ADVERTISEMENT

ನಿನ್ನ ನೀ ಮರೆತರೇನು ಸುಖವಿದೇ?

ಡಿ.ಯಶೋದಾ
Published 16 ಆಗಸ್ಟ್ 2019, 19:30 IST
Last Updated 16 ಆಗಸ್ಟ್ 2019, 19:30 IST
   

ಮಹಿಳೆಯ ಸಹಜ ಗುಣ ಇತರರಿಗಾಗಿ ಸಾಕಷ್ಟು ಕೆಲಸ ಮಾಡುವುದು. ಆದರೆ ಕೆಲಸದ ನಡುವೆ ಅಗತ್ಯ ವಿಶ್ರಾಂತಿ ಸಿಗದಿದ್ದರೆ ತೊಂದರೆಯೇ. ಇನ್ನೊಬ್ಬರ ಕಾಳಜಿ ವಹಿಸಬೇಕಾದ ನೀವೇ ನಿಮ್ಮ ದೇಹ ಮತ್ತು ಮನಸ್ಸಿನ ಬಗ್ಗೆ ಗಮನವಹಿಸದೇ ಹೋದರೆ ಇನ್ನಾರು ವಹಿಸುತ್ತಾರೆ?

**

ಆಕೆಗೆ 40ಕ್ಕೇ ಬಿ.ಪಿ., ಶುಗರ್. ಪ್ರತಿದಿನ ಬೆಳಿಗ್ಗೆ, ಸಂಜೆ ತಪ್ಪದೇ ಒಂದು ಗಂಟೆ ಕಾಲ ವಾಕಿಂಗ್ ಮಾಡಬೇಕೆಂದು ಡಾಕ್ಟರ್ ಹೇಳಿದ್ದರೂ ಆಕೆ ಮಾಡುತ್ತಿಲ್ಲ. ಬೆಳಿಗ್ಗೆ ಕೆಲಸ ಜಾಸ್ತಿ. ಅದನ್ನು ಬಿಟ್ಟು ವಾಕಿಂಗ್ ಸಾಧ್ಯವಿಲ್ಲ, ಸಂಜೆ ಸಮಯದಲ್ಲಿ ಗಂಡ ಮಕ್ಕಳ ಕಾಳಜಿ ವಹಿಸಬೇಕು, ಹಾಗಾಗಿ ಸಂಜೆಯೂ ಸಾಧ್ಯವಿಲ್ಲ.

ADVERTISEMENT

ಮತ್ತೆ ನಿಮ್ಮ ಆರೋಗ್ಯ ಹೇಗೆ? ಎಂದರೆ, ಏನು ಮಾಡುವುದು ಗಂಡ- ಮನೆ- ಮಕ್ಕಳು ಅವರ ಜವಾಬ್ದಾರಿ ಮುಖ್ಯ ಅಲ್ಲವೇ? ಎಂಬುದು ಆಕೆಯ ಮರುಪ್ರಶ್ನೆ.

ಗೃಹಿಣಿಯರಿಗೆ ಮನೆ ನಿರ್ವಹಣೆ ಮುಖ್ಯವಾದರೆ, ಉದ್ಯೋಗಸ್ಥ ಮಹಿಳೆಯರಿಗೆ ಮನೆ ನಿರ್ವಹಣೆಯ ಜೊತೆಗೆ ಹೊರಗಿನ ಕೆಲಸವೂ ಜೊತೆಯಾಗುತ್ತದೆ. ಇದರಲ್ಲಿ ತಮ್ಮ ಆರೋಗ್ಯ- ಆರೈಕೆಯ ಬಗ್ಗೆ ಅವರಿಗೆ ಕಾಳಜಿಯೇ ಇಲ್ಲ. ಬಹಳಷ್ಟು ಗೃಹಿಣಿಯರು, ಉದ್ಯೋಗಸ್ಥ ಮಹಿಳೆಯರದ್ದು ಇದೇ ಸಮಸ್ಯೆ. ಆದರೆ ತಮ್ಮನ್ನು ತಾವೇ ಮರೆತರೆ ಹೇಗೆ? ತಮ್ಮದೂ ಒಂದು ದೇಹ, ತಮ್ಮದೂ ಒಂದು ಮನಸ್ಸು, ಈ ದೇಹ ಮತ್ತು ಮನಸ್ಸನ್ನು ಕಡೆಗಣಿಸುವುದು ನ್ಯಾಯವೇ? ಅದರ ಆರೈಕೆ ಮಾಡಿಕೊಳ್ಳುವುದು ತಮ್ಮದೇ ಕರ್ತವ್ಯವಲ್ಲವೇ?

