ಸಂತಾನ ನಿಯಂತ್ರಣಕ್ಕೆ ಹತ್ತಾರು ಪದ್ಧತಿಗಳು ಬಂದಿವೆ. ಆದರೆ ಹಲವು ವರ್ಷಗಳಿಂದ ಮಹಿಳೆಯರು ಬಳಸುತ್ತಿರುವ ಸಾಧನವೆಂದರೆ ಐಯುಡಿ (ಇಂಟ್ರಾಯುಟೆರೈನ್ ಡಿವೈಸ್) ಅಥವಾ ಸಾಮಾನ್ಯವಾಗಿ ಕರೆಯಲಾಗುವ ಕಾಪರ್ ಟಿ. ಇಂಗ್ಲಿಷ್‌ನ ‘ಟಿ’ ಆಕಾರದಲ್ಲಿರುವ ಇದನ್ನು ಗರ್ಭಾಶಯದಲ್ಲಿ ತೂರಿಸಿ ಗರ್ಭಧಾರಣೆಯನ್ನು ತಡೆಗಟ್ಟಲಾಗುವುದು. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬ ಕುತೂಹಲ ಹಲವರಲ್ಲಿ ಇರಬಹುದು. ಈ ಸಾಧನ ತಾಮ್ರದ ಅಯಾನ್‌ಗಳನ್ನು ಗರ್ಭಾಶಯದೊಳಗೆ ಬಿಡುಗಡೆ ಮಾಡುವುದು. ಇದರಿಂದ ಪತಿ– ಪತ್ನಿಯ ಮಿಲನದ ಸಂದರ್ಭದಲ್ಲಿ ಬಿಡುಗಡೆಯಾಗುವ ವೀರ್ಯಾಣುಗಳು ಚಲಿಸದಂತಹ, ಗರ್ಭ ಕಟ್ಟದಂತೆ ಮಾಡುವ ವಾತಾವರಣ ಗರ್ಭಾಶಯದೊಳಗೆ ನಿರ್ಮಾಣವಾಗುತ್ತದೆ.
ಇದು ಅತ್ಯಂತ ಪರಿಣಾಮಕಾರಿಯಾದ, ದೀರ್ಘಕಾಲದವರೆಗೆ ಬಳಸಬಹುದಾದಂತಹ ಹಾಗೂ ಬೇಡವೆನಿಸಿದಾಗ ತೆಗೆದುಹಾಕುವಂತಹ ಸಂತಾನ ನಿಯಂತ್ರಣ ಸಾಧನ. 3–10 ವರ್ಷಗಳವರೆಗೆ ಬಳಸಬಹುದಾದಂತಹ ಕಾಪರ್ ಟಿ ಸದ್ಯಕ್ಕೆ ಲಭ್ಯ. ಸಂತಾನ ನಿಯಂತ್ರಣದಲ್ಲಿ ಇದರ ವೈಫಲ್ಯದ ಸರಾಸರಿ ತೆಗೆದುಕೊಂಡರೆ ಅತ್ಯಂತ ಕಡಿಮೆ ಎನ್ನಬಹುದು. ಇದು ನಿರಂತರವಾಗಿ ತಾಮ್ರದ ಅಯಾನ್‌ಗಳನ್ನು ಬಿಡುಗಡೆ ಮಾಡುವುದರಿಂದ ಗರ್ಭ ಕಟ್ಟುವುದನ್ನು ತಡೆಯುತ್ತದೆ. ಇದಲ್ಲದೇ ಅಷ್ಟೊಂದು ದುಬಾರಿಯೂ ಅಲ್ಲ.
ನಿರ್ವಹಣೆ ಸುಲಭ
ಹಾಗೆಯೇ ಪ್ರತಿನಿತ್ಯ ತೆಗೆದುಕೊಳ್ಳಬೇಕಾದ ಹಾರ್ಮೋನ್‌ಭರಿತ ಸಂತಾನ ನಿಯಂತ್ರಣ ಮಾತ್ರೆಗಳಿಗೆ ಹೋಲಿಸಿದರೆ ನಿರ್ವಹಣೆಯೂ ಸುಲಭ. ಯಾವುದೇ ಹಾರ್ಮೋನ್ ಬದಲಾವಣೆಯ ಭಯವೂ ಇದರಲ್ಲಿಲ್ಲ. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಕಾಂಡೋಮ್ ಧರಿಸುವ ಕಿರಿಕಿರಿಯಿಂದಲೂ ಮುಕ್ತಿ ಪಡೆಯಬಹುದು. ಸ್ತನ್ಯಪಾನ ಮಾಡಿಸುವ ತಾಯಂದಿರು, ಅನಿಯಮಿತ ಋತುಸ್ರಾವವಿರುವವರು ಕೂಡ ಇದನ್ನು ಬಳಸಬಹುದು.
ಈ ಕಾಪರ್ ಟಿಯನ್ನು ನುರಿತ ಪ್ರಸೂತಿ ತಜ್ಞರ ನೆರವಿನಿಂದ 10–15 ನಿಮಿಷಗಳಲ್ಲೇ ಹಾಕಿಸಿಕೊಳ್ಳಬಹುದು. ಇದನ್ನು ತೆಗೆದಾಗಲೂ ಅಷ್ಟೆ, ಗರ್ಭಕೋಶವು ಸಾಮಾನ್ಯ ಸ್ಥಿತಿಗೆ ಮರಳುತ್ತದೆ. ಅಂದರೆ ತಾಮ್ರದ ಅಯಾನ್‌ಗಳು ಬಿಡುಗಡೆಯಾಗುವುದು ಸ್ಥಗಿತಗೊಳ್ಳುವುದರಿಂದ ಗರ್ಭ ಧರಿಸ ಬಯಸುವ ಯುವತಿಯರು ಆತಂಕಗೊಳ್ಳಬೇಕಾಗಿಲ್ಲ.
ಸಾಮಾನ್ಯವಾಗಿ ಋತುಸ್ರಾವವಾದ 6–10 ದಿನಗಳೊಳಗೆ ಕಾಪರ್ ಟಿಯನ್ನು ಹಾಕಿಸಿಕೊಳ್ಳಬಹುದು. ಆಗ ಗರ್ಭಕೊರಳು ಮೃದುವಾಗಿರುತ್ತದೆ. ಒಂದು ಮಗುವಾದ ನಂತರ ಸಂತಾನ ನಿಯಂತ್ರಣದ ನಿರ್ಧಾರ ತೆಗೆದುಕೊಂಡ ಯುವತಿಯರು ಹೆರಿಗೆಯಾದ ಮೇಲೆ ಒಂದೂವರೆ ತಿಂಗಳು ಕಾಯುವುದು ಒಳಿತು. ಅಂದರೆ ಲೈಂಗಿಕ ಕ್ರಿಯೆ ಪುನರಾರಂಭಿಸುವುದಕ್ಕೆ ಮುನ್ನ ಇದನ್ನು ಹಾಕಿಸಿಕೊಳ್ಳಬಹುದು.
# ಒಮ್ಮೆ ಕಾಪರ್ ಟಿ ಹಾಕಿಸಿಕೊಂಡ ನಂತರ ಹೆಚ್ಚು ನಿಗಾ ವಹಿಸುವ ಅವಶ್ಯಕತೆ ಇಲ್ಲ. ಮೊದಲ ಋತುಸ್ರಾವದ ನಂತರ ಒಮ್ಮೆ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಿ.
# ಸಿಸೇರಿಯನ್ ಆದವರು ಕೂಡ ಇದನ್ನು ಹಾಕಿಸಿಕೊಳ್ಳಬಹುದು.
# ಹಾಕಿಸಿಕೊಂಡ ನಂತರ ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳಿ.
# ಇದಕ್ಕಿರುವ ದಾರದಿಂದ ಯಾವುದೇ ಕಿರಿಕಿರಿಯಿಲ್ಲ. ಆದರೆ ಅದನ್ನು ಎಳೆಯಲು ಹೋಗಬೇಡಿ.
# ಕೆಲವೊಮ್ಮೆ ಗರ್ಭಾಶಯದೊಳಗೆ ಕಾಪರ್ ಟಿ ಜರುಗಿದರೆ ಗರ್ಭ ಧರಿಸುವ ಸಾಧ್ಯತೆಯಿದೆ.
# ಇದನ್ನು ಹಾಕಿಸಿಕೊಳ್ಳುವ ಮುನ್ನ ಪ್ರಸೂತಿ ತಜ್ಞರ ಸಲಹೆ ಪಡೆಯಿರಿ.
# ಇದರಿಂದ ಲೈಂಗಿಕ ಕ್ರಿಯೆಗೆ ಯಾವುದೇ ತೊಂದರೆಯಿಲ್ಲ.
# ಇದನ್ನು ಹಾಕಿಸಿಕೊಂಡವರ ತೂಕ ಜಾಸ್ತಿಯಾಗುತ್ತದೆ ಅಥವಾ ಬೆನ್ನು ನೋವು ಬರುತ್ತದೆ ಎಂಬುದರಲ್ಲಿ ಯಾವುದೇ ಹುರುಳಿಲ್ಲ. ಹೆರಿಗೆಯ ನಂತರ ಬೆನ್ನುಹುರಿ ಜರುಗುವುದರಿಂದ ಕುಳಿತುಕೊಳ್ಳುವ, ನಿಲ್ಲುವ ಭಂಗಿಯಲ್ಲಿ ಏರುಪೇರಾಗಿ ಬೆನ್ನುನೋವು ಬರಬಹುದಷ್ಟೆ.
ಲೇಖಕಿ ಬಿಜಿಎಸ್ ಗ್ಲೆನೆಗಲ್ಸ್ ಆಸ್ಪತ್ರೆಯಲ್ಲಿ ಕನ್ಸಲ್ಟೆಂಟ್, ಇನ್‌ಫರ್ಟಿಲಿಟಿ ತಜ್ಞೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.