ADVERTISEMENT

ಅಳುವನ್ನು ನಿಯಂತ್ರಿಸುವುದು ಹೇಗೆ?

ಸುನೀತಾ ರಾವ್
Published 27 ಜುಲೈ 2019, 9:38 IST
Last Updated 27 ಜುಲೈ 2019, 9:38 IST
   

ನನಗೆ 18 ವರ್ಷ. ಯಾರಾದರೂ ಬೈದರೆ ಬೇಗ ಅಳು ಬರುತ್ತದೆ. ಸುಮ್ಮನೆ ಗದರಿದರೆ ಸಾಕು ಅಳಲು ಶುರುವಿಟ್ಟುಕೊಳ್ಳುತ್ತೇನೆ. ಬೇಗ ದುಃಖವಾಗುತ್ತದೆ. ಇಷ್ಟು ವಯಸ್ಸಾದರೂ ಅಳು ತಡೆಯಲು ಆಗುತ್ತಿಲ್ಲ ಎಂದು ಬೇಸರವಾಗುತ್ತಿದೆ. ಅಳು ನಿಯಂತ್ರಿಸುವುದು ಹೇಗೆ?

ಅಶ್ವಿನಿ, ರಾಯಚೂರು

ನೀವು ತುಂಬಾ ಭಾವಜೀವಿ ಮತ್ತು ಭಾವುಕರಾಗಿರುವುದು ಕೆಟ್ಟದ್ದಲ್ಲ. ಆದರೆ ಅದನ್ನು ಪ್ರಜ್ಞಾಪೂರ್ವಕವಾಗಿ ನಿಭಾಯಿಸುವುದನ್ನು ಕಲಿಯಬೇಕು. ನಿಮಗೆ ಯಾರಿಂದ, ಯಾವಾಗ ಮತ್ತು ಯಾವ ಸಂದರ್ಭದಲ್ಲಿ ನೋವು ಉಂಟಾಗುತ್ತದೆ ಎಂಬುದನ್ನು ಗಮನಿಸಿ. ಆ ಪರಿಸ್ಥಿತಿ ಹಾಗೂ ವ್ಯಕ್ತಿಯನ್ನು ನಿರ್ಲಕ್ಷಿಸಲು ಪ್ರಯತ್ನಿಸಿ. ನಿರಂತರ ಪ್ರಯತ್ನದಿಂದ ಇದನ್ನು ಮಾಡಲು ಸಾಧ್ಯ.
ಅಷ್ಟೇ ಅಲ್ಲದೇ ಭಾವುಕ ವ್ಯಕ್ತಿಗಳ ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಆದರೆ ನೀವು ಯಾವುದೇ ಕಾರಣಕ್ಕೂ ಕುಗ್ಗಬಾರದು. ಜೊತೆಗೆ ಇದು ನಿಮ್ಮಿಂದ ನಿಯಂತ್ರಿಸಲು ಸಾಧ್ಯವಾಗದೇ ಇರುವಂತಹದ್ದು. ಇದನ್ನು ಬೇರೆಯವರು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರಿಗೆ ನೀವು ಇರುವುದೇ ಹೀಗೆ ಎಂಬುದರ ಅರಿವಾಗಬೇಕು. ಅವರಿಗೆ ಅದರ ಬಗ್ಗೆ ತಿಳಿದಿರದೇ ಇದ್ದರೆ ನಿಮ್ಮ ಸ್ಥಿತಿಯನ್ನು ಅವರಿಗೆ ವಿವರಿಸಿ ಹೇಳಿ. ಈಗ ಮಾಡುತ್ತಿರುವುದನ್ನು ನಿಮ್ಮಿಂದ ನಿಲ್ಲಿಸಲು ಸಾಧ್ಯವಾಗುವುದಿಲ್ಲ ಎಂಬುದು ಅರಿವಾದರೆ ಪರಿಸ್ಥಿತಿಯನ್ನು ನಿಭಾಯಿಸಲು ಅವರಿಗೆ ಸುಲಭವಾಗುತ್ತದೆ. ಸಾಮಾನ್ಯ ಜನರಿಗಿಂತ ನಿಮ್ಮಲ್ಲಿ ಭಾವುಕತೆ ಹೆಚ್ಚಿದೆ. ಅದು ಒಮ್ಮೊಮ್ಮೆ ವರವೂ ಆಗಬಹುದು, ಶಾಪವೂ ಆಗಬಹುದು. ಆದರೆ ನೀವು ಇರುವುದೇ ಹೀಗೆ. ಹಾಗಾಗಿ ನೀವು ಇದರೊಂದಿಗೆ ಬದುಕಲೇ ಬೇಕು. ಖುಷಿಯಿಂದ ಜೀವಿಸಿ. ಆಗ ಬೇರೆಯವರು ಖುಷಿಯಿಂದ ಇರುತ್ತಾರೆ.

ADVERTISEMENT

ನನಗೆ 28 ವರ್ಷ. ವಿಪರೀತ ಉಗುರು ಕಡಿಯುವ ಅಭ್ಯಾಸ. ಯಾರೂ ಎಷ್ಟು ಹೇಳಿದರೂ ಉಗುರು ಕಡಿಯುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಎಷ್ಟೋ ಬಾರಿ ಉಗುರು ಕಡಿಯುವುದನ್ನು ನಿಲ್ಲಿಸಬೇಕು ಎಂಬ ಭಾವನೆ ನನ್ನಲ್ಲಿ ಮೂಡಿತ್ತು. ಆದರೆ ಸಾಧ್ಯವಾಲ್ಲ. ಉಗುರು ಕಡಿದು ರಕ್ತ ಸೋರಿದರೂ ನಿಲ್ಲಿಸುವುದಿಲ್ಲ. ಯಾವಾಗಲೋ ಒಮ್ಮೆ ಕಷ್ಟಪಟ್ಟು ಉಗುರು ಕಡಿಯುವುದು ನಿಲ್ಲಿಸಿ ಉಗುರು ಬೆಳೆಸಿರುತ್ತೇನೆ. ಆದರೆ ತಲೆಯಲ್ಲಿ ಚಿಕ್ಕ ಚಿಂತೆ ಹೊಕ್ಕರೂ ತಾನಾಗಿಯೇ ಬೆರಳು ಬಾಯಿಗೆ ಹೋಗುತ್ತದೆ. ವೈದ್ಯರ ಬಳಿ ಹೋಗಿ ಮಾತ್ರೆಗಳನ್ನು ತಿಂದಿದ್ದೇನೆ. ಆದರೂ ಉಗುರು ಕಡಿಯುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ.

ರಮ್ಯಾ, ಬೆಂಗಳೂರು

ಎಲ್ಲ ರೀತಿಯ ಚಟವೂ ಕೆಟ್ಟದ್ದೆ. ಈಗ ನಿಮಗೆ ನೀವು ಉಗುರು ಕಡಿಯುವ ಚಟದ ಬಗ್ಗೆ ತಿಳಿದಿದೆ. ನೀವು ಅದಕ್ಕಾಗಿ ನಿರಂತರ ಪ್ರಯತ್ನ ಮಾಡಬೇಕು. ನಿಮ್ಮನ್ನು ನೀವು ಸದಾ ನೆನಪಿಸುತ್ತಿರಬೇಕು ಮತ್ತು ಯಾವಾಗ ನಿಮ್ಮ ಕೈ ಬೆರಳು ಬಾಯಿಯ ಬಳಿ ಹೋಗುತ್ತದೋ ಆಗ ಥಟ್ಟನೆ ಬೆರಳನ್ನು ಹಿಂತೆಗೆಯಬೇಕು ಮತ್ತು ಗಮನವನ್ನು ಬೇರೆಡೆ ಹರಿಸಬೇಕು. ನಿಮ್ಮನ್ನು ಪ್ರಚೋದಿಸಿ, ಉಗುರು ಕಚ್ಚುವಂತೆ ಮಾಡುವ ಅಂಶ ಯಾವುದು ಎಂಬುದನ್ನು ಗಮನಿಸಿ ಮತ್ತು ಅದನ್ನು ಅಲಕ್ಷ್ಯ ಮಾಡಿ.

ಸಾಧ್ಯವಾದರೆ ಕೈಗೆ ಗ್ಲೌಸ್ ತೊಟ್ಟುಕೊಳ್ಳಿ ಅಥವಾ ಬೆರಳುಗಳಿಗೆ ಟೇಪ್ ಸುತ್ತಿಕೊಳ್ಳಿ. ಅದು ನಿಮಗೆ ಸ್ವಲ್ಟ ಮಟ್ಟಿಗೆ ಸಹಾಯವಾಗುತ್ತದೆ. ನಿಮ್ಮ ಜೊತೆ ಇರುವವರ ಸಹಾಯ ಪಡೆಯಿರಿ. ಅವರ ಬಳಿ ನೀವು ಬಾಯಿಗೆ ಬೆರಳಿಟ್ಟಾಗ ಎಚ್ಚರಿಸಲು ತಿಳಿಸಿ. ನಿಮ್ಮಿಂದ ಮಾತ್ರ ನಿಮಗೆ ಸಹಾಯ ಮಾಡಿಕೊಳ್ಳಲು ಸಾಧ್ಯ. ಹಾಗಾಗಿ ಎಚ್ಚರಿಕೆಯಿಂದ ಇರಿ.

ನನಗೆ 25 ವರ್ಷ. ಯಾರಾದರೂ ಜಗಳವಾಡುವುದನ್ನು ನೋಡಿದರೆ ಕೈ ಕಾಲು ನಡುಗುತ್ತದೆ. ಜೊತೆಗೆ ಮೈ ಬೆವರುತ್ತದೆ. ನನಗೆ ಯಾಕೆ ಹೀಗೆ ಆಗುತ್ತದೆ ಎಂಬುದು ತಿಳಿದಿಲ್ಲ. ನನಗಿರುವ ಸಮಸ್ಯೆ ಏನು?

ಹೆಸರು, ಊರು ಬೇಡ

ನೀವು ತುಂಬಾ ಭದ್ರತೆಯಿಂದ ಬೆಳೆದವರು ಹಾಗೂ ಸೂಕ್ಷ್ಮ ಮನಸ್ಸಿನವರಿರಬೇಕು. ನೀವು ಜಗಳವನ್ನು ನೋಡಿ ಬೆಳೆದಿಲ್ಲದಿರಬಹುದು. ಸೂಕ್ಷ್ಮ ಹಾಗೂ ಉತ್ತಮ ವ್ಯಕ್ತಿತ್ವದ ನೀವು ಜಗಳವಾಡುವವರನ್ನು ಕಂಡಾಗ ಭಯಗೊಳ್ಳುತ್ತೀರಿ. ಆತಂಕ ಹೆಚ್ಚಿದಂತೆ ಅಭದ್ರತೆಯ ಭಾವ ನಿಮ್ಮನ್ನು ಕಾಡಬಹುದು. ಆ ಕಾರಣಕ್ಕಾಗಿ ನೀವು ಈ ರೀತಿಯ ಸಮಸ್ಯೆಯನ್ನು ಎದುರಿಸುತ್ತಿದ್ದೀರಿ. ಜೀವನದಲ್ಲಿ ಬರುವ ಸವಾಲುಗಳನ್ನು ಎದುರಿಸಲು ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಆತ್ಮವಿಶ್ವಾಸ ಹೆಚ್ಚಿ ವ್ಯಕ್ತಿತ್ವದಲ್ಲಿ ಸುಧಾರಣೆಯಾಗಬಹುದು. ಒಳ್ಳೆಯ ಜಿಮ್‌ಗೆ ಸೇರಿ. ಇದರಿಂದ ನಿಮ್ಮಲ್ಲಿ ದೈಹಿಕ ಶಕ್ತಿ ಹೆಚ್ಚುವ ಜೊತೆಗೆ ಮಾನಸಿಕ ಹಾಗೂ ಭಾವನಾತ್ಮಕ ಸಾಮರ್ಥ್ಯ ಹೆಚ್ಚುತ್ತದೆ. ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿ. ಇದರಿಂದ ಆಂತರಿಕ ಶಕ್ತಿ ಹೆಚ್ಚುತ್ತದೆ. ವ್ಯಕ್ತಿತ್ವ ವಿಕಸನದ ಕುರಿತು ತರಬೇತಿ ಪಡೆಯಿರಿ. ಇದರಿಂದ ನಿಮ್ಮಲ್ಲಿ ಬದಲಾವಣೆ ಕಾಣಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.