ಸ್ವ-ಆರೈಕೆ

ಸ್ವ ಆರೈಕೆ (ಸೆಲ್ಫ್‌ ಕೇರ್‌) ಎಂದರೆ ನಮ್ಮನ್ನು ನಾವು ಆರೈಕೆ ಮಾಡಿಕೊಳ್ಳುವುದು. ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ನಾವು ತಯಾರಾಗುವುದು. ಗಂಡ ಮಕ್ಕಳು, ಅತ್ತೆ, ಮಾವ ಮನೆಯ ಇನ್ನಿತರ ಸದಸ್ಯರ ಬಗ್ಗೆ ಕಾಳಜಿ ವಹಿಸುವಂತೆ ನಮ್ಮ ಬಗ್ಗೆಯೂ ವಹಿಸುವುದು.

ಆದರೆ ಸ್ವ-ಆರೈಕೆ ಎಂಬುದನ್ನೇ ಕೆಲವರು ತಪ್ಪಾಗಿ ತಿಳಿದಿದ್ದಾರೆ; ತಮ್ಮ ಬಗ್ಗೆ ತಾವು ಯೋಚಿಸುವುದೇ ತಪ್ಪು ಎಂಬುದು ಅವರ ಕಲ್ಪನೆ. ಸಾಮಾನ್ಯವಾಗಿ ಮನೆಯಲ್ಲಿ ಹಿರಿಯರು ಹೇಳುವುದೇ ಗಂಡ-ಮಕ್ಕಳ ಆರೈಕೆ ಮಾಡು ಎಂದು. ಗಂಡ- ಮಕ್ಕಳ ಜೊತೆ ನಿನ್ನ ಆರೈಕೆನೂ ನೀನು ಮಾಡಿಕೊಳ್ಳಬೇಕು ಎಂದು ಹೇಳುವವರು ಕಡಿಮೆಯೇ.

ಕ್ರಮಬದ್ಧ ಆಹಾರ ಬೇಡವೇ?

ಬಹಳಷ್ಟು ಮಹಿಳೆಯರ ಆಹಾರ ಪದಾರ್ಥಗಳ ಇಷ್ಟವೂ ಅವರ ಗಂಡ ಮಕ್ಕಳನ್ನೇ ಅವಲಂಬಿಸಿರುತ್ತದೆ. ಇವತ್ತು ನನ್ನ ಮಗನ ಇಷ್ಟದ ತಿಂಡಿ ಮಾಡಿದ್ದೆ, ಇದು ನನ್ನ ಗಂಡನ ಮೆಚ್ಚಿನ ತಿಂಡಿ, ಮಗಳಿಗೆ ಇದೇ ಆಗಬೇಕು... ಹೀಗೆ. ಅವರ ಇಷ್ಟ ಕೇಳಿದರೆ ಸಿಗುವುದು ಗಂಡಮಕ್ಕಳ ಇಷ್ಟದ ಪಟ್ಟಿ. ಮಕ್ಕಳು ಸಣ್ಣವರಿರುವಾಗ ಅವರು ತಿಂದು ಬಿಟ್ಟಿದ್ದೇ ಪರಮಾನ್ನ, ದೊಡ್ಡವರಾದಾಗ ಅವರ ಮೆಚ್ಚಿನ ತಿಂಡಿಗಳದ್ದೇ ದಿನಚರಿ, ಮುಂದೆ ತಮಗೆ ತೀರಾ ಅಗತ್ಯವಾದದ್ದನ್ನೂ ತಾವು ಮಾಡಿಕೊಳ್ಳಲಾಗದ ಪರಿಸ್ಥಿತಿ. ಕ್ರಮಬದ್ಧ ಆಹಾರ ಎಂಬುದು ಇಲ್ಲವೇ ಇಲ್ಲ.

ಎಲ್ಲವೂ ನನ್ನಿಂದಲೇ

ಎಲ್ಲವೂ ನನ್ನಿಂದಲೇ ಆಗಬೇಕು, ಎಲ್ಲರೂ ನನ್ನನ್ನೇ ಅವಲಂಬಿಸಬೇಕು, ನಾನು ಮನೆಗಾಗಿ ತ್ಯಾಗ ಮಾಡಿರುವುದಾಗಿ ಬೇರೆಯವರು ಹೇಳಬೇಕು, ಅದನ್ನು ಕೇಳಿ ನನ್ನ ಜೀವನ ಪಾವನ ಮಾಡಿಕೊಳ್ಳಬೇಕು... ಎಂಬ ಹುಚ್ಚು ಹಂಬಲ ಕೆಲವರದು. ಒಂದು ಕುಟುಂಬದಲ್ಲಿ ಮಹಿಳೆಯ ಪಾತ್ರ ಮಹತ್ತರವಾದುದ್ದೇ, ಅದನ್ನು ಅಲ್ಲಗಳೆಯಲು ಸಾಧ್ಯವೇ ಇಲ್ಲ. ಮನೆಯಲ್ಲಿ ಇತರರು ನಿಮ್ಮ ಹಾಗೆ ಕೆಲಸ ಮಾಡದಿದ್ದರೂ, ಅವರ ರೀತಿಯ ಕೆಲಸ ಮಾಡಲು ಅವರಿಗೆ ಅವಕಾಶ ಕೊಟ್ಟು, ನಿಮ್ಮ ಕೆಲಸವನ್ನು ಕಡಿಮೆ ಮಾಡಿಕೊಳ್ಳಬಹುದು. ಎಲ್ಲವನ್ನೂ ಮಾಡಿ ನಿತ್ರಾಣರಾಗುವ ಅಗತ್ಯವಿಲ್ಲ.

ನಿಮ್ಮ ಕಾಳಜಿಗೂ ಇದೆ ಕ್ರಮ

ಸರಿಯಾದ ನಿದ್ರೆ: ರಾತ್ರಿ ಸರಿಯಾಗಿ ನಿದ್ರೆಯಾಗದಿದ್ದರೆ ಮರುದಿನ ನಿಮ್ಮಲ್ಲಿ ಲವಲವಿಕೆಯೇ ಇರುವುದಿಲ್ಲ. ನೀವು ಪ್ರಯತ್ನ ಮೀರಿ ಲವಲವಿಕೆಯಿಂದ ಕೆಲಸ ಮಾಡಿದರೂ ನಿಮ್ಮ ಮುಖದಲ್ಲಿ ನಿದ್ರಾಹೀನತೆ ಎದ್ದು ಕಾಣುತ್ತಿರುತ್ತದೆ. ಕೆಲಸದ ಒತ್ತಡದಿಂದಾಗಿ ಸರಿಯಾದ ನಿದ್ರೆ ಆಗದಿದ್ದರೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಖಂಡಿತ.

ಕಸರತ್ತಿಗೂ ಇರಲಿ ಪುರುಸೊತ್ತು: ಮನೆಯ ಕೆಲಸವೇ ಸಾಕಷ್ಟಿರುತ್ತದೆ. ಅದನ್ನು ಮಾಡಿದರೆ ಸಾಕು. ಇನ್ನು ಕಸರತ್ತು, ವ್ಯಾಯಾಮ ಮಾಡಲು ಸಮಯ ಎಲ್ಲಿ? ಎನ್ನುವವರೇ ಜಾಸ್ತಿ.

ದಿನನಿತ್ಯದ ಕೆಲಸಗಳ ನಡುವೆ ಪುರುಸೊತ್ತು ಮಾಡಿಕೊಂಡು ಬೆಳಿಗ್ಗೆ ಮತ್ತು ಸಂಜೆಯ ನಡಿಗೆ, ಸಣ್ಣಪುಟ್ಟ ವ್ಯಾಯಾಮ ಮಾಡುವುದರಿಂದ ಆರೋಗ್ಯದ ಜೊತೆಗೆ ಮನಸ್ಸಿಗೂ ಒಂದು ರೀತಿಯ ಸಂತೋಷ.

ಕಟ್ಟಿಕೊಳ್ಳಿ ಗಟ್ಟಿತನ: ಕೆಲವೊಮ್ಮೆ ಕೆಲವು ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದರೂ, ಮಾಡಲು ಸಮಯವಿಲ್ಲದಿದ್ದರೂ, ಆ ಕೆಲಸ ಇಷ್ಟವಿಲ್ಲದಿದ್ದರೂ, ಅದು ತಮ್ಮ ಪರಿಮಿತಿಗೆ ಬರದಿದ್ದರೂ ಅದಕ್ಕೆ ಇಲ್ಲ ಅನ್ನದೆ ಕಷ್ಟಪಟ್ಟುಕೊಂಡು ಮಾಡುವವರು ಇದ್ದಾರೆ. ಆದರೆ ನಿಮಗೆ ಸಾಧ್ಯವಾಗದಿದ್ದನ್ನು ನಿಮ್ಮ ಸಿದ್ಧಾಂತಕ್ಕೆ ಒಪ್ಪಿಗೆಯಾಗದ್ದನ್ನು ನೀವು ಇಲ್ಲಿ ಮಾಡಲಾಗುವುದಿಲ್ಲ ಎಂದು ಹೇಳುವ ಗಟ್ಟಿತನವನ್ನು ಕಟ್ಟಿಕೊಳ್ಳಬೇಕು.

ಸಮಾನ ಮನಸ್ಕರ ಒಡನಾಟ: ಸಮಾನ ಮನಸ್ಕರ, ಸಮಾನ ವಯಸ್ಕರೊಂದಿಗಿನ ಒಡನಾಟ ನಿಮ್ಮನ್ನು ಪುನರುಜ್ಜೀವನಗೊಳಿಸಬಹುದು. ನಿಮಗೆ ಖುಷಿ ನೀಡುವ ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಕೊಂಡು, ಪರಿಸ್ಥಿತಿಗೆ ತಕ್ಕ ಹಾಗೆ ಆದ್ಯತೆ ಮೇಲೆ ಕೆಲಸ ಮಾಡುವುದು ಉತ್ತಮ.

ನೀವೂ ಚೆನ್ನಾಗಿರಿ, ನಿಮ್ಮವರೂ ಚೆನ್ನಾಗಿರಲಿ: ನಿಮ್ಮ ಆರೈಕೆಯೂ ಮುಖ್ಯ ಎಂಬುದನ್ನು ಮನೆಯವರಿಗೆ ಅರಿವಾಗುವಂತೆ ಮಾಡುವುದು ನಿಮ್ಮ ಸಾಮರ್ಥ್ಯ. ನಿಮ್ಮನ್ನು ನೀವು ಮರೆತರೆ ಏನು ಸುಖವಿದೆ? ನಿಮ್ಮ ತನುವ ತೊರೆದರೆ ಏನು ಹಿತವಿದೆ? ಇತರರ ಆರೈಕೆಯಂತೆ ನಿಮ್ಮ ಆರೈಕೆಯೂ ಮುಖ್ಯ ಎಂದುಕೊಂಡರೆ ನಿಮಗೂ, ನಿಮ್ಮವರಿಗೂ ಕ್ಷೇಮ.

(ಲೇಖಕಿ ಬೆಂಗಳೂರಿನಲ್ಲಿ ಆಪ್ತ ಸಮಾಲೋಚಕಿ)

**

ನಿಮ್ಮೊಂದಿಗೆ ನೀವು ಮಾತನಾಡಿ

ಪ್ರತಿದಿನ ನೀವು ನಿಮಗಾಗಿ ಕೊಂಚ ಸಮಯ ಬಿಡುವು ಮಾಡಿಕೊಂಡು ನಿಮ್ಮ ಬಗ್ಗೆಯೇ ಆಲೋಚಿಸಿ. ನಿಮ್ಮ ಕೆಲಸ, ಆಸೆ, ಕನಸು, ಪ್ರತಿಭೆ, ಸಾಮರ್ಥ್ಯ,ಗುರಿ... ಎಲ್ಲದರ ಬಗ್ಗೆಯೂ ಯೋಚಿಸಿ. ನಿಮ್ಮನ್ನು ನೀವು ಉತ್ತಮಗೊಳಿಸಿಕೊಳ್ಳುವ ಬಗ್ಗೆ ಹಾಗೂ ಮುಖ್ಯವಾಗಿ ನಿಮ್ಮ ಆರೋಗ್ಯ, ಶಾಂತಿ, ನೆಮ್ಮದಿಯ ದಾರಿಯ ಬಗ್ಗೆ ಅರಿತುಕೊಳ್ಳಿ.

ಹೊರಗಿನ ಕೆಲಸಕ್ಕೆ ವಾರದ ರಜೆ, ಅನಾರೋಗ್ಯದ ರಜೆ, ಕಾಲಕಾಲಕ್ಕೆ ಭತ್ಯೆ ಎಲ್ಲವೂ ಇರುತ್ತದೆ. ಆದರೆ ಮನೆಕೆಲಸಕ್ಕೆ ಅವು ಯಾವವೂ ಇರುವುದಿಲ್ಲ. ನಿಮಗೆ ನೀವೇ ರಜೆ ತೆಗೆದುಕೊಳ್ಳಬೇಕು. ಹಾಗೆಂದರೆ ಏನೂ ಕೆಲಸ ಮಾಡದೇ ಇರುವುದು ಎಂದಲ್ಲ. ಕೆಲವೊಂದು ಸಂದರ್ಭದಲ್ಲಿ, ಕೆಲವೊಂದು ದಿನಗಳಲ್ಲಿ ಕೆಲಸ ಮಾಡಲು ಮನಸ್ಸಾಗದಿದ್ದಾಗ, ದೇಹ ಸಹಕರಿಸದಿದ್ದಾಗ ಅಂದು ಆ ಕೆಲಸಕ್ಕೆ ಬ್ರೇಕ್ ನೀಡಿ ವಿಶ್ರಾಂತಿ ತೆಗೆದುಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.