ADVERTISEMENT

ಓಹೋ...ಬೊಹೊ ಕೇಶಶೈಲಿ!

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 20:00 IST
Last Updated 6 ಫೆಬ್ರುವರಿ 2019, 20:00 IST
ಸೆವೆಂಟೀಸ್‌ ಸೈಡ್‌ ಬ್ರೈಡ್
ಸೆವೆಂಟೀಸ್‌ ಸೈಡ್‌ ಬ್ರೈಡ್   

ಸಾಂ ಪ್ರದಾಯಿಕ ಮತ್ತು ಅಸಾಂಪ್ರದಾಯಿಕ ಶೈಲಿಗಳೆರಡೂ ಫ್ಯಾಷನ್‌ ಜಗತ್ತಿನ ಮುದ್ದಿನ ಕೂಸುಗಳು. ಇವರೆಡರ ಜುಗಲ್‌ಬಂದಿಗೆ ಸದಾ ತುರುಸಿನ ಸ್ಪರ್ಧೆ. ಉಡುಗೆ ತೊಡುಗೆ ಇರಲಿ, ಜೀವನಶೈಲಿ, ಫ್ಯಾಷನ್‌ ಮತ್ತು ಟ್ರೆಂಡ್‌ ಇರಲಿ ಈ ಎರಡೂ ಆಯಾಮಗಳು ಬೇಡಿಕೆಯಲ್ಲಿರುತ್ತವೆ. ಕೇಶಶೈಲಿಯೂ ಇದಕ್ಕೆ ಹೊರತಾಗಿಲ್ಲ.

ಕಟ್ಟಲೇಬೇಕೇಕೆ? ಕೂದಲು ಹಾರಲಿಬಿಡಿ. ಕಟ್ಟಿದ ಕೂದಲು, ಬಂದಿಯಾದ ಕೈದಿಯಂತೆ. ಚೌಕಟ್ಟಿಲ್ಲದೆ ಸ್ವಚ್ಛಂದವಾಗಿರುವ ಕೂದಲು ನನ್ನ ಸ್ವಾತಂತ್ರ್ಯದ ಪ್ರತೀಕ... ಆಧುನಿಕ ಮನೋಭಾವದ ಹೆಣ್ಣುಮಕ್ಕಳ ಧೋರಣೆ ಇದು.

ಕೆಲವರು ಕಚೇರಿಗೆ ಹೊರಟಿರುತ್ತಾರೆ. ಉಡುಗೆ ತೊಡುಗೆಯಲ್ಲಿ ಪಕ್ಕಾ ಅಪ್‌ಡೇಟ್‌. ತಲೆಕೂದಲು ಮಾತ್ರ ಈಗಷ್ಟೇ ಹಾಸಿಗೆಯಿಂದ ಎದ್ದು, ಬಾಚಣಿಗೆಯ ಮುಖವನ್ನೂ ಕಾಣದಂತೆ ಅಸ್ತವ್ಯಸ್ತ! ಅದ್ಯಾಕೆ ಹಾಗೆ ಎಂದು ಮೂಗು ಮುರಿಯಬೇಡಿ.

ADVERTISEMENT

‌ಈ ಬಗೆಯ ಕೇಶಶೈಲಿಯೇ ‘ಬೊಹೊ ಶೈಲಿ’. ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳ ಅಚ್ಚುಮೆಚ್ಚಿನದ್ದಾಗಿರುವ ಕೇಶಶೈಲಿ ಇದು. ಕೂದಲಿಗೆ ಬಾಚಣಿಗೆ ಸ್ಪರ್ಶ ಮಾಡಿ ಅದೆಷ್ಟು ದಿನಗಳಾದುವಪ್ಪಾ ಎಂದು ಮೇಲ್ನೋಟಕ್ಕೆ ಭಾಸವಾದರೂ ಅದು ಜಾಗತಿಕ ವೇದಿಕೆಗಳಲ್ಲಿಯೂ ಮಿಂಚುತ್ತಿದೆ. ಬಗೆ ಬಗೆಯ ಕೇಶಶೈಲಿಗಳನ್ನು ಇಷ್ಟಪಡುವವರಿಗೆ ಕೂದಲು ಹೆಣೆಯಲು ಹತ್ತಾರು ವಿಧಗಳು ತಿಳಿದಿರುತ್ತವೆ. ಅದೇ ಶೈಲಿಯನ್ನು ಅಸ್ತವ್ಯಸ್ತವಾಗಿ ಅಂದರೆ ಕೂದಲನ್ನು ಶಿಸ್ತಾಗಿ ಹಿಡಿದುಕೊಳ್ಳುವ ಬದಲು ಕೈಗೆ ಸಿಕ್ಕಿದಷ್ಟನ್ನೇ ಹೆಣೆದರೆ ಬೊಹೊ ಆಗುತ್ತದೆ!

ಯಾವುದೇ ಉಡುಗೆ ತೊಡುಗೆಯೊಂದಿಗೆ ಬೊಹೊ ಕೇಶಶೈಲಿ ಹೊಂದುವುದು ವಿಶೇಷ. ಆದರೆ ರೇಷ್ಮೆಯ ಸಾಂಪ್ರದಾಯಿಕ ವಿನ್ಯಾಸದ ಸೀರೆ ಉಟ್ಟಾಗ ಇದು ಸೂಕ್ತ ಎನಿಸುವುದಿಲ್ಲ. ಫ್ಯಾನ್ಸಿ ಸೀರೆಗೆ ಬೊಹೊ ಹೇರ್‌ಸ್ಟೈಲ್‌ ಮಾಡಿಕೊಂಡರೆ ತುಂಬಾ ಚೆನ್ನಾಗಿರುತ್ತದೆ.

ಫಿಶ್‌ಟೇಲ್‌ ಬೊಹೊ
ಬೊಹೊ ಶೈಲಿಯಲ್ಲಿ ಹೆಚ್ಚು ಬಳಕೆಯಲ್ಲಿರುವುದು ಫಿಶ್‌ಟೇಲ್‌ ಬೊಹೊ. ಬಿ ಟೌನ್‌ನ ಸುಂದರಿ ದೀಪಿಕಾ ಪಡುಕೋಣೆ ಹೆಚ್ಚಾಗಿ ಈ ಕೇಶಶೈಲಿಯಲ್ಲಿ ಕಾಣಿಸಿಕೊಳ್ಳುವುದುಂಟು. ಕೂದಲಿಗೆ ಬಣ್ಣ ಹಚ್ಚಿಕೊಂಡ ಮತ್ತು ಸ್ಟ್ರೇಟನಿಂಗ್‌ ಮಾಡಿಸಿಕೊಳ್ಳದ ದಿನಗಳಲ್ಲಿ ದೀಪಿಕಾ ಮೊರೆಹೋಗುವುದು ಫಿಶ್‌ಟೇಲ್‌ ಬೊಹೊ.

ಮುಂಭಾಗದ ಕೂದಲನ್ನು ಅನಾಮತ್ತಾಗಿ ಹಿಂಭಾಗಕ್ಕೆ ಸೇರಿಸಿಕೊಂಡಾಗ ಕೈಗೆ ಸಿಕ್ಕಿದಷ್ಟನ್ನೇ ಮನಬಂದಂತೆ ಎಳೆ ಎಳೆಯಾಗಿ ಹೆಣೆಯುವ ಶೈಲಿಯಿದು. ಕೊನೆಯಲ್ಲಿ ಒಂದೋ, ಎರಡೋ ಇಂಚಿನಷ್ಟು ಕೂದಲು ಬಿಟ್ಟು ರಬ್ಬರ್‌ ಬ್ಯಾಂಡ್‌ ಅಥವಾ ಬೋ ಬಿಗಿದರೆ ಇಡೀ ಜಡೆ ಥೇಟ್‌ ಮೀನಿನಂತೆ ಕಾಣುತ್ತದೆ. ಹೆಣೆಯದೆ ಕೆಳಗೆ ಉಳಿಸಿದ ಭಾಗ ಮೀನಿನ ಬಾಲದಂತೆ!

ರೋಪ್‌ ಆ್ಯಂಡ್‌ ರೊಸೆಟ್ಟಿ
ಅಸ್ತವ್ಯಸ್ತವಾದಕೂದಲಿಗೆ ಹಣೆಯಿಂದ ತಲೆಯ ಹಿಂಭಾಗದವರೆಗೆ ಧರಿಸುವ ಹೇರ್‌ಬ್ಯಾಂಡ್‌ ‘ರೋಪ್‌ ಆ್ಯಂಡ್‌ ರೊಸೆಟ್ಟಿ’. ಈ ಹೇರ್‌ಬ್ಯಾಂಡ್‌ನ್ನು ಸಮಾರಂಭ ಅಥವಾ ಸಂದರ್ಭಕ್ಕೆ ಅನುಗುಣವಾಗಿ ಆಯ್ಕ ಮಾಡಿಕೊಳ್ಳಬಹುದು. ಕೂದಲು ಸಡಿಲವಾಗಿದ್ದಷ್ಟೂ ಈ ಹೇರ್‌ಸ್ಟೈಲ್‌ ಆಕರ್ಷಕವಾಗಿ ಕಾಣುತ್ತದೆ.

ಟೂ–ಟು –ಒನ್‌ ಬ್ರೈಡ್‌
ದೀಪಿಕಾ ಪಡುಕೋಣೆ ‘ರಾಮ್‌ಲೀಲಾ’ ಸಿನಿಮಾದಲ್ಲಿ ತಮ್ಮ ವಿಶಿಷ್ಟ ಕೇಶಶೈಲಿಯಿಂದ ಹೊಸ ಟ್ರೆಂಡ್‌ ಹುಟ್ಟುಹಾಕಿದ್ದರು. ಕೆಲವು ದಶಕಗಳಿಂದ ಈ ಶೈಲಿ ಹಳ್ಳಿಯಲ್ಲೂ ಜನಜನಿತವಾಗಿದ್ದರೂ ದೀಪಿಕಾ ಹಾಕಿದ್ದುದು ಅಸ್ತವ್ಯಸ್ತ ಜಡೆ.

ಮುಂಭಾಗದ ಕೂದಲನ್ನು ಕೈಯಲ್ಲೇ ಪದರು ಪದರಾಗಿ ಜೋಡಿಸಿಕೊಂಡು ನೆತ್ತಿ ಮತ್ತು ಕೆನ್ನೆಯ ಎರಡೂ ಭಾಗದಲ್ಲಿ ಪ್ರತ್ಯೇಕಿಸಿಕೊಂಡು ಪ್ರತ್ಯೇಕವಾಗಿಯೇ ಹೆಣೆದು ಹಿಂಭಾಗದಲ್ಲಿ ಒಟ್ಟಾಗಿ ಜೋಡಿಸಿ ಪಿನ್‌ ಅಥವಾ ಬೋ ಹಾಕಿದರೆ ಟೂ–ಟು–ಒನ್‌ ಜಡೆ ಸಿದ್ಧ. ಕೂದಲ ಬುಡದಲ್ಲಿ ಭದ್ರವಾಗಿ ಪಿನ್‌ ಅಥವಾ ಕ್ಲಿಪ್‌ ಹಾಕದಿದ್ದರೆ ಹೆಣಿಗೆ ಬಿಟ್ಟುಕೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.