದಾಗ ಯಶಸ್ಸು ನಮ್ಮೊಂದಿಗೆ ಬರುತ್ತದೆ.
- ಛಾಯಾ ಸುನಿಲ್, ಹವ್ಯಾಸಿ ಛಾಯಾಗ್ರಾಹಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